ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕೋವಿಡ್‌ ಕಾಲದ ಪಾಠಕ್ಕೆ ವಾಟ್ಸ್‌ಆ್ಯಪ್‌, ಝೂಮ್‌ ಆ್ಯಪ್‌

ವರ್ಚ್ಯುವಲ್‌ ಆನ್‌ಲೈನ್‌ ತರಗತಿಗಳ ಮೊರೆ ಹೋದ ಕಾಲೇಜುಗಳು, ಬೋಧಕರು
Last Updated 17 ಮೇ 2020, 8:21 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್– ಲಾಕ್‌ಡೌನ್‌ ಅವಧಿಯಲ್ಲಿ ತರಗತಿ ಪಾಠಗಳನ್ನು ನಡೆಸಲು ಸಾಧ್ಯವಾಗದಿರುವುದರಿಂದ ಶಿಕ್ಷಣದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯ ಸಾಧ್ಯತೆ ತೆರೆದುಕೊಂಡಿದ್ದು, ಜಿಲ್ಲೆಯ ಕಾಲೇಜುಗಳು ವಾಟ್ಸ್‌ಆ್ಯಪ್‌, ಟೆಲಿಗ್ರಾಂ, ಝೂಮ್‌ ಆ್ಯಪ್‌ನಂತಹ ತಂತ್ರಾಂಶಗಳ ಮೊರೆ ಹೋಗಿವೆ.

ಮೊಬೈಲ್‌ ಸಿಗ್ನಲ್‌, ಇಂಟರ್‌ನೆಟ್‌ ಸಮಸ್ಯೆಯ ಕಾರಣಕ್ಕೆ ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ತರಗತಿ ನಡೆಸುವ ಪ್ರಯತ್ನಕ್ಕೆ ಜಿಲ್ಲೆಯಲ್ಲಿ ಯಶಸ್ಸು ಸಿಕ್ಕಿಲ್ಲ. ಆದರೆ, ವಾಟ್ಸ್‌ಆ್ಯಪ್‌, ಟೆಲಿಗ್ರಾಂನಂತಹ ಆ್ಯಪ್‌ಗಳ ಮೂಲಕ ಆಡಿಯೊ, ವಿಡಿಯೊ ಪಾಠ, ಪಠ್ಯದ ವಿಷಯ, ಪ್ರಶ್ನೆಪತ್ರಿಕೆಗಳನ್ನು ಹಂಚಿಕೊಳ್ಳುವುದರ ಮೂಲಕ ಕಾಲೇಜುಗಳು ವಿದ್ಯಾರ್ಥಿಗಳಿಗೆ ಬೋಧಿಸುತ್ತಿವೆ.

ಲಾಕ್‌ಡೌನ್‌ನಿಂದಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆಯುತ್ತಿರುವವರಿಗೆ ತೊಂದರೆಯಾಗಿದೆ. ಈ ಸಮಯದಲ್ಲಿ ವರ್ಚ್ಯುವಲ್‌ ಆನ್‌ಲೈನ್‌ ತರಗತಿಗಳು ಬೋಧಕರು ಹಾಗೂ ವಿದ್ಯಾರ್ಥಿಗಳನ್ನು ಪರಸ್ಪರ ಬೆಸೆದಿವೆ.

‘ನಮ್ಮಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ, ಎಂಕಾಂ ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಆಡಿಯೊ, ವಿಡಿಯೊ ಪಾಠಗಳನ್ನು ಮಾಡಲಾಗುತ್ತಿದೆ. ಎಲ್ಲ ವಿಷಯಗಳ ಬೋಧಕರು ವಿದ್ಯಾರ್ಥಿಗಳನ್ನೊಳಗೊಂಡ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದಾರೆ.ಬೋಧಕರು ಪಾಠ ಮಾಡಿದ ಧ್ವನಿ ಅಥವಾ ವಿಡಿಯೊ ಮುದ್ರಿಕೆಗಳನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಹಾಕುತ್ತಾರೆ. ಮಕ್ಕಳು ಅದನ್ನು ಡೌನ್‌ಲೋಡ್‌ ಮಾಡಿಕೊಂಡು ನೋಡುತ್ತಾರೆ, ಕೇಳುತ್ತಾರೆ. ಪಠ್ಯದ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳನ್ನು ಕೂಡ ಗ್ರೂಪ್‌ಗಳಲ್ಲಿ ಹಂಚಲಾಗುತ್ತಿದೆ’ ಎಂದು ನಗರದ ಜೆಎಸ್‌ಎಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಎ.ಜಿ.ಶಿವಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪದವಿ ತರಗತಿಗಳಿಗೆ ಇದುವರೆಗೆ 108 ಆಡಿಯೊ, ವಿಡಿಯೊ ತರಗತಿಗಳನ್ನು ಮಾಡಿದ್ದೇವೆ. 230ಕ್ಕೂ ಹೆಚ್ಚು ನೋಟ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಒಂದು ತಿಂಗಳಿಂದ ಝೂಮ್‌ ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ವಿಡಿಯೊ ಪಾಠ ಮಾಡಲಾಗುತ್ತಿದೆ. ಬೋಧಕರು, ವಿದ್ಯಾರ್ಥಿಗಳು ಇದಕ್ಕೆ ಹೊಂದಿಕೊಂಡಿದ್ದಾರೆ. ನಾಳೆ ಈ ವಿಚಾರದ ಬಗ್ಗೆ ಪಾಠ ಇರುತ್ತದೆ ಎಂದು ಮುನ್ನಾ ದಿನವೇ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ. ಪ್ರಾಧ್ಯಾಪಕರು ಪಾಠಕ್ಕೆ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ತಾವು ಇರುವ ಸ್ಥಳದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ45 ನಿಮಿಷಗಳ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳು, ತಮ್ಮ ಮೊಬೈಲ್‌ ಮೂಲಕ ಪಾಠ ಕೇಳುತ್ತಿದ್ದಾರೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಶಿವಬಸವಯ್ಯ ತಿಳಿಸಿದರು.

‘ಈ ವ್ಯವಸ್ಥೆಯಲ್ಲಿ ಶೇ 100ರಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಅವರು ಮತ್ತೆ ತರಗತಿಗೆ ಬಂದಾಗ ಪುನರ್‌ಮನನ ಮಾಡುತ್ತೇವೆ’ ಎಂದರು.

‘ಕಾಲೇಜು ಶಿಕ್ಷಣ ಇಲಾಖೆಯು ‘ಜ್ಞಾನ ನಿಧಿ’ ಎಂಬ ಯೂಟ್ಯೂಬ್‌‌ ಚಾನೆಲ್‌ ಆರಂಭಿಸಿದ್ದು, ಅದರಲ್ಲಿ ಬೋಧನೆ ನಡೆಯುತ್ತಿದೆ. ಇದಲ್ಲದೇ ಕಾಲೇಜಿನ ಮಟ್ಟದಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಪಠ್ಯ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿದೆ’ ಎಂದು ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್‌.ಎಸ್‌.ಪ್ರೇಮಲತಾ ತಿಳಿಸಿದರು.

ಆನ್‌ಲೈನ್‌ ಪಾಠ: ಶೇ 100 ಯಶಸ್ಸು ಸಾಧ್ಯವಿಲ್ಲ
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಅಲ್ಲಿ ಮೊಬೈಲ್‌ ಸಿಗ್ನಲ್‌, ಇಂಟರ್‌ನೆಟ್‌ ಸಿಗ್ನಲ್‌ ಸಮಸ್ಯೆ ಇದೆ. ಆ್ಯಪ್‌ಗಳ ಬಳಕೆಗೆ ಸ್ಮಾರ್ಟ್‌ಫೋನ್‌ಗಳು ಬೇಕು. ಎಲ್ಲ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಅದು ಇಲ್ಲ. ಹಾಗಾಗಿ ಆನ್‌ಲೈನ್‌ ತರಗತಿಗಳು ಜಿಲ್ಲೆಯಲ್ಲಿ ಶೇ 100ರಷ್ಟು ಯಶಸ್ಸು ಕಂಡಿಲ್ಲ ಎಂದು ಹೇಳುತ್ತಾರೆ ಕಾಲೇಜುಗಳ ಪ್ರಾಂಶುಪಾಲರು.

‘ನಮ್ಮ ವಿಜ್ಞಾನ ವಿದ್ಯಾರ್ಥಿಗಳಿಗೆ ಝೂಮ್‌ ಆ್ಯಪ್‌ ಮೂಲಕ ಸಿಇಟಿ ತರಬೇತಿ ಕೊಡುತ್ತಿದ್ದೇವೆ. ಕೆಲವು ಮಕ್ಕಳಿಗೆ ಅದು ತಲುಪುತ್ತಿಲ್ಲ. ಲಾಕ್‌ಡೌನ್‌ ಅವಧಿ ಮುಗಿದು ಎಲ್ಲರೂ ತರಗತಿಗಳಿಗೆ ಬಂದಾಗ ಮತ್ತೊಮ್ಮೆ ಪಾಠ ಮಾಡುತ್ತೇವೆ. ಮನೆಯಲ್ಲಿ ಸುಮ್ಮನೆ ಕುಳಿತಿರುವ ಸಮಯದಲ್ಲಿ ಮಕ್ಕಳು ವಿಷಯಗಳಿಂದ ವಿಮುಖರಾಗುವುದು ಬೇಡ ಎಂಬ ಕಾರಣಕ್ಕೆ ಆನ್‌ಲೈನ್‌ ತರಗತಿಗಳನ್ನು ಮಾಡುತ್ತಿದ್ದೇವೆ’ ಎಂದು ಕೊಳ್ಳೇಗಾಲದ ಮಾನಸ ಪಿಯು ಕಾಲೇಜಿನ ಪ್ರಾಂಶುಪಾಲ ಕೃಷ್ಣೇಗೌಡ ತಿಳಿಸಿದರು.

**

ಮುಂದೊಂದು ದಿನ ಆನ್‌ಲೈನ್‌ ಮೂಲಕ ಪಾಠ ಮಾಡುವ ವ್ಯವಸ್ಥೆ ಬರಬಹುದು. ಕೋವಿಡ್‌–19 ಈ ಸಾಧ್ಯತೆಯನ್ನು ತೆರೆದಿಟ್ಟಿದೆ. ಇದು ನಮಗೆ ಸಿಕ್ಕಿದ ಅವಕಾಶ. ಬಳಸಿಕೊಳ್ಳುತ್ತಿದ್ದೇವೆ.
–ಡಾ.ಶಿವಬಸವಯ್ಯ, ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT