ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ಮತದಾನ ಬಹಿಷ್ಕಾರದ ಬೆದರಿಕೆ: ಜಿಲ್ಲಾಡಳಿತಕ್ಕೆ ತಲೆನೋವು

ಹನೂರು: ಮೂಲ ಸೌಕರ್ಯಗಳಿಗೆ ಆಗ್ರಹಿಸಿ ಹಲವು ಗ್ರಾಮಗಳ ಜನರ ನಿರ್ಧಾರ, ಅಧಿಕಾರಿಗಳ ಮುಂದೆ ಸವಾಲು
Published 25 ಮಾರ್ಚ್ 2024, 7:42 IST
Last Updated 25 ಮಾರ್ಚ್ 2024, 7:42 IST
ಅಕ್ಷರ ಗಾತ್ರ

ಹನೂರು: ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಂತೆಯೇ ತಾಲ್ಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕಾಡಂಚಿನ ಪ್ರದೇಶಗಳಲ್ಲಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿದ್ದು, ಇಂಡಿಗನತ್ತ, ತುಳಸಿಕೆರೆ, ಡಿ.ಎಂ.ಸಮುದ್ರದ ಗ್ರಾಮಸ್ಥರು ಮೂರ್ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರ ಮಹದೇಶ್ವರ ಬೆಟ್ಟದಲ್ಲಿ ತೀವ್ರ ಸ್ವರೂಪದ ಹೋರಾಟವೇ ನಡೆದಿದೆ. 

ತಾಲ್ಲೂಕಿನಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಹೊಸದೇನಲ್ಲ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲೂ ಮತದಾನ ಬಹಿಷ್ಕರಿಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡುತ್ತಲೇ ಬಂದಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಭರವಸೆ ನೀಡಿ ಅವರ ಮನವೊಲಿಸಲು ಯಶಸ್ವಿಯಾಗಿದ್ದರು. ಆದರೆ, ಈ ಬಾರಿ ಹೆಚ್ಚು ವ್ಯವಸ್ಥಿತವಾಗಿ, ತೀವ್ರವಾಗಿ ಹೋರಾಟ ನಡೆಸುತ್ತಿದ್ದಾರೆ. 

ಬೆಟ್ಟದ ಅರಣ್ಯದ ಒಳಗೆ ಹಾಗೂ ಕಾಡಂಚಿನಲ್ಲಿರುವ ಗ್ರಾಮಗಳಿಗೆ ರಸ್ತೆ, ವಿದ್ಯುತ್‌, ನೀರಿನಂತಹ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ. ಅದಕ್ಕಾಗಿ ಈ ಹೋರಾಟ ನಡೆಯುತ್ತಿದೆ.

ಎಲ್ಲೆಲ್ಲಿ ಬಹಿಷ್ಕಾರ?: ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ತುಳಸಿಕೆರೆ, ಇಂಡಿಗನತ್ತ, ಮಂದಾರೆ, ತೇಕಾಣೆ (ನಾಗಮಲೆ), ಪಡಸಲನತ್ತ, ಮೆದಗನಾಣೆ  ಎಲ್ಲೇಮಾಳ ಗ್ರಾಮಪಂಚಾಯಿತಿ ವ್ಯಾಪ್ತಿ ಡಿ.ಎಂ ಸಮುದ್ರ, ಎಂ.ಟಿ ದೊಡ್ಡಿ, ಗಾಂಧಿನಗರ, ಕೆ.ವಿಎನ್ ದೊಡ್ಡಿ, ವೈಶಂಪಾಳ್ಯ, ಬಿ.ಎಂ ಹಳ್ಳಿ , ಹೂಗ್ಯಂ, ಮೀಣ್ಯ ಗ್ರಾಮಪಂಚಾಯಿತಿ ಕೆಲವು ಗ್ರಾಮಗಳು  ಮತ್ತು ಕೊರಮ ಸಮುದಾಯದ ಜನರು ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇನ್ನು ಕೆಲವು ಗ್ರಾಮಗಳ ಜನರು ಇವರ ಜೊತೆ ಧ್ವನಿ ಸೇರಿಸುವ ಸಾಧ್ಯತೆಯನ್ನೂ ತಳ್ಳಿ ಹಾಕಲು ಸಾಧ್ಯವಿಲ್ಲ. 

ಕೊಳ್ಳೇಗಾಲ ತಾಲ್ಲೂಕಿನಿಂದ ಬೇರ್ಪಟ್ಟು ಪ್ರತ್ಯೇಕ ತಾಲ್ಲೂಕು ರಚನೆಯಾಗಿ ಆರು ವರ್ಷ ಕಳೆಯುತ್ತಿದ್ದರೂ ತಾಲ್ಲೂಕು ಹೊಂದಿರಬೇಕಾದ ಯಾವುದೇ ಸೌಲಭ್ಯವನ್ನು ಹನೂರು ಹೊಂದಿಲ್ಲ. ತಾಲ್ಲೂಕು ಕೇಂದ್ರವೇ ಅಭಿವೃದ್ಧಿಯಾಗಿಲ್ಲ. ಅದರ ಪರಿಸ್ಥಿತಿಯೇ ಪರಿಸ್ಥಿತಿಯೇ ಹೀಗಾದರೆ ಇನ್ನು ಇದರ ವ್ಯಾಪ್ತಿಯಲ್ಲಿರುವ ಗ್ರಾಮಗಳ ಜನರ ಪಾಡು ಹೇಳತೀರದು. ಕನಿಷ್ಠ ಸೌಕರ್ಯಕ್ಕೂ ಹೋರಾಟ ಮಾಡಿ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಇಲ್ಲಿನ ಜನರಿಗೆ.

ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲೂ ತಾಲ್ಲೂಕಿನ ಒಂದಲ್ಲ ಒಂದು  ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಕೂಗು ಕೇಳಿ ಬರುತ್ತದೆ.

‘ಸ್ವಾತಂತ್ರ್ಯ ಬಂದಾಗಿನಿಂದಲೂ ನಾವು ಪ್ರಾಣಿಗಳಿಗಿಂತ ಹೀನಾಯವಾಗಿ ಬದುಕುತ್ತಿದ್ದೇವೆ. ನಮಗೆ ಇದುವರೆಗೆ ಕನಿಷ್ಠ ಮೂಲಸೌಕರ್ಯವನ್ನೂ ಕಲ್ಪಿಸಿಲ್ಲ’ ಎಂದು ಆರೋಪಿಸಿ 2016-17ರಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಒಬ್ಬರು ಕೂಡ ಹಕ್ಕು ಚಲಾಯಿಸದೆ ಚಂಗಡಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು.    

ಅಲ್ಲಿಂದ ಆರಂಭವಾಗಿರುವ ಮತದಾನ ಬಹಿಷ್ಕಾರ ಚಳವಳಿ,  ತಾಲ್ಲೂಕಿನ ಇತರ ಪ್ರದೇಶಗಳಿಗೂ ಹರಡಿದೆ. ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಆಗಬೇಕಿರುವ ಕೆಲಸಗಳ ಬಗ್ಗೆ ಸರ್ಕಾರ, ಅಧಿಕಾರಿಗಳ ಗಮನಸೆಳೆಯಲು ಚುನಾವಣೆ ಸಮಯವನ್ನು ಗ್ರಾಮಸ್ಥರು ಅನಿವಾರ್ಯವಾಗಿ ಬಳಸುತ್ತಿದ್ದಾರೆ. 

ಸೌಲಭ್ಯಗಳಿಗಾಗಿ: 2018ರ ವಿಧಾನಸಭಾ ಚುನಾವಣೆಯಲ್ಲಿ ಪಿ.ಜಿ ಪಾಳ್ಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಗೊಂಬೆಗಲ್ಲು ಹಾಡಿ ನಿವಾಸಿಗಳು ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದರು. ಅಧಿಕಾರಿಗಳು ಹಾಡಿಗೆ ತೆರಳಿ ಜನರ ಮನವೊಲಿಸಿ ಮತದಾನ ಮಾಡಿಸಿದ್ದರು. ಗ್ರಾಮಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ದೊಡ್ಡಾಣೆ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಿದ್ದರು. ಅಲ್ಲಿಯೂ ಅಧಿಕಾರಿಗಳು ಜನರ ಮನವೊಲಿಸಿ ಮತದಾನ  ಮಾಡಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಪಿ.ಜಿ ಪಾಳ್ಯ ಗ್ರಾಮಪಂಚಾಯಿತಿ ವ್ಯಾಪ್ತಿಯ ನೆಲ್ಲಿಕತ್ರಿ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿ ನಂತರ ಮತದಾನ ಮಾಡಲಾಗಿತ್ತು.

‘ಚುನಾವಣೆಗೂ ಮುನ್ನ ಮತದಾನ ಬಹಿಷ್ಕರಿಸುವುದಾಗಿ ಹೇಳುತ್ತೇವೆ. ನಂತರ ಅಧಿಕಾರಿಗಳು ಗ್ರಾಮಕ್ಕೆ ಬರುತ್ತಾರೆ. ಮತದಾನ ಮಾಡಿ ನಂತರ ನಿಮ್ಮ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿ ಮತದಾನ ಮಾಡಿಸುತ್ತಾರೆ. ಬಳಿಕ ನಾವು ಅವರಿಗೆ ನೆನಪಾಗುವುದು ಮುಂದಿನ ಚುನಾವಣೆಯಲ್ಲಿಯೇ. ಅಲ್ಲಿಯವರೆಗೂ ನಾವು ನಿರ್ಗತಿಕರಂತೆ ಕಾಯಬೇಕು’ ಎಂದು ಸೌಲಭ್ಯಗಳ ನಿರೀಕ್ಷೆಯಲ್ಲಿ ರೋಸಿ ಹೋಗಿರುವ ಗ್ರಾಮಸ್ಥರು. 

ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು, ಆರೋಗ್ಯ, ರಸ್ತೆ, ವಿದ್ಯುತ್ ಹಾಗೂ ಉನ್ನತ ಶಿಕ್ಷಣ ಎಂಬುದು ಜನರಿಗೆ ಕನಸಾಗಿಯೇ ಉಳಿದಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ಗ್ರಾಮಕ್ಕೆ ಭೇಟಿ ಮೂಲ ಸೌಕರ್ಯ ಕಲ್ಪಿಸುವುದಾಗಿ ಹೇಳಿದ್ದರು. ಆದರೆ ಅವರು ಹೋದ ನಂತರ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಳಲು. 

‘ನಮ್ಮ ಮಕ್ಕಳಿಗೆ 5ನೇ ತರಗತಿ ಬಳಿಕ ಶಿಕ್ಷಣವಿಲ್ಲದೇ ಅವಿದ್ಯಾವಂತರಾಗುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಆದ್ದರಿಂದ ಬೇಸತ್ತು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ’ ಎನ್ನುತ್ತಾರೆ ತುಳಸಿಕೆರೆ ಗ್ರಾಮಸ್ಥರು. 

ಮಹದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಲ್ಲೇ ಇರುವ ಎಲ್ಲೇಮಾಳ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕನಿಷ್ಠ ಮೂಲಸೌಕರ್ಯವಿಲ್ಲದೇ ಜನರು ಪರಿತಪಿಸುತ್ತಿದ್ದಾರೆ.

‘ನಮ್ಮ ಊರಿಗೆ ಸೌಲಭ್ಯ ಕೊಡಿ ಎಂದು ಗ್ರಾಮಗಳಿಗೆ ಬಂದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸಾಕಾಗಿಹೋಗಿದೆ. ಇದರಿಂದ ಬೇಸತ್ತು ನಾವು ಈ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಮುಂದಾಗಿದ್ದೇವೆ’ ಎನ್ನುತ್ತಾರೆ ಡಿ.ಎಂ ಸಮುದ್ರ ಗ್ರಾಮದವರು. 

ಅಧಿಕಾರಿಗಳ ಮುಂದೆ ಸವಾಲು: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮತದಾನದ ಮೂಲಕ ಹಕ್ಕು ಚಲಾಯಿಸುವುದು ಮುಖ್ಯ. ಒಂದು ವೇಳೆ ಮತ ಚಲಾವಣೆಯಾಗದಿದ್ದರೆ, ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆದ ಹಿನ್ನಡೆ ಎಂದೇ ಪರಿಗಣಿಸಲಾಗುತ್ತದೆ. ಗರಿಷ್ಠ ಪ್ರಮಾಣದಲ್ಲಿ ಮತದಾನ ನಡೆಯಬೇಕು ಎಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ ಸಾಕಷ್ಟು ಶ್ರಮ ಹಾಕುತ್ತಿರುವ ಸಂದರ್ಭದಲ್ಲಿ ಗ್ರಾಮಗಳಲ್ಲಿ ಮತದಾನ ನಡೆಯದಿದ್ದರೆ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ, ಚುನಾವಣೆ ಬಹಿಷ್ಕರಿಸಲು ಹೊರಟಿರುವ ಗ್ರಾಮಸ್ಥರ ಮನವೊಲಿಸುವ ಸವಾಲು ಅಧಿಕಾರಿಗಳ ಮುಂದಿದೆ. 

ಈಗಾಗಲೇ ಸ್ಥಳೀಯ ಮಟ್ಟದ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರು ಖುದ್ದಾಗಿ ಗ್ರಾಮಸ್ಥರನ್ನು ಭೇಟಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಉನ್ನತ ಅಧಿಕಾರಿಗಳ ಭೇಟಿಯ ನಂತರ ಗ್ರಾಮಸ್ಥರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.   

ಪೂರಕ ಮಾಹಿತಿ: ಸೂರ್ಯನಾರಾಯಣ ವಿ., ಜಿ.ಪ್ರದೀಪ್‌ ಕುಮಾರ್‌, ನಾ.ಮಂಜುನಾಥಸ್ವಾಮಿ

ಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಲು ನಿರ್ಧರಿಸಿರುವ ಡಿ.ಎಂ.ಸಮುದ್ರದ ಗ್ರಾಮಸ್ಥರು ಧರಣಿ ಕುಳಿತಿರುವುದು
ಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಲು ನಿರ್ಧರಿಸಿರುವ ಡಿ.ಎಂ.ಸಮುದ್ರದ ಗ್ರಾಮಸ್ಥರು ಧರಣಿ ಕುಳಿತಿರುವುದು
ಗ್ರಾಮಸ್ಥರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಜನರು ಮತದಾನ ಮಾಡುವಂತೆ ಮನವೊಲಿಸಲಾಗುವುದು
ವೈ.ಕೆ.ಗುರುಪ್ರಸಾದ್ ಹನೂರು ತಹಶೀಲ್ದಾರ್

ಗ್ರಾಮಸ್ಥರು ಏನಂತಾರೆ?

ಪ್ರತಿ ಬಾರಿ ಸುಳ್ಳು ಭರವಸೆ

ಸ್ವಾತಂತ್ರ್ಯ ಬಂದಾಗಿನಿಂದಲೂ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಸ್ಥರು ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಮತದಾನ ಬಹಿಷ್ಕಾರ ಮಾಡಲು ಹೊರಟ ಗ್ರಾಮಸ್ಥರಿಗೆ ಅಧಿಕಾರಿಗಳು ಸುಳ್ಳು ಭರವಸೆ ನೀಡಿ ಮತದಾನ ಮಾಡುವಂತೆ ಮಾಡುತ್ತಾರೆ. ಆದರೆ ಆ ಬಳಿಕ ಇತ್ತ ತಲೆ ಹಾಕುವುದಿಲ್ಲ. ಈಗಲೂ ರಸ್ತೆ ವಿದ್ಯುತ್‌ ಪೂರೈಸಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅನುಮತಿಗೆ ಇನ್ನೂ ಅರ್ಜಿ ಹಾಕಿಲ್ಲ. ಸರ್ಕಾರವೇ ಇದರ ಬಗ್ಗೆ ಗಮನಹರಿಸಬೇಕು. ಇದರ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು.

–ಹೊನ್ನೂರು ಪ್ರಕಾಶ್ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ

ಗಮನ ಹರಿಸದ ಅಧಿಕಾರಿಗಳು

ನಾವು ಪ್ರತಿ ಬಾರಿ ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳುತ್ತಿದ್ದರೂ ಸರ್ಕಾರ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಆ ಸಮಯಕ್ಕೆ ಮಾತ್ರ ಮಾತಿನ ಭರವಸೆ ನೀಡುತ್ತಾರೆ. ನಂತರ ತಮಗೆ ಸಂಬಂಧ ಇಲ್ಲದಂತೆ ಇರುತ್ತಾರೆ. ಅರಣ್ಯ ಇಲಾಖೆಯಂತೂ ನಮ್ಮನ್ನು ಶೋಷಣೆ ಮಾಡುತ್ತಿದ್ದಾರೆ. ಈ ಸಮಸ್ಯೆಗಳಿಂದ ನಮಗೆ ಮುಕ್ತಿ ಯಾವಾಗ?

–ಕೆಂಪ ತುಳಸಿಕೆರೆ ಮುಖಂಡ

ಬಹಿಷ್ಕಾರ ಖಚಿತ

ಚುನಾವಣೆ ಬಹಿಷ್ಕಾರ ಮಾಡುವುದಾಗಿ ನಿರ್ಧರಿಸಿದಾಗ ಗ್ರಾಮಕ್ಕೆ ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಎಲ್ಲರೂ ಸೇರಿ ಮಾಡಿರುವ ತೀರ್ಮಾನದಂತೆ ಮತದಾನ ಬಹಿಷ್ಕರಿಸಲಿದ್ದೇವೆ. –ರವಿ ಇಂಡಿಗನತ್ತ ಸೌಕರ್ಯಗಳಿಲ್ಲ ರಾತ್ರಿಯಾದರೆ ನಮಗೆ ದೀಪದ ಬುಡ್ಡಿಯೇ ಆಧಾರ. ಬೆಳಿಗ್ಗೆ ಸೂರ್ಯ ಮೂಡುವ ತನಕ ನಾವು ಯಾವುದೇ ಕೆಲಸ ಮಾಡಲಾಗುವುದಿಲ್ಲ. ಆರೋಗ್ಯದಲ್ಲಿ ಏರುಪೇರಾದರೆ ಡೋಲಿಯಲ್ಲೇ ಅವರನ್ನು ಹೊತ್ತು ಸಾಗಬೇಕು.

–ದುಮ್ಮಾದಮ್ಮ ತುಳಸಿಕೆರೆ

ಬದಲಾಗದ ಸ್ಥಿತಿ

ಎರಡು ತಲೆಮಾರಿನಿಂದಲೂ ನಾವು ಕಾಡಿನೊಳಗೆ ಪ್ರಾಣಿಗಳಂತೆ ಬದುಕುತ್ತಿದ್ದೇವೆ. ಓಟು ಕೇಳಲು ಬರುವವರು ಸೌಲಭ್ಯ ಕೊಡಿಸುವುದಾಗಿ ಹೇಳುತ್ತಾರೆ. ಅವರನ್ನು ನಂಬಿ ಮತ ಹಾಕುತ್ತೇವೆ. ಆದರೆ ನಮ್ಮ ಸ್ಥಿತಿ ಮಾತ್ರ ಬದಲಾಗುತ್ತಿಲ್ಲ.

–ಸಿದ್ದಮ್ಮ

ಜೀವನ ಬೇಸತ್ತಿದೆ

ನಮಗೆ ಮೂಲಸೌಕರ್ಯ ಕೊರತೆ ಒಂದೆಡೆಯಾದರೆ ವನ್ಯಪ್ರಾಣಿಗಳ ಹಾವಳಿ ಮತ್ತೊಂದೆಡೆ. ಇವೆಲ್ಲದರಿಂದ ಜೀವನವೇ ಬೇಸತ್ತು ಹೋಗಿದೆ. ಯಾವುದೇ ಸೌಲಭ್ಯ ಪಡೆಯಬೇಕಾದರೂ ನಾವು ಪರದಾಡಬೇಕಾಗಿದೆ.

–ಶೇಖರ್ ತುಳಸಿಕೆರೆ

ಸೌಲಭ್ಯ ಕಲ್ಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿ: ಡಿ.ಸಿ
ಈ ಬಗ್ಗೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರು ‘ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹೇಳಿರುವ ಗ್ರಾಮಸ್ಥರನ್ನು ಭೇಟಿ ಮಾಡಿ ಮನವೊಲಿಕೆ ಮಾಡಲಾಗುತ್ತಿದೆ. ನಾನು ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಎಸ್‌ಪಿಯವರು ಸೋಮವಾರ ಖುದ್ದಾಗಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಲಿದ್ದೇವೆ’ ಎಂದರು.  ‘ಗ್ರಾಮಸ್ಥರು ಮೂಲಸೌಕರ್ಯಗಳನ್ನು ಕೇಳುವುದರಲ್ಲಿ ತಪ್ಪಿಲ್ಲ. ಅವುಗಳನ್ನು ಕಲ್ಪಿಸುವುದು ನಮ್ಮ ಜವಾಬ್ದಾರಿ. ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಿಗೆ ರಸ್ತೆ ಹಾಗೂ ವಿದ್ಯುತ್‌ ಸೌಲಭ್ಯ ಕಲ್ಪಿಸುವುದಕ್ಕಾಗಿ ₹38 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಅದರ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಲೆ ಮಹದೇಶ್ವರ ವನ್ಯಧಾಮದ ಮೂರು ಕಾವೇರಿ ವನ್ಯಧಾಮ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ತಲಾ ಒಂದು ಸೇರಿದಂತೆ ಐದು ಪೋಡುಗಳಿಗೆ ವಿದ್ಯುತ್‌ ಸೌಲಭ್ಯ ಕಲ್ಪಿಸುವುದಕ್ಕೆ ಅರಣ್ಯ ಇಲಾಖೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಲಾಗಿದೆ’ ಎಂದು ಅವರು ಹೇಳಿದರು.  ‘ಗ್ರಾಮಸ್ಥರ ಅನುಕೂಲಕ್ಕಾಗಿ ಜನ ವನ ಸೇತುವೆ ಸಾರಿಗೆ ಅವಲಂಬಿಸಲಾಗಿದೆ. ಆಧಾರ್‌ ಸೌಲಭ್ಯ ಗೃಹಲಕ್ಷ್ಮಿ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳನ್ನು ಅಲ್ಲಿನ ಫಲಾನುಭವಿಗಳಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅರಣ್ಯ ಪ್ರದೇಶದಲ್ಲಿ ಗ್ರಾಮಗಳು ಇರುವುದರಿಂದ ಯೋಜನೆ ಅನುಷ್ಠಾನಕ್ಕೆ ಸ್ವಲ್ಪ ಸಮಯ ಬೇಕು. ಗ್ರಾಮಸ್ಥರನ್ನು ಭೇಟಿಯಾಗಿ ಇವುಗಳನ್ನು ಮನವರಿಕೆ ಮಾಡಲಾಗುವುದು’ ಎಂದು ಶಿಲ್ಪಾ ನಾಗ್‌ ಹೇಳಿದರು. 
ಬಿಳಿಗಿರಿರಂಗನಬೆಟ್ಟದಲ್ಲೂ ಬಹಿಷ್ಕಾರದ ಬೆದರಿಕೆ
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಸೋಲಿಗರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಅರಣ್ಯ ಮತ್ತು ಕಂದಾಯ ಇಲಾಖೆಗಳು ಮಾಡುತ್ತಿವೆ ಎಂದು ಆರೋಪಿಸಿರುವ ಮುಖಂಡರು ಮತದಾನ ಬಹಿಷ್ಕರಿಸುವ ಬೆದರಿಕೆ ಒಡ್ಡಿದ್ದಾರೆ.  ‘ಬೆಟ್ಟದಲ್ಲಿ 21 ಆದಿವಾಸಿ ಕುಟುಂಬಗಳ ಪಟ್ಟಾ ಜಮೀನನ್ನು ಅರಣ್ಯ ಮತ್ತು ಕಂದಾಯ ಇಲಾಖೆಗಳು ಮುಟ್ಟುಗೋಲು ಹಾಕಿಕೊಂಡಿವೆ. ಸೋಲಿಗರ ಮೇಲೆ ದೂರು ದಾಖಲಿಸಲಾಗಿದೆ. ಇದರಿಂದ ಆರ್ಥಿಕ ವೆಚ್ಚ ಹೆಚ್ಚಾಗಿ ನ್ಯಾಯಾಲಯಕ್ಕೆ ಸುತ್ತಬೇಕಿದೆ. 11 ಬಾರಿ ದಾಖಲೆ ಸಲ್ಲಿಸುವುರಲ್ಲೇ ಸಮಯ ಕಳೆದಿದೆ. ಸೋಲಿಗರನ್ನು ಒಕ್ಕಲು ಎಬ್ಬಿಸಿಲು ಅರಣ್ಯ ಇಲಾಖೆ ಮುಂದಾಗಿದ್ದು ನಿಖರ ದಾಖಲೆ ಇಲ್ಲದ ಸೀಗೆಬೆಟ್ಟ ಮತ್ತು ಎಕರಕನಗದ್ದೆ ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಪೂರ್ವಿಕರ ಕಾಲದಿಂದ ಹಿಡುವಳಿ ಮಾಡುತ್ತ ಬಂದಿರುವ ಬುಡಕಟ್ಟು ಜನರಿಗೆ ತೊಂದರೆ ಉದ್ಭವಿಸಿದ್ದು ನ್ಯಾಯಯುತ ತೀರ್ಮಾನ ಬರದ ಕಾರಣ ಈ ಬಾರಿ ಮತದಾನ ಬಹಿಷ್ಕಾರ ಮಾಡಲಾಗುತ್ತದೆ’ ಎಂದು ಯರಕನಗದ್ದೆಯ ಮುಖಂಡರಾದ ಬಸವರಾಜು ಸಿದ್ಧೇಗೌಡ ಅಡುಗೆ ಜಡೇಗೌಡ ’ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT