ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳತ್ತೂರು ಸ್ಥಬ್ಧ: ಮನೆ ಮಾಡಿದ ಆತಂಕ

ಗ್ರಾಮಸ್ಥರನ್ನು ಕಾಡುತ್ತಿದೆ ಕ್ವಾರಂಟೈನ್‌ ಭಯ, ಅಧಿಕಾರಿಗಳಿಂದ ಜಾಗೃತಿ
Last Updated 6 ಮೇ 2020, 4:32 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಬೆಳತ್ತೂರು ಗ್ರಾಮಕ್ಕೆ ಸೋಮವಾರ ಕೋವಿಡ್‌–19 ದೃಢ ಪಟ್ಟ ವ್ಯಕ್ತಿ ಭೇಟಿ ಕೊಟ್ಟು ಹೋದ ಮೇಲೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಇದಕ್ಕೆ ಹೊಂದಿಕೊಂಡಂತಿರುವ ಉದ್ದನೂರು ಗ್ರಾಮದಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ಸೋಮವಾರ ರಾತ್ರಿ 11.40ರ ಸುಮಾರಿಗೆ ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಇದರಿಂದ ಮುಂದೆ ಏನಾಗುವೋ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದ್ದು, ಇಡೀ ಗ್ರಾಮವೇ ಅಕ್ಷರಶಃ ಸ್ತಬ್ಧಗೊಂಡಿದೆ. ಮಂಗಳವಾರ ಬೆಳಿಗ್ಗೆ ವಿವಿಧ ಅಧಿಕಾರಿಗಳ ದಂಡೇ ಗ್ರಾಮಕ್ಕೆ ಭೇಟಿ ನೀಡಿ, ಜನರಲ್ಲಿ ತಿಳಿ ಹೇಳುವ ಕೆಲಸ ಮಾಡಿದೆ. ಬೆಳತ್ತೂರು ಗ್ರಾಮಕ್ಕೆ ಹೊಂದಿಕೊಂಡಿರುವ ಉದ್ದನೂರು ಗ್ರಾಮದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ನಿಗಾ ವಹಿಸಲಾಗಿದೆ.

ಬೆಳತ್ತೂರು ಗ್ರಾಮದಲ್ಲಿ 215 ಕುಟುಂಬಗಳಿದ್ದು, ಪುರುಷರು 482, ಮಹಿಳೆಯರು 432 ಸೇರಿದಂತೆ ಒಟ್ಟು 920 ಜನರು ವಾಸ ಮಾಡುತ್ತಿದ್ದು ಇದರಲ್ಲಿ 180 ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ಹೀಗಾಗಿ ಸಣ್ಣ ಮಕ್ಕಳು ಸೇರಿದಂತೆ ವೃದ್ಧರು ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ಈಗಾಗಲೇ ಗ್ರಾಮದಲ್ಲಿ ಅಗ್ನಿ ಶಾಮಕದಳ ಸಿಬ್ಬಂದಿ ಇಡೀ ಗ್ರಾಮಕ್ಕೆ ಔಷಧಿ ಸಿಂಪಡಿಸಿದ್ದಾರೆ. ಅಲ್ಲದೇ ಗ್ರಾಮದಿಂದ ಯಾರೂ ಹೊರಹೋಗದಂತೆ, ಒಳಗೆ ಬರದಂತೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ವಯಂ ಪ್ರೇರಿತ ಬಂದ್: ಟಿವಿಗಳಲ್ಲಿ ನೋಡಿ, ಪತ್ರಿಕೆಗಳಲ್ಲಿ ಕೋವಿಡ್‌–19ರ ಬಗ್ಗೆ ಕ್ವಾರಂಟೈನ್‌ ಬಗ್ಗೆ ತಿಳಿದುಕೊಂಡಿದ್ದ ಗ್ರಾಮಸ್ಥರು, ಈಗ ತಮ್ಮ ಗ್ರಾಮದವರೂ ಅದೇ ರೀತಿ ಕ್ವಾರಂಟೈನ್‌ಗೆ ಒಳಗಾಗಿರುವುದನ್ನು ಕಂಡು ಆಘಾತಗೊಂಡಿದ್ದಾರೆ. ಇತರ ಗ್ರಾಮಸ್ಥರೂ ಕ್ವಾರಂಟೈನ್‌ಗೆ ಹೋಗಬೇಕಾಗಬಹುದೋ ಎಂಬ ಭಯವೂ ಅವರನ್ನು ಕಾಡುತ್ತಿದೆ.

ಸೋಂಕಿತ ವ್ಯಕ್ತಿ ಗ್ರಾಮಕ್ಕೆ ಬಂದು ವಾಪಸ್ಸಾಗಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಮಾಡಿದ್ದಾರೆ. ಗ್ರಾಮದ ಮುಖ್ಯರಸ್ತೆ, ಬಡಾವಣೆ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.

‘ದೇಶದಾದ್ಯಂತ ಕೋವಿಡ್‌–19 ಸೃಷ್ಟಿಸಿರುವ ತಲ್ಲಣದ ಬಗ್ಗೆ ಗ್ರಾಮದ ಜನರಿಗೆ ಈಗಾಗಲೇ ತಿಳಿದಿತ್ತು. ಅಂತಹದ್ದರಲ್ಲಿ ಈಗ ನಮ್ಮ ಗ್ರಾಮಕ್ಕೆ ಸೋಂಕಿತ ವ್ಯಕ್ತಿ ಬಂದು ಹೋಗಿರುವ ವಿಚಾರ ತಿಳಿದ ಜನ ಭಯಭೀತರಾಗಿದ್ದಾರೆ’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

ಎಲ್ಲೂ ಹೋಗಿಲ್ಲ: ‘ಸೋಂಕು ಧೃಢಪಟ್ಟ ವ್ಯಕ್ತಿ ಮದ್ಯದ ಅಂಗಡಿಗೆ, ಪೆಟ್ರೋಲ್‌ ಬಂಕ್‌ಗೆ ಭೇಟಿ ನೀಡಿದ್ದರು ಎಂದೆಲ್ಲ ಹೇಳಲಾಗುತ್ತಿದೆ. ಇದು ಸುಳ್ಳು. ಅವರು ಮನೆಯಿಂದ ಹೊರಗೆ ಬಂದೇ ಇಲ್ಲ. ಹೆಚ್ಚು ಜನರೊಂದಿಗೆ ಬೆರೆತಿಲ್ಲ’ ಎಂದು ಗ್ರಾಮದ ರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವದಂತಿಗಳ ಕಾರುಬಾರು

ಸೋಮವಾರ ರಾತ್ರಿ 18 ಜನರನ್ನು ಕ್ವಾರಂಟೈನ್ ಮಾಡಿದ ವಿಚಾರ ಮಂಗಳವಾರ ಬೆಳಿಗ್ಗೆ ಗೊತ್ತಾಗುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಫೇಸ್‌ಬುಕ್‌, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಲವು ಸುದ್ದಿಗಳು ಹರದಾಡಿದವು. ಹನೂರಿನಲ್ಲಿ ಒಬ್ಬರಿಗೆ ಕೋವಿಡ್‌–19 ದೃಢಪಟ್ಟಿದೆ, 10 ಜನರ ವರದಿ ನೆಗೆಟಿವ್‌ ಬಂದಿದೆ. ನಾಲ್ವರು ಗಂಭೀರವಾಗಿದ್ದಾರೆ ಎಂದೆಲ್ಲ ಜನರು ಮಾತನಾಡಿಕೊಂಡರು. ಸಾರ್ವಜನಿಕ ಸ್ಥಳಗಳಲ್ಲೂ ಈ ಬಗ್ಗೆ ಚರ್ಚೆಗಳು ನಡೆದವು.

ಜಿಲ್ಲಾಡಳಿತ ಕೂಡ ಮಧ್ಯಾಹ್ನದವರೆಗೂ ಈ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಅಧಿಕಾರಿಗಳನ್ನು ಸಂಪರ್ಕಿಸಿದಾಗ ಪರಿಶೀಲನೆ ನಡೆಸುತ್ತಿದ್ದೇವೆ ಎಂದಷ್ಟೇ ಹೇಳುತ್ತಿದ್ದರು. ಸುದ್ದಿ ವಾಹಿನಿಗಳು ಸ್ಥಳೀಯ ಶಾಸಕ ಆರ್‌.ನರೇಂದ್ರ ಅವರನ್ನು ಸಂಪರ್ಕಿಸಿದಾಗ ಅವರು ಈ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯರು ನೀಡಿದ ವಿವರಗಳನ್ನು ಆಧರಿಸಿ ಸುದ್ದಿ ಬಿತ್ತರಿಸಿದವು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಧ್ಯಾಹ್ನ 3 ಗಂಟೆ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದರು.

ಆಕ್ರೋಶ

ಸೋಂಕಿತ ವ್ಯಕ್ತಿ ಬೆಂಗಳೂರಿನಲ್ಲಿ ಕೋವಿಡ್‌ ಪರೀಕ್ಷೆಗಾಗಿ ಗಂಟಲ ದ್ರವವನ್ನು ಕೊಟ್ಟಿದ್ದರೂ ವರದಿ ಬರುವುದಕ್ಕೆ ಮುಂಚಿತವಾಗಿ ಅಲ್ಲಿಂದ ಹೊರಟು ಹನೂರಿಗೆ ಬಂದಿದ್ದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ಸಂಚಾರಕ್ಕೆ ಅನುಮತಿ ನೀಡಿದ್ದಕ್ಕೂ ಜನರು ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT