ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆ ಕನಸು ಭಗ್ನ!

13 ವರ್ಷಗಳಿಂದಲೂ‌ ವ್ಯವಸ್ಥಿತ ಪ್ರಸ್ತಾವನೆ ಸಲ್ಲಿಸಲು ಮೀನಮೇಷ ಎಣಿಸುತ್ತಿರುವ ಅಧಿಕಾರಿಗಳು
Last Updated 11 ಡಿಸೆಂಬರ್ 2019, 2:29 IST
ಅಕ್ಷರ ಗಾತ್ರ

ಯಳಂದೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕೃತಗೊಂಡಿರುವ ಮಾಹಿತಿ ಲಭ್ಯವಾಗಿದೆ.

ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ್ರಸ್ತಾವನೆಯಲ್ಲಿ ತಪ್ಪುಗಳನ್ನು ಮಾಡುತ್ತಿದ್ದಾರೆ, ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.

30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆಮೇಲ್ದರ್ಜೆಗೆ ಏರಿಸುವ ಸಂಬಂಧದ ಕ್ರಿಯಾಯೋಜನೆಯನ್ನು ಸರಿಯಾಗಿ ಸಿದ್ಧಪಡಿಸದೆ ಇರುವುದರಿಂದ ತಾಲ್ಲೂಕಿನ ಆಸ್ಪತ್ರೆ ಅಭಿವೃದ್ಧಿ ಹೊಂದುವ ಅವಕಾಶ ಕೈತಪ್ಪಲಿದೆ ಎಂಬ ಆತಂಕ ಪಟ್ಟಣಿಗರನ್ನು ಬಾಧಿಸುತ್ತಿದೆ.

ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ 2006ರಿಂದ ಚರ್ಚೆ ನಡೆಯುತ್ತಿದೆ. ಆದರೆ, ಇದುವರೆಗೂ ಸರಿಯಾದ ಪ್ರಸ್ತಾವನೆ ಸರ್ಕಾರಕ್ಕೆ ತಲುಪಿಲ್ಲ. ಪ್ರತಿಬಾರಿಯೂ ಒಂದಲ್ಲ ಒಂದು ಕಾರಣಕ್ಕೆ ತಿರಸ್ಕೃತವಾಗುತ್ತಿದೆ ಎಂಬುದು ಜನರ ಆರೋಪ. ಇದರ ವಿರುದ್ಧ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 86 ಸಾವಿರಜನಸಂಖ್ಯೆ ಇದೆ. ಆಸ್ಪತ್ರೆಯಲ್ಲಿ ಪ್ರತಿದಿನ 500ರಿಂದ 600 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದರೆ ತಾಲ್ಲೂಕಿನ ಜನರಿಗೆ ಗುಣಮಟ್ಟದ ಆರೋಗ್ಯಸೇವೆ ಸಿಗಲಿದೆ ಎಂಬುದು ಎಲ್ಲರ ನಿರೀಕ್ಷೆ.

ಆಸ್ಪತ್ರೆಯನ್ನು 30ರಿಂದ 100 ಹಾಸಿಗೆಗೆ ಏರಿಸಲು ಬೇಕಾಗುವ ಅನುದಾನದ ಅಂದಾಜು ಪಟ್ಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಎಂಜಿನಿಯರ್ ವಿಭಾಗಕ್ಕೆ ಸಲ್ಲಿಸಿ ವರ್ಷಗಳೇ ಉರುಳಿವೆ. ಆದರೆ, ಪ್ರಯೋಜನವಾಗಿಲ್ಲ.

2007, 2013, 2017, 2018ರಲ್ಲೂ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಯನ್ನು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಶಾಸಕ ಎನ್‌.ಮಹೇಶ್‌ ಅವರು ಈ ಸಂಬಂಧ ಖುದ್ದಾಗಿ ಆರೋಗ್ಯ ಸಚಿವರ ಜೊತೆಗೆ ಮಾತನಾಡಿದ್ದಾರೆ. ಆದರೆ, ಇತ್ತೀಚೆಗೆ ಪ್ರಕಟವಾಗಿರುವ ಮೇಲ್ದರ್ಜೆಗೆ ಏರಿಸಲಾಗುವ ತಾಲ್ಲೂಕು ಆಸ್ಪತ್ರೆಗಳ ಪಟ್ಟಿಯಲ್ಲಿ ಯಳಂದೂರು ಆಸ್ಪತ್ರೆ ಇಲ್ಲ.

‘ಈಗಿರುವ ಕಟ್ಟಡ 20 ವರ್ಷಗಳ ಹಿಂದಿನದು. ಚಾವಣಿ ಸೋರುತ್ತಿದೆ. ಐಸಿಯು ಘಟಕದ ಚಾವಣಿ ಕಳಚುತ್ತಿದೆ. ಇಷ್ಟೆಲ್ಲಸಮಸ್ಯೆಗಳಿದ್ದರೂ ಮೇಲ್ದರ್ಜೆಗೆ ಏರಿಸಲು ಸಂಬಂಧಪಟ್ಟವರು ಮುಂದಾಗದ ಕ್ರಮ ಖಂಡಿಸಿಆಸ್ಪತ್ರೆ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ದಸಂಸ ಮುಖಂಡ ಯರಿಯೂರು ರಾಜಣ್ಣ ಎಚ್ಚರಿಸಿದ್ದಾರೆ.

ಮನವಿ ಸಲ್ಲಿಕೆ:‘ಈಗಿರುವ ಆಸ್ಪತ್ರೆ ಹಾಗೂ ಸುತ್ತಮುತ್ತ ಆರೂವರೆ ಎಕರೆ ಪ್ರದೇಶ ಲಭ್ಯವಿದೆ. ವೈದ್ಯರಮತ್ತು ಸಿಬ್ಬಂದಿ ವರ್ಗದವರಿಗೆ ವಸತಿ ಸೌಲಭ್ಯ ಬೇಕಿದೆ. ಕಿರಿದಾಗಿರುವ ಪ್ರಯೋಗಶಾಲೆ, ರಕ್ತ ನಿಧಿ ಮತ್ತು ಚಿಕಿತ್ಸಾ ವಿಭಾಗವನ್ನು ವಿಸ್ತರಿಸಬೇಕು. ನುರಿತ ವೈದ್ಯರನ್ನುನೇಮಿಸಬೇಕು ಎಂದು ನವೆಂಬರ್‌ನಲ್ಲಿ ಕ್ರಿಯಾಯೋಜನೆ ಸಲ್ಲಿಸಲಾಗಿದೆ’ ಎಂದು ಆಡಳಿತವೈದ್ಯಾಧಿಕಾರಿ ಡಾ.ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ಪ್ರಸ್ತಾವನೆ?: ‘₹ 10.4 ಕೋಟಿ ವೆಚ್ಚದಲ್ಲಿ ಕಾಮಗಾರಿ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮತ್ತೆ ತಾಂತ್ರಿಕ ಸಮಸ್ಯೆ ನಿವಾರಿಸಿ ಸೌಕರ್ಯಗಳನ್ನು ಹೆಚ್ಚಿಸಲು ವೈದ್ಯರು ಮನವಿ ಮಾಡಿದ್ದಾರೆ. ಈಗ ₹ 13 ಕೋಟಿ ವೆಚ್ಚದ ಕಾಮಗಾರಿಗೆ ಅಂದಾಜು ಪಟ್ಟಿಸಲ್ಲಿಸಲಾಗುತ್ತಿದೆ’ ಎಂದು ಮೈಸೂರು ಎಂಜಿನಿಯರ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕುಮಾರ್ ಮಾಹಿತಿ ನೀಡಿದರು.

ಆರೋಗ್ಯ ಸಚಿವರಿಗೆ ವರದಿ ಸಲ್ಲಿಕೆ: ಶಾಸಕ
100 ಹಾಸಿಗೆಗಳನ್ನಾಗಿ ಮಾಡಲು 2006ರಿಂದಲೇ ಪ್ರಕ್ರಿಯೆಗಳು ನಡೆದಿವೆ. ಅಂದಿನಿಂದಲೂ ವೈದ್ಯಾಧಿಕಾರಿಗಳುಪ್ರಸ್ತಾವನೆ ಸಲ್ಲಿಸುವಲ್ಲಿ ವಿಳಂಬ ಮಾಡಿದ್ದಾರೆ.ಶಾಸಕನಾದ ನಂತರ 2019ರ ಮಾರ್ಚ್‌ನಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಸಚಿವರ ವಿಶೇಷಸಭೆ ನಡೆಸಿ ಮಂಜೂರಾತಿಗೆ ಅನುಮೋದನೆ ದೊರಕಿಸಿದ್ದೇನೆ’ ಎಂದು ಶಾಸಕ ಎನ್‌.ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದರ ನಡುವೆಯೇ ವೈದ್ಯಾಧಿಕಾರಿಗಳು ಕ್ರಿಯಾ ಯೋಜನೆ ಸಲ್ಲಿಸುವಲ್ಲಿ ಮತ್ತೆ ಉಡಾಫೆ ತೋರಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವಬಿ.ಶ್ರೀರಾಮುಲು ಅವರೊಂದಿಗೆ ಚರ್ಚಿಸುತ್ತೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಅನುಮೋದನೆ ಸಿಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT