ಚಿಕ್ಕಬಳ್ಳಾಪುರ: ನಗರದ ಹೊರವಲಯದ ನಂದಿ ಕ್ರಾಸ್ ಬಳಿಯ ತೋಟಗಾರಿಕಾ ಇಲಾಖೆಗೆ ಸೇರಿದ 20 ಎಕರೆ ಜಮೀನನ್ನು ಹೂ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿದೆ.
ಈ ಮೂಲಕ ಸುಸಜ್ಜಿತ ಹೂ ಮಾರುಕಟ್ಟೆ ನಿರ್ಮಾಣಕ್ಕೆ ಹೆಜ್ಜೆ ಇಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಪ್ರಯತ್ನದ ಫಲವಾಗಿ ಈ ಜಾಗ ದೊರೆತಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ರೈತರಷ್ಟೇ ಅಲ್ಲ ದೇವನಹಳ್ಳಿ ತಾಲ್ಲೂಕಿನ ರೈತರೂ ಈ ಮಾರುಕಟ್ಟೆಗೆ ಬರುವ ಅವಕಾಶಗಳು ಹೆಚ್ಚಿವೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಈ ಜಮೀನು ಇರುವ ಕಾರಣ ಹೂ ಮಾರುಕಟ್ಟೆಗೆ ಪ್ರಶಸ್ತವಾದ ಸ್ಥಳವಾಗಿದೆ.
ಹೂವು ಮಾರುಕಟ್ಟೆ ನಿರ್ಮಾಣಕ್ಕೆ ಈ ಹಿಂದೆ ಅಗಲಗುರ್ಕಿ ಗ್ರಾಮದ ಸರ್ವೆ ನಂ 122ರಲ್ಲಿ 9.05 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿತ್ತು. ಅಂದಿನ ಸಚಿವ ಡಾ.ಕೆ.ಸುಧಾಕರ್ ಅವರು ಈ ಮಾರುಕಟ್ಟೆಗೆ ಜಮೀನು ದೊರಕಿಸಿಕೊಟ್ಟಿದ್ದರು. ಆದರೆ ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಅಗಲಗುರ್ಕಿ ಗ್ರಾಮದ ಸರ್ವೆ ನಂ 122ರ ಜಮೀನಿಗೆ ಸೂಕ್ತ ರಸ್ತೆ ಇಲ್ಲ. ಜಾಗವೂ ಸಮತಟ್ಟಾಗಿಲ್ಲ. ಆದ ಕಾರಣ ಆ ಜಾಗದ ಬದಲು ಬೇರೊಂದು ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಬೇಕು ಎಂದು ತೀರ್ಮಾನಿಸಿದ್ದರು.
ಆ ಪ್ರಕಾರ ಜಾಗಕ್ಕೂ ಹುಡುಕಾಟ ನಡೆದಿತ್ತು. ನಂದಿಕ್ರಾಸ್ ಬಳಿಯ ತೋಟಗಾರಿಕಾ ಇಲಾಖೆ ಜಮೀನನ್ನು ಮಾರುಕಟ್ಟೆಗೆ ದೊರಕಿಸಿಕೊಡುವಂತೆ ಪ್ರಸ್ತಾವ ಸಹ ಸಲ್ಲಿಸಲಾಗಿತ್ತು. ಈಗ ತೋಟಗಾರಿಕೆ ಇಲಾಖೆಯ 20 ಎಕರೆಯನ್ನು ಹೂ ಮಾರುಕಟ್ಟೆಗೆ ನೀಡಲಾಗಿದೆ.
ಸದ್ಯ ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಒಳಗೊಂಡ ಸಸ್ಯ ಕ್ಷೇತ್ರವು 48 ಎಕರೆ ವಿಸ್ತೀರ್ಣವನ್ನು ಹೊಂದಿದೆ.
‘ಈ ಹಿಂದೆ, ಹೂವಿನ ಮಾರುಕಟ್ಟೆಗೆ ಅವೈಜ್ಞಾನಿಕವಾಗಿ ಗುರುತಿಸಲಾಗಿದ್ದ ಸಂಪರ್ಕವಿಲ್ಲದ ಕಲ್ಲು ಬಂಡೆಯಿಂದ ಕೂಡಿದ್ದ ಸ್ಥಳಕ್ಕೆ ಪರ್ಯಾಯವಾಗಿ ಉತ್ತಮ ಸಂಪರ್ಕ, ಭವಿಷ್ಯದ ಅಭಿವೃದ್ದಿ ದೃಷ್ಟಿಯಿಂದ 20 ಎಕರೆ ಜಮೀನನ್ನು ಹೂವಿನ ಮಾರುಕಟ್ಟೆಗಾಗಿ ಮಂಜೂರು ಮಾಡಿಸಲಾಗಿದೆ’ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
‘ಜಿಲ್ಲೆಯ ಹೂ ಬೆಳೆಗಾರರು, ವರ್ತಕರ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ, ಡಿ.ಕೆ ಶಿವಕುಮಾರ್, ತೋಟಗಾರಿಕೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.