ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿಯಾಗುತ್ತಿದೆ ಕ್ವಾರೆ ಹಳ್ಳದ ನೀರು: ಕೈವಾಡ ಯಾರದ್ದು?

ಮತ್ತೆ ಗಣಿ ಚಟುವಟಿಕೆಯ ಉದ್ದೇಶ? ಅಪರಿಚಿತರಿಂದ ಮೋಟಾರ್‌ ಅಳವಡಿಕೆ
Last Updated 17 ಡಿಸೆಂಬರ್ 2019, 10:46 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಮಲಾರಪಾಳ್ಯದಿಂದ ಆಮೆಕೆರೆಗೆ ತೆರಳುವ ಮಾರ್ಗದಲ್ಲಿ ಸ್ಥಗಿತಗೊಂಡಿರುವ ಕೆಲವು ಬಿಳಿಕಲ್ಲು ಕ್ವಾರೆಗಳಲ್ಲಿ ಸಂಗ್ರಹಗೊಂಡಿರುವ ನೀರನ್ನು ಕೆಲವು ಅನಾಮಧೇಯ ವ್ಯಕ್ತಿಗಳು ಪಂಪ್‌ ಮೂಲಕ ಹೊರಕ್ಕೆ ಹಾಕುತ್ತಿದ್ದಾರೆ. ಹಲವು ದಿನಗಳಿಂದ ಈ ಕೆಲಸ ನಡೆಯುತ್ತಿದೆ.

ಬಿಳಿಕಲ್ಲು ಜಲ್ಲಿ ಮತ್ತು ಕಲ್ಲು ದಿಂಡು ತೆಗೆಯುವುದಕ್ಕಾಗಿ ನೀರನ್ನು ಖಾಲಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಬಿದ್ದಿರುವ ಉತ್ತಮ ಮಳೆಯಿಂದಾಗಿ ಈ ಭಾಗದ ಕೆರೆಕಟ್ಟೆಗಳು ಭರ್ತಿಯಾಗಿವೆ. ಅದೇ ರೀತಿ ಕ್ವಾರಿಗಳ ಹಳ್ಳದಲ್ಲೂ ನೀರು ತುಂಬಿವೆ.

ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಾರಪಾಳ್ಯ ಗ್ರಾಮ ತನಕಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಕ್ಕೆ (ಬಿಆರ್‌ಟಿ) ಬರುತ್ತದೆ. ಕೃಷಿ ಜಮೀನಿಗೆ ಹೊಂದಿಕೊಂಡಿರುವ ಜಾಗಗಳಲ್ಲಿ ಕಲ್ಲಿನ ಕ್ವಾರೆಗಳು ಇವೆ. ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಈ ಕ್ವಾರೆಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದ ಮೇಲೆ ಗಣಿಗಾರಿಕೆ ಸ್ಥಗಿತಗೊಂಡಿತ್ತು.

‘ಪಾಳು ಕ್ವಾರೆಗಳಲ್ಲಿ ತುಂಬಿರುವ ನೀರು ಬೇಸಿಗೆ ಕಾಲದಲ್ಲಿ ವನ್ಯಜೀವಿಗಳಿಗೆ ಜೀವ ಜಲವಾಗುತ್ತದೆ. ಇವುಗಳಲ್ಲಿ ನೀರು ಖಾಲಿಯಾದರೆ ಪ್ರಾಣಿಗಳು ನೀರನ್ನು ಹುಡುಕಿಕೊಂಡು ನಾಡಿಗೆ ಬರುತ್ತವೆ. ಇದರಿಂದ ಮಾನವ–ವನ್ಯಜೀವಿ ಸಂಘರ್ಷ ಇನ್ನಷ್ಟು ಹೆಚ್ಚಬಹುದು’ ಎಂಬ ಆತಂಕವನ್ನು ಪರಿಸರ ಮತ್ತು ಪ್ರಾಣಿಪ್ರಿಯರು ವ್ಯಕ್ತಪಡಿಸಿದ್ದಾರೆ.

ಗಣಿ ಚಟುವಟಿಕೆಗಳು ನಡೆಸುವುದಕ್ಕಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಮೀಪದಲ್ಲಿ ಎಲ್ಲಿಯೂದೊಡ್ಡ ಕೆರೆಗಳಿಲ್ಲ. ಕಲ್ಲಿನ ಆಸರೆಯಲ್ಲಿ ನೆಲೆ ನಿಂತ ನೀರಿನಿಂದ ಸುತ್ತಮುತ್ತಲಪ್ರದೇಶದಲ್ಲಿ ಅಂತರ್ಜಲ ಹೆಚ್ಚಿದೆ. ನೀರು ಖಾಲಿ ಮಾಡಿದರೆ ಅಂತರ್ಜಲ ಕಡಿಮೆಯಾಗಬಹುದು ಎಂಬ ಭಯ ಕೃಷಿಕರನ್ನು ಕಾಡುತ್ತಿದೆ.

ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ನೀರು ಖಾಲಿ ಮಾಡುವುದನ್ನು ತಡೆಯಬೇಕು ಎಂದು ಸ್ಥಳೀಯರು ಹಾಗೂ ಪರಿಸರಪ್ರಿಯರು ಒತ್ತಾಯಿಸಿದ್ದಾರೆ.

ರಾತ್ರೋರಾತ್ರಿ ಪಂಪ್ಅಳವಡಿಕೆ

ಸ್ಥಗಿತಗೊಂಡ ಕ್ವಾರಿ ಪ್ರದೇಶಗಳಲ್ಲಿ ಅಪರಿಚಿತರ ಓಡಾಟ ಕೆಲವು ದಿನಗಳಿಂದ ಹೆಚ್ಚಿದೆ. ರಾತ್ರೋರಾತ್ರಿ ಕ್ವಾರೆಯ ಹಳ್ಳಗಳಿಗೆ ಮೋಟಾರ್‌ ಅಳವಡಿಸಲಾಗುತ್ತಿದೆ. ದಿನದ 24 ಗಂಟೆಯ ಕಾಲವೂ ನೀರು ಹೊರಹಾಕಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಶೀಘ್ರವಾಗಿ ನೀರು ಖಾಲಿಯಾಗಲಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT