ಗುರುವಾರ , ಏಪ್ರಿಲ್ 2, 2020
19 °C
ಕೊರೊನಾ ಭೀತಿ: ಸರ್ಕಾರದೊಂದಿಗೆ ಕೈಜೋಡಿಸಿದ ಗ್ರಾಮಸ್ಥರು, ಸಮುದಾಯದ ಮುಖಂಡರು

ಗ್ರಾಮ, ಬಡಾವಣೆಗಳಲ್ಲಿ ಸ್ವಯಂ ದಿಗ್ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೊರೊನಾ ವೈರಸ್‌ ತಡೆಗೇ ಇಡೀ ದೇಶದಲ್ಲೇ 21 ದಿನಗಳ ಕಾಲ ದಿಗ್ಬಂಧನ ಹೇರಲಾಗಿದೆ. ಸರ್ಕಾರದ ಜೊತೆಗೆ ಜಿಲ್ಲೆಯ ವಿವಿಧ ಗ್ರಾಮಗಳ, ಸಮುದಾಯಗಳ ಮುಖಂಡರೂ ಕೈ ಜೋಡಿಸಿದ್ದು, ಅನಗತ್ಯವಾಗಿ ಹೊರಗಿನವರು ಊರಿಗೆ ಪ್ರವೇಶಿಸಬಾರದು ಮತ್ತು ಊರಿನ ಜನರು ಅನಗತ್ಯವಾಗಿ ಓಡಾಡಬಾರದು ಎಂದು ಸ್ವಯಂ ಆಗಿ ಗ್ರಾಮ, ಬಡಾವಣೆಗಳಲ್ಲಿ ದಿಗ್ಬಂಧನ ಹಾಕಿಕೊಂಡಿದ್ದಾರೆ.

ಕೆಲವು ಗ್ರಾಮಗಳಲ್ಲಿ ಅನಗತ್ಯವಾಗಿ ಓಡಾಡಿದರೆ ದಂಡ ವಿಧಿಸುವ ಫರ್ಮಾನನ್ನು ಮುಖಂಡರು ಹೊರಡಿಸಿದ್ದು, ಇನ್ನೂ ಕೆಲವು ಕಡೆ ಗ್ರಾಮಗಳಿಗೆ ಹೋಗುವ ರಸ್ತೆಗಳನ್ನೇ ಮುಚ್ಚಲಾಗಿದೆ. 

ಚಾಮರಾಜನಗರ ತಾಲ್ಲೂಕಿನ ಕಾಗಲವಾಡಿ ಮೋಳೆ ಗ್ರಾಮಸ್ಥರು ಮೋಳೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬೇಲಿ ಕಟ್ಟಿ ಬಂದ್‌ ಮಾಡಿದ್ದು, ಜನರು ಅನಗತ್ಯವಾಗಿ ಓಡಾಡಬಾರದು, ಹೊರ ಗ್ರಾಮದ ಜನರು ಊರಿಗೆ ಬರಬಾರದು ಎಂದು ಘೋಷಿಸಿದ್ದಾರೆ. ಈ ಸಂಬಂಧ ಬೇಲಿಯಲ್ಲಿ ಫಲಕವನ್ನೂ ಅಳವಡಿಸಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ₹10 ಸಾವಿರಕ್ಕೂ ಹೆಚ್ಚು ದಂಡ ವಿಧಿಸಲು ಗ್ರಾಮದ ಯಜಮಾನರು ತೀರ್ಮಾನಿಸಿದ್ದಾರೆ. 

ತಾಲ್ಲೂಕಿನ ಹೊಂಗನೂರು ಗ್ರಾಮದ ನಾಯಕ ಸಮುದಾಯದ ಯಜಮಾನರು ಕೂಡ ಇದೇ ರೀತಿಯ ನಿರ್ಣಯ ತೆಗೆದುಕೊಂಡಿದ್ದಾರೆ. ಸಮುದಾಯದ ಜನ ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದು ಗುಂಪು ಸೇರಿದರೆ ₹1,000 ದಂಡ ಹಾಕುವುದಾಗಿ ಘೋಷಿಸಿದ್ದಾರೆ. ಹೊಂಗನೂರಿನ ನಾಯಕರ ಬೀದಿಗಳಲ್ಲಿ 350 ಮನೆಗಳಿವೆ. ನಿರ್ಣಯದ ಬಗ್ಗೆ ಬೀದಿಯಲ್ಲಿ ಧ್ವನಿ ವರ್ಧಕದಲ್ಲಿ ಘೋಷಣೆಯನ್ನೂ ಮಾಡಲಾಗಿದೆ.

ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ, ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಜನರು ಕೂಡ ಸರ್ಕಾರಕ್ಕೆ ಸಹಕಾರ ನೀಡಬೇಕು. ಈ ಉದ್ದೇಶದಿಂದ ಬುಧವಾರ ಬೆಳಿಗ್ಗೆ‌ ಸಮುದಾಯದ ಯಜಮಾನರು ಸಭೆ ಸೇರಿ ಈ ನಿರ್ಣಯಕ್ಕೆ ಬಂದಿದ್ದಾರೆ' ಎಂದು ಹೊಂಗನೂರಿನ ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಅಗತ್ಯ ವಸ್ತುಗಳ ಖರೀದಿಗಾಗಿ ಒಬ್ಬೊಬ್ಬರು ಹೊರಗಡೆ ಬರಬಹುದು. ಆದರೆ ಮೂರು ಜನರಿಗಿಂತ ಜಾಸ್ತಿ ಅನಗತ್ಯವಾಗಿ ಗುಂಪು ಕೂಡುವಂತಿಲ್ಲ. ದಂಡದ ಭಯಕ್ಕಾದರೂ ಜನರು ಹೊರಗಡೆ ಬರದಿರಲಿ ಎಂಬುದು ನಿರ್ಣಯದ ಉದ್ದೇಶ' ಎಂದರು.

ತಾಲ್ಲೂಕಿನ ಹರದನಗಳ್ಳಿಯ ಗ್ರಾಮಸ್ಥರು, ತಮ್ಮ ಗ್ರಾಮಕ್ಕೆ ಹೊರಗಿನವರು ಯಾರೂ ಬರದಂತೆ ಮಾಡಲು ಸಂಪರ್ಕ ಕಲ್ಪಿಸುವ ರಸ್ತೆಗೆ ತೆಂಗಿನ ಮರವನ್ನು ಹಾಕಿ ಮುಚ್ಚಿದ್ದಾರೆ. 

ಕೊಳ್ಳೇಗಾಲ ನಗರದ ಸಂತೇಪೇಟೆಯ ಮೇದರ ಬೀದಿಯ ಬಡಾವಣೆಯ ನಿವಾಸಿಗಳು ಬಡಾವಣೆ ಒಳಗೆ ಬೇರೆ ಕಡೆಯಿಂದ ಬಂದವರು ಯಾರೂ ಪ್ರವೇಶ ಮಾಡಬಾರದು ಎಂದು ನಾಮಫಲಕ ಹಾಕಿ ಅಡ್ಡಲಾಗಿ ಮರಗಳನ್ನು ಕಟ್ಟಿದ್ದಾರೆ.

ಬಡಾವಣೆಗೆ ಯಾರಾದರೂ ಪರಿಚಯವಿಲ್ಲದ ವ್ಯಕ್ತಿ ಬಂದರೆ, ಅಲ್ಲಿನ ನಿವಾಸಿಗಳು ಅವರನ್ನು ವಿಚಾರಿಸಿ ಅಲ್ಲಿಂದ ವಾಪಸ್ ಕಳುಹಿಸುತ್ತಿದ್ದಾರೆ. ನಿವಾಸಿಗಳು ಬೆಳಿಗ್ಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಮಾತ್ರ ಹೊರಗೆ ಬರುತ್ತಾರೆ. 

ಅನ್ಯರಿಗೆ ಪುರಪ್ರವೇಶಕ್ಕೆ ಅವಕಾಶ ಇಲ್ಲ

ಯಳಂದೂರು: ಪಟ್ಟಣದ ಎಲೆಕೇರಿ ಬೀದಿ, ವೈ.ಕೆ.ಮೋಳೆ, ಗುಂಬಳ್ಳಿ ಮತ್ತು ಬಿಳಿಗಿರಿರಂಗನಬೆಟ್ಟಗಳ ವ್ಯಾಪ್ತಿಯಲ್ಲಿ ಗ್ರಾಮಗಳು, ಬೀದಿಗಳಿಗೆ ಹೊರಗಿನವರು ಪ್ರವೇಶಿಸದಂತೆ ಮುನ್ನಚ್ಚರಿಕೆ ವಹಿಸಲಾಗಿದೆ.

‘ನಮ್ಮ ಗ್ರಾಮದ ಸುತ್ತಲು ಸ್ಥಳೀಯರನ್ನು ಹೊರತುಪಡಿಸಿ ಇತರರು ಬರದಂತೆ ಊರ ಮುಂದೆ ಮುಳ್ಳಿನ ಪೊದೆಗಳನ್ನು ಹೊದಿಸಲಾಗಿದೆ. ಎಚ್ಚರಿಕೆ ಫಲಕಗಳನ್ನು ಅಳವಡಿಸಿದೆ. ಗ್ರಾಮವು ಬೆಟ್ಟದ ರಸ್ತೆಯಲ್ಲಿ ಇದೆ. ಈ ಮಾರ್ಗದಲ್ಲಿ ಜನರ ಓಡಾಟ ತಪ್ಪಿಸಲು ಈ ಕ್ರಮ ಅನಿವಾರ್ಯ’ ಎಂದು ಗುಂಬಳ್ಳಿಯ ಬಸವರಾಜು ಅವರು ಹೇಳಿದರು.

‘ನಮ್ಮ ಊರಿನ ಬೀದಿಗಳ ಬಳಿ ರಸ್ತೆಗೆ ಅಡ್ಡಲಾಗಿ ಏಣಿಗಳನ್ನು ಇಟ್ಟು ಫಲಕಗಳನ್ನು ಅಳವಡಿಸಿದ್ದೇವೆ. ಮನೆಯಲ್ಲಿ ಜನರು ವಿಶ್ರಾಂತಿ ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆಮ್ಮುವುದು, ಸೀನುವುದು ಕಂಡರೆ ಆರೋಗ್ಯ ಇಲಾಖೆಗೆ ಸಿಬ್ಬಂದಿಗೆ ತಿಳಿಸಬೇಕು. ಇದರಿಂದ ಎಲ್ಲರ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಈ ಉದ್ದೇಶದಿಂದ ಇತರರಿಗೆ ಊರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ’ ಎಂದು ಮೋಳೆಯ ಯಜಮಾನರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು