ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನೆಮ್ಮದಿ ಕಸಿದ ಕಲ್ಲುಗಣಿಗಾರಿಕೆ

ದೂಳು ಕುಡಿದು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರು
Last Updated 21 ಜುಲೈ 2019, 20:00 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಬರಗಾಲ ಹಾಗೂ ಹಿಂದುಳಿದ ಪ್ರದೇಶವಾಗಿರುವ ತಾಲ್ಲೂಕಿನ ಮಾರಗಾನಕುಂಟೆ, ಕೊತ್ತಕೋಟೆ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಜನರ ನೆಮ್ಮದಿ ಹಾಳಾಗಿದೆ. ಆದರೆ ಜಿಲ್ಲಾಡಳಿತ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಾಗೇಪಲ್ಲಿ ತಾಲ್ಲೂಕು ಅನೇಕ ಬೆಟ್ಟ ಗುಡ್ಡಗಳಿಂದ ಕೂಡಿರುವ ಸುಂದರ ಪ್ರದೇಶ. ಆದರೆ ಈಗ ಆ ಸೌಂದರ್ಯವೆಲ್ಲಾ ಗಣಿಗಾರಿಕೆಗೆ ಕರಗಿದೆ. ನಿರಂತರ ಗಣಿಗಾರಿಕೆ ಪರಿಸರ ನಾಶಕ್ಕೆ ಕಾರಣವಾಗಿದೆ. ಇದರಿಂದ ಅಂತರ್ಜಲ ಪಾತಾಳ ಕಂಡಿದೆ. ವರುಣನ ಕೃಪೆಯಂತೂ ಇಲ್ಲವೇ ಇಲ್ಲ. ಈ ಪರಿಸ್ಥಿತಿಯಲ್ಲಿ ಜನರು ಕುರಿ, ಮೇಕೆಗಳು ಮಾರಿ ಜೀವನ ಸಾಗಿಸುವ ದುಸ್ಥಿತಿ ಎದುರಾಗಿದೆ.

ಗಣಿ ಇಲಾಖೆ ಇದೆಯೇ: ಒಂದೂವರೆ ದಶಕದಿಂದ ಮಾರಗಾನಕುಂಟೆ, ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರಿ ಜಾಗವನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಕೆಲವರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಬೆಟ್ಟ ಗುಡ್ಡಗಳೆಲ್ಲ ಕಲ್ಲು ಗಣಿಗಾರಿಕೆಗೆ ಬಲಿಯಾಗಿವೆ. ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜೀವಂತವಾಗಿದೆಯೇ ಎನ್ನುವುದು ಗ್ರಾಮಸ್ಥರ ಪ್ರಶ್ನೆ.

ಹಗಲು-ರಾತ್ರಿ ಕಿರಿಕಿರಿ: ಕಲ್ಲುಕ್ವಾರಿಗಳಲ್ಲಿನ ಜೆಸಿಬಿ, ಡ್ರಿಲ್ಲರ್ ಯಂತ್ರಗಳ ಶಬ್ದದಿಂದ ಗ್ರಾಮಸ್ಥರ ಹೈರಾಣಾಗಿದ್ದಾರೆ. ರಾತ್ರಿ ವೇಳೆ ಲಾರಿಗಳ ಸಂಚಾರದ ಸ್ಥಳೀಯರ ನಿದ್ದೆಗೂ ಭಂಗವಾಗುತ್ತಿದೆ. ಕಲ್ಲು ಗಣಿಗಾರಿಕೆಯ ಶಬ್ದಕ್ಕೆ ಮಕ್ಕಳು, ವೃದ್ಧರು ಬೆಚ್ಚಿಬೀಳುವಂತಾಗಿದೆ.

ಕಲ್ಲುಗಣಿಗಾರಿಕೆಗೆ ಬಳಸುತ್ತಿರುವ ಸ್ಫೋಟಕಗಳಿಂದ ಹೊನ್ನಂಪಲ್ಲಿ, ಮಾಡಪ್ಪಲ್ಲಿ ಗ್ರಾಮಗಳ ಕೆಲ ಮನೆ, ಕಟ್ಟಡಗಳು ಬಿರುಕು ಬಿಟ್ಟಿವೆ. ಅನೇಕರು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ.

ಗಣಿ ದೂಳು ರೈತರ ಬೆಳೆಗಳಿಗೂ ಮಾರಕವಾಗಿದೆ. ಹುಣಸೆ, ನೇರಳೆ, ಕಕ್ಕೆ ಸೇರಿದಂತೆ ಬಗೆ ಬಗೆಯ ಗಿಡ ಮರಗಳು ನಶಿಸುತ್ತಿವೆ. ರಸ್ತೆ ಪಕ್ಕದಲ್ಲಿನ ಗಿಡ ಮರಗಳು ದೂಳಿನಿಂದ ಆವೃತವಾಗಿವೆ.

ಕಲ್ಲು ಗಣಿಗಾರಿಕೆಯಿಂದ ಹಾವು, ಚೇಳುಗಳು ಸೇರಿದಂತೆ ವಿಷ ಜಂತುಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಪ್ರತಿನಿತ್ಯ ಮನೆ ಹಾಗೂ ಕೃಷಿ ಭೂಮಿಗಳಲ್ಲಿ ಅನೇಕ ಜಂತುಗಳು ಸಂಚರಿಸುತ್ತಿದೆ ಎನ್ನುತ್ತಾರೆ ಕೊಲಿಂಪಲ್ಲಿಯ ಚಲಪತಿ.

ಅಕ್ರಮ ಕಲ್ಲು ಗಣಿಕಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ತಾಲ್ಲೂಕು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದ್ದೆವು. ಗಣಿಗಾರಿಕೆ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಇದುವರಿಗೂ ಕಲ್ಲು ಗಣಿಗಾರಿಕೆ ಮುಚ್ಚಿಸಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಅಕ್ರಮ ಗಣಿಗಾರಿಕೆ ತಡೆಯುವಂತೆ ಆದೇಶಿಸಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಗಣಿ ಮಾಲೀಕರೊಂದಿಗೆ ಶಾಮೀಲಾಗಿ, ಕಲ್ಲು ಗಣಿಗಾರಿಕೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಹೊನ್ನಂಪಲ್ಲಿ ಗ್ರಾಮಸ್ಥ ನರಸಿಂಹಪ್ಪ ಆರೋಪಿಸಿದ್ದಾರೆ.

ನೀಲಗಿರಿ ತೆರವಿಗೆ ರೈತರ ಆಗ್ರಹ
ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀಲಗಿರಿ ಬೆಳೆ ಹೆಚ್ಚಿರುವುದೇ ಈ ಭಾಗದಲ್ಲಿ ಅಂತರ್ಜಲ ತೀವ್ರ ಕುಸಿದಿದೆ. ಆದಾಗ್ಯೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದರ ತೆರವಿಗೆ ಗಮನ ಹರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ನೀಲಗಿರಿ ಬೆಳೆ ಬೆಳೆಯಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೆ ತಾಲ್ಲೂಕಿನ ಮಾರಗಾನ ಕುಂಟೆ, ಕೊತ್ತಕೋಟೆ ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಪಕವಾಗಿ ನೀಲಗಿರಿ ಬೆಳೆ ಇದೆ. ಕೂಡಲೇ ನೀಲಗಿರಿ ಬೆಳೆಯನ್ನು ಅಧಿಕಾರಿಗಳು ತೆರವು ಗೊಳಿಸಬೇಕು ಎಂದು ಕೆಲ ರೈತರು ಆಗ್ರಹಿಸಿದ್ದಾರೆ.

ಅಂತರ್ಜಲ ಮಟ್ಟ ಹೆಚ್ಚಿಸಲು ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್‌ ಅವರು ಕೆರೆ ಕುಂಟೆ ಹಾಗೂ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ರಿಯಲ್ ಎಸ್ಟೇಟ್‌ ಉದ್ಯಮಿಗಳು ನಿವೇಶನಗಳನ್ನು ಮಾಡಲು ಕೆರೆ, ಕುಂಟೆ, ಕಾಲುವೆಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ದೇವಿಕುಂಟೆ ಗ್ರಾಮದ ಡಿ.ಸಿ.ಶ್ರೀನಿವಾಸ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT