ಬುಧವಾರ, ನವೆಂಬರ್ 25, 2020
24 °C
ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಉಪಾಧ್ಯಕ್ಷೆ; ಫಲಿಸದ ಬಿಜೆಪಿ ತಂತ್ರ

ಗೌರಿಬಿದನೂರು: ಕಾಂಗ್ರೆಸ್‌ಗೆ ನಗರಸಭೆ ಅಧ್ಯಕ್ಷ ಗಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ನಗರದಲ್ಲಿ ಭಾನುವಾರ ನಡೆದ ಚುನಾವನೆಯಲ್ಲಿ ನಗರಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್‌ ಸದಸ್ಯೆ ಕೆ.ಎಂ. ಗಾಯತ್ರಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಸದಸ್ಯೆ ಭಾಗ್ಯಮ್ಮ ಆಯ್ಕೆಯಾದರು.

ಒಟ್ಟು 31 ಸದಸ್ಯರಿರುವ ನಗರಸಭೆಯಲ್ಲಿ, ಕಾಂಗ್ರೆಸ್ 16, ಬಿಜೆಪಿ 3, ಜೆಡಿಎಸ್ 6 ಹಾಗೂ 6 ಪಕ್ಷೇತರ ಸದಸ್ಯರಿದ್ದರು. ಇದರಲ್ಲಿ 16 ಸದಸ್ಯರ ಬಲವಿರುವ ಕಾಂಗ್ರೆಸ್ ಒಂದು ಬಣವಾದರೆ, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಸೇರಿ 15 ಸದಸ್ಯರ ಬಣವಿರುವ ಪುಟ್ಟಸ್ವಾಮಿಗೌಡರ ಬಣವು ಅಧಿಕಾರದ ಚುಕ್ಕಾಣಿ ಹಿಡಿಯಲು ತೀವ್ರ ಪೈಪೋಟಿ ನಡೆಸಿತ್ತು. ಜತೆಗೆ ಕಾಂಗ್ರೆಸ್ ಸದಸ್ಯರನ್ನು ತಮ್ಮ ಬಣದತ್ತ ಸೆಳೆಯಲು ತೆರೆಮರೆಯ ಹಿಂದೆ ರಾಜಕೀಯ ತಂತ್ರಗಾರಿಕೆ ನಡೆಸಿತ್ತು.

ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿತ್ತು. ಕಾಂಗ್ರೆಸ್ ಪಾಳಯದಲ್ಲೆ 26ನೇ ವಾರ್ಡಿನ ಸದಸ್ಯೆ ಕೆ.ಎಂ. ಗಾಯತ್ರಿ ಹಾಗೂ 1ನೇ ವಾರ್ಡಿನ ಸದಸ್ಯೆ ಎಸ್.ರಾಜೇಶ್ವರಿ ಇಬ್ಬರೂ ಆಕಾಂಕ್ಷಿಯಾಗಿದ್ದರು. ಆದರೆ ಶಾಸಕ ಎನ್.ಎಚ್‌.ಶಿವಶಂಕರರೆಡ್ಡಿ ಯವರು ನೀಡಿದ ಭರವಸೆಯ ಮೇರೆಗೆ ಎಸ್.ರಾಜೇಶ್ವರಿ ಕಣದಿಂದ ಹಿಂದೆ ಸರಿದ ಪರಿಣಾಮವಾಗಿ ಕೆ.ಎಂ‌.ಗಾಯತ್ರಿ ಮಾತ್ರ ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಗಾಯತ್ರಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ರಾಜೇಶ್ವರಿ ಹಾಗೂ ಪುಟ್ಟಸ್ವಾಮಿಗೌಡರ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ 20ನೇ ವಾರ್ಡಿನ ವರಲಕ್ಷ್ಮಿ ಮಂಜುನಾಥ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 23ನೇ ವಾರ್ಡಿನ ಅಶ್ವತ್ಥಮ್ಮ ಹಾಗೂ ಪಕ್ಷೇತರ ಸದಸ್ಯೆ ಭಾಗ್ಯಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ಸಲ್ಲಿಸುವ ಅವಧಿ ಮುಕ್ತಾಯವಾದ ಬಳಿಕ ಪ್ರವಾಸದಲ್ಲಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿಯವರ ಬೆಂಗಾವಲಿನಲ್ಲಿ 16 ಮಂದಿ ಸದಸ್ಯರು ನೇರವಾಗಿ ನಗರಸಭೆಯ ಕಚೇರಿಗೆ ಬಂದರು. ನಂತರ ಗೌಡರ ಬಣದ 15 ಸದಸ್ಯರು ಸಂಸದ ಬಿ.ಎನ್‌.ಬಚ್ಚೇಗೌಡ ರವರ ನೇತೃತ್ವದಲ್ಲಿ ನಗರಸಭೆಯನ್ನು ಪ್ರವೇಶಿಸಿದರು.

ಜಿಲ್ಲಾ ಉಪವಿಭಾಗಾಧಿಕಾರಿ ರಘುನಂಧನ್ ರವರ ನೇತೃತ್ವದಲ್ಲಿ ‌ನಡೆದ ಚುನಾವಣೆಯಲ್ಲಿ 17 ಮತಗಳನ್ನು ಪಡೆದು ನೂತನ ಅಧ್ಯಕ್ಷರಾಗಿ ಕೆ.ಎಂ.ಗಾಯತ್ರಿ ಮತ್ತು ಉಪಾಧ್ಯಕ್ಷರಾಗಿ ಭಾಗ್ಯಮ್ಮ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

‘ನಗರದ ಎಲ್ಲ ಜನತೆಯ ಆಶೀರ್ವಾದ ಹಾಗೂ 31 ಮಂದಿ ಸದಸ್ಯರ ಸಹಕಾರದಿಂದ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಗಾಗಿ ಯಾವುದೇ ಭೇದಭಾವವಿಲ್ಲದೆ, ತಾರತಮ್ಯ ತೋರದೆ ಎಲ್ಲರೂ ನಮ್ಮವರೇ ಎಂದು ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು. ಇದಕ್ಕಾಗಿ ಎಲ್ಲ ಸದಸ್ಯರು ಜೊತೆಯಾಗಿರುತ್ತೇವೆ’ ಎಂದು ನಗರಸಭೆ ಅಧ್ಯಕ್ಷೆ ಕೆ.ಎಂ‌.ಗಾಯತ್ರಿ ತಿಳಿಸಿದರು.

ಹಣ ವಸೂಲಿ ಮಾಡಬೇಡಿ...

‘ನಗರವನ್ನು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರಸಭೆಯ ವ್ಯಾಪ್ತಿಗೆ ಒಳಪಡುವ ಎಲ್ಲ ವಾರ್ಡುಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದ್ದೇವೆ. ಅಧಿಕಾರ ಕೈ ಸೇರಿದ ಬಳಿಕ ಹಣ ಮಾಡುವ ಚಿಂತನೆ ಬರಬಾರದು. ನಗರಸಭೆಯು ಖಾತೆಗಳಿಗೆ ಹಣ ವಸೂಲಿ ಮಾಡುವುದು, ಲೇಔಟ್ ಗಳಲ್ಲಿ ದಂಧೆ ಮಾಡುವುದು, ಬಡವರಿಗೆ ಶೋಷಣೆ ಮಾಡುವ ಕೇಂದ್ರವಾಗಬಾರದು. ಸ್ವಚ್ಛ, ಪಾರದರ್ಶಕವಾಗಿ ಕೈ ಮತ್ತು ಬಾಯಿ ಶುದ್ಧವಾಗಿರಿಸಿಕೊಂಡು ಮಾಡುವ ರಾಜಕಾರದಿಂದ ಮಾತ್ರ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯವಾಗುತ್ತದೆ’ ಎಂದು ಶಾಸಕ ಎನ್.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

ಅಭಿವೃದ್ಧಿಯೇ ಮಂತ್ರವಾಗಲಿ...

‘ನಗರಸಭೆ ಚುನಾವಣೆಯಲ್ಲಿ ಒಂದು ಮತ ನೀಡುವ ಅವಕಾಶ ನನಗಿದ್ದು, ಅದನ್ನು ಜವಾಬ್ದಾರಿಯುತವಾಗಿ ಪೂರೈಸಿದ್ದೇನೆ. ಶಾಂತಿಯುತವಾಗಿ ನಡೆದ ಚುನಾವಣೆಯಲ್ಲಿ ಎಲ್ಲ ಸದಸ್ಯರೂ ಸಂತೋಷದಿಂದ ಭಾಗವಹಿಸಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಜನತೆಗೆ ಒದಗಿಸುವ ಬದ್ಧತೆಯನ್ನು ಹೊಂದಬೇಕಾಗಿದೆ. ಅಭಿವೃದ್ಧಿಯ ಮೂಲ ಮಂತ್ರದೊಂದಿಗೆ 31 ಮಂದಿ ಸದಸ್ಯರೂ ಒಮ್ಮತದಿಂದ ಅಧಿಕಾರ ನಡೆಸಬೇಕಾಗಿದೆ ’ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು