ಮಂಗಳವಾರ, ಏಪ್ರಿಲ್ 13, 2021
23 °C

ಶಿಡ್ಲಘಟ್ಟ: ಮಕ್ಕಳಿಗೆ ಚರಕದ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಚರಕವನ್ನು ಬಳಸಿ ಹತ್ತಿಯಿಂದ ನೂಲನ್ನು ಶಿಕ್ಷಕರು ತಯಾರಿಸಿದರು. ಗಾಂಧೀಜಿ ತತ್ವವನ್ನು, ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧಿ ಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಅಗ್ರಗಣ್ಯ ಮೈಲಾರ ಮಹಾದೇವನ ಆದರ್ಶವನ್ನು ಹಾಗೂ ವಿಜ್ಞಾನದ ಪಾಠನು ಮಾಡಿದರು.

‘ಆರು, ಏಳು ಮತ್ತು ಎಂಟನೇ ತರಗತಿಯ ವಿಜ್ಞಾನದಲ್ಲಿ ‘ಎಳೆಯಿಂದ ಬಟ್ಟೆ’ ಎಂಬ ಪಾಠವಿದೆ. ಗಾಂಧೀಜಿ ಕರ್ಮಭೂಮಿಯಾಗಿದ್ದ ಸಬರಮತಿ ಆಶ್ರಮಕ್ಕೆ ಹೋಗಿದ್ದಾಗ ಪುಟ್ಟ ಚರಕವನ್ನು ತಂದಿದ್ದೆ. ಚರಕದಲ್ಲಿ ಯಾವರೀತಿ ಹತ್ತಿಯಿಂದ ನೂಲನ್ನು ತೆಗೆಯುತ್ತಿದ್ದರು ಎಂದು ಈ ದಿನ ವಿದ್ಯಾರ್ಥಿಗಳಿಗೆ ತೋರಿಸಿದೆ. ನೈಸರ್ಗಿಕ ಎಳೆಗಳು, ಎಳೆಯಿಂದ ಬಟ್ಟೆ, ಸಂಶ್ಲೇಷಿತ ಎಳೆಗಳು ಮುಂತಾದ ಸಂಗತಿಗಳು ವಿದ್ಯಾರ್ಥಿಗಳಿಗೆ ಪಠ್ಯದಲ್ಲಿವೆ. ಪ್ರಾಯೋಗಿಕವಾಗಿ ತೋರಿಸಿದಾಗ ಮಕ್ಕಳು ಮರೆಯುವುದಿಲ್ಲ. ಪಾಠವನ್ನು ಚೆನ್ನಾಗಿ ಅರ್ಥೈಸಿಕೊಳ್ಳುವರು’ ಎಂದು ಶಿಕ್ಷಕ ಎಂ.ಎ.ರಾಮಕೃಷ್ಣ ತಿಳಿಸಿದರು.

‘ಏಳನೇ ತರಗತಿಯ ಕನ್ನಡ ಪಠ್ಯದಲ್ಲಿ ‘ಮೈಲಾರ ಮಹಾದೇವ’ ಎಂಬ ಪಾಠವಿದೆ. ಗಾಂಧೀಜಿ ದಂಡಿ ಯಾತ್ರೆಯ ಸಲುವಾಗಿ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಸಬರಮತಿ ಆಶ್ರಮಕ್ಕೆ ಹೋಗಿ 79 ಜನರೊಟ್ಟಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಮೈಲಾರ ಮಹಾದೇವ ಪಾಲ್ಗೊಂಡಿದ್ದರು. ಬೆಳಗಾವಿಯ ಹಿಂಡಲಗಿ ಜೈಲಿನಲ್ಲಿದ್ದಾಗ, ಅವರ ತಾಯಿ ಬಸಮ್ಮ ಸ್ವತಃ ನೇಯ್ದ ಬಟ್ಟೆಯನ್ನು ಹರಿಜನ ನಿಧಿ ಕಾಣಿಕೆ ಎಂದು ಗಾಂಧೀಜಿಯವರಿಗೆ ಅರ್ಪಿಸಿದ್ದರು. ರೆಡಿಮೇಡ್ ಬಟ್ಟೆ ಧರಿಸುವ ಈಗಿನ ಮಕ್ಕಳಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಚರಕವನ್ನು ಅಸ್ತ್ರದಂತೆ ಬಳಸಿದ ಹೋರಾಟಗಾರರ ಕೆಚ್ಚು, ಸ್ವದೇಶಿ ಖಾದಿ ತಯಾರಿಕಾ ವಿಧಾನದ ಬಗ್ಗೆ ತಿಳಿಹೇಳಲಾಯಿತು’ ಎಂದು ಅವರು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.