ಭಾನುವಾರ, ಜೂನ್ 13, 2021
22 °C
ಕೋವಿಡ್‌ ನಡುವೆ ಮಕ್ಕಳಿಗೆ ಔಪಚಾರಿಕ ಶಿಕ್ಷಣ, ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಜಾರಿ

ಚಾಮರಾಜನಗರ : ವಿದ್ಯಾಗಮ- ನಿರಂತರ ಕಲಿಕೆಯ ಸಂಗಮ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಯಳಂದೂರು: ಕೋವಿಡ್‌–19 ಕಾರಣದಿಂದಾಗಿ ಶಾಲೆ ಆರಂಭವಾಗದಿದ್ದರೂ ಮಕ್ಕಳ ಕಲಿಕೆ, ಬೋಧನೆಗೆ ತೊಂದರೆಯಾಗಬಾರದು, ಶೈಕ್ಷಣಿಕ ವಿಚಾರಗಳಿಂದ ಅವರು ದೂರ ಉಳಿಯಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ರೂಪಿಸಿರುವ ‘ವಿದ್ಯಾಗಮ’ ಎಂಬ ವಿಶಿಷ್ಟ ಯೋಜನೆ ಜಿಲ್ಲೆಯಲ್ಲೂ ಅನುಷ್ಠಾನಗೊಂಡಿದೆ.

ಶಿಕ್ಷಕರು ಶಾಲಾ ವ್ಯಾಪ್ತಿಯ ಗ್ರಾಮಗಳಿಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ತೆರಳಿ, ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸುತ್ತಮುತ್ತಲಿನ ಮಕ್ಕಳನ್ನು ಸೇರಿಸಿಕೊಂಡು ಔಪಚಾರಿಕ ಶಿಕ್ಷಣ ನೀಡುತ್ತಿದ್ದಾರೆ. ಆನ್‌ಲೈನ್‌ ಮೂಲಕ ಪಾಠ ಕೇಳಲು ಸಾಧ್ಯವಾಗದಿರುವ ಮಕ್ಕಳಿಗೆ ‌ಈ ಕಾರ್ಯಕ್ರಮದಿಂದ ಅನುಕೂಲವಾಗಿದೆ.

ಅರಳಿ ಕಟ್ಟೆ, ಊರಿನ ಕಟ್ಟೆ, ಹಾಲ್‌.. ಹೀಗೆ ಎಲ್ಲಿ ಸ್ಥಳಾವಕಾಶ ಇದೆಯೋ ಅಲ್ಲಿ ಮಕ್ಕಳನ್ನು ಸೇರಿಸಿ, ಕೋವಿಡ್‌ ಮುಂಜಾಗ್ರತಾ ನಿಯಮಗಳನ್ನು ಪಾಲಿಸಿಕೊಂಡು ಪಾಠಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿಸಲಾಗುತ್ತಿದೆ.   

ಜಿಲ್ಲೆಯಲ್ಲಿ ಈಗಾಗಲೇ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಶಾಲೆಗೆ ತೆರಳುವ ಶಿಕ್ಷಕರು ಆಯಾ ಗ್ರಾಮಕ್ಕೆ ತೆರಳಿ ಮಕ್ಕಳನ್ನು ಭೇಟಿ ಮಾಡಿ, ಕಲಿಕೆಯ ಪ್ರಗತಿ ಪರಿಶೀಲಿಸುತ್ತಾರೆ. ಶಾಲೆಗಳು ಆರಂಭವಾಗುವ ತನಕ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

‘ಜಿಲ್ಲೆಯ ಐದು ಶೈಕ್ಷಣಿಕ ವಲಯಗಳಲ್ಲೂ ‘ವಿದ್ಯಾಗಮ’ ಕಾರ್ಯಕ್ರಮ ಆರಂಭಿಸಲಾಗಿದೆ. ಶಿಕ್ಷಕರು ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಶಾಲೆಗಳಲ್ಲಿ ತರಗತಿ ನಡೆಯಲಿದ್ದರೂ, ಮಕ್ಕಳು ಪಠ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ವಿಮುಖರಾಗಬಾರದು ಎಂಬುದು ಯೋಜನೆಯ ಉದ್ದೇಶ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಕ್ಕಳ ಅಭ್ಯಾಸಕ್ಕೆ ಸಿಗುವ ಶೈಕ್ಷಣಿಕ ಸೌಲಭ್ಯಗಳ ಆಧಾರದ ಮೇಲೆ ಕಲಿಕಾ ಕೋಣೆಗಳನ್ನಾಗಿ ವಿಂಗಡಿಸಲಾಗುತ್ತದೆ. ನಂತರ ಕಲಿಕಾ ಚಟುವಟಿಕೆಗಳನ್ನು ವಿಸ್ತರಿಸಲಾಗುತ್ತದೆ. ಕೋವಿಡ್ ಅವಧಿಯಲ್ಲಿ ಶಾಲಾ ಮಕ್ಕಳು ಮತ್ತು ಶಿಕ್ಷಕರು ನಡುವೆ ಭೌತಿಕ ಭೇಟಿ ಕಲ್ಪಿಸಲು ಇದೊಂದು ಉತ್ತಮ ವೇದಿಕೆ ಆಗಿದೆ’ ಎಂದು ಯಳಂದೂರಿನ ಬಿಆರ್‌ಸಿ ಮಹೇಶ್‌ ಅವರು ಹೇಳಿದರು. 

ಪ್ರತಿ ವಿದ್ಯಾರ್ಥಿಗಳ ಮನೆಗಳಿಗೆ ಮಾರ್ಗದರ್ಶಿ ಶಿಕ್ಷಕರು ವಾರಕ್ಕೆ ಎರಡು ಸಲವಾದರೂ ಭೇಟಿ ನೀಡಿ, ಪಾಠ ಬೋಧಿಸುತ್ತಾರೆ. ಶಿಕ್ಷಕರು ತಾವು ಕೈಗೊಂಡ ಪಾಠ ಪ್ರವಚನಗಳ ಬಗ್ಗೆ ದಾಖಲೆ ನಿರ್ವಹಣೆ ಮಾಡುತ್ತಾರೆ. ಪ್ರೌಢಶಾಲಾ ಮಕ್ಕಳಿಗೆ ದೂರವಾಣಿ ಮಾಡಿ ಅವರ ಅಭ್ಯಾಸದ ವಿವರಗಳನ್ನು ಖಾತ್ರಿ ಮಾಡಿಕೊಳ್ಳಲಾಗುತ್ತದೆ. ನಂತರ ಅವರ ಮನೆಗಳಿಗೆ ತೆರಳಿ ಕಷ್ಟದ ವಿಷಯಗಳನ್ನು ಗುರುತಿಸಿ, ಬೋಧಿಸಲಾಗುತ್ತದೆ.

‘ಗ್ರಾಮಗಳಲ್ಲಿ ನೆಲೆಸಿರುವ ಮಕ್ಕಳು ನಿರ್ವಹಿಸಿರುವ ಮನೆಗೆಲಸ, ವಿಜ್ಞಾನ ಮಾದರಿ ಪರಿಶೀಲಿಸಲಾಗುತ್ತದೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಸೌಲಭ್ಯ, ಇಂಟರ್‌ನೆಟ್‌ ಸಂಪರ್ಕ, ರೇಡಿಯೊ.. ಯಾವುದೇ ಸವಲತ್ತು ಇಲ್ಲದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಬೋಧನೆಗೆ ಒತ್ತು ನೀಡಲಾಗುತ್ತದೆ’ ಎಂದು ಸಂತೇಮರಹಳ್ಳಿ ಶಿಕ್ಷಕ ಪುಟ್ಟರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

1–5ನೇ ತರಗತಿ ಮಕ್ಕಳಿಗೆ, ಮಾರ್ಗದರ್ಶಿ ಶಿಕ್ಷಕರೇ ಎಲ್ಲ ವಿಷಯ ಕಲಿಸುತ್ತಾರೆ. 6–10ನೇ ವರ್ಗದ ವಿದ್ಯಾರ್ಥಿಗಳಿಗೆ ಕಲಿಸಲು ಆಯಾ ವಿಷಯವಾರು ಶಿಕ್ಷಕರೊಂದಿಗೆ ಸಮನ್ವಯತೆ ರೂಪಿಸಿಕೊಳ್ಳಬೇಕು. ಶಾಲೆಗಳ ಮುಖ್ಯ ಶಿಕ್ಷಕರು ಈ ಎಲ್ಲ ಪ್ರಕ್ರಿಯೆಗಳ ಮೇಲ್ವಿಚಾರಣೆ ವಹಿಸಿಕೊಂಡು ಕಲಿಕಾ ಚಟುವಟಿಕೆಗಳು ಮುಂದುವರಿಸಬೇಕು ಎಂದು ಇಲಾಖೆ ಸೂಚಿಸಿದೆ.

ಮಕ್ಕಳ ಮನೆಗೆ ಬಿಸಿಯೂಟ ಸಾಮಗ್ರಿ

ಶಾಲೆ ಆರಂಭವಾಗದಿರುವುದರಿಂದ ಬಿಸಿಯೂಟದ ಅಕ್ಕಿ ಬೇಳೆಗಳನ್ನು ಮಕ್ಕಳ ಮನೆಗೆ ತಲುಪಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

‘ಜೂನ್‌ನಲ್ಲಿ ಆರಂಭವಾಗಬೇಕಿದ್ದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಆದರೂ, ಸರ್ಕಾರ ಬಿಸಿಯೂಟ ಸಾಮಗ್ರಿಗಳನ್ನು ಶಾಲೆಗಳಿಗೆ ಪೂರೈಸುತ್ತಿದೆ. ಮಕ್ಕಳ ಪೋಷಕರನ್ನು ಸಂಪರ್ಕಿಸಿ ವಿದ್ಯಾರ್ಥಿಗಳ ಮನೆಗಳಿಗೆ ಆಹಾರ ಪದಾರ್ಥ ತಲುಪಿಸಲು ಯೋಜನೆ ರೂಪಿಸಲಾಗುತ್ತಿದೆ. ಪಠ್ಯ ಪುಸ್ತಕ, ಹಾಲಿನ ಪೌಡರ್, ಬೇಳೆ, ಅಕ್ಕಿ, ಎಣ್ಣೆಯನ್ನು ವಿತರಣೆ ಮಾಡಬೇಕಿದೆ’ ಎಂದು ಯಳಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿರುಮಲಾಚಾರಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು