ಚಿಕ್ಕಬಳ್ಳಾಪುರ: ಚಿಂತಾಮಣಿ ಉಪನೋಂದಣಾಧಿಕಾರಿಯಾಗಿದ್ದ ನಾರಾಯಣಪ್ಪ ಅವರು ತಾವು ಕುಳಿತುಕೊಳ್ಳುತ್ತಿದ್ದ ಕುರ್ಚಿಯ ಮೇಲ್ಭಾಗದಲ್ಲಿ ‘ಲಂಚ ಸ್ವೀಕರಿಸುವುದಿಲ್ಲ’ ಎನ್ನುವ ಫಲಕ ಅಳವಡಿಸಿದ್ದರು. ಅವರ ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ಅಪಾರವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ವರ್ಗಾವಣೆ ನಂತರ ಈಗ ಆ ಫಲಕವನ್ನು ತೆಗೆದು ಹಾಕಲಾಗಿದೆ.

ಈ ವಿಚಾರವು ನಗರದ ಜಿ.ಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಕಾವೇರುವಂತೆ ಮಾಡಿತು.

‘ನಾರಾಯಣಪ್ಪ ಅವರು ಬೇರೆ ಕಡೆ ವರ್ಗಾವಣೆಯಾಗಿದ್ದರು. ಆದರೆ ನಾನೇ ಕಂದಾಯ ಸಚಿವರ ಜೊತೆ ಮಾತುಕತೆ ನಡೆಸಿ ಅವರನ್ನು ಒಂದು ವರ್ಷ ಮತ್ತೆ ಚಿಂತಾಮಣಿಯಲ್ಲಿ ಉಳಿಸಿಕೊಂಡಿದ್ದೆ. ನಂತರ ಅವರಿಗೆ ಬಡ್ತಿ ದೊರೆಯಿತು. ಅವರು ವರ್ಗಾವಣೆಯಾದರು. ನಾರಾಯಣಪ್ಪ ಅವರು ‘ನಾನು ಲಂಚ ಸ್ವೀಕರಿಸುವುದಿಲ್ಲ’ ಎಂದು ತಾವು ಕುಳಿತುಕೊಳ್ಳುತ್ತಿದ್ದ ಕುರ್ಚಿಯ ಮೇಲ್ಭಾಗದಲ್ಲಿ ಫಲಕ ಹಾಕಿಸಿದ್ದರು. ಅವರು ವರ್ಗಾವಣೆಯಾದ ತರುವಾಯ ಆ ಫಲಕ ತೆಗೆಯಲಾಗಿದೆ. ಅಂದರೆ ಈಗ ಲಂಚ ಪಡೆಯುತ್ತೀರಿ ಎಂದು ಅರ್ಥವೇ ಎಂದು ಜಿಲ್ಲಾ ನೋಂದಣಾಧಿಕಾರಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಶ್ನಿಸಿದರು.

ಜಿಲ್ಲೆಯ ಎಲ್ಲ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಂಚದ ಹಾವಳಿ ಹೆಚ್ಚಿದೆ. ಈ ಬಗ್ಗೆ ದೂರುಗಳು ಬರುತ್ತಿವೆ. ಎಲ್ಲ ಕಚೇರಿಯಲ್ಲಿ ಮತ್ತು ಉಪನೋಂದಣಾಧಿಕಾರಿ ಕುರ್ಚಿಯ ಮೇಲ್ಭಾಗದಲ್ಲಿ ಲಂಚ ಪಡೆಯುವುದಿಲ್ಲ ಎಂದು ಫಲಕ ಹಾಕಬೇಕು. ಒಂದು ವೇಳೆ ಲಂಚ ಪಡೆದರೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಅವರ ಮೊಬೈಲ್ ನಂಬರ್ ನಮೂದಿಸಬೇಕು ಎಂದು ಸೂಚಿಸಿದರು.

ಲೋಕಾಯುಕ್ತರ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಉಪನೋಂದಣಾಧಿಕಾರಿಗಳ ಕಚೇರಿಯ ಫಲಕದಲ್ಲಿ ಜಿಲ್ಲಾಧಿಕಾರಿ ಅವರ ಮೊಬೈಲ್ ಸಂಖ್ಯೆಯೂ ಇರಲಿ. ದೂರುಗಳು ಬಂದರೆ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.

ಸಾದಲಿ ಹೋಬಳಿ ಬೈರೇನಹಳ್ಳಿ ಬಳಿ ಒಂದೇ ಕುಟುಂಬಕ್ಕೆ ಗಣಿಗಾರಿಕೆಗೆ 60 ಎಕರೆ ಸರ್ಕಾರಿ ಗೋಮಾಳ ಮಂಜೂರಾಗಿದೆ. ಈ ವೇಳೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ಸಭೆಯ ಗಮನ ಸೆಳೆದರು.

ಈ ವಿಚಾರವು ಸಭೆಯನ್ನು ಕಾವೇರಿಸಿತು. ಒಂದು ಹಂತದಲ್ಲಿ ಶಾಸಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪ ಹೊರಿಸಿದರು. ಭೂವಿಜ್ಞಾನಿ ಅಕ್ರಂ ಪಾಷಾ ಅವರನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡು ಗೂಂಡಾ ರೀತಿ ವರ್ತಿಸುತ್ತಿದ್ದಾರೆ ಎಂದರು.

‘ಒಂದೇ ಕುಟುಂಬಕ್ಕೆ ಗಣಿಗಾರಿಕೆಗಾಗಿ 60.27 ಎಕರೆ ಮಂಜೂರಾಗಿದೆ. ಇಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ. ನಾನು ವಿಧಾನಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪಿಸಿದ್ದೇನೆ. ಇಲ್ಲಿ ಜಮೀನು ಮಂಜೂರು ಆದೇಶವನ್ನು ವಜಾ ಮಾಡಬೇಕು’ ಎಂದು ರವಿಕುಮಾರ್ ಕೋರಿದರು.

ಈಗಾಗಲೇ 18 ಎಕರೆ ವಜಾ ಆಗಿದೆ. ಸರ್ಕಾರಿ ಜಾಗದಲ್ಲಿಯೇ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇಷ್ಟೆಲ್ಲ ಅಕ್ರಮಕ್ಕೆ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಾರಣ ಎಂದು ಆರೋಪಿಸಿದರು.

ಆಗ ಮಧ್ಯಪ್ರವೇಶಿಸಿದ ಸಚಿವರು, ‘ಈ ಬಗ್ಗೆ ತನಿಖೆ ಆಗಲಿ. ಭೂ ಪರಿವರ್ತನೆ ವೇಳೆ ಅವರು ತಪ್ಪು ಮಾಹಿತಿ ನೀಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಬೇಕು. ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಪರಿಶೀಲಿಸಿ ವರದಿ ನೀಡಿ’ ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು. ಭೂ ವಿಜ್ಞಾನಿ ಅಕ್ರಂ ಪಾಷಾಗೆ ಶಿಡ್ಲಘಟ್ಟದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಮತ್ತೊಬ್ಬರನ್ನು ನೇಮಿಸುವಂತೆಯೂ ನಿರ್ದೇಶಿಸಿದರು.

ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದರೆ ತಕ್ಷಣವೇ ತೆರವುಗೊಳಿಸಬೇಕು. ನಿಮಗೆ (ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ) ಈ ವಿಚಾರವಾಗಿ ಯಾರಾದರೂ ಒತ್ತಡ ಹೇರಿದರೆ ನನಗೆ ತಿಳಿಸಿ ನಾನು ಅವರ ಜೊತೆ ಮಾತನಾಡುತ್ತೇವೆ ಎಂದು ಸಚಿವರು ಹೇಳಿದರು.

ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿಯಲ್ಲಿ ಈ ಹಿಂದಿನಿಂದಲೂ ಕ್ರಷರ್ಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಈಗ ಗೌರಿಬಿದನೂರಿಗೂ ಕಾಲಿಡುತ್ತಿದ್ದಾರೆ. ಶಿಡ್ಲಘಟ್ಟ ಮತ್ತು ಚಿಂತಾಮಣಿಯಲ್ಲಿ ಗಣಿಗಾರಿಕೆಗೆ ಜನರೇ ಒಪ್ಪುವುದಿಲ್ಲ. ರಾಜಕಾರಣಿಗಳೇ ಕ್ರಷರ್ ಮಾಡಿದರೆ ಇನ್ನೇನು ಮಾಡಲು ಸಾಧ್ಯ ಎಂದರು.

ಕೃಷಿ, ರೇಷ್ಮೆ, ಪಶುಸಂಗೋಪನೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ವಿಚಾರಗಳು ಪ್ರಮುಖವಾಗಿ ಚರ್ಚೆಯಾದವು.

ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ ಸಿಇಒ ಡಾ.ವೈ. ನವೀನ್ ಭಟ್, ಡಿಎಫ್ಒ ಗಿರೀಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಸೂರಜ್ ಹೆಗ್ಡೆ, ಜಿಲ್ಲಾ ಅಧ್ಯಕ್ಷ ಯಲುವಳ್ಳಿ ರಮೇಶ್ ವೇದಿಕೆಯಲ್ಲಿ ಇದ್ದರು.

27ರಂದು ಜಿಲ್ಲೆಗೆ ಮುಖ್ಯಮಂತ್ರಿ ಶಿಡ್ಲಘಟ್ಟದ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅ.27ರಂದು ಶಿಡ್ಲಘಟ್ಟಕ್ಕೆ ಬರಲಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿಲ್ಲ. ಕೆರೆಗಳಲ್ಲಿ ನೀರಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಈ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸುತ್ತೇವೆ ಎಂದು ಹೇಳಿದರು.

‘ಪರೀಕ್ಷೆಗೆ 65 ಮಾದರಿ ರವಾನೆ’

ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಯ ವಿಚಾರವಾಗಿ ಸಭೆಯಲ್ಲಿ ಚರ್ಚೆಗಳು ನಡೆದವು. ಆಗ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ‘ಭಾರದ ಲೋಹಗಳು ಮಣ್ಣಿನಲ್ಲಿ ಇವೆಯೇ ಎನ್ನುವುದನ್ನು ತಿಳಿಯಲು ಎಚ್.ಎನ್.ವ್ಯಾಲಿ ನೀರು ತುಂಬುತ್ತಿರುವ ಕೆರೆಗಳ ಸುತ್ತಲಿನ ಜಮೀನುಗಳ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದರು. ಒಟ್ಟು 65 ಮಾದರಿಗಳ ಮಣ್ಣನ್ನು ಪರೀಕ್ಷೆಗೆ ಕಳುಹಿಸಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.