ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಲಸಿಕಾ ಮೇಳ: ಕೇಂದ್ರಗಳ ಎದುರು ಜನರ ಸಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆರೋಗ್ಯ ಇಲಾಖೆಯು ಸೋಮವಾರ ಜಿಲ್ಲೆಯಾದ್ಯಂತ ಲಸಿಕಾ ಮೇಳ ಕೈಗೊಂಡಿದ್ದು, ಲಸಿಕಾ ಕೇಂದ್ರಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. 

ಜೂನ್‌ 21ರಂದು ನಡೆದ ಯೋಗ ದಿನಾಚರಣೆ ಅಂಗವಾಗಿ ದೊಡ್ಡ ಮಟ್ಟದಲ್ಲಿ ನಡೆದಿದ್ದ ಲಸಿಕಾ ಮೇಳದ ನಂತರ ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ನಿಧಾನವಾಗಿತ್ತು. ರಾಜ್ಯದಿಂದ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗದೇ ಇದ್ದುದರಿಂದ ದಿನಕ್ಕೆ ಸರಾಸರಿ 3000 ದಷ್ಟು ಮಂದಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗುತ್ತಿತ್ತು. 

ಜನರು ಕೇಂದ್ರಗಳಿಗೆ ಬಂದು ಲಸಿಕೆ ಸಿಗದೆ ವಾಪಸ್‌ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಕೆಲವು ದಿನಗಳಿಂದ ರಾಜ್ಯದಿಂದ ಪೂರೈಕೆಯಾಗುತ್ತಿರುವ ಲಸಿಕೆಯ ಪ್ರಮಾಣ ಹೆಚ್ಚಿದ್ದು, ಇಲಾಖೆಯಲ್ಲಿ ದಾಸ್ತಾನು ಇದ್ದ ಲಸಿಕೆಗಳು ಸೇರಿದಂತೆ ಎಲ್ಲ ಲಸಿಕೆಗಳನ್ನು ಆಂದೋಲನದ ಮಾದರಿಯಲ್ಲಿ ವಿತರಿಸಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿರುವುದರಿಂದ ಸೋಮವಾರ ಮೇಳ ಆಯೋಜಿಸಲಾಗಿತ್ತು. 

60 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೂರು ಸಮುದಾಯ ಕೇಂದ್ರಗಳು, ಜಿಲ್ಲಾಸ್ಪತ್ರೆ, ಮೂರು ತಾಲ್ಲೂಕು ಆಸ್ಪತ್ರೆಗಳು ಸೇರಿದಂತೆ 70ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಹೆಚ್ಚಿನವರಿಗೆ ಲಸಿಕೆ ದೊರೆತಿದ್ದು, ಕೊನೆಗೆ ಬಂದವರು ಲಸಿಕೆ ಪಡೆಯದೆ ವಾಪಸ್‌ ಹೋಗಬೇಕಾಯಿತು. 

‘ಆಂದೋಲನದ ಮಾದರಿಯಲ್ಲಿ ಲಸಿಕೆ ನೀಡಲು ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ. ಹಾಗಾಗಿ, ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ’ ಎಂದು ಜಿಲ್ಲಾ ಲಸಿಕೆ ಅಧಿಕಾರಿ ಡಾ.ಜೆ.ಎಂ.ವಿಶ್ವೇಶ್ವರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು