ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದಲವೇಣಿ ಕೆರೆಯಲ್ಲಿ ಕೊಕ್ಕರೆಗಳ ಮರಣಮೃದಂಗ

ಬೀದಿ ನಾಯಿಗಳಿಂದ ಬಹಿರಂಗವಾದ 60ಕ್ಕೂ ಹೆಚ್ಚು ಪಕ್ಷಿಗಳು ಸಾವು
Last Updated 22 ಜನವರಿ 2021, 1:45 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಕಾದಲವೇಣಿ ಕೆರೆ ಅಂಗಳದಲ್ಲಿ ಸುಮಾರು 60ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿವೆ. ಸ್ಥಳೀಯ ‌ನಿವಾಸಿಗಳ ಮನೆ ಬಳಿಗೆ ಬೀದಿ‌ನಾಯಿಗಳು ಸತ್ತ ಕೊಕ್ಕರೆಗಳನ್ನು ತಂದು ಹಾಕುತ್ತಿದ್ದವು. ಇದರಿಂದ ಕೊಕ್ಕರೆಗಳ ಸಾವು ಬಹಿರಂಗವಾಗಿದೆ.

ಸ್ಥಳೀಯರು ಗ್ರಾಮದ ಸುತ್ತಲೂ ವೀಕ್ಷಿಸಿದಾಗ ಪಕ್ಕದಲ್ಲಿರುವ ಸುಮಾರು 150 ಎಕರೆಯಷ್ಟು ವಿಸ್ತಾರವಿರುವ ಕೆರೆಯ ನೀರಿನಲ್ಲಿ ಹಾಗೂ ಜಾಲಿ ಮರಗಳಲ್ಲಿ ಕೊಕ್ಕರೆಗಳು ಸತ್ತು ನೇತಾಡುತ್ತಿದ್ದ ದೃಶ್ಯಗಳು ಕಂಡುಬಂದಿದೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಕೂಡಲೇ ಪಶು ವೈದ್ಯಕೀಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದಾರೆ‌.

ಗುರುವಾರ ಬೆಳಿಗ್ಗೆ ತಾಲ್ಲೂಕು ಪಶು ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಗ್ರಾ.ಪಂ. ಅಧಿಕಾರಿಗಳು, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಶದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಾಮೂಹಿಕವಾಗಿ ಸತ್ತು ನೀರಿನಲ್ಲಿ ಮತ್ತು ಜಾಲಿ ಮರಗಳಲ್ಲಿ ನೇತಾಡುತ್ತಿದ್ದ ಕೆಲವು ಕೊಕ್ಕರೆಗಳನ್ನು ತೆಗೆದುಕೊಂಡು ಅವುಗಳ ರಕ್ತದ ಮಾದರಿ ಸಂಗ್ರಹಿಸಿ ಜೈವಿಕ ಸಂಶೋಧನಾ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ‌.

‘ಈ ಬಾರಿ ಉತ್ತಮ ಮಳೆಯಾದ ಕಾರಣ ಕೆರೆಯಲ್ಲಿ ಸಾಕಷ್ಟು ನೀರು ಶೇಖರಣೆಯಾಗಿದೆ. ನೀರಿನಲ್ಲಿ ಹೆಚ್ಚಿನ ಜಾಲಿ ಮರಗಳು ಬೆಳೆದಿರುವ ಕಾರಣ ಗ್ರಾಮಸ್ಥರು ಅದರತ್ತ ಸುಳಿಯುವುದಿಲ್ಲ. ಒಂದೆರಡು ದಿನಗಳಿಂದ ಬೀದಿನಾಯಿಗಳು ಸತ್ತ ಕೊಕ್ಕರೆಗಳನ್ನು ಗ್ರಾಮಕ್ಕೆ ತರುತ್ತಿರುವುದನ್ನು ಗಮನಿಸಿ ಸುತ್ತಲಿನ ಪ್ರದೇಶವನ್ನು ಅವಲೋಕಿಸಿದಾಗ ಕೆರೆಯಲ್ಲಿ ಸತ್ತ ಕೊಕ್ಕರೆಗಳ ಹಿಂಡು ಕಂಡುಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ಸ್ಥಳೀಯ ನಿವಾಸಿ ನಾಗರಾಜು ತಿಳಿಸಿದರು.

ತಾಲ್ಲೂಕು ಸಹಾಯಕ ಪಶು ವೈದ್ಯಾಧಿಕಾರಿ ಡಾ.ಆರ್. ರಾಘವೇಂದ್ರ ಮಾತನಾಡಿ, ‘ಕೆರೆಯಲ್ಲಿ ನೀರು ತುಂಬಿರುವ ಕಾರಣ ದೂರದ ಪ್ರದೇಶಗಳಿಂದ ಸಂತಾನೋತ್ಪತ್ತಿ ಹಾಗೂ ಆಹಾರ ಅರಸಿ ವಲಸೆ ಬರುವ ಸಾವಿರಾರು ಕೊಕ್ಕರೆಗಳು ಈ ಕೆರೆಯಲ್ಲಿ ಬೀಡುಬಿಟ್ಟಿವೆ. ಹವಾಮಾನ ವೈಪರೀತ್ಯದಿಂದ ಅಥವಾ ಆಹಾರವಿಲ್ಲದೆ ಸತ್ತಿರಬಹುದು. ಜನರು ಆತಂಕಪಡುವ ಅಗತ್ಯವಿಲ್ಲ. ಕೊಕ್ಕರೆಗಳ ರಕ್ತದ ಮಾದರಿ ಸಂಗ್ರಹಿಸಿ ‌ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಫಲಿತಾಂಶ ಬಂದ ಬಳಿಕವೇ ಕೊಕ್ಕರೆಗಳ ಸಾವಿಗೆ ನಿಖರ ಉತ್ತರ ಸಿಗಲಿದೆ’ ಎಂದು ಹೇಳಿದರು.

ಹಕ್ಕಿಜ್ವರದ ಭೀತಿ

ಕಾದಲವೇಣಿ ಕೆರೆ ಅಂಗಳದಲ್ಲಿ ಸಾಮೂಹಿಕವಾಗಿ ಸತ್ತಿರುವ ಕೊಕ್ಕರೆಗಳ ಮಾಹಿತಿ ತಿಳಿದ ಕೂಡಲೇ ಜನತೆ ಆತಂಕಗೊಂಡಿದ್ದಾರೆ.

ಕೋವಿಡ್ ಸೋಂಕು ಆರಂಭದಲ್ಲಿ ತಾಲ್ಲೂಕಿನಲ್ಲಿ ಕಾಣಿಸಿಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತ್ತು. ಇದೀಗ ಹಕ್ಕಿಜ್ವರ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರಬಹುದೇ ಎಂಬ ಅನುಮಾನ ಜನರಲ್ಲಿ ಮೂಡಿದೆ. ಸುತ್ತಲಿನ ಗ್ರಾಮಗಳ ಪ್ರತಿ ಮನೆಯಲ್ಲಿ ಇದರದ್ದೇ ಸದ್ದು, ಗದ್ದಲದ ಮಾತಾಗಿದೆ.

ಆದರೆ, ಒಂದೇ ಕೆರೆಯಲ್ಲಿ ಇಷ್ಟೊಂದು ‌ಪ್ರಮಾಣದ ಕೊಕ್ಕರೆಗಳು ಸಾವಿಗೀಡಾಗಿರುವುದು ಅನುಮಾನಗಳಿಗೆ ರೆಕ್ಕೆಪುಕ್ಕ ಬಂದಿದೆ. ಸದ್ಯಕ್ಕೆ ಕೊಕ್ಕರೆಗಳ ರಕ್ತದ ಮಾದರಿಯ ಫಲಿತಾಂಶ ಬರುವವರೆಗೂ ಏನನ್ನೂ ಹೇಳಲಾಗದು ಎಂದು ಪಶು ವೈದ್ಯರು ಹೇಳಿರುವುದರಿಂದ, ಅಲ್ಲಿಯವರೆಗೆ ಜನತೆ ಧೈರ್ಯದಿಂದ ಇರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT