ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ ಕ್ಷೇತ್ರದ cmp ಅಭ್ಯರ್ಥಿಯಾಗಿ ಡಾ.ಅನಿಲ್ ಕುಮಾರ್ ಆಯ್ಕೆಗೆ ವಿರೋಧ

Last Updated 29 ಮಾರ್ಚ್ 2023, 10:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿಯಾಗಿ ಡಾ.ಅನಿಲ್ ಕುಮಾರ್ ಆವುಲಪ್ಪ ಅವರ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿ ಬಾಗೇಪಲ್ಲಿ, ಗುಡಿಬಂಡೆ ಮತ್ತು ಗೌರಿಬಿದನೂರು ತಾಲ್ಲೂಕಿನ ಸಿಪಿಎಂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ನೂರಾರು ಸಂಖ್ಯೆಯಲ್ಲಿ ಹಾಜರಿದ್ದ ಮುಖಂಡರು ರಾಜೀನಾಮೆಯನ್ನು ಘೋಷಿಸಿದರು. ಕೆಲವು ದಿನಗಳಲ್ಲಿಯೇ ಚರ್ಚೆ ನಡೆಸಿ ಮುಂದಿನ ರಾಜಕೀಯ ತೀರ್ಮಾನಕೈಗೊಳ್ಳುವುದಾಗಿ ಪ್ರಕಟಿಸಿದರು.

ಮುಖಂಡ ಪಿ.ಮಂಜುನಾಥ ರೆಡ್ಡಿ ಮಾತನಾಡಿ, ನಿಷ್ಠಾವಂತ ಮತ್ತು ಚಳವಳಿ ಆಧಾರಿತವಾಗಿ ಪಕ್ಷ ಸಂಘಟಿಸಿದ ಸಿಪಿಎಂ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ಪಕ್ಷ ಕಟ್ಟಿದವರು ನಾವು. ಆದರೆ ಇಂದು ಬಾಗೇಪಲ್ಲಿಯಲ್ಲಿ ಪಕ್ಷವು ಬಂಡವಾಳಶಾಹಿಗಳು, ಪಿತೂರಿ ಮಾಡುವವರಿಗೆ ಮನ್ನಣೆ ನೀಡಿದೆ ಎಂದು ದೂರಿದರು.

ಈ ಹಿಂದೆ ಜಿ.ವಿ.ಶ್ರೀರಾಮರೆಡ್ಡಿ ಅವರ ವಿರುದ್ಧ ಪಿತೂರಿ ಮಾಡಿದವರಿಗೆ ಮತ್ತು ಪಕ್ಷವನ್ನು ಬಲಹೀನಗೊಳಿಸಿದವರಿಗೆ ರಾಜ್ಯ ಮತ್ತು ಕೇಂದ್ರದ ಮುಖಂಡರು ಟಿಕೆಟ್ ನೀಡಿದ್ದಾರೆ. 2015ರಿಂದ ಇತ್ತೀಚಿನವರೆಗೂ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರ ಸಹಕಾರದಲ್ಲಿ ಜಿಲ್ಲೆಯಲ್ಲಿ ಪಿತೂರಿಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಭ್ರಷ್ಟನಾಯಕತ್ವದ ವ್ಯವಸ್ಥೆಯನ್ನು ಚಳವಳಿ ಹಿನ್ನೆಲೆಯ ನಾವು ಸಹಿಸಲು ಸಾಧ್ಯವಿಲ್ಲ. ಶಿಸ್ತು, ಪ್ರಾಮಾಣಿಕತೆಯನ್ನು ಬದಿಗೊತ್ತಲಾಗಿದೆ. ಚಳವಳಿಗಳ ನೇತಾರ ಶ್ರೀರಾಮರೆಡ್ಡಿ ಅವರನ್ನು ಪಕ್ಷದಿಂದ ಹೊರಹಾಕಲು ಕಾರಣರಾದವರಿಗೆ ಮನ್ನಣೆ ನೀಡಲಾಗುತ್ತಿದೆ ಎಂದರು.

ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ತಾಲ್ಲೂಕಿನ ಕಾರ್ಯಕರ್ತರು, ಮುಖಂಡರ ಜತೆ ಮಾತುಕತೆ ನಡೆಸಲಾಗುವುದು. ನಂತರ ನಮ್ಮ ಮುಂದಿನ ನಡೆ ಏನು ಎನ್ನುವುದನ್ನು ನಿರ್ಧರಿಸುತ್ತೇವೆ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿಯ 11 ಸದಸ್ಯರು, ಐದು ಸ್ಥಳೀಯ ಸಮಿತಿ ಕಾರ್ಯದರ್ಶಿಗಳು, ತಾಲ್ಲೂಕು ಸಮಿತಿಯ ಸದಸ್ಯರು, ಮಾಜಿ ಮತ್ತು ಹಾಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.

ಮುಖಂಡ ಎಚ್‌.ಪಿ.ಲಕ್ಷ್ಮಿನಾರಾಯಣ್ ಮಾತನಾಡಿ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಆಗಿರುವ ಮೋಸದಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಪಕ್ಷದ ಸ್ಥಳೀಯ ಸಮಿತಿಗಳು ಸೇರಿದಂತೆ ಯಾರ ಜತೆಯೂ ಚರ್ಚಿಸದೆ ಬಾಗೇಪಲ್ಲಿ ಕ್ಷೇತ್ರಕ್ಕೆ ಸಿಪಿಎಂ ಅಭ್ಯರ್ಥಿ ಘೋಷಿಸಿದ್ದಾರೆ ಎಂದರು.

ಅನಿಲ್ ಕುಮಾರ್ ವಿರುದ್ಧದ ದೂರುಗಳ ಬಗ್ಗೆ ವಿಚಾರಣೆಯೇ ನಡೆದಿಲ್ಲ. ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದರು.

ಬಾಗೇಪಲ್ಲಿ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಿಪಿಎಂ ಕಟ್ಟಿದ್ದು ಹಣದಿಂದ ಅಲ್ಲ. ಕೂಲಿ ಕಾರ್ಮಿಕರು, ರೈತರು, ತುಳಿತಕ್ಕೆ ಒಳಗಾದವರು ಸೇರಿ ಪಕ್ಷ ಕಟ್ಟಿದರು. ಆದರೆ ಈಗ ಚಳವಳಿಗಳಿಗೆ ದ್ರೋಹ ಬಗೆದಿರುವ ಯಾವುದೇ ಹೋರಾಟದ ಹಿನ್ನೆಲೆಯಿಲ್ಲದವರು ಅಭ್ಯರ್ಥಿಯಾಗಿದ್ದಾರೆ ಎಂದು ಹೇಳಿದರು.

ಕೋಚಿಮುಲ್ ನಿರ್ದೇಶಕ ಆದಿನಾರಾಯಣರೆಡ್ಡಿ, ಮಹಮ್ಮದ್ ಅಕ್ರಂ, ರವಿಚಂದ್ರಾರೆಡ್ಡಿ, ಆಂಜನೇಯರೆಡ್ಡಿ, ಫಾತಿಮಾಬಿ, ಶ್ರೀನಿವಾಸ್ ಇತರರು ಗೋಷ್ಠಿಯಲ್ಲಿ ಇದ್ದರು.

***

‘ಅನಿಲ್ ಕುಮಾರ್

ವಿರುದ್ಧ ತನಿಖೆಯೇ ಇಲ್ಲ’

ಅನಿಲ್ ಕುಮಾರ್ ಅವರ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ನಾವು 2017ರಿಂದ ದಾಖಲೆಗಳ ಸಮೇತ ದೂರು ಕೊಟ್ಟಿದ್ದೇವೆ. ಆದರೆ ದೂರುಗಳ ಬಗ್ಗೆ ವಿಚಾರಣೆಯೇ ನಡೆಯಲಿಲ್ಲ. ಅವರ ವಿರುದ್ಧ ಕ್ರಮವಹಿಸಿಲ್ಲ’ ಎಂದು ಎಚ್‌.ಪಿ.ಲಕ್ಷ್ಮಿನಾರಾಯಣ್ ದೂರಿದರು.

***

‘ರಾಜ್ಯ ನಾಯಕರು ಸ್ಪರ್ಧಿಸಬಹುದಿತ್ತು’

ಎಸ್.ವರಲಕ್ಷ್ಮಿ, ಜಿ.ಸಿ.ಬಯ್ಯಾರೆಡ್ಡಿ ಸೇರಿದಂತೆ ಪಕ್ಷದ ರಾಜ್ಯ ಮಟ್ಟದ ಯಾವ ನಾಯಕರೇ ಸ್ಪರ್ಧಿಸಲು ಬಾಗೇಪಲ್ಲಿ ಅವಕಾಶವಿತ್ತು. ನಾವೂ ಇದನ್ನು ಒಪ್ಪುತ್ತಿದ್ದೆವು. ಆದರೆ ವ್ಯವಸ್ಥಿತವಾಗಿ ಕೆಲವರು ಯೋಜನೆ ಸಿದ್ಧಗೊಳಿಸಿ ಅನಿಲ್ ಕುಮಾರ್ ಹೆಸರು ಘೋಷಿಸಿದರು ಎಂದು ಪಿ.ಮಂಜುನಾಥ ರೆಡ್ಡಿ ತಿಳಿಸಿದರು.

1991ರಲ್ಲಿ ಸಿಪಿಎಂ ಜತೆ ನಾನು ಗುರುತಿಸಿಕೊಂಡವನು. ನನ್ನಂತೆ ಹಲವು ಮಂದಿ ದಶಕಗಳ ಕಾಲ ಪಕ್ಷವನ್ನು ಕಟ್ಟಿದ್ದಾರೆ. ಕಾರ್ಯಕರ್ತರು, ಮುಖಂಡರು ಹೇಳಿದ ಕಾರಣ ನಾವು ಪಕ್ಷದ ಪದಾಧಿಕಾರಿಗಳ ಹುದ್ದೆಗೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT