ಬುಧವಾರ, ಸೆಪ್ಟೆಂಬರ್ 22, 2021
29 °C
ಲೋಕಶಕ್ತಿ ಪಕ್ಷದಿಂದ ‌ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ‌ಅಭಿನಯ ಶಾರದೆ

ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಭವಿಷ್ಯ ಅರಸಿದ್ದ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಅಭಿನಯ ಶಾರದೆ’ ನಟಿ ಜಯಂತಿ ಅವರ ಹೆಜ್ಜೆ ಗುರುತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಕಾಣುತ್ತವೆ. ಅವರ ನಿಧನಕ್ಕೆ ಇಲ್ಲಿನ ಗಣ್ಯರು ಕಂಬನಿ ಮಿಡಿಯುವ ಜತೆಗೆ, ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದನ್ನು ನೆನಪಿಸಿಕೊಳ್ಳುವರು.

1998ರ ಲೋಕಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಕರ್ನಾಟಕ ಲೋಕಶಕ್ತಿ ಪಕ್ಷದಿಂದ ಜಯಂತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಅವರು 3.50 ಲಕ್ಷ ಮತಗಳನ್ನು ಪಡೆದಿದ್ದರು. ಜಿಲ್ಲೆಯ ಜನರು ಈ ಜನಪ್ರಿಯ ನಟಿಗೆ ಹೆಚ್ಚಿನ ಮತಗಳನ್ನೇ ನೀಡಿದ್ದರು.

ಅಂದು ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿ ಆರ್.ಎಲ್.ಜಾಲಪ್ಪ 3.70 ಲಕ್ಷ ಮತಗಳನ್ನು ಪಡೆದಿದ್ದರೆ ಮೊದಲ ಬಾರಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಜಯಂತಿ 3.50 ಲಕ್ಷ ಮತಗಳನ್ನು ಪಡೆದಿದ್ದರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಪಡೆದಿದ್ದು ಸಾಮಾನ್ಯವೇನೂ ಅಲ್ಲ.

‘1998ರ ಲೋಕಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರು ಕರ್ನಾಟಕ ಲೋಕ ಶಕ್ತಿಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜಯಂತಿ ಅವರನ್ನು ಕಣಕ್ಕೆ ಇಳಿಸಿದ್ದರು. ನಾನು ಆಗ ಲೋಕಶಕ್ತಿ ಪಕ್ಷದ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ರಾಜ್ಯ ಅಧ್ಯಕ್ಷನಾಗಿದ್ದೆ. ಆ ಚುನಾವಣೆಯಲ್ಲಿ ನನಗೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ ತಾಲ್ಲೂಕಿನ ಜವಾಬ್ದಾರಿವಹಿಸಿದ್ದರು. ಕೊರಟಗೆರೆ, ಮಧುಗಿರಿ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲ್ಲೂಕಿನ ಜವಾಬ್ದಾರಿಯನ್ನು ರಾಜವರ್ಧನ್ ಅವರಿಗೆ ವಹಿಸಿದ್ದರು’ ಎಂದು ಮಾಜಿ ಶಾಸಕರಾದ ಶಿವಾನಂದ್ ನೆನಪಿಸಿಕೊಳ್ಳುವರು.

‘ಜನತಾದಳದಿಂದ ಬೈರೇಗೌಡರು, ಕಾಂಗ್ರೆಸ್‌ನಿಂದ ಆರ್‌.ಎಲ್.ಜಾಲಪ್ಪ ಸ್ಪರ್ಧಿಸಿದ್ದರು. ಬೈರೇಗೌಡರು 1.50 ಲಕ್ಷ ಮತ ಪಡೆದರು. ಗೆಲುವು ಸಾಧಿಸಿದ ಜಾಲಪ್ಪ ಅವರಿಗೂ ಜಯಂತಿ ಅವರಿಗೂ ಕೇವಲ 20 ಸಾವಿರ ಮತಗಳ ಅಂತರ. ಅಷ್ಟು ದೊಡ್ಡ ಮಟ್ಟದಲ್ಲಿ ಸ್ಪ‌ಧೆ ನೀಡಿದ್ದೆವು. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 33 ಸಾವಿರ ಮತಗಳನ್ನು ಜಯಂತಿ ಪಡೆದಿದ್ದರು’ ಎಂದು ಹೇಳಿದರು.

***

ಹಮ್ಮು ಬಿಮ್ಮು ಇಲ್ಲದ ನಟಿ

‘ನನ್ನ ಜಯಂತಿ ಅಂಕಲ್ ಎಂದೇ ಸಂಬೋಧಿಸುತ್ತಿದ್ದರು. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಎಷ್ಟೇ ಒತ್ತಡಗಳಿದ್ದರೂ ನನ್ನ ನೋಡಿದ ತಕ್ಷಣವೇ ಅಂಕಲ್ ಬಂದಿದ್ದಾರೆ. ಮಾತನಾಡಿಸಬೇಕು ಎಂದು ಬರುತ್ತಿದ್ದರು. ಅವರ ನಿಧನ ಬೇಸರ ತಂದಿದೆ’ ಎಂದು ಹಿರಿಯ ಸ್ಥಿರಚಿತ್ರ ಛಾಯಾಗ್ರಹಕ ಚಿಕ್ಕಬಳ್ಳಾಪುರದ ಭವಾನಿ ಲಕ್ಷ್ಮಿನಾರಾಯಣ ನೆನಪಿಸಿಕೊಳ್ಳುವರು.

ಅಷ್ಟೊಂದು ದೊಡ್ಡ ನಟಿಯಾದರೂ ಹಮ್ಮು ಬಿಮ್ಮು ಇರಲಿಲ್ಲ. ಒಳ್ಳೆಯ ನಟಿ. ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದು ಆತ್ಮೀಯವಾಗಿ ಮಾತನಾಡಿದ್ದರು. ಇಂದು ಪುಸ್ತಕ ಕೊಟ್ಟಾಗ ನನಗೆ ಇನ್ನೊಂದು ಪುಸ್ತಕ ಬೇಕು ಎಂದು ಪಡೆದಿದ್ದರು’ ಎಂದರು.

ಲೋಕಸಭಾ ಚುನಾವಣೆಯ ಮತಎಣಿಕೆ ದಿನ ಅವರ ಜತೆ ಒಂದೂವರೆ ತಾಸು ಮಾತನಾಡಿದ್ದೇನೆ. ಆಗ ಅವರ ಮಗ, ನಾನು ಮತ್ತು ಕೆಲವು ಅವರ ಆಪ್ತರು ಇದ್ದೆವು ಎಂದು ಸ್ಮರಿಸುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು