ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮುಂಗಾರಿನ ನಿರೀಕ್ಷೆ| ಚಿಕ್ಕಬಳ್ಳಾಪುರದಲ್ಲಿ ಕೃಷಿ ಚಟುವಟಿಕೆ ಚುರುಕು

1.40 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ, ಬೀಜ ಮತ್ತು ಗೊಬ್ಬರ ಖರೀದಿ ಜೋರು
Last Updated 1 ಜೂನ್ 2020, 1:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಂಗಾರಿನ ಹೊಸ್ತಿಲಲ್ಲಿ ಜಿಲ್ಲೆಯಾದ್ಯಂತ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಈ ಬಾರಿಯು ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ 1.40 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.

ಮಳೆಯಿಂದ ಭೂಮಿ ಹದಗೊಳ್ಳುತ್ತಲೇ ರೈತರು ಹೊಲ ಗದ್ದೆಗಳಲ್ಲಿ ಕಸ, ಕಡ್ಡಿಯನ್ನು ತೆಗೆದು, ಭೂಮಿಯನ್ನು ಬಿತ್ತನೆಗೆ ಸಿದ್ಧಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಯಾವ ಜಮೀನಿಗೆ ಏನು ಬಿತ್ತನೆ ಮಾಡಬೇಕು. ಎಷ್ಟು ಬೀಜ ಮತ್ತು ಗೊಬ್ಬರ ಖರೀದಿಸಬೇಕು. ಪ್ರಸಕ್ತ ವರ್ಷ ಎಷ್ಟು ಬೆಳೆ ತೆಗೆಯಬಹುದು. ಎಷ್ಟು ಮಳೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ರೈತಾಪಿ ವರ್ಗ ಮುಳುಗಿದೆ.

ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 54.8 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 17.4 ಮಿ.ಮೀ ಮಳೆಯಾಗಿದೆ. ಶೇ 60 ರಷ್ಟು ಮಳೆ ಕೊರತೆಯಾಗಿತ್ತು. ಆದರೆ, ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ.

‘ಜಿಲ್ಲೆಯಾದ್ಯಂತ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗುತ್ತಿದೆ. ರಾಗಿ, ತೊಗರಿ, ಶೇಂಗಾ ಜಿಲ್ಲೆಯ ಬೆಳೆಗಳಲ್ಲಿ ಪ್ರಮುಖವಾಗಿವೆ. ಜಿಲ್ಲೆಗೆ 1,683 ಕ್ವಿಂಟಲ್ ರಾಗಿ, 4,200 ಕ್ವಿಂಟಲ್‌ ಶೇಂಗಾ ಮತ್ತು 1,020 ಕ್ವಿಂಟಲ್ ತೊಗರಿ, 2,500 ಕ್ವಿಂಟಲ್ ಬಿತ್ತನೆ ಬೀಜ ಅಗತ್ಯವಿದೆ’ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪಾ.

‘ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದೆ. ಬಾಗೇಪಲ್ಲಿ, ಚಿಂತಾಮಣಿ ತಾಲ್ಲೂಕಿನಲ್ಲಿ ನೆಲಗಡಲೆ ವಿತರಣೆ ಆರಂಭವಾಗಿದೆ. ಉಳಿದ ತಾಲ್ಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಕೂಡ ಇತ್ತೀಚೆಗೆ ವಿತರಣೆ ಕಾರ್ಯ ಆರಂಭವಾಗುತ್ತಿದೆ’ ಎಂದು ತಿಳಿಸಿದರು.

‘ರೈತರು ಕೃಷಿ ಹೊಂಡದಲ್ಲಿ ಮಳೆ ನೀರು ಸಂಗ್ರಹಿಸಿ, ಮಿತವಾಗಿ ಉಪಯೋಗ ಮಾಡಿಕೊಳ್ಳುವ ಮೂಲಕ ಉತ್ತಮ ಬೆಳೆ ಬೆಳೆಯಬಹುದಾಗಿದೆ. ಜೂನ್ ಮೊದಲ ವಾರದಲ್ಲಿ ಚೆನ್ನಾಗಿ ಮಳೆಯಾದರೆ ಜೂ 10 ರಿಂದ ನೆಲಗಡಲೆ ಬಿತ್ತನೆ ಕಾರ್ಯ ಆರಂಭಿಸಬಹುದು’ ಎಂದರು.


ಜಿಲ್ಲೆಯ ಬೆಳೆಗಳ ವಿವರ(ಹೆಕ್ಟೇರ್‌ಗಳಲ್ಲಿ )

ರಾಗಿ-42,500
ಮುಸುಕಿನ ಜೋಳ-48,000
ನೆಲಗಡಲೆ-26,000
ತೊಗರಿ-13,600
ಅವರೆ-5,500
ಅಲಸಂದೆ-1,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT