ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಅಂಗವಿಕಲರ ಭವನಕ್ಕೆ ಇಲ್ಲದ ಉದ್ಘಾಟನಾ ಭಾಗ್ಯ

Last Updated 12 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಅಂಗವಿಕಲರ ಉಪಯೋಗಕ್ಕಾಗಿ ನಿರ್ಮಿಸಲಾದ ಅಂಗವಿಕಲರ ಭವನದ ಉದ್ಘಾಟನೆಗೆ ಇನ್ನೂ ಮುಹೂರ್ತ ಸಿಕ್ಕಿಲ್ಲ.

ಭವನದ ಆವರಣದಲ್ಲಿ ಕಳೆ ಹುಲ್ಲು ಗಿಡಗಳು ಬೆಳೆದು, ಭವನ ಪ್ರಯೋಜನಕ್ಕೆ ಇಲ್ಲದಂತೆ ಆಗಿದೆ.

ತಾಲ್ಲೂಕಿನಲ್ಲಿ 400 ಮಂದಿ ಅಂಗವಿಕಲರು ಇದ್ದಾರೆ. ಇವರಿಗಾಗಿ ಸ್ವಂತ ಭವನವನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ, ಪಟ್ಟಣದ ಕೆ.ಆರ್.ಎನ್‌ ಬಡಾವಣೆಯಲ್ಲಿ ₹12 ಲಕ್ಷ ವೆಚ್ಚದಲ್ಲಿ ಭವನ ನಿರ್ಮಿಸಲು ಸಚಿವರಾಗಿದ್ದ ಎಂ.ಸಿ.ಮೋಹನಕುಮಾರಿ ಅವರು ಭೂಮಿ ಪೂಜೆ ನೆರವೇರಿಸಿದ್ದರು.

‘ತ್ವರಿತವಾಗಿ ಕಟ್ಟಡದ ಕಾಮಗಾರಿ ಮುಗಿದಿತ್ತು. ಸಣ್ಣಪುಟ್ಟ ಕೆಲಸಗಳು ಬಾಕಿ ಇತ್ತು. ಅ ಸಮಯದಲ್ಲಿ ವಿಧಾನಸಭಾ ಚುನಾವಣೆಯ ಎದುರಾಯಿತು. ಬಿಜೆಪಿಯ ಸಿ.ಎಸ್.ನಿರಂಜನಕುಮಾರ್ ಶಾಸಕರಾದರು. ಇದಾಗಿ ಮೂರು ವರ್ಷಗಳು ಕಳೆದಿವೆ. ಇನ್ನೂ ಭವನದಲ್ಲಿ ಬಾಕಿ ಇಳಿದಿರುವ ಚಿಕ್ಕ ಕೆಲಸಗಳು ಪೂರ್ಣ ಆಗಿಲ್ಲ. ಮೆಟ್ಟಿಲು ವ್ಯವಸ್ಥೆ ಆಗಿಲ್ಲ. ಭವನದ ಮುಂಭಾಗದಲ್ಲಿ ನೆರಳಿನ ಶೆಡ್ ನಿರ್ಮಾಣ ಆಗಿಲ್ಲ’ ಎಂದು ಅಂಗವಿಕಲ ಸೋನು ಅವರು ಹೇಳಿದರು.

‘ಪುರಸಭೆ ಅಧಿಕಾರಿಗಳಿಗೆ ಭವನದ ಕಾಮಗಾರಿ ಶೀಘ್ರವಾಗಿ ಮುಗಿಸಬೇಕು ಎಂಬ ಇಚ್ಛಾಶಕ್ತಿ ಇಲ್ಲದ ಕಾರಣ ತಡವಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದು ಅಂಗವಿಕಲರಾದ ವೆಂಕಟೇಶ್ ಅವರು ದೂರಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ ರಮೇಶ್‌ ಅವರು, ‘ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಅಂಗವಿಕಲರ ಕಲ್ಯಾಣ ಇಲಾಖೆಗೆ ಶೀಘ್ರವಾಗಿ ಹಸ್ತಾಂತರಿಸಲಾಗುವುದು’ ಎಂದು ಹೇಳಿದರು.

ಚಾಮರಾಜನಗರದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಶನಿವಾರ (ಮಾರ್ಚ್ 13) ಬೆಳಿಗ್ಗೆ 10 ಗಂಟೆಗೆ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ. ಅಶ್ವಿನಿ, ಲೋಕಸಭಾ ಸದಸ್ಯ ವಿ. ಶ್ರೀನಿವಾಸ ಪ್ರಸಾದ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಚ್.ಎಸ್.ಶೋಭಾ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT