ಶನಿವಾರ, ನವೆಂಬರ್ 28, 2020
25 °C
ಬಿಡುಗಡೆಗೊಳ್ಳದ ಹೊಸ ಚಿತ್ರಗಳು, ಸೋಂಕಿನ ಭೀತಿಗೆ ಭಣಗುಡುತ್ತಿರುವ ಚಿತ್ರಮಂದಿರಗಳು

ಚಿಕ್ಕಬಳ್ಳಾಪುರ: ಥಿಯೇಟರ್‌ಗಳತ್ತ ಸುಳಿಯದ ಸಿನಿಮಾ ಪ್ರಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬರೀ ಕನ್ನಡ ಸಿನೆಮಾ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಜಿಲ್ಲಾಡಳಿತದ ಆದೇಶದ ಥಿಯೇಟರ್‌‌ಗಳ ಆದಾಯಕ್ಕೆ ಪೆಟ್ಟು ನೀಡುತ್ತಿತ್ತು. ಅದರೊಂದಿಗೆ ಈ ಬಾರಿ ಕೋವಿಡ್ 19 ಸಹ ಸೇರಿಕೊಂಡು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಗಡಿಭಾಗದ ಈ ಜಿಲ್ಲೆಯಲ್ಲಿ ವರ್ಷಪೂರ್ತಿ ಪೈಪೋಟಿಯಲ್ಲಿ ದಾಂಗುಡಿ ಇಡುವ ತೆಲುಗು ಚಿತ್ರಗಳಿಗೆ ನವೆಂಬರ್‌ ಬರುತ್ತಿದ್ದಂತೆ ಜಾಗೃತಗೊಳ್ಳುವ ಕನ್ನಡದ ‘ಪ್ರಜ್ಞೆ’ ಒಂದು ತಿಂಗಳು ತಡೆ ಒಡ್ಡುತ್ತದೆ. ಈ ವರ್ಷ ಇಂತಹ ಬಲವಂತದ ನಿರ್ಬಂಧಕ್ಕಿಂತಲೂ ಕೊರೊನಾ ವೈರಸ್‌ ಸೋಂಕಿನ ಭೀತಿ ಸಿನಿಮಾ ಪ್ರಿಯರನ್ನು ಥಿಯೇಟರ್‌‌ ಇಣುಕಿ ನೋಡದಂತೆ ಮಾಡಿದೆ.

ರಾಜ್ಯ ಸರ್ಕಾರ ಅ.15 ರಿಂದ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದರೂ, ಹೊಸ ಸಿನಿಮಾಗಳು ಬಿಡುಗಡೆಯಾಗದ ಪರಿಣಾಮ ಜಿಲ್ಲೆಯ ಬಹುತೇಕ ಚಿತ್ರಮಂದಿರಗಳ ಮಾಲೀಕರು ಸದ್ಯಕ್ಕೆ ಥಿಯೇಟರ್‌ಗಳನ್ನು ತೆರೆದಿಲ್ಲ. ಬಾಗಿಲು ತೆರೆದಿರುವ ಎರಡು ಚಿತ್ರಮಂದಿರಗಳು ಸಹ ಪ್ರೇಕ್ಷಕರಿಲ್ಲದೆ ಭಣಗುಡುತ್ತಿವೆ.

ನೆರೆಯ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಇನ್ನೂ ಚಿತ್ರಮಂದಿರಗಳು ಬಾಗಿಲು ತೆರೆಯದ ಕಾರಣ ಚಿತ್ರೋದ್ಯಮ ಚೇತರಿಕೆ ಕಂಡಿಲ್ಲ. ಹೊಸ ಚಿತ್ರಗಳು ತೆರೆಗೆ ಬರುತ್ತಿಲ್ಲ. ಅದು ಜಿಲ್ಲೆಯ ಚಿತ್ರಮಂದಿರಗಳ ಮೇಲೂ ಪರಿಣಾಮ ಬೀರಿದೆ. ಹಿಂದೆಲ್ಲ, ತೆಲುಗು ಚಿತ್ರಗಳಿಗೆ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಚಿತ್ರಮಂದಿರಗಳನ್ನು ಇವತ್ತು ಇಣುಕಿದರೆ ಬರೀ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತೇವೆ.

ಕೋವಿಡ್‌ ಕಾರಣಕ್ಕೆ ಚಿತ್ರೋದ್ಯಮ ಕೂಡ ಸ್ಥಗಿತಗೊಂಡ ಕಾರಣಕ್ಕೆ ಹೊಸ ಚಿತ್ರಗಳು ಬಿಡುಗಡೆಗೊಳ್ಳುತ್ತಿಲ್ಲ. ಇತ್ತೀಚೆಗೆ ಬಾಗಿಲು ತೆರೆದವರು ಸಹ ಹಳೆಯ ಸಿನಿಮಾಗಳನ್ನು ಮರು ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ, ಪ್ರೇಕ್ಷಕರ ‘ಬರ’ ಕಾಣಿಸಿಕೊಂಡು, ನಿತ್ಯದ ನಾಲ್ಕು ಆಟಗಳ ಪೈಕಿ ಎರಡು ಪ್ರದರ್ಶನಗಳು ಅನಿವಾರ್ಯವಾಗಿ ರದ್ದಾಗುತ್ತಿವೆ.

ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ 4, ಚಿಂತಾಮಣಿ 3, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ ತಲಾ 2 ಮತ್ತು ಗುಡಿಬಂಡೆ ತಾಲ್ಲೂಕು ಕೇಂದ್ರದಲ್ಲಿ 1 ಹೀಗೆ.. ಒಟ್ಟು 14 ಚಿತ್ರಮಂದಿರಗಳಿವೆ. ಈ ಪೈಕಿ ಸದ್ಯ ಚಿಕ್ಕಬಳ್ಳಾಪುರದ ಬಾಲಾಜಿ, ಗೌರಿಬಿದನೂರು ಅಭಿಲಾಷ ಥಿಯೇಟರ್‌‌ಗಳು ಮಾತ್ರ ಚಿತ್ರ ಪ್ರದರ್ಶಿಸುತ್ತಿವೆ.

500ಕ್ಕೂ ಮಿಕ್ಕಿ ಆಸನಗಳ ಸಾಮರ್ಥ್ಯದ ಈ ಚಿತ್ರಮಂದಿರಗಳಲ್ಲಿ ಇವತ್ತು ಬೆರಳೆಣಿಕೆ ಪ್ರೇಕ್ಷಕರು ಮಾತ್ರ ಚಿತ್ರ ವೀಕ್ಷಣೆಗೆ ಬರುತ್ತಿದ್ದಾರೆ. ಇದರಿಂದ ಥಿಯೇಟರ್‌‌ ಮಾಲೀಕರು ನಷ್ಟದ ಸರಿದೂಗಿಸುವುದು ಹೇಗೆ ಎಂಬ ಚಿಂತೆಯಲ್ಲೇ ಪ್ರದರ್ಶನ ಮುಂದುವರಿಸಿದ್ದಾರೆ.

‘ಕೋವಿಡ್‌ ನಿಯಂತ್ರಣಕ್ಕೆ ಬಂದು ಥಿಯೇಟರ್‌‌ ಬಾಗಿಲು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು ಕೇಳಿ ಸಮಾಧಾನಪಟ್ಟುಕೊಂಡಿದ್ದೆವು. ಆದರೆ, ಇವತ್ತು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುತ್ತಿಲ್ಲ. ನಮ್ಮಲ್ಲಿ 630 ಆಸನಗಳಿವೆ. ಆ ಪೈಕಿ ಬೆರಳೆಣಿಕೆ ಸೀಟುಗಳು ಭರ್ತಿಯಾಗುತ್ತಿಲ್ಲ’ ಎಂದು ಚಿಕ್ಕಬಳ್ಳಾಪುರದ ಬಾಲಾಜಿ ಚಿತ್ರಮಂದಿರದ ವ್ಯವಸ್ಥಾಪಕ ವೇಣುಗೋಪಾಲ್ ಅಳಲು ತೋಡಿಕೊಂಡರು.

‘ನಿತ್ಯ ನಮಗೆ ಸುಮಾರು ₹12 ಸಾವಿರ ಖರ್ಚಿದೆ. ಆದರೆ ಇವತ್ತು ದಿನದ ಆದಾಯ ₹5 ಸಾವಿರ ದಾಟುತ್ತಿಲ್ಲ. ಪ್ರೇಕ್ಷಕರು ಪುನಃ ಚಿತ್ರಮಂದಿರದತ್ತ ಬರುತ್ತಾರೆ ಎಂಬ ಆಸೆಯಿಂದ ಪುನಃ ಥಿಯೇಟರ್‌‌ ಆರಂಭಿಸಿದ್ದೇವೆ. ಆದರೆ ಪ್ರೇಕ್ಷಕರಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ’ ಎಂದು ತಿಳಿಸಿದರು.

‘ಪ್ರತಿ ವರ್ಷ ನವೆಂಬರ್‌ನಲ್ಲಿ ಉತ್ತಮ ಕನ್ನಡ ಚಿತ್ರಗಳು ತೆರೆಗೆ ಬರುವುದಿಲ್ಲ. ಸಣ್ಣಪುಟ್ಟ ಚಿತ್ರಗಳಿಗೆ ಪ್ರೇಕ್ಷಕರೇ ಬರುವುದಿಲ್ಲ. ಪರಿಸ್ಥಿತಿ ಹೀಗಿರುವಾಗಲೇ ಕೋವಿಡ್‌ ಈ ಬಾರಿ ಚಿತ್ರಮಂದಿರ ನೆಚ್ಚಿಕೊಂಡು ಬದುಕುವವರಿಗೆ ಮತ್ತಷ್ಟು ಸಂಕಷ್ಟ ಉಂಟು ಮಾಡಿದೆ. ಹೀಗಾಗಿ, ಬಹುತೇಕ ಮಾಲೀಕರು ಥಿಯೇಟರ್‌‌ಗಳನ್ನೇ ತೆರೆದಿಲ್ಲ’ ಎಂದು ಚಿಕ್ಕಬಳ್ಳಾಪುರದ ಕೃಷ್ಣ ಚಿತ್ರಮಂದಿರದ ಸೂಪರ್‌ವೈಸರ್ ನರೇಂದ್ರ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು