ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

ಮಹಿಳೆಯರು, ಯುವಜನರ ಸ್ವಾಗತ, ರೈತ, ಕಾರ್ಮಿಕ ಸಂಘಟನೆಗಳ ಟೀಕೆ
Published 2 ಫೆಬ್ರುವರಿ 2024, 5:33 IST
Last Updated 2 ಫೆಬ್ರುವರಿ 2024, 5:33 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ 2024–25ನೇ ಸಾಲಿನ ಮಧ್ಯಂತರ ಬಜೆಟ್‌ ಬಗ್ಗೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಮಹಿಳೆಯರು, ಯುವಜನರು ಬಜೆಟ್‌ನಲ್ಲಿರುವ ಕೆಲವು ಅಂಶಗಳನ್ನು ಮೆಚ್ಚಿಕೊಂಡಿದ್ದಾರೆ. ರೈತ ಮುಖಂಡರು ವಿರೋಧಿಸಿದ್ದಾರೆ. ರಾಜಕೀಯ ಪಕ್ಷಗಳ ಪೈಕಿ ಬಿಜೆಪಿಯರು ಎಂದಿನಂತೆ ಸ್ವಾಗತಿಸಿದ್ದರೆ, ಕಾಂಗ್ರೆಸ್‌ನವರು ವಿರೋಧಿಸಿದ್ದಾರೆ. 

ರೈತ ಮುಖಂಡರು, ಅಂಗನವಾಡಿ ಕಾರ್ಯಕರ್ತರು, ಮಹಿಳೆಯರು, ಜನ ಸಾಮಾನ್ಯರು ಯುವಜನರು ‘ಪ್ರಜಾವಾಣಿ’ಯೊಂದಿಗೆ ಬಜೆಟ್‌ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 

ಬಿಜೆಪಿ ಕಾಂಗ್ರೆಸ್‌; ‍ಪರ–ವಿರೋಧ

ಐತಿಹಾಸಿಕ ಬಜೆಟ್‌ ನಾಲ್ಕು ಸ್ತಂಭಗಳಾದ ಬಡವರು ರೈತರು ಯುವಕರು ಮತ್ತು ಮಹಿಳೆಯರನ್ನು ಬಲಪಡಿಸುವ ಐತಿಹಾಸಿಕ ಬಜೆಟ್.​ ಮೋದಿ ನೇತೃತ್ವದ ಕೇಂದ್ರ ಸರ್ಕಾರ‌ ಕೃಷಿ ರಕ್ಷಣೆ ನಾರಿಶಕ್ತಿ ರೈಲ್ವೆ ಆರ್ಥಿಕತೆ ಸೇರಿದಂತೆ ಎಲ್ಲ ವಲಯಗಳಲ್ಲಿ ದೇಶವನ್ನು ಅಭಿವೃದ್ಧಿಗೊಳಿಸುವ ಸಂಕಲ್ಪದೊಂದಿಗೆ ಯೋಜನೆ ರೂಪಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್‌ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. 

–ಸಿ.ಎಸ್.ನಿರಂಜನಕುಮಾರ್ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಶ್ರೀಮಂತರ ಪರ ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಜನಸಾಮಾನ್ಯನಿಗೆ ಏನಿಲ್ಲ. ಬಡವರು ರೈತರಿಗೆ ಅನುಕೂಲವಾಗುವಂತಹ ಯೋಜನೆಗಳಿಲ್ಲ. ಮೋದಿ ಸರ್ಕಾರ ಎಂದಿನಿಂದ ಶ್ರೀಮಂತರ ಬಂಡವಾಳಶಾಹಿಗಳ ಪರವಾದ ಬಜೆಟ್‌ ಅನ್ನೇ ಮಂಡಿಸಿದೆ.

– ಪಿ.ಮರಿಸ್ವಾಮಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಿರಾಶಾದಾಯಕ ಜನರ ನಿರೀಕ್ಷೆಕೆ ತಕ್ಕಂತೆ ಬಜೆಟ್ ಮಂಡನೆಯಾಗಿಲ್ಲ. ಲೋಕಸಭಾ ಚುನಾವಣೆ ಗಮನದಲಿಟ್ಟುಕೊಂಡು ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬಡವರಿಗೆ ಹಾಗೂ ಕೈಗಾರಿಕೋದ್ಯಮಕ್ಕೆ ಉತ್ತೇಜನ ನೀಡುವ ಯಾವೊಂದು ಅಂಶಗಳು ಬಜೆಟ್‍ನಲ್ಲಿ ಇಲ್ಲ. ದೂರದೃಷ್ಟಿ ಇಲ್ಲದೆ ಸೀಮಿತ ಬಜೆಟ್‌

-ಎಚ್.ಎಂ.ಗಣೇಶಪ್ರಸಾದ್ ಗುಂಡ್ಲುಪೇಟೆ ಶಾಸಕ

ಜನರು ಏನಂತಾರೆ?

ರೈತರಿಗೆ ಏನಿಲ್ಲ ಇದು ಚುನಾವಣಾ ಬಜೆಟ್‌. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುವ ನಿರ್ಧಾರವನ್ನು ಕೈಗೊಳ್ಳಬೇಕಾಗಿತ್ತು. ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕಿತ್ತು. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು ಕೃಷಿ ವಲಯವನ್ನು ಸದೃಢಗೊಳಿಸಬೇಕಿತ್ತು. ರೈತ ಬೆಳೆದಂತಹ ಹೂವು ಹಣ್ಣು ತರಕಾರಿ ಇವುಗಳನ್ನು ರಕ್ಷಣೆ ಮಾಡಲು ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹೆಚ್ಚಿನ ಶೀತಲೀಕರಣ ಘಟಕಗಳನ್ನು ಸ್ಥಾಪನೆ ಮಾಡುವ ಘೋಷಣೆ ಮಾಡಬೇಕಿತ್ತು. ಈ ಅಂಶಗಳಾವುದೂ ಬಜೆಟ್‌ನಲ್ಲಿಲ್ಲ. 

- ಹಳ್ಳಿಕೆರೆಹುಂಡಿ ಭಾಗ್ಯರಾಜ್ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ

ಆಯುಷ್ಮಾನ್‌ ಭಾರತ್‌ ಬಿಟ್ಟರೆ ಬೇರೇನಿಲ್ಲ ಅಂಗನವಾಡಿ ನೌಕರರು ಸಹಾಯಕಿಯರ ಗೌರವ ಧನವನ್ನು ಕೇಂದ್ರ ಸರ್ಕಾರ ಐದು ವರ್ಷಗಳಿಂದ ಹೆಚ್ಚಳ ಮಾಡಿಲ್ಲ. ನಮಗೂ ಆಯುಷ್ಮಾನ್‌ ಭಾರತ್‌ ಯೋಜನೆ ವಿಸ್ತರಿಸಿದ್ದಾರೆ. ನಮ್ಮಲ್ಲಿ ಈಗಾಗಲೇ ಕೆಲವರು ಇದಕ್ಕೆ ನೋಂದಣಿಯಾಗಿದ್ದಾರೆ. ನಿವೃತ್ತಿ ಹೊಂದಿರುವ ನೌಕರರಿಗೆ ಗ್ರ್ಯಾಜ್ಯುಟಿ ಕೇಳುತ್ತಿದ್ದೇವೆ. ಸುಪ್ರೀಂ ಕೋರ್ಟ್‌ ಕೂಡ ಗ್ರ್ಯಾಜ್ಯುಟಿ ನೀಡಬೇಕು ಎಂದು ತೀರ್ಪು ನೀಡಿದೆ. ಆದರೆ ಬಜೆಟ್‌ನಲ್ಲಿ ಇವೆಲ್ಲವೂ ಪ್ರಸ್ತಾಪವಾಗಿಲ್ಲ.  

–ನಾಗಮಣಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ 

ಮಹಿಳೆಯರ ಸಬಲೀಕರಣಕ್ಕೆ ಒತ್ತು ಯುವಕರು ಬಡವರು ಕೃಷಿಕರು ಹಾಗೂ ಮಹಿಳೆಯರು ಈ ನಾಲ್ಕು ವರ್ಗಗಳನ್ನು ಗುರಿಯಾಗಿಸಿಕೊಂಡು ಮಂಡಿಸಲಾಗಿರುವ ಬಜೆಟ್ ಉತ್ತಮವಾಗಿದೆ. ನಿರ್ಮಲಾ ಸೀತಾರಾಮನ್‌ ಅವರು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಒತ್ತು ನೀಡಿರುವುದು ಶ್ಲಾಘನೀಯ ವಿಚಾರ. –ರಾಧ ಚಂಗವಾಡಿ ಹನೂರು ತಾಲ್ಲೂಕು ಎಲ್ಲ ವಲಯಗಳಿಗೂ ಸಮಪಾಲು ಸಮಾಜದ ಪ್ರತಿಯೊಂದು ವರ್ಗದ ಜನರ ಅಗತ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಧ್ಯಂತರ ಬಜೆಟ್ ಮಂಡಿಸಲಾಗಿದೆ. 2047ರ ಹೊತ್ತಿಗೆ ಭಾರತ ಬಲಿಷ್ಠ ಮತ್ತು ಅಭಿವೃದ್ಧಿ ದೇಶವಾಗುವ ನಿಟ್ಟಿನಲ್ಲಿ ಮೂಲ ಸೌಕರ್ಯ ವಿಸ್ತರಣೆಗೆ ಒತ್ತು ನೀಡಿದೆ. ಸಾಮಾಜಿಕ ಕ್ಷೇತ್ರ ಕೃಷಿ ಮತ್ತು ಕಡಲ ಆರ್ಥಿಕತೆ ಉತ್ತೇಜಿಸುವ ಮೂಲಕ ಎಲ್ಲ ವಲಯಗಳಿಗೂ ಸಮಪಾಲು ನೀಡಿದ ಉತ್ತಮ ಬಜೆಟ್.

–ಕುಮಾರಸ್ವಾಮಿ ಯರಗಂಬಳ್ಳಿ ಯಳಂದೂರು ತಾಲ್ಲೂಕು

ಮಹಿಳಾಪರ ಬಜೆಟ್ ‘ಲಾಕ್ ಪತಿ ದೀದಿ’ ಯೋಜನೆಗೆ 3 ಕೋಟಿ ಮಹಿಳೆಯರನ್ನು ತಂದಿರುವುದು ಉತ್ತಮ ಬೆಳವಣಿಗೆ. 83 ಲಕ್ಷ ಸ್ವಸಹಾಯ ಗುಂಪುಗಳಿಗೆ ನೆರವು ಕಲ್ಪಿಸಲು ಬಜೆಟ್‌ ಉದ್ದೇಶಿಸಿದೆ. ಇದರಿಂದ ಗ್ರಾಮೀಣ ಆರ್ಥಿಕತೆ ಸದೃಢವಾಗಲಿದೆ. ದೈನಂದಿನ ವರಮಾನಕ್ಕೂ ನೆರವಾಗುತ್ತದೆ.  ಭಗಿನಿಯರ ಸಬಲೀಕರಣ ಹಾಗೂ ಲಿಂಗ ತಾರತಮ್ಯ ನಿವಾರಿಸುವ ದೆಸೆಯಲ್ಲಿ ಅನುಕೂಲ ಆಗಲಿದೆ. 

–ಮಾದಲಾಂಬಿಕೆ ಯಳಂದೂರು

ಚುನಾವಣೆ ಮೇಲೆ ಗಮನ  ಆತಿಥ್ಯ ಮನರಂಜನೆ ಸಚಿವರ ವೇತನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಣ್ಣ ಸಂಗತಿಗಳಿಗೆ ಆದ್ಯತೆ ನೀಡಿ ದೊಡ್ಡ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ. ಯುವ ಜನರಿಗೆ ಉದ್ಯೋಗ ನೀಡುವ ಬಗ್ಗೆ ಬಜೆಟ್‌ನಲ್ಲಿ ಯೋಜನೆ ರೂಪಿಸಿಲ್ಲ. ಲೋಕಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡಂತೆ ಕಾಣುತ್ತದೆ. 

–ಪ್ರಿಯಾ ಯಳಂದೂರು

ಭರವಸೆ ದಾಯಕ ದೇಶದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ಭರವಸೆ ಮೂಡಿಸಿದೆ. ದೇಶದಾದ್ಯಂತ ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೆಗೆ ಒತ್ತು ನೀಡುವುದರ ಜತೆಗೆ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘನೀಯ. ಅಧಿಕಾರಕ್ಕೆ ಬಂದಾಗಿನಿಂದಲೂ ಜನರ ವಿಶ್ವಾಸ ಗಳಿಸಿರುವ ಬಿಜೆಪಿ ನೇತೃತ್ವದ ಸರ್ಕಾರ ಈ ಬಾರಿಯೂ ಜನಪರ ಬಜೆಟ್ ಮಂಡಿಸಿದೆ. 

–ರಾಮಚಂದ್ರ ಮಹದೇಶ್ವರ

ಬೆಟ್ಟ ಹನೂರು ತಾಲ್ಲೂಕು ಚುನಾವಣೆ ದೃಷ್ಟಿ ಈ ಬಜೆಟ್ ಚುನಾವಣೆ ಗಿಮಿಕ್. ಯಾವುದೇ ವಿಶೇಷಗಳು ಇಲ್ಲ. ಬಡವರ ಪರ ಯಾವ ಕಾರ್ಯಕ್ರಮವೂ ಕಾಣುತ್ತಿಲ್ಲ. ಚುನಾವಣೆ ಹತ್ತಿರ ಇರುವುದರಿಂದ ಜನರನ್ನು ಮಹಿಳೆಯರು ಯುವಜನರನ್ನು ಓಲೈಸುವುದಕ್ಕಾಗಿ ಅವರಿಗೆ ಪೂರಕವಾಗಿ ಕೆಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 

–ದೇವಾನಂದ್ ಕೊಳ್ಳೇಗಾಲ 

ಬೆಲೆ ಏರಿಕೆಗೆ ಮೌನ ಮಹಿಳಾ ಸ್ವ ಸಹಾಯ ಸಂಘಗಳ ಅಭಿವೃದ್ಧಿಗೆ ಯಾವುದೇ ಸಹಾಯ ಇಲ್ಲ. ನಿರುದ್ಯೋಗ ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಸ್ತಾಪ ಇಲ್ಲ. ಬೆಲೆ ಏರಿಕೆ ಬಗ್ಗೆ ಸರ್ಕಾರ ಚಕಾರ ಎತ್ತಿಲ್ಲ. 

– ಪ್ರಭಾವತಿ ಸಂತೇಮರಹಳ್ಳಿ

ಚಾಮರಾಜನಗರ ತಾಲ್ಲೂಕು ರಾಜ್ಯದ ಕಡೆಗಣನೆ ಲೋಕಸಭಾ ಚುನಾವಣೆಯನ್ನು ದೃಷ್ಟಿ‌ಯಲ್ಲಿಟ್ಟುಕೊಂಡು ರೂಪಿಸಿರುವ ಬಜೆಟ್‌. ದಕ್ಷಿಣ ಭಾರತದ ವಿಚಾರದಲ್ಲಿ ಕೇಂದ್ರ ಮಲತಾಯಿ ಧೋರಣೆ ತಾಳಿದೆ. ರಾಜ್ಯವನ್ನು ಕಡೆಗಣಿಸಲಾಗಿದೆ. ಉತ್ತರ ಭಾರತಕ್ಕೆ ಸೀಮಿತವಾಗಿದೆ. 

– ಸಂತೋಷ ಕುಮಾರ್ ಅಣ್ಣೂರು ಗುಂಡ್ಲುಪೇಟೆ ತಾಲ್ಲೂಕು

ಕ್ಯಾನ್ಸರ್‌ ತಡೆಗೆ ಲಸಿಕೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ 9ರಿಂದ 14 ವರ್ಷದ ಬಾಲಕಿಯರಿಗೂ ಲಸಿಕೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗಿ ಮಹಿಳೆಯರಿಗೆ ಬರುತ್ತಿದೆ. ಹಾಗಾಗಿ ಈ ಬಜೆಟ್ ಮಹಿಳೆಯರ ಪರವಾಗಿ ಇದೆ. ಅದಲ್ಲದೆ ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್‌ ಯೋಜನೆ ವಿಸ್ತರಿಸಿರುವುದು ಸ್ವಾಗತಾರ್ಹ

–ಪಿ.ಪುಷ್ಪಲತಾ ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT