ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಗೆ ಮೂಲ ಕಾರಣ ಕಾಶಿ ಹುಲ್ಲು

Last Updated 9 ಮಾರ್ಚ್ 2019, 9:14 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಬೇಸಿಗೆ ಬರುತ್ತಿದ್ದಂತೆಯೇ ಅಲ್ಲಲ್ಲಿ ಬೆಂಕಿ ಆಕಸ್ಮಿಕ ಪ್ರಕರಣಗಳು ಸಂಭವಿಸುತ್ತಿರುತ್ತವೆ. ಈಚೆಗೆ ಬಂಡೀಪುರ ಕಾಡಿನಲ್ಲಿ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿತ್ತು. ತಾಲ್ಲೂಕಿನ ಕುರುಚಲು ಕಾಡೂ ಇದಕ್ಕೆ ಹೊರತಾಗಿಲ್ಲ. ಹಲವು ವರ್ಷಗಳ ಹಿಂದೆ ವರದನಾಯಕನಹಳ್ಳಿ ಬಳಿಯಿರುವ ಕಾಡಿಗೆ ಮತ್ತು ದಿಬ್ಬೂರಹಳ್ಳಿ ಬಳಿಯ ಜರಗಹಳ್ಳಿಯ ಕುರುಚಲು ಕಾಡಿಗೂ ಬೆಂಕಿ ಬಿದ್ದಿತ್ತು.

ತಾಲ್ಲೂಕಿನಲ್ಲಿ ಕಾಡಿನ ಬೆಂಕಿಗೆ ಮೂಲ ಕಾರಣ ಕಾಶಿ ಹುಲ್ಲು. ಇದನ್ನು ಬಾಧೆ ಹುಲ್ಲು ಎಂದೂ ಕರೆಯುತ್ತಾರೆ. ಹಿಂದೆ ಬಡವರು ಗುಡಿಸಲು ನಿರ್ಮಿಸಲು ಹುಲ್ಲನ್ನು ಬಳಸುತ್ತಿದ್ದರು. ಈಗ ಗುಡಿಸಲು ಮನೆಗಳು ಅಥವಾ ಹುಲ್ಲಿನ ಮಾಡುಗಳು ವಿರಳ. ಹೀಗಾಗಿ ಒತ್ತಾಗಿ ಬೆಳೆಯುವ ಈ ಹುಲ್ಲು ಒಣಗುತ್ತಿದ್ದಂತೆ ಕಾಳ್ಗಿಚ್ಚಿಗೆ ದಾರಿಯಾಗುತ್ತದೆ.

ಪ್ರಕೃತಿಯಲ್ಲಿ ಪ್ರತಿ ವಸ್ತುವೂ ಒಳ್ಳೆಯದಾಗಿರುತ್ತದೆ. ಅದನ್ನು ಬಳಸುವ ರೀತಿಯಲ್ಲಿ ಪ್ರತಿಫಲ ಸಿಗುತ್ತದೆ. ಕಾಶಿ ಹುಲ್ಲನ್ನು ಹಿಂದೆ ಗುಡಿಸಲುಗಳ ಮಾಡಿಗೆ, ಕೊಟ್ಟಿಗೆಗಳಲ್ಲಿ ನೆರಳಿಗೆ, ಹುಳು ಸಾಕಾಣಿಕಾ ಮನೆಗಳಲ್ಲಿ ನೆರಳಿಗಾಗಿ ಬಳಸುತ್ತಿದ್ದರು. ಆದರೆ ಈಗ ಪ್ಲಾಸ್ಟಿಕ್, ಆಸ್‌ಬೆಸ್ಟಾಸ್ ಶೀಟ್‌ ಬಳಸಲಾಗುತ್ತದೆ.

ಕಿಡಿಗೇಡಿಗಳು ಎಸೆಯುವ ಬೀಡಿ ಅಥವಾ ಹಚ್ಚುವ ಬೆಂಕಿ ಕಿಡಿ ಇಡೀ ಬೆಟ್ಟಗುಡ್ಡ ಆವರಿಸುತ್ತದೆ. ಕಾಡಿಗೆ ಬೆಂಕಿ ಬಿದ್ದಲ್ಲಿ ಬೆಲೆಬಾಳುವ ಮರಗಳು ನಾಶವಾಗುವುದರ ಜೊತೆಗೆ ಪ್ರಾಣಿ ಪಕ್ಷಿಗಳ ಸಂಕುಲ ಕೂಡ ಅಪಾಯಕ್ಕೆ ಒಳಗಾಗುತ್ತದೆ. ಅರಣ್ಯ ಇಲಾಖೆ ನೆಡುತೋಪು, ಖಾಸಗಿ ತೋಟ, ಸಾರ್ವಜನಿಕರ ಆಸ್ತಿಪಾಸ್ತಿಗೂ ನಷ್ಟ ತಪ್ಪಿದ್ದಲ್ಲ. ಮರಗಿಡಗಳ ಬೀಜ ಪ್ರಸರಣ ಕ್ರಿಯೆ ನಿಲ್ಲುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಬೋಳುಗುಡ್ಡಗಳು ತಯಾರಾಗಿವೆ. ಆದರೆ ಬೆಂಕಿ ಬಿದ್ದ ನಂತರ ಮಳೆ ಬೀಳುತ್ತಿದ್ದಂತೆಯೇ ಕಾಶಿ ಹುಲ್ಲು ಮಾತ್ರ ಯಥೇಚ್ಛವಾಗಿ ಚಿಗುರುತ್ತದೆ’ ಎಂದು ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ ವಿವರಿಸಿದರು.

‘ಜನವರಿಯಿಂದ ಮಾರ್ಚ್ ತಿಂಗಳಿನವರೆಗೂ ಬೆಟ್ಟ ಗುಡ್ಡಗಳಲ್ಲಿ ಬೆಂಕಿಯ ಅನಾಹುತ ಸಂಭವಿಸುವುದುಂಟು. ಒಣಗಿದ ಕಾಶಿ ಹುಲ್ಲಿಗೆ ಬೆಂಕಿ ಕಿಡಿ ಸೋಕುವುದನ್ನು ತಡೆಯಬೇಕೆಂದರೆ ಗ್ರಾಮೀಣ ಬಾಗದಲ್ಲಿ ಈ ಹುಲ್ಲನ್ನು ಬಳಸಬೇಕು.

ಸಾವಯವ ಕೃಷಿಯಲ್ಲಿ ಗೊಬ್ಬರ ತಯಾರಿಕೆಗೂ ಕಾಶಿ ಹುಲ್ಲನ್ನು ಬಳಸಬಹುದು. ಒರಟಾದ ಪೇಪರ್ ಅಥವಾ ಸಾಗಾಣಿಕೆಗೆ ಬಳಸುವ ಡಬ್ಬಗಳನ್ನು ಹುಲ್ಲಿನಿಂದ ತಯಾರಿಸುವ ಗೃಹ ಕೈಗಾರಿಕೆ ಆರಂಭಿಸಬಹುದು. ಕಾಡಿಗೆ ಬೆಂಕಿ ಬೀಳುವುದು ಕಡಿಮೆಯಾದಂತೆ ಅರಣ್ಯದ ಬೆಳವಣಿಗೆ ಆಗುತ್ತದೆ. ಬೋಳುಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತವೆ. ಪಶು ಪಕ್ಷಿ ಮತ್ತಿತರ ಜೀವವೈವಿಧ್ಯದ ತಾಣವಾಗುತ್ತವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT