ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ನರೇಗಾ: 104 ಶಾಲೆಗಳಿಗೆ ಶೌಚಾಲಯ

Published 31 ಆಗಸ್ಟ್ 2023, 5:00 IST
Last Updated 31 ಆಗಸ್ಟ್ 2023, 5:00 IST
ಅಕ್ಷರ ಗಾತ್ರ

ಸೂರ್ಯನಾರಾಯಣ ವಿ.

ಚಾಮರಾಜನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಜಿಲ್ಲೆಯ 104 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಂಡಿದೆ. 

ನರೇಗಾ ಅನುದಾನ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅನುದಾನವನ್ನು ಬಳಸಿಕೊಂಡು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 40 ಶಾಲೆಗಳಲ್ಲಿ ಕೆಲಸ ಪ್ರಾರಂಭವಾಗಿದೆ. ಉಳಿದ ಶಾಲೆಗಳಲ್ಲೂ ಕೆಲಸ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಬಾರಿಯ ಬಜೆಟ್‌ ಮಂಡಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಗಾ ಯೋಜನೆಯಡಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ, ಶಾಲೆಯ ಒಟ್ಟು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಘೋಷಿಸಿದ್ದರು. 

ಶಾಲೆಯ ಮುಖ್ಯ ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ಗುಣಮಟ್ಟದ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಲಾಗಿದೆ.
ಸರಸ್ವತಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ

ಜಿಲ್ಲೆಯ ಸರ್ಕಾರಿ ಶಾಲೆಗಳ ಪೈಕಿ ಕೆಲವು ಕಡೆಗಳಲ್ಲಿ ಶೌಚಾಲಯಗಳಿರಲಿಲ್ಲ. ಕೆಲವು ಶಾಲೆಗಳಲ್ಲಿ ಶೌಚಾಲಯಗಳಿದ್ದರೂ, ಹಳೆಯದಾಗಿ ಬಳಕೆಗೆ ಯೋಗ್ಯವಾಗಿರಲಿಲ್ಲ. ಶಿಕ್ಷಣ ಇಲಾಖೆಯು ತಾಲ್ಲೂಕುವಾರು ಅಂತಹ ಶಾಲೆಗಳನ್ನು ಗುರುತಿಸಿ ಜಿಲ್ಲಾ ಪಂಚಾಯಿತಿಗೆ ಮಾಹಿತಿ ನೀಡಿತ್ತು. 

ಶೌಚಾಲಯಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದ ಜಿಲ್ಲಾ ಪಂಚಾಯಿತಿ, ಈಗ ನಿರ್ಮಾಣ ಕಾರ್ಯಕ್ಕೆ ಕೈಹಾಕಿದೆ. 

₹5.20 ಲಕ್ಷ: ಒಂದು ಶಾಲೆಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ₹5.20 ಲಕ್ಷ ವೆಚ್ಚ ನಿಗದಿ ಪಡಿಸಲಾಗಿದೆ. ಇದರಲ್ಲಿ ₹3.12 ಲಕ್ಷ ನರೇಗಾ ಅನುದಾನ ಆಗಿದ್ದರೆ, ₹2.08 ಲಕ್ಷ ಅನುದಾನ ಶಿಕ್ಷಣ ಇಲಾಖೆಯದ್ದು. 

104 ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಒಟ್ಟು ₹5.40 ಕೋಟಿ ವೆಚ್ಚವಾಗಲಿದೆ.

ಈ ಹಿಂದೆಯೂ ನರೇಗಾ ಯೋಜನೆ ಅಡಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಆದರೆ, ಯೋಜನೆ ವೆಚ್ಚ ಕಡಿಮೆ ಇತ್ತು ಎಂದು ಹೇಳುತ್ತಾರೆ ಸಿಬ್ಬಂದಿ.

ಶಾಲೆಯಲ್ಲಿರುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.

ಶಾಲಾ ಅಭಿವೃದ್ಧಿಗೆ ಅವಕಾಶ

ಯೋಜನೆಯ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸರಸ್ವತಿ ಅವರು ‘ನರೇಗಾ ಅಡಿಯಲ್ಲಿ ಶಾಲಾ ಕಾಂಪೌಂಡ್‌ ಹಾಗೂ ಆವರಣದ ಅಭಿವೃದ್ಧಿಗೆ ಅವಕಾಶ ಇದೆ. ಅದೇ ಮಾದರಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಲು ಅವಕಾಶ ಇದೆ. ಜಿಲ್ಲೆಯಲ್ಲಿ ಸದ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ’ ಎಂದರು.  ‘ಶೌಚಾಲಯಗಳ ಕೊರೆತೆಯಿಂದ ಗ್ರಾಮೀಣ ಭಾಗದ ಶಾಲೆಗಳ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಶೌಚಾಲಯಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯಿಂದ ಹೆಚ್ಚು ಅನುದಾನ ಬರುವುದಿಲ್ಲ. ಹಾಗಾಗಿ ನರೇಗಾ ಅನುದಾನವನ್ನೂ ಬಳಸಿಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT