ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೇರಿ: ಮತ್ತೆ ಸಿದ್ದರಾಮಯ್ಯಗೆ ಉದ್ಘಾಟಿಸುವ ಅವಕಾಶ

Published 13 ಆಗಸ್ಟ್ 2023, 6:57 IST
Last Updated 13 ಆಗಸ್ಟ್ 2023, 6:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅದು 2018ರ ಮಾರ್ಚ್ 28. ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್‌) ನಂದಿ ಕ್ರಾಸ್‌ ಬಳಿ ₹ 160 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಮೆಗಾ ಡೇರಿ ಉದ್ಘಾಟನೆ ಕೆಲವೇ ಕ್ಷಣಗಳಲ್ಲಿ ಆಗಲಿದೆ ಎನ್ನುವ ಸಮಯ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಗಾ ಡೇರಿ ಉದ್ಘಾಟನೆಗಾಗಿ ಬಂದಿದ್ದರು. 

ಸಿದ್ದರಾಮಯ್ಯ ಅವರು ಡೇರಿ ಆವರಣ ಪ್ರವೇಶಿಸುವ ಹೊತ್ತಿಗೆ ಅತ್ತ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಅವರು ರಾಜ್ಯ ವಿಧಾನಸಭಾ ಚುನಾವಣೆ ಮತದಾನ ದಿನಾಂಕ ಘೋಷಿಸಿದರು. ನೀತಿ ಸಂಹಿತೆ ಜಾರಿಗೆ ಬಂತು. ಆದ್ದರಿಂದ ಮುಖ್ಯಮಂತ್ರಿ ಡೇರಿ ಉದ್ಘಾಟನೆ ಮಾಡದೆ ಕಟ್ಟಡ ವೀಕ್ಷಣೆ ಮಾಡಿ ಮರಳಿದರು.

ಅಂದು ಮೆಗಾ ಡೇರಿ ಹಾಗೂ ಆಡಳಿತ ಕಚೇರಿ ಉದ್ಘಾಟಿಸದೆ ಮರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈಗ ಮೆಗಾ ಡೇರಿ ಉದ್ಘಾಟನೆಗೆ ಬರುತ್ತಿದ್ದಾರೆ. ಐದು ವರ್ಷಗಳಿಂದ ಉದ್ಘಾಟನೆ ಆಗದಿದ್ದರೂ  ಮೆಗಾ ಡೇರಿಯಲ್ಲಿ ಕೆಲಸ ಕಾರ್ಯಗಳು ನಡೆದಿದ್ದವು. ಮುಖ್ಯಮಂತ್ರಿ ಸೆ.12 ಅಥವಾ 14ಕ್ಕೆ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆಯಂತೆ. ಆಗ ಮೆಗಾ ಡೇರಿ ಉದ್ಘಾಟಿಸುವರು.

ಇತ್ತೀಚೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್ ಅವರಿಗೆ ಮೆಗಾ ಡೇರಿ ಉದ್ಘಾಟಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದರು.  

ಸರ್ಕಾರಿ ಕಾರು ವಾಪಸ್‌: 2018ರಲ್ಲಿ ಮೆಗಾ ಡೇರಿ ಉದ್ಘಾಟನೆಗೆ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗ್ಡೆ ನೀತಿ ಸಂಹಿತೆ ವಿಚಾರ ಗಮನಕ್ಕೆ ತರುತ್ತಿದ್ದಂತೆ ಮುಖ್ಯಮಂತ್ರಿ ಅವರು ಸರ್ಕಾರಿ ಕಾರು ಬಿಟ್ಟು, ಅಂದಿನ ಶಾಸಕ ಡಾ.ಕೆ.ಸುಧಾಕರ್ ಅವರ ಕಾರಿನಲ್ಲಿ ಚಿಕ್ಕಬಳ್ಳಾಪುರದತ್ತ ಪ್ರಯಾಣ ಬೆಳೆಸಿದರು.

ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿಯನ್ನು ನೀತಿ ಸಂಹಿತೆ ಕಾರಣಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ಕಡಿತಗೊಳಿಸಿ ವಾಪಸ್ ಕರೆಯಿಸಿಕೊಂಡರು. ಡೇರಿ ಕಟ್ಟಡದ ಸಮೀಪದಲ್ಲಿಯೇ ಆಯೋಜಿಸಿದ್ದ ಅದ್ದೂರಿ ವೇದಿಕೆ ಕಾರ್ಯಕ್ರಮ ಕೂಡ ನೀತಿ ಸಂಹಿತೆ ಕಾರಣಕ್ಕೆ ರದ್ದಾಯಿತು. ಇದರಿಂದಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕೋಚಿಮುಲ್‌ ಆಡಳಿತ ಮಂಡಳಿ ಪದಾಧಿಕಾರಿಗಳು, ದೂರದಿಂದ ಬಂದಿದ್ದ ಸಾವಿರಾರು ಜನರು ಬೇಸರಪಟ್ಟುಕೊಂಡರು.

ಈಗ ಅದ್ದೂರಿ ಕಾರ್ಯಕ್ರಮ: ನೀತಿ ಸಂಹಿತೆಯ ಛಾಯೆ ಕಾರಣದಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಈಗ ಮೆಗಾ ಡೇರಿಯನ್ನು ಅದ್ದೂರಿಯಾಗಿ ಉದ್ಘಾಟಿಸಬೇಕು ಎನ್ನುವ ಇಚ್ಛೆಯನ್ನು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ಮತ್ತು ಕಾಂಗ್ರೆಸ್ ಬೆಂಬಲಿತ ಕೋಚಿಮುಲ್ ನಿರ್ದೇಶಕರು ಹೊಂದಿದ್ದಾರೆ. ಈಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ  ಅದ್ದೂರಿ ಕಾರ್ಯಕ್ರಮದ ಮೂಲಕ ಮೆಗಾ ಡೇರಿ ಉದ್ಘಾಟಿಲಿದ್ದಾರೆ ಎನ್ನುತ್ತವೆ ಮೂಲಗಳು.

‘ಹಾಲಿನ ಪ್ಯಾಕಿಂಗ್ ಘಟಕಕ್ಕೆ ಮನವಿ’

ಅಂದು ಸಿದ್ದರಾಮಯ್ಯ ಅವರು ಮೆಗಾಡೇರಿ ಉದ್ಘಾಟನೆಗೆ ಬಂದರೂ ಉದ್ಘಾಟಿಸಲು ಅವಕಾಶ ಆಗಲಿಲ್ಲ. ಈಗ ಅವರಿಂದಲೇ ಮೆಗಾ ಡೇರಿ ಉದ್ಘಾಟಿಸಲಾಗುವುದು. ಮುಂದಿನ ದಿನಗಳಲ್ಲಿ ಕೋಚಿಮುಲ್ ವಿಭಜನೆ ಆಗುತ್ತದೆ ಚಿಮುಲ್ ರಚನೆ ಖಚಿತ. ನಮಗೆ ಹಾಲಿನ ಪ್ಯಾಕಿಂಗ್ ಘಟಕವಿಲ್ಲ. ಈ ಘಟಕಕ್ಕೆ ಅನುದಾನ ಮತ್ತು ಜಾಗ ನೀಡುವಂತೆ ಸಿ.ಎಂಗೆ ಮನವಿ ಮಾಡುತ್ತೇವೆ ಎಂದು ಚಿಕ್ಕಬಳ್ಳಾಪುರ ತಾಲ್ಲೂಕು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.  ಹಾಲಿನ ಪ್ಯಾಕಿಂಗ್ ಘಟಕ ಹಾಗೂ ಚಿಮುಲ್ ಕಾರ್ಯಾಚರಣೆಗೆ 10ರಿಂದ 15 ಎಕರೆ ಜಾಗ ಬೇಕು. ಮೆಗಾ ಡೇರಿ ಪಕ್ಕದಲ್ಲಿಯೇ ತೋಟಗಾರಿಕೆ ಇಲಾಖೆಯ ಜಮೀನು ಇದು. ಈ ಜಮೀನು ದೊರಕಿಸಿಕೊಡುವಂತೆ ಮನವಿ ಮಾಡುತ್ತೇವೆ ಎಂದರು.

ಉದ್ಘಾಟನೆ ಮರೆತ ಬಿಜೆಪಿ ಜೆಡಿಎಸ್!

2018ರಲ್ಲಿ ಚುನಾವಣಾ ನೀತಿ ಸಂಹಿತೆ ಕಾರಣ ಮೆಗಾ ಡೇರಿ ಉದ್ಘಾಟನೆ ಸಾಧ್ಯವಾಗಲಿಲ್ಲ. ಆದರೆ ಮುಂದೆ ಬಂದ ಎಚ್‌.ಡಿ.ಕುಮಾರಸ್ವಾಮಿ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿಯೂ ಮೆಗಾ ಡೇರಿ ಉದ್ಘಾಟನೆಯೇ ಆಗಲಿಲ್ಲ. ಕೆಲಸ ಕಾರ್ಯಗಳು ನಡೆಯುತ್ತಿದ್ದರೂ ಭವನ ಅಧಿಕೃತವಾಗಿ ಉದ್ಘಾಟನೆ ಆಗಲಿಲ್ಲ.  ಜಿಲ್ಲೆಯಲ್ಲಿ ಡಾ.ಕೆ.ಸುಧಾಕರ್ ಪ್ರಭಾವಿ ಸಚಿವರಾಗಿದ್ದರು. ಬಸವರಾಜ ಬೊಮ್ಮಾಯಿ ಕಡಿಮೆ ಅವಧಿಯಲ್ಲಿ ಹೆಚ್ಚು ಬಾರಿ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಎನಿಸಿದರೂ ಆದರೂ ಡೇರಿ ಉದ್ಘಾಟನೆಯತ್ತ ಚಿತ್ತ ಹರಿಸಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT