ಭಾನುವಾರ, ಜೂನ್ 13, 2021
25 °C
ರಾಜ್ಯದಲ್ಲಿ 83 ಮಂದಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಾವು

ಹಳ್ಳಿಗಳಲ್ಲಿ ಹರಡಿದ ಕೊರೊನಾ ಸೋಂಕು: ಭಯದಲ್ಲಿ ಪಡಿತರ ವಿತರಕರು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಅದರಲ್ಲಿಯೂ ಹೆಚ್ಚು ಜನಸಂಖ್ಯೆಯುಳ್ಳ ಹಳ್ಳಿಗಳಿಗೆ ಈಗಾಗಲೇ ಕೊರೊನಾ ಅಲೆ ಹಬ್ಬಿದೆ. ಸೋಂಕಿನ ಹೆಚ್ಚಳ ಪಡಿತರ ವಿತರಕರಲ್ಲಿ ಭಯ ಮೂಡಿಸಿದೆ.

ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ಕೃಷ್ಣಪ್ಪ ಅವರ ಪ್ರಕಾರ ರಾಜ್ಯದಲ್ಲಿ ಈಗಾಗಲೇ 83 ಮಂದಿ ನ್ಯಾಯಬೆಲೆ ಅಂಗಡಿ ಮಾಲೀಕರು ಮೃತಪಟ್ಟಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟದಲ್ಲಿಯೂ ಪಡಿತರ ವಿತರಕರೊಬ್ಬರು ಮೃತಪಟ್ಟಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ಕೆಲವು ವಿತರಕರು ಸೋಂಕಿನಿಂದ ಗುಣವಾಗುತ್ತಿದ್ದಾರೆ. ಈ ಎಲ್ಲವೂ ಜಿಲ್ಲೆಯ ಪಡಿತರ ವಿತರಕರನ್ನು ಕಂಗಾಲಾಗಿಸಿದೆ.

ಜಿಲ್ಲೆಯಲ್ಲಿ 540 ಪಡಿತರ ವಿತರಣ ಕೇಂದ್ರಗಳಿವೆ (ನ್ಯಾಯಬೆಲೆ ಅಂಗಡಿಗಳು). 3,21,581 ಕುಟುಂಬಗಳಿಗೆ ಈ ಕೇಂದ್ರಗಳ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಸರ್ಕಾರದ ಈ ಪಡಿತರ ವ್ಯವಸ್ಥೆಯನ್ನೇ ನಂಬಿ ರಾಜ್ಯದಲ್ಲಿ ಕೋಟ್ಯಂತರ ಕುಟುಂಬಗಳು ಬದುಕು ಸಾಗಿಸುತ್ತಿವೆ.

ಈಗಾಗಲೇ ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ, ಗುಡಿಬಂಡೆ ತಾಲ್ಲೂಕಿನ ಪಡಿತರ ವಿತರಣ ಕೇಂದ್ರದ ಮಾಲೀಕರು ಆಹಾರ ಪದಾರ್ಥಗಳ ಎತ್ತುವಳಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಪಡಿತರ ವಿತರಕರು ಎತ್ತುವಳಿಗೆ ಮುಂದಾಗಿದ್ದಾರೆ. 

ಪಿಟಿಪಿಗೆ ಮನವಿ: ಕೋವಿಡ್‌ ಹಿನ್ನೆಲೆಯಲ್ಲಿ  ಪಡಿತರ ಅಂಗಡಿಗಳಲ್ಲಿ ಬಯೊಮೆಟ್ರಿಕ್‌ ಪದ್ಧತಿ ರದ್ದುಪಡಿಸಿ, ಒಟಿಪಿ ಮೂಲಕ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಬೇಕು ಎನ್ನುವ ಕೂಗು ಸಹ ಜಿಲ್ಲೆಯ ಪಡಿತರ ವಿತರಕರಿಂದ ಕೇಳಿಬರುತ್ತಿದೆ.

ಬಯೊಮೆಟ್ರಿಕ್‌ನಡಿ ಪಡಿತರಕ್ಕಾಗಿ ಗ್ರಾಹಕರು ಬೆರಳ ಮುದ್ರೆ ನೀಡಬೇಕು. ಒಂದು ವೇಳೆ ಅವರಿಗೆ ಸೋಂಕು ಇದ್ದಲ್ಲಿ ಅದು ಪಡಿತರ ವಿತರಣ ಕೇಂದ್ರದಲ್ಲಿ ಕೆಲಸ ಮಾಡುವವರಿಗೂ ತಗುಲುವ ಸಾಧ್ಯತೆ ಇದೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಮೊಬೈಲ್ ಒಟಿಪಿ ಮೂಲಕ ವಿತರಣೆ ಮಾಡುವ ಪದ್ಧತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿತ್ತು. ಎರಡನೇ ಅಲೆಯ ಈ ಸಂದರ್ಭದಲ್ಲಿಯೂ ಒಟಿಪಿ ಮೂಲಕ ಪರಿತರ ವಿತರಿಸಲು ಸರ್ಕಾರ ಆದೇಶ ಜಾರಿಗೊಳಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

ಹೈಕೋರ್ಟ್‌ಗೆ ಮನವಿ: ಹೈಕೋರ್ಟ್ ವಕೀಲ ತುಮಕೂರಿನ ಎಲ್‌.ರಮೇಶ್ ನಾಯಕ್, ಲಾಕ್‌ಡೌನ್ ಕಾರಣದಿಂದ ಪಡಿತರವನ್ನು ಪಡಿತರ ಚೀಟಿದಾರರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಸಲ್ಲಿಸಿದ್ದಾರೆ.

‘ಮನೆ ಮನೆ ಬಾಗಿಲಿಗೆ ಪಡಿತ ತಲುಪಿಸಬೇಕು ಎನ್ನುವ ನಿರ್ದೇಶನವನ್ನು ಸರ್ಕಾರ ನೀಡಿಲ್ಲ. ಸರ್ಕಾರ ಮತ್ತು ಮೇಲಧಿಕಾರಿಗಳು ಸೂಚನೆ ಪಾಲಿಸುತ್ತೇವೆ. ಹಳ್ಳಿಗಳಲ್ಲಿ ಸೋಂಕು ಹೆಚ್ಚಿರುವ ಕಾರಣ ಬಯೊಮೆಟ್ರಿಕ್ ಬದಲು ಮೊಬೈಲ್ ಒಟಿಪಿ ಬಳಕೆಗೆ ಅವಕಾಶ ನೀಡಬೇಕು ಎನ್ನುವುದು ನಮ್ಮ ಮನವಿ’ ಎಂದು ಪಡಿತರ ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸುವರು.

ಮಾಸ್ಕ್ ಧರಿಸಬೇಕು, ಸ್ಯಾನಿಟೈಸ್ ಬಳಸಬೇಕು, ಅಂತರ ಕಾಪಾಡಬೇಕು ಹೀಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ನಾನು ವಿತರಕರಿಗೆ ತಿಳಿಸಿದ್ದೇವೆ. ವಿತರಣೆ ವೇಳೆ ನೂಕು ನುಗ್ಗಲಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿ ದಿನ 100 ಕಾರ್ಡ್‌ಗಳಿಗೆ ಪಡಿತರ ಕೊಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.

ನಮ್ಮ ವಿತರಕರು ಸಹ ಪ್ರಾಣವನ್ನು ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾಗಿದೆ. ಯಾವುದೇ ನ್ಯಾಯಬೆಲೆ ಅಂಗಡಿಗೆ ಹೆಚ್ಚು ಹಳ್ಳಿಗಳು ಒಳಪಟ್ಟರೆ ಅಲ್ಲಿ ಪ್ರತಿ ದಿನ ಒಂದೊಂದು ಹಳ್ಳಿಗಳಿಗೆ ಪಡಿತರ ನೀಡಿದರೆ ಒಳ್ಳೆಯದು ಎಂದರು.

ಸರ್ಕಾರದ ಆದೇಶ ಪಾಲನೆ

‘ಪಡಿತರ ಚೀಟಿದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ಈ ಬಗ್ಗೆ ಈಗಾಗಲೇ ವಾಟ್ಯ್‌ಆ್ಯಪ್ ಗ್ರೂಪ್‌ನಲ್ಲಿ ಜಿಲ್ಲೆಯ ವಿತರಕರಿಗೆ ತಿಳಿಸಿದ್ದೇವೆ. ಜನರಿಗೆ ಇಂತಹ ಸಂದರ್ಭದಲ್ಲಿ ಪಡಿತರ ಅತ್ಯಗತ್ಯ. ಜನರ ಹಿತ  ಕಾಪಾಡುವುದು ನಮಗೆ ಮುಖ್ಯ. ನಮಗೂ ಆಂತಕ ಇದ್ದೇ ಇದೆ. ಸರ್ಕಾರದ ಮಾರ್ಗಸೂಚಿಗಳನ್ನು ಮತ್ತು ಆದೇಶಗಳನ್ನು ನಾವು ತಪ್ಪದೇ ಪಾಲಿಸುತ್ತೇವೆ’ ಎನ್ನುವರು ಪಡಿತರ ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಮಚಂದ್ರ.

***

ತಾಲ್ಲೂಕು;ಪಡಿತರ ಅಂಗಡಿಗಳ ಸಂಖ್ಯೆ

ಬಾಗೇಪಲ್ಲಿ;102
ಚಿಕ್ಕಬಳ್ಳಾಪುರ;93
ಚಿಂತಾಮಣಿ;124
ಗೌರಿಬಿದನೂರು;111
ಗುಡಿಬಂಡೆ;26
ಶಿಡ್ಲಘಟ್ಟ;84
ಒಟ್ಟು;540

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು