ಸೋಮವಾರ, ಜನವರಿ 24, 2022
29 °C

ಗೌರೀಬಿದನೂರು: ನಿರ್ಬಂಧದ ನಡುವೆಯೂ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರೀಬಿದನೂರು: ತಾಲ್ಲೂಕಿನಲ್ಲಿ ಕೋವಿಡ್‌ ನಿರ್ಬಂಧಗಳ ನಡುವೆಯೂ ಧಾರ್ಮಿಕ ಕ್ಷೇತ್ರವಾದ ಮುದುಗಾನುಕುಂಟೆ ಶ್ರೀಗಂಗಾಭಾಗೀರಥಿ ದೇವಾಲಯದಲ್ಲಿ ಭಕ್ತರು ಸಾಮೂಹಿಕವಾಗಿ ಪೂಜೆ ನಡೆಸಿದರು.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ 'ಎ' ವರ್ಗದ ದೇವಾಲಯ ಇದಾಗಿದ್ದು,  ಪ್ರತಿ ಸೋಮವಾರ ಮಾತ್ರ ವಿಶೇಷ ಪೂಜಾ ಕೈಂಕಾರ್ಯಗಳು ನಡೆಯುತ್ತವೆ. ಕೋವಿಡ್ ‌ಮೂರನೇ ಅಲೆಯ ಪರಿಣಾಮವಾಗಿ ಸೋಮವಾರ ಕ್ಷೇತ್ರದ ಆವರಣದಲ್ಲಿ ಭಕ್ತಾದಿಗಳ ಪೂಜಾ ಕೈಂಕಾರ್ಯಗಳು ನಡೆಯಲು ಅವಕಾಶ ನೀಡದಂತೆ ತಹಶೀಲ್ದಾರ್‌ ‌ಆದೇಶ ನೀಡಿದ್ದರು. ಆದರೂ ದೂರದ ಊರುಗಳಿಂದ ಕ್ಷೇತ್ರಕ್ಕೆ ‌ಆಗಮಿಸಿದ‌ ಭಕ್ತಾದಿಗಳು ಸಮೀಪದಲ್ಲಿದ್ದ ಅರಳೀಕಟ್ಟೆಗೆ ಪೂಜೆ ಸಲ್ಲಿಸಿ ತೆರಳಿದ್ದಾರೆ.

ಪ್ರಸ್ತುತ ಕೋವಿಡ್ 19 ರೂಪಾಂತರಿ 'ಓಮಿಕ್ರಾನ್ ' ಸಾಂಕ್ರಾಮಿಕವು ತೀವ್ರವಾಗಿ ಹರಡುತ್ತಿರುವುದರಿಂದ ದೇವಸ್ಥಾನದಲ್ಲಿ ಪ್ರತಿ ಸೋಮವಾರದ ವಿಶೇಷ ಪೂಜೆ ರದ್ದುಪಡಿಸಲಾಗಿದೆ. ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ  ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಿಂದೂಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತಹ ಭಕ್ತಾದಿಗಳು ದೇವಸ್ಥಾನದ ಹೊರಗಡೆ ಇರುವ ಅರಳಿ ಮರಕ್ಕೆ ಪೊಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ.

ದೇವಾಲಯದ ಪಾರುಪತ್ಯೆದಾರ ಕಿರಣ್ ಸಾಯಿ ಮಾತನಾಡಿ, ‘ಸೋಮವಾರ ಬೆಳಗಿನ ಜಾವ 5.30 ರಿಂದ ನಮ್ಮ ಸಿಬ್ಬಂದಿ, ಪೊಲಿಸ್ ಇಲಾಖೆ, ಕಂದಾಯ ಇಲಾಖೆಯ ಸಹಾಯ ಪಡೆದು ದೇವಸ್ಥಾನಕ್ಕೆ ಭಕ್ತಾದಿಗಳು ಬರದಂತೆ ನಿರ್ಬಂಧ ಹೇರಿದ್ದೆವು. ಈ ನಿರ್ಬಂಧವನ್ನು ಲೆಕ್ಕಿಸದೆ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಕೋವಿಡ್ ನಿಯಮಾಳಿಗಳ‌ ಪ್ರಕಾರ ಕ್ಷೇತ್ರದಲ್ಲಿ ಪೂಜಾ ಚಟುವಟಿಕೆಗಳನ್ನು ನಡೆಸಬಾರದು ಎಂದು ತಾಲ್ಲೂಕು ಆಡಳಿತ ನಿರ್ದೇಶನ‌‌ ನೀಡಿದೆ.‌ ಆದರೆ ಮಹಿಳೆಯರು ಅಧಿಕಾರಿಗಳನ್ನೂ ಲೆಕ್ಕಿಸದೆ ಮುಂದಾಗಿ ಪೂಜಾ ಕೈಂಕಾರ್ಯಗಳಿಗೆ ಮುಂದಾಗಿರುವುದು ಸರಿಯಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.