ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗಗಳ ವಕೀಲರು ಸಂಘಟಿತರಾಗಿ: ಸುರೇಶ್ ಎಂ. ಲಾತೂರ

Last Updated 29 ಮೇ 2022, 4:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹಿಂದುಳಿದ ವರ್ಗಗಳ ವಕೀಲರು ಸಂಘಟಿತರಾಗಬೇಕು. ಆ ಮೂಲಕ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ವಕೀಲರ ಸಂಘದ ಅಧ್ಯಕ್ಷ ಸುರೇಶ್ ಎಂ. ಲಾತೂರ ಸಲಹೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ 52ರಷ್ಟು ಮಂದಿ ಹಿಂದುಳಿದ ವರ್ಗಗಳ ಜನರು ಇದ್ದೇವೆ. ಆದರೆ, ಸಮರ್ಪಕವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ. ರಾಜಕೀಯ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿದ್ದೇವೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಸಾಮಾಜಿಕ ಪಾಲನ್ನು ಮೇಲ್ವರ್ಗಗಳು ಪಡೆಯುತ್ತಿವೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮೀಸಲಾತಿ ಸಿಗದ ರೀತಿಯಲ್ಲಿ ಮಾಡುತ್ತಿದ್ದಾರೆ. ವಕೀಲರ ನೇತೃತ್ವದಲ್ಲಿ ಈ ವರ್ಗಗಳ ಜನರನ್ನು ಮುನ್ನಡೆಸಿದರೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಹೇಳಿದರು.

ಹಿಂದುಳಿದ ವರ್ಗಗಳ ವಕೀಲರ ಸಂಘ ಈಗ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್‌ 10ರಂದು ಸಂಜೆ 4ಕ್ಕೆ ಸಂಘವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸುವರು. ಸಚಿವರಾದ ಕೋಟ ಶ್ರೀನಿವಾಸಪೂಜಾರಿ, ಆನಂದ್ ಸಿಂಗ್ ಇತರರು ಪಾಲ್ಗೊಳ್ಳುವರು ಎಂದರು.

ರಾಜ್ಯದಲ್ಲಿ ಒಬಿಸಿ ವಕೀಲರನ್ನು ಒಗ್ಗೂಡಿಸುತ್ತೇವೆ. ಸಂಘವು ಯಾವುದೇ ಜಾತಿ ವಿರುದ್ಧವಲ್ಲ. ರಾಜಕೀಯ ಸಂಘಟನೆಯೂ ಅಲ್ಲ. ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದಷ್ಟೇ ಉದ್ದೇಶ. ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಸಹ ರಚಿಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ಎ.ಎಚ್. ಪ್ರಶಾಂತ್ ಮಾತನಾಡಿ, ಪ್ರವರ್ಗ 1 ಮತ್ತು ಪ್ರವರ್ಗ ‘2ಎ’ ಅಡಿಯ 197 ಜಾತಿಗಳ ವಕೀಲರು ಮಾತ್ರ ನಮ್ಮ ಸಂಘವನ್ನು ಸೇರಬಹುದು. ಈ ಜಾತಿಗಳು ಅತ್ಯಂತ ಹಿಂದುಳಿದಿವೆ ಎಂದು ಹೇಳಿದರು.

ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಂ. ಮುನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಗದ 222 ವಕೀಲರು ಇದ್ದಾರೆ. ಜೂನ್‌ 10ರಂದು ನಡೆಯುವ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ರಾಜ್ಯಸಂಘದ ಪದಾಧಿಕಾರಿಗಳಾದ ಕೆ. ಗಂಗಪ್ಪ, ಚಂದ್ರಶೇಖರ್ ರೊಡ್ನವರ್, ಕೆ.ಜಿ. ಶಿವಣ್ಣ, ಡಿ.ಎ. ಲಕ್ಷ್ಮಿನಾರಾಯಣ, ಎಂ. ವೆಂಕಟೇಶ್ ಗೌಡ, ಚನ್ನಯ್ಯ ವಿಶ್ವಕರ್ಮ, ಮಾಲತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT