ಭಾನುವಾರ, ಮೇ 22, 2022
29 °C
ಅವಸಾನದ ಅಂಚಿನಲ್ಲಿ ಐತಿಹಾಸಿಕ ಸ್ಥಳಗಳು, ನಿರ್ವಹಣೆ, ಮೂಲಸೌಕರ್ಯಗಳ ಕೊರತೆ

World heritage day: ಚಾಮರಾಜನಗರ- ಪಾರಂಪರಿಕ ತಾಣಗಳ ಅವಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನೈಸರ್ಗಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಜನಪದೀಯವಾಗಿ ಶ್ರೀಮಂತವಾಗಿರುವ ಜಿಲ್ಲೆಯು ಪರಂಪರೆಯೂ ಸಿರಿವಂತವಾಗಿದೆ.

ಜಿಲ್ಲೆ, ರಾಜ್ಯದ ಪರಂಪರೆಯನ್ನು ಸಾರುವ ಹಲವು ಐತಿಹಾಸಿಕ ತಾಣಗಳು ಜಿಲ್ಲೆಯಾದ್ಯಂತ ಕಂಡು ಬರುತ್ತವೆ. ಕೆಲವು ತಾಣಗಳ ನಿರ್ವಹಣೆ ತಕ್ಕಮಟ್ಟಿಗಿದ್ದರೆ, ಹಲವು ಸ್ಥಳಗಳು ನಿರ್ವಹಣೆ ಕಾಣದೆ ಸೊರಗಿವೆ. ಇನ್ನೂ ಕೆಲವು ಜಾಗಗಳು ಜೀರ್ಣವಾಗುತ್ತಿವೆ. ಕೆಲವು ಕಾಲಗರ್ಭ ಸೇರಿವೆ.

ಚಾಮರಾಜನಗರ, ಯಳಂದೂರು ತಾಲ್ಲೂಕು, ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ನಮ್ಮ ಇತಿಹಾಸ ಸಾರುವ ತಾಣಗಳು ಹೆಚ್ಚಿವೆ. ಕೊಳ್ಳೇಗಾಲ, ಹನೂರು ತಾಲ್ಲೂಕುಗಳಲ್ಲಿ ಬೆಳಕಿಗೆ ಬಂದ ಸ್ಥಳಗಳ ಸಂಖ್ಯೆ ಕಡಿಮೆ ಇವೆ. 

ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರು ಭಾಗ, ಯಳಂದೂರು, ಬಿಳಿಗಿರಿರಂಗಬೆಟ್ಟದ ವ್ಯಾಪ್ತಿ, ಗುಂಡ್ಲುಪೇಟೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಹಲವು ಪುರಾತನ ಶಾಸನಗಳು, ಶಿಲ್ಪಗಳು ಸಿಕ್ಕಿವೆ. ಇವುಗಳ ಸಂರಕ್ಷಿಸುವ ಕೆಲಸ ಆಗಿಲ್ಲ.

ಚಾಮರಾಜನಗರ ತಾಲ್ಲೂಕಿನ ನರಸಮಂಗಲದ ರಾಮೇಶ್ವರ ದೇವಾಲಯ, ಆಲೂರಿನ ಅರ್ಕೇಶ್ವರ ದೇವಾಲಯ, ಗುಂಡ್ಲುಪೇಟೆ ತಾಲ್ಲೂಕಿನ ತ್ರಿಯಂಬಕಪುರದ ದೇವಾಲಯ, ಯಳಂದೂರಿನ ಬಳೆಮಂಟಪ ಪುರಾತತ್ವ ಇಲಾಖೆಯ ಸುಪರ್ದಿಗೆ ಬರುತ್ತವೆ. ಬಳೆಮಂಟಪ ಪ್ರಸಿದ್ಧ ತಾಣ. ಉಳಿದ ಮೂರೂ ಸ್ಥಳಗಳಿಗೆ ಪ್ರವಾಸಿ ತಾಣವಾಗುವ ಯೋಗ್ಯತೆ ಇದೆ. ಆದರೆ, ಪುರಾತತ್ವ ಇಲಾಖೆಯ ಫಲಕ ಬಿಟ್ಟು ಬೇರೆನೂ ಇಲ್ಲ. ಪ್ರವಾಸಿಗರು ಭೇಟಿ ನೀಡಿದರೆ ಮಾಹಿತಿ‌ ಕೊಡುವ ವ್ಯವಸ್ಥೆ ಇಲ್ಲ. ಕನಿಷ್ಠ ಸೌಕರ್ಯಗಳೂ ಇಲ್ಲ.

ಜಿಲ್ಲಾ ಕೇಂದ್ರದ ಹೃದಯಭಾಗದಲ್ಲಿ ಜನನ ಮಂಟಪ ಇದೆ. ಮೈಸೂರು ರಾಜಮನೆತನದ ಜಯ ಚಾಮರಾಜ ಒಡೆಯರು ಜನಿಸಿದ ಸ್ಥಳ ಇದು. ಚಾಮರಾಜನಗರದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿರುವ ಇದು ಪಾಳು ಬಿದ್ದಿದೆ. ದಸರಾ ಸಮಯದಲ್ಲಿ ಒಮ್ಮೆ ಮಂಟಪದ ಬಾಗಿಲು ತೆಗೆದು ಸ್ವಚ್ಛಗೊಳಿಸುವ ಶಾಸ್ತ್ರ ಮಾಡಲಾಗುತ್ತದೆ. ಈ ಸ್ಥಳಕ್ಕೆ ಸೇರಿದ ಜಾಗ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸುವ ಯತ್ನಕ್ಕೆ ನಿರಂತರವಾಗಿ ಹಿನ್ನಡೆಯಾಗುತ್ತಿದೆ. 

ಭಕ್ತರಿಗಿಲ್ಲ ಸೂಕ್ತ ಸೌಕರ್ಯಗಳಿಲ್ಲ

ತಾಲ್ಲೂಕಿನ ಹರದನಹಳ್ಳಿ ವ್ಯಾಪ್ತಿಯಲ್ಲಿ ಬರುವ ದಿವ್ಯಲಿಂಗೇಶ್ವರ ಸೇರಿದಂತೆ ಹಲವು ದೇವಾಲಯಗಳು ಭಕ್ತರ ಭೇಟಿಗಷ್ಟೇ ಸೀಮಿತವಾಗಿದೆ. ದಿವ್ಯಲಿಂಗೇಶ್ವರ ದೇವಾಲಯದ ಚಾವಣಿಯಲ್ಲಿರುವ ಅಪೂರ್ವ ಚಿತ್ರಗಳು ಮಾಸುತ್ತಿವೆ.

ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಗೆ ಸೇರಿದ ಉಮ್ಮತ್ತೂರು ಗ್ರಾಮದಲ್ಲಿ ಪಾಳೇಗಾರರು ಹಾಗೂ ರಾಜ ಮಹಾರಾಜರು ನಿರ್ಮಿಸಿದ ಐತಿಹಾಸಿಕ ದೇವಸ್ಥಾನಗಳಿವೆ. ಈಚಿನ ದಿನಗಳಲ್ಲಿ ನಿರ್ವಹಣೆ ಕೊರತೆಯಿಂದ ದೇವಸ್ಥಾನಗಳು ಪಾಳು ಬಿದ್ದಿವೆ. , ಭಕ್ತರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಇವರ ಅನುಕೂಲಕ್ಕೆ ತಕ್ಕಂತೆ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿಲ್ಲ.

ವಿಜಯನಗರದ ಶ್ರೀ ಕೃಷ್ಣದೇವರಾಯನ ಸಾಮಂತರು ನಿರ್ಮಿಸಿರುವ ಶ್ರೀರಂಗನಾಥ ದೇವಾಲಯಕ್ಕೆ ಹೊರ ಜಿಲ್ಲೆಗಳಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಬರುತ್ತಾರೆ. ಪಕ್ಕದಲ್ಲಿರುವ ಭುಜಂಗೇ
ಶ್ವರ ದೇವಾಲಯ ವಿಶಾಲವಾಗಿದ್ದು, ಹಲವಾರು ವಿಗ್ರಹಗಳು ಪಳೆಯುಳಿಕೆಗಳಾಗಿ ಮೂಲೆ ಸೇರಿವೆ. 

ಗ್ರಾಮದಲ್ಲಿ ಜೈನ ಬಸದಿಗಳೂ ಇವೆ. ಈ ಮಂದಿರಗಳು ವಿನಾಶದ ಹಂತದಲ್ಲಿತ್ತು. ಕೆಳ ವರ್ಷಗಳ ಹಿಂದೆ, ಕ್ಷೇತ್ರ ಧರ್ಮಸ್ಥಳ ಹಾಗೂ  ಸರ್ಕಾರದ ಅನುದಾನ ನೀಡಿದ್ದರಿಂದ ಬಸದಿ ಜೋರ್ಣೋದ್ಧಾರಗೊಂಡಿದೆ. ಇದನ್ನು ಬಿಟ್ಟು ಯಾವುದೇ ಅನುಕೂಲಗಳಿಲ್ಲ.

ಜೀರ್ಣಾವಸ್ಥೆ ತಲುಪಿದ ದೇಗುಲಗಳು

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅನೇಕ ಪಾರಂಪರಿಕ ತಾಣಗಲಿದ್ದು ನೈಸರ್ಗಿಕ ಮತ್ತು ಧಾರ್ಮಿಕ ಪಾರಂಪರಿಕ ತಾಣಗಳಾಗಿ ವಿಂಗಡನೆಯಾಗಿದೆ. ಗೋಪಾಲ ಸ್ವಾಮಿ ಬೆಟ್ಟ, ವೆಂಕಟರಮಣ ಸ್ವಾಮಿ( ಹುಲುಗಿನ ಮುರಡಿ) ಮತ್ತು ಪಾರ್ವತಿ ಬೆಟ್ಟದ ದೇವಸ್ಥಾನಗಳು ಪ್ರಸಿದ್ದವಾಗಿ ಧಾರ್ಮಿಕ ಪಾರಂಪರಿಕ ತಾಣದ ಜೊತೆಗೆ ನೈಸರ್ಗಿಕ ಪಾರಂಪಾರಿಕ ತಾಣವಾಗಿ ಬದಲಾಗಿದ್ದು ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ತಾಲ್ಲೂಕಿನಲ್ಲಿ ಇನ್ನೂ ಹಲವು ಧಾರ್ಮಿಕ ಪಾರಂಪರಿಕ ಕಟ್ಟಡಗಳಿದ್ದು ಅವನತಿಯತ್ತ ಸಾಗಿವೆ. ಚಿಕ್ಕಾಡಿ, ತೊಂಡವಾಡಿ, ಹಳ್ಳದ ಮಾದಹಳ್ಳಿ , ಸಂಪಿಗೆಪುರ ಗ್ರಾಮದಲ್ಲಿ ಶಿವನ ದೇವಾಲಯ ಇದ್ದು ನಶಿಸುವ ಸ್ಥಿತಿ ತಲುಪಿದೆ.

ಚಿಕ್ಕಾಟಿ ಗ್ರಾಮದಲ್ಲಿ ಕ್ರಿ.ಶ. 1049ರ ಕಾಲಕ್ಕೆ ಸೇರಿದ ಚೋಳ ದೊರೆ ರಾಜಾಧಿರಾಜ ಚೋಳನ ಆಳ್ವಿಕೆಯ ಕಾಲಕ್ಕೆ ಸೇರಿದ ಶಾಸನ ಇದೆ. ಇನ್ನೊಂದು ಶಾಸನದ ಪ್ರಕಾರ ಈ ಗ್ರಾಮವನ್ನು ತೊರೆಕಾಟ ಆಟ್ಟ ಎಂದು ಕರೆದಿದ್ದಾರೆ. ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ ಪಾಳುಬಿದ್ದಿರುವ ಚಂದ್ರಶೇಖರ ದೇವಾಲಯವಿದ್ದು, ಅದರ ಬಳಿಯಲ್ಲಿಯೇ  ಗಂಗರ ಕಾಲಕ್ಕೆ ಸೇರಿದ ಶಾಸನ ಇದೆ. ಈ ದೇವಾಲಯವು ತಳವಿನ್ಯಾಸದಲ್ಲಿ ಗರ್ಭಗೃಹ, ತೆರೆದ ಶುಕನಾಸ, ನವರಂಗವನ್ನು ಹೊಂದಿದೆ. ಈ ದೇವಾಲಯವು ಕಲ್ಲು ಚಪ್ಪಡಿಗಳಿಂದ ಆವೃತವಾಗಿದೆ. ಇದೀಗ ಪೂಜೆ ಪುರಸ್ಕಾರಗಳು ಇಲ್ಲದೆ ಅವಸಾನದ ಅಂಚಿನಲ್ಲಿದೆ.

ಐತಿಹಾಸಿಕ ಸ್ಥಳಗಳ ನಿರ್ಲಕ್ಷ್ಯ

ಯಳಂದೂರು ತಾಲ್ಲೂಕಿನ ಸುತ್ತಮುತ್ತ ಪಟ್ಟಣದ ನಡುವೆ ಐತಿಹಾಸಿಕ ಶಿಲ್ಪಕಲೆಗಳ ತಾಣಗಳಿವೆ. ಜೈನ, ಶೈವ ಮತ್ತು ದ್ರಾವಿಡ ಶೈಲಿಯ ಹಲವಾರು ಶಿಲ್ಪಗಳು  ಕಂಡುಬರುತ್ತವೆ. ಅಗರ ಮಾಂಬಳ್ಳಿ ಸುತ್ತಮುತ್ತ ಹಲವಾರು ದೇವಾಲಯಗಳು ನಿರ್ಮಾಣವಾಗಿವೆ. ಪಟ್ಟಣದಲ್ಲಿ ಐತಿಹಾಸಿಕ ಬಳೆಮಂಟಪ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಆದರೆ ಯಾವ ಚಾರಿತ್ರಿಕ ಸ್ಥಳಗಳು ವಿಶ್ವ ಪರಂಪರೆ ಪಟ್ಟಿಗೆ ಸೇರಿಲ್ಲ. ಆದರೆ ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಯಲ್ಲಿ ನಿರ್ವಹಣೆ ಮಾಡ
ಲಾಗುತ್ತಿದ್ದು ಯಳಂದೂರು ಪಟ್ಟಣದಲ್ಲಿ ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸುವ ಜತೆಯಲ್ಲಿ ಜಿಲ್ಲೆಯ ಪ್ರಥಮ ವಸ್ತು
ಸಂಗ್ರಹಾಲಯವನ್ನು ಜಹಗೀರ್ ದಾರ್ ಬಂಗಲೆಯಲ್ಲಿ ಸ್ಥಾಪಿಸಲಾಗಿದೆ. ಕೆಲವು ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

***

ಜನರು ಏನಂತಾರೆ?

ಜಿಲ್ಲಾಡಳಿತ ನೀಲ ನಕ್ಷೆ ತಯಾರಿಸಲಿ

ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇವಾಲಯ ಒಂದು ಕಾಲದಲ್ಲಿ  ಪ್ರಸಿದ್ಧ ತಾಣ. ನಗರದಲ್ಲಿರುವ ವಿಜಯ ಪಾರ್ಥ ಜೈನ ಬಸದಿ 1000 ವರ್ಷಗಳಷ್ಟು ಹಳೆಯದು. ಮುಂದಿನ ಪೀಳಿಗೆಗೆ ನಮ್ಮ ಪರಂಪರೆ, ಇತಿಹಾಸ ತಿಳಿಸಲು ಸ್ಮಾರಕಗಳ ಸಂರಕ್ಷಣೆ ಮಾಡಬೇಕು. ಜಿಲ್ಲಾಡಳಿತವು ಐತಿಹಾಸಿಕ ಸ್ಥಳಗಳನ್ನು ಪಟ್ಟಿ ಮಾಡಿ ಅಭಿವೃದ್ಧಿಗೆ ನೀಲನಕ್ಷೆ ತಯಾರುಮಾಡಬೇಕು.

–ಲಕ್ಷ್ಮಿ ನರಸಿಂಹ, ಚಾಮರಾಜನಗರ

***

ದೇವಾಲಯ ಪುನರುಜ್ಜೀವನಗೊಳಿಸಿ

ಹೊಸ ದೇವಾಲಯಗಳನ್ನು ನಿರ್ಮಾಣ ಮಾಡುವ ಬದಲು ಸಂಸ್ಕೃತಿ ಬಿಂಬವಾಗಿರುವ ಪುರಾತನ ದೇವಾಲಯಗಳನ್ನು ಪುನರುಜ್ಜೀವನ ಮಾಡಿದರೆ ನಶೀಸುವ ದೇವಾಲಯಗಳಿಗೆ ಜೀವ ತುಂಬಿದಂತೆ ಆಗುತ್ತದೆ

–ಡಾ.ಮಣಿಕಂಠ,  ಗುಂಡ್ಲುಪೇಟೆ

***

ಕನ್ನಡ ಶಾಸನ ಸಂರಕ್ಷಿಸಿ

ಯಳಂದೂರು ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕನ್ನಡ, ಸಂಸ್ಕೃತ, ತಮಿಳು ಶಾಸನಗಳು ಕಾಣಸಿಗುತ್ತವೆ. ಈ ಲಿಪಿಗಳಿಗೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಅಪರೂಪದ ಹೊಯ್ಸಳ, ಚೋಳ, ಗಂಗರ ಕಾಲದ ವೀರಗಲ್ಲು, ಮಾಸ್ತಿಗಲ್ಲು ಅವಶೇಷಗಳನ್ನು ಉಳಿಸಿ ಪರಿಚಯಿಸುವ ಕೆಲಸ ಆಗಬೇಕು. 

ರಮೇಶ್, ವೈ.ಕೆ.ಮೋಳೆ, ಯಳಂದೂರು ತಾಲ್ಲೂಕು

***

ಸಂರಕ್ಷಣೆಗೆ ಕ್ರಮ ವಹಿಸಿ

ಉಮ್ಮತ್ತೂರು ಗ್ರಾಮ 11ನೇ ಶತಮಾನದಲ್ಲಿಯೇ ಪಾಳೇಗಾರರ ರಾಜಧಾನಿಯಾಗಿತ್ತು. ಅರಸರ ಕಾಲದಲ್ಲಿ ನಿರ್ಮಿತವಾದ  ಅನೇಕ ದೇವಾಲಯಗಳಿವೆ. ಬರುವ ಪ್ರವಾಸಿಗರಿಗೆ ತಕ್ಕಂತೆ ದೇವಸ್ಥಾನಗಳ ಅಭಿವೃದ್ಧಿಯಾಗಿಲ್ಲ. ಪರಂಪರೆಯನ್ನು ಸಾರುವ ಈ ದೇವಾಲಯಗಳನ್ನು ಸಂರಕ್ಷಿಸಲು ಸರ್ಕಾರ, ಜಿಲ್ಲಾಡಳಿತ ಮುಂದಾಗಬೇಕು.

ಡಾ.ಎಸ್.ಮಂಜುಳಾ, ಉಮ್ಮತ್ತೂರು

***

ಪ್ರವಾಸಿ ತಾಣಗಳನ್ನು ಗುರುತಿಸಿ

ತಾಲ್ಲೂಕಿನಲ್ಲಿ  ಚಾರಿತ್ರಿಕ ಶಿಲ್ಪಗಳಿವೆ. ಇದನ್ನು ಸಂರಕ್ಷಿಸಿ ಪ್ರವಾಸಿಗರಿಗೆ ನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ಪರಿಚಯಿಸುವ  ಪಟ್ಟಣದ ಚಾರಿತ್ರಿಕ ಬಳೇಮಂಟಪವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಬಗ್ಗೆ ಸಂಬಂಧ ಪಟ್ಟ ಇಲಾಖೆ ಮುಂದಾಗಲಿ.

ಮದ್ದೂರು ವಿರೂಪಾಕ್ಷ, ಯಳಂದೂರು

***

ಪ್ರವಾಸಿ ತಾಣ ಮಾಡಿ

ಉಮ್ಮತ್ತೂರು ಗ್ರಾಮದಲ್ಲಿ ಪಾಳೇಗಾರರು ನಿರ್ಮಿಸಿದ ದೇವಸ್ಥಾನಗಳು ಇತಿಹಾಸ ಪ್ರಸಿದ್ಧಿ ಪಡೆದಿವೆ.  ಗ್ರಾಮ
ದಲ್ಲಿ ಕೋಟೆಗಳು ಟಂಕಸಾಲೆಗಳಿವೆ. ಈಗ ದೇವಸ್ಥಾನಗಳು ನಶಿಸಿ ಹೋಗುವ ಹಂತ ತಲುಪಿವೆ. ಇದನ್ನು ಜೀರ್ಣೋದ್ಧಾರಗೊಳಿಸಿ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು.

ಉಮ್ಮತ್ತೂರು ಬಸವರಾಜು

***

ಮೂಲ ಸೌಕರ್ಯ ಒದಗಿಸಿ

ಗ್ರಾಮದ ಹಲವು ದೇವಾಲಯಗಳು, ಜಿನ ಮಂದಿರಗಳು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಭುಜಂಗೇಶ್ವರ ದೇವಸ್ಥಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಬಳಕೆಗೆ ಅವಕಾಶ ಇಲ್ಲ. 

ಸೋಮಣ್ಣ, ಉಮ್ಮತ್ತೂರು

***

ಅಗತ್ಯ ನೆರವಿಗೆ ಸಿದ್ಧ

ಜಿಲ್ಲೆಯಲ್ಲಿ ಪಾರಂಪರಿಕ ತಾಣ ಎಂದು ಗುರುತಿಸಿರುವ ಸ್ಥಳಗಳನ್ನು ಪುರಾತತ್ವ ಇಲಾಖೆ ನಿರ್ವಹಿಸುತ್ತಿದೆ. ಇದರಲ್ಲಿ ಜಿಲ್ಲಾಡಳಿತದ ಪಾತ್ರ ಹೆಚ್ಚಿಲ್ಲ. ಏನಾದರೂ ನೆರವಿನ ಅಗತ್ಯವಿದ್ದರೆ, ನಾವು ಅಗತ್ಯ ನೆರವು ನೀಡುತ್ತೇವೆ. 

ಎಸ್‌.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ

***

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ., ಮಹದೇವ್‌ ಹೆಗ್ಗವಾಡಿಪುರ, ಅವಿನ್‌ ಪ್ರಕಾಶ್‌ ವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು