ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರಿಗೆ ದೇಶ ನಡೆಸುವುದು ಗೊತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕೆ
Last Updated 2 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬಿಜೆಪಿಯವರಿಗೆ ಅಧಿಕಾರಕ್ಕೆ ಬರುವ ತಂತ್ರ ಗೊತ್ತೆ ವಿನಾ ದೇಶವನ್ನು ಹೇಗೆ ಆಳಬೇಕು. ಎಲ್ಲರನ್ನು ಒಳಗೊಂಡು ಅಭಿವೃದ್ಧಿ ಹೇಗೆ ಮಾಡಬೇಕು ಎನ್ನುವುದು ಗೊತ್ತಿಲ್ಲ. ಹೀಗಾಗಿಯೇ ದೇಶದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೋದಿ ಅವರು ಮನಮೋಹನ್ ಸಿಂಗ್‌ ಅವರಂತಹ ಆರ್ಥಿಕ ತಜ್ಞರಿಗೆ ಗೇಲಿ ಮಾಡಿ ಮಾತನಾಡಿದರು. ಆದರೆ ಇವತ್ತು ಏನಾಗಿದೆ? ಮೋದಿ ಅವರ ಆರ್ಥಿಕ ಸಲಹೆಗಾರರೆಲ್ಲ ಕೆಲಸ ಬಿಟ್ಟು ಹೋದರು. ಒಬ್ಬೇ ಒಬ್ಬ ಆರ್ಥಿಕ ತಜ್ಞ ಮೋದಿ ಅವರ ಜತೆಗಿಲ್ಲ. ನೋಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ದೇಶದ ಪರಿಸ್ಥಿತಿ ಬಗ್ಗೆ ಮಾತನಾಡಿದರೆ ಅವರು ಎಡಪಂಥಿಯರು, ಜೆಎನ್‌ಯುನಲ್ಲಿ ಓದಿದ್ದಾರೆ ಎನ್ನುತ್ತ ದಾರಿ ತಪ್ಪಿಸುವ ಮಾತನಾಡುತ್ತಾರೆ’ ಎಂದು ಹೇಳಿದರು.

‘ಇವತ್ತು ದೇಶದ ಜಿಡಿಪಿ ಶೇ 4.5ಕ್ಕೆ ತಲುಪಿ ಕಳೆದ ಏಳು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಯುಪಿಎ ಸರ್ಕಾರದಲ್ಲಿ ಶೇ 4.5ರಷ್ಟು ಇದ್ದ ಕೃಷಿ ಉತ್ಪಾದನೆ ಕೂಡ ಇವತ್ತು ಶೇ 2.5ಕ್ಕೆ ಕುಸಿದಿದೆ. ನಿರುದ್ಯೋಗ ಹೆಚ್ಚುತ್ತಿದೆ. ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ. ಎಲ್ಲಾ ದೃಷ್ಟಿಯಿಂದಲೂ, ಎಲ್ಲಾ ಇಲಾಖೆಗಳಲ್ಲೂ ಕುಸಿತ ಕಾಣುತ್ತಿದೆ. ದೇಶದಲ್ಲಿ 25 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಿದರೆ ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ಅಡಿ ಕಾಯಂ ಉದ್ಯೋಗ ನೀಡಬೇಕಾಗುತ್ತದೆ ಎಂದು ಅದನ್ನು ತಪ್ಪಿಸಲು, ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಗುತ್ತಿಗೆ ಪದ್ಧತಿ ಮುಂದುವರಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಅಮಿತ್‌ ಶಾ, ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳಿಕೊಂಡು ಬಂದರು. ಆದರೂ ನಾವು ದಿನೇ ದಿನೇ ಬೆಳೆಯುತ್ತಿದ್ದೇವೆ. ಅವರು ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ. ಮಹಾರಾಷ್ಟ್ರ, ಗೋವಾ, ಮಣಿಪುರ, ಅರುಣಾಚಲ ಹೀಗೆ ಎಲ್ಲ ಕಡೆ ಕಳೆದುಕೊಳ್ಳುತ್ತ ಹೊರಟಿದ್ದಾರೆ. ಕರ್ನಾಟಕದಲ್ಲಿಯೂ ಬಿಜೆಪಿಯವರಿಗೆ ಬಹುಮತ ಬಂದಿಲ್ಲ. ನಮ್ಮಲ್ಲಿನ ಶಾಸಕರಲ್ಲಿ ಒಡಕು ಉಂಟು ಮಾಡಿ, ಕೆಲ ಶಾಸಕರನ್ನು ಖರೀದಿ ಮಾಡಿ ಇವತ್ತು ಸರ್ಕಾರ ರಚಿಸಿದ್ದಾರೆ. ಅವರಿಗೆ ನೈತಿಕ ಬಲ ಇಲ್ಲ’ ಎಂದು ಟೀಕಿಸಿದರು.

‘ಇವತ್ತು ಇಡಿ, ಐಟಿ, ಸಿಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರು ನಮಗೆ ನೈತಿಕ ಪಾಠ, ದೇಶದ ಬಗ್ಗೆ ಹೇಳುತ್ತಾರೆ. ಬಿಜೆಪಿಯವರಿಗೆ ದೇಶ ಹೇಗೆ ನಡೆಸಬೇಕು ಎಂದು ಗೊತ್ತಿಲ್ಲ. ಮತ ಹೇಗೆ ತೆಗೆದುಕೊಳ್ಳಬೇಕು ಅದಕ್ಕೆ ಅವರು ತಂತ್ರ ಮಾಡುತ್ತಾರೆ. ದುಡ್ಡು ಖರ್ಚು ಮಾಡುತ್ತಾರೆ. ಕಂಪನಿಗಳನ್ನು ಕೈಯಲ್ಲಿಟ್ಟು ಪ್ರಚಾರ ಪಡೆಯುತ್ತಾರೆ. ಅನರ್ಹ ಶಾಸಕರಿಗೆ ಐಟಿ, ಇಡಿ ಸೇರಿದಂತೆ ಯಾವ ಬೆದರಿಕೆ ಇತ್ತೋ ಗೊತ್ತಿಲ್ಲ ಬಿಜೆಪಿಗೆ ಹೋಗಿ, ಮತ ನೀಡಿ ಶಾಸಕರನ್ನಾಗಿ ಮಾಡಿದವರಿಗೆ ಮೋಸ ಮಾಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT