ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರಿಗೆ ಮತ್ತೆ ಜಲಕಂಟಕ: ಉಕ್ಕಿ ಹರಿಯುತ್ತಿರುವ ಸುವರ್ಣಾವತಿ

ಉಕ್ಕಿ ಹರಿಯುತ್ತಿರುವ ಸುವರ್ಣಾವತಿ, ಕ್ಷಣಕ್ಷಣಕ್ಕೂ ನೀರಿನ ಮಟ್ಟದಲ್ಲಿ ಏರಿಕೆ
Last Updated 5 ಸೆಪ್ಟೆಂಬರ್ 2022, 17:10 IST
ಅಕ್ಷರ ಗಾತ್ರ

ಯಳಂದೂರು: ಕಳೆದ ವಾರದ ನೆರೆಯಿಂದ ತತ್ತರಿಸಿರುವ ತಾಲ್ಲೂಕಿನ ಹಲವು ಗ್ರಾಮಗಳು ಹಾಗೂ ಜನರು ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಮತ್ತೆ ಪ್ರವಾಹಕ್ಕೆ ಸಿಲುಕಿದ್ದಾರೆ.

ಅಂಬಳೆ, ಮದ್ದೂರು, ಅಗರ –ಮಾಂಬಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಆತಂಕಗೊಂಡಿದ್ದಾರೆ. ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬರುತ್ತಿರುವುದು, ಕೆರೆ ಕಟ್ಟೆಗಳು ಉಕ್ಕೇರುತ್ತಿರುವುದು ಅವರ ಕಳವಳವನ್ನು ದುಪ್ಪಟ್ಟುಗೊಳಿಸಿದೆ.

ಅಂಬಳೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಈಗಾಗಲೇ ಪ್ರವಾಹ ಸ್ಥಿತಿ ಉಂಟಾಗಿದ್ದು, ಜನರು ಮನೆಗಳನ್ನು ಖಾಲಿ ಮಾಡಲು ಆರಂಭಿಸಿದ್ದಾರೆ.

ತಾಲ್ಲೂಕಿನ ಅಂಬಳೆ, ಕಂದಹಳ್ಳಿ ಮತ್ತು ವೈ.ಕೆ.ಮೋಳೆ ಗ್ರಾಮಗಳು ಜಲಾವೃತವಾಗಿದ್ದು, ಗ್ರಾಮೀಣದು ಮನೆಯಲ್ಲಿದ್ದ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದ ದೃಶ್ಯ ಸೋಮವಾರ ಸಂಜೆ ಕಂಡುಬಂತು.

ಈ ಗ್ರಾಮಗಳು ಸುವರ್ಣಾವತಿ ನದಿ ದಂಡೆಯಲ್ಲಿದ್ದು, ಕಾಲುವೆ, ಕೆರೆಗಳ ನೀರು ಸಹ ಪ್ರವಾಹಕ್ಕೆ ಸೇರುತ್ತಿದೆ.

‘ಬಹುತೇಕ ಆಲೆಮನೆಗಳಿಗೆ ಪ್ರವಾಹದ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಉರುವಲು ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ಭಾಗದ ಬಹುತೇಕ ಭತ್ತದ ಗದ್ದೆಗಳು ಜಲಾವೃತವಾಗಿವೆ. ಲಕ್ಷಾಂತರ ರೂಪಾಯಿ ಬೆಳೆ ಕೊಚ್ಚಿ ಹೋಗಿದೆ. ಗದ್ದೆಯಲ್ಲಿ ಸಂಗ್ರಹವಾಗುತ್ತಿರುವ ನೀರನ್ನು ಹೊರ ಬಿಡಲು ಇಡುವಳಿದ್ದಾರರು ಪ್ರಯಾಸ ಪಡುತ್ತಿದ್ದಾರೆ’ ಎಂದು ರೈತ ನಯನ್ ಕುಮಾರ್ ಅಳಲು ತೋಡಿಕೊಂಡರು.

ಯಳಂದೂರಿನಿಂದ ಅಂಬಳೆ ಮಾರ್ಗವಾಗಿ ಚಾಮರಾಜನಗರ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಹಲವಾರು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.

‘ಕಂದಹಳ್ಳಿ ಮಾದಪ್ಪ ದೇವಾಲಯದಿಂದ ಹೆಚ್ಚಿನ ನೀರು ಗ್ರಾಮದ ಹೊರಭಾಗಕ್ಕೆ ಹರಿಯುತ್ತಿದ್ದು, ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿಗಳು ಮುಳುಗಡೆಯಾಗಲು ಕಾರಣವಾಗಿದೆ. ಇಂದು ಸಹ ಬಿಸಿಲಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮಳೆ ಸುರಿದರೆ ಪಟ್ಟಣದ ಬಹುತೇಕ ಭಾಗ ನೀರಿನಿಂದ ತುಂಬಿಕೊಳ್ಳಲಿದೆ’ ಎಂದು ಸುರೇಶ್ ಕುಮಾರ್ ಹೇಳಿದರು.

ನೀರಿನಮಟ್ಟ ಏರಿಕೆ:‘ಸೋಮವಾರ ಮಧ್ಯಾಹ್ನ 12 ಗಂಟೆಯ ನಂತರ ನೀರಿನ ಏರಿಕೆ ಹೆಚ್ಚಾಗುತ್ತಲೇ ಇದೆ. ಸುವರ್ಣಾವತಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜಮೀನುಗಳು ಮುಳುಗಿವೆ. ಮನೆಯಲ್ಲಿ ಸಂಗ್ರಹಿಸಿದ್ದ ತೆಂಗು ಮತ್ತು ಮೇವು ನೀರುಪಾಲಾಗಿದೆ. ಸಂಜೆ ವೇಳೆಗೆ ನೀರು ರಾಷ್ಟ್ರೀಯ ಹೆದ್ದಾರಿ ಬಳಿ ಬಂದಿದೆ. ಇದರಿಂದ ಬೆಳೆ ಮತ್ತು ಹುಲ್ಲು ಹಾಳಾಗಿದೆ. ಫಸಲು ಕೊಳೆಯುವ ಸ್ಥಿತಿಗೆ ತಲುಪಿದೆ. ಈ ವರ್ಷ ಮೂರನೇ ಬಾರಿ ಜಮೀನು ನೆರೆ ಬಿಸಿಗೆ ಹೋಗುತ್ತಿದೆ’ ಎಂದು ಮದ್ದೂರು ಗ್ರಾಮದ ಗಜೇಂದ್ರ ಅಳಲು ತೋಡಿಕೊಂಡರು.

ಕಾಳಜಿ ಕೇಂದ್ರಕ್ಕೆ ತೆರಳಲು ಹಿಂದೇಟು: ‘ಪ್ರವಾಹ ಪೀಡಿತ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆರಂಭದಲ್ಲಿ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆದರೆ, ಪ್ರವಾಹ ಪರಿಸ್ಥಿತಿ ಮುಂದುವರಿದಂತೆಲ್ಲ ನೆರೆ ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ಇರಲು ಹಿಂದೇಟು ಹಾಕುತ್ತಿದ್ದಾರೆ.ಕೇಂದ್ರದಲ್ಲಿ ನೀಡುವ ಊಟಕ್ಕೆ ಬದಲಾಗಿ ಪಡಿತರವನ್ನು ನೀಡುವಂತೆ ಒತ್ತಾಯಿಸುತ್ತಾರೆ’ ಎಂದು ಅಧಿಕಾರಿಗಳು ಹೇಳಿದರು.

ತೆಂಗಿನಕಾಯಿ ಹಿಡಿಯಲು ಪ್ರಾಣ ಪಣಕಿಟ್ಟರು

ನದಿಯ ಪ್ರವಾಹದ ನೀರಿನಲ್ಲಿ ತೇಲಿ ಬರುವ ತೆಂಗಿನಕಾಯಿ ಸಂಗ್ರಹಿಸಲು ಕೆಲವರು ಮುಗಿಬಿದ್ದಿದ್ದಾರೆ. ತುಂಬಿ ಹರಿಯುತ್ತಿರುವ ಸೇತುವೆಗಳ ಮೇಲ್ಭಾಗದಲ್ಲಿ ನಿಂತು ತೆಂಗಿನ ಕಾಯಿಗಳು ನೀರಿನಲ್ಲಿ ತೇಲಿ ಹೋಗದಂತೆ ತಡೆಯುತ್ತಿದ್ದಾರೆ. ಸೇತುವೆ ಮೇಲೆ ವೇಗವಾಗಿ ಹರಿಯುತ್ತಿರುವ ನೀರಿನ ರಭಸಕ್ಕೆ ಜನ ಜಾನುವಾರು ಕೊಚ್ಚಿ ಹೋಗುವ ಅಪಾಯಗಳು ಎದುರಾಗಿದೆ. ಈ ನಡುವೆ ಪ್ರಾಣಪಾಯವನ್ನು ಲೆಕ್ಕಿಸದೆ ಯುವಕರು ತೆಂಗಿನಕಾಯಿಗಳನ್ನು ಹಿಡಿಯುತ್ತಿದ್ದ ದೃಶ್ಯ ಆಲ್ಕೆರೆ ಅಗ್ರಹಾರ ಗ್ರಾಮದ ಬಳಿ ಕಂಡುಬಂತು.

‘ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಸೇತುವೆಗಳ ಬಳಿ ಬ್ಯಾರಿಕೇಡ್‌ಗಳನ್ನು ಇಟ್ಟು ಅಪಾಯದ ಮುನ್ಸೂಚನೆ ನೀಡಲಾಗಿದೆ. ಕೆಲವೆಡೆ ಪೊಲೀಸರನ್ನು ನಿಯೋಜಿಸಿದ್ದು, ನೆರೆ ಪೀಡಿತ ಪ್ರವಾಹದಲ್ಲಿ ಯಾವುದೇ ವಸ್ತುಗಳನ್ನು ಹಿಡಿಯುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. ಅಗತ್ಯ ನೆರವು ನೀಡಲು ಸಿಬ್ಬಂದಿ ನಿಯೋಜಿಸಲಾಗಿದೆ. ಗ್ರಾಮಸ್ಥರಿಗೆ ಯಾವುದೇ ಆತಂಕ ಬೇಡ ಗೀತ ಹುಡೇದ, ಕೊಳ್ಳೇಗಾಲ ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT