ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಪ್ರಕರಣ: ಆನ್‌ಲೈನ್ ವಂಚಕರ ಖೆಡ್ಡಾಕ್ಕೆ ಜನರು

ಜಿಲ್ಲೆಯಲ್ಲಿ ಹೆಚ್ಚಿದ ಸೈಬರ್ ಅ‍ಪರಾಧ
Last Updated 7 ನವೆಂಬರ್ 2022, 5:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಾನುರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಕಚೇರಿಯಿಂದ ಮಾತನಾಡುತ್ತಿದ್ದೇನೆ. ನಿಮಗೆ ₹28 ಲಕ್ಷ ಭೂ ಪರಿಹಾರ ಧನದ ಚೆಕ್ ಬಂದಿದೆ.ಚೆಕ್ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಹಿಂದಿನ ದಸ್ತಾವೇಜುಗಳನ್ನು ತೆಗೆದುಕೊಂಡು ಬನ್ನಿ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಡ್ ಬರೆದುಕೊಡಲು ₹1,50,000 ತೆಗೆದುಕೊಂಡು ಬನ್ನಿ–ಹೀಗೆಬಾಗೇಪಲ್ಲಿಯ ವೈ.ಶ್ರೀನಿವಾಸರೆಡ್ಡಿ ಎಂಬುವವರಿಗೆ ಜಿಲ್ಲಾಧಿಕಾರಿ ಕಚೇರಿ ಹೊರ ಆವರಣದಲ್ಲಿಯೇ ಆನ್‌ಲೈನ್ ವಂಚಕರು ₹1.60 ಲಕ್ಷ ವಂಚಿಸಿದ್ದಾರೆ.

ನಿಮ್ಮ ಅಕೌಂಟ್ ಅಪ್‌ಡೇಟ್ ಆಗಿಲ್ಲ. ಆಧಾರ್ ಕಾರ್ಡ್‌ ಲಿಂಕ್ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಅಕೌಂಟ್ ಬ್ಲಾಕ್ ಆಗುತ್ತದೆ ಎಂದು ನಂಬಿಸಿ ಚಿಕ್ಕಬಳ್ಳಾಪುರ ತಾಲ್ಲೂಕಿನಗಿಡ್ನಹಳ್ಳಿಯ ಜಿ.ಎಂ.ಮಂಜುನಾಥ್ ಅವರಿಗೆ ಆನ್‌ಲೈನ್ ವಂಚಕರು ₹ 3.21 ಲಕ್ಷ ವಂಚಿಸಿದ್ದಾರೆ.

ಹೀಗೆ ಜಿಲ್ಲೆಯಲ್ಲಿ ಆನ್‌ಲೈನ್ ವಂಚಕರಖೆಡ್ಡಾಕ್ಕೆ ಬೀಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ 2020ರಲ್ಲಿಜಿಲ್ಲೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ 29 ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ ಈ ಪ್ರಕರಣಗಳ ಸಂಖ್ಯೆ 51ಕ್ಕೆ ಹೆಚ್ಚಿತ್ತು. 2022ನೇ ಸಾಲು ಪೂರ್ಣವಾಗಲು ಇನ್ನೂ ಐವತ್ತೈದು ದಿನಗಳಿವೆ. ಈಗಾಗಲೇ ಈ ಸಾಲಿನಲ್ಲಿ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ 89 ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳು ಈ ವರ್ಷ ಶತಕ ದಾಟುವುದು ಖಚಿತ.

ನೌಕರಿ ಆಮಿಷ, ಉಡುಗೊರೆ, ಮೊಬೈಲ್ ನಂಬರ್ ರೀಚಾರ್ಜ್ ಹೆಸರಿನಲ್ಲಿ ವಂಚನೆ, ಬ್ಯಾಂಕ್ ಅಧಿಕಾರಿಗಳ ಹೆಸರೇಳಿ ಎಟಿಎಂ ಕಾರ್ಡ್ ನಂಬರ್ ಪಡೆದು ವಂಚನೆ, ಸಾಲ, ಹೂಡಿಕೆಯ ಹೆಸರಿನಲ್ಲಿ ವಂಚನೆ, ಮನೆಯಿಂದಲೇ ಕೆಲಸ ಮಾಡಬಹುದು ಎಂದು ನಂಬಿಸಿ,ಫೋನ್ ಪೇ, ಗೂಗಲ್ ಪೇ ಗ್ರಾಹಕರ ಸೇವಾ ಕೇಂದ್ರದ ಹೆಸರು ಹೇಳಿ, ಲಕ್ಕಿ ಡ್ರಾನಲ್ಲಿ ಕಾರು ಬಂದಿದೆ ಎಂದು ನಂಬಿಕೆ ಹುಟ್ಟಿಸಿ, ಫೇಸ್‌ಬುಕ್ ನಕಲಿ ಖಾತೆ ತೆರೆದು–ಹೀಗೆ ‌ವಿವಿಧ ರೀತಿಯಲ್ಲಿ ವಂಚಕರು ಜಿಲ್ಲೆಯ ಜನರನ್ನು ವಂಚಿಸಿದ್ದಾರೆ. ಕಳೆದ ವರ್ಷ ಇಟಲಿ ‘ಉಡುಗೊರೆ’ಗಳ ಆಸೆಗೆ ಚಿಂತಾಮಣಿಯ ಮಹಿಳೆಯೊಬ್ಬರು ₹14 ಲಕ್ಷ ಸಹ ಕಳೆದುಕೊಂಡಿದ್ದರು!

ಜಿಲ್ಲಾ ಪೊಲೀಸ್ ಇಲಾಖೆಯುಸೈಬರ್ ವಂಚನೆಗಳನ್ನು ತಡೆಗಟ್ಟುವ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಶಾಲಾ, ಕಾಲೇಜುಗಳಲ್ಲಿ ಶಿಬಿರಗಳನ್ನು ನಡೆಸುತ್ತಿದೆ. ಇಲಾಖೆಯಿಂದ ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡುವುದು...ಹೀಗೆ ಹಲವು ರೀತಿಯಲ್ಲಿ ಜನರಿಗೆ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪೊಲೀಸರು ನೀಡುತ್ತಿದ್ದಾರೆ. ಹೀಗಿದ್ದರೂ ಜಿಲ್ಲೆಯಲ್ಲಿ ಜನರು ವಂಚಕರ ಖೆಡ್ಡಾಕ್ಕೆ ಹೆಚ್ಚಿನದಾಗಿಯೇ ಸಿಲುಕುತ್ತಿದ್ದಾರೆ.

ಯುವತಿಯರು, ವಿದ್ಯಾವಂತರಿಗೆ ಮೋಸ:ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಂ) ಮಾಡಬಹುದು, ಉತ್ತಮ ಆದಾಯ ಗಳಿಸಬಹುದು ಎಂದು ನಂಬಿಸಿ ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಆನ್‌ಲೈನ್ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ.ವಂಚನೆಗೆ ಒಳಗಾದವರಲ್ಲಿ ಮುಖ್ಯ ಶಿಕ್ಷಕಿ, ಎಂಜಿನಿಯರ್‌ಗಳು ಸೇರಿದಂತೆ ವಿದ್ಯಾವಂತರೂ ಹೆಚ್ಚಿದ್ದಾರೆ!
ಒಟಿ‍‍ಪಿ ನೀಡಿ ವಂಚನೆಗೆ ಒಳಾದವರಲ್ಲಿ ಶಿಕ್ಷಕರು, ವಿವಿಧ ಇಲಾಖೆ ಅಧಿಕಾರಿಗಳು ಸೇರಿದ್ದಾರೆ.

ಕೆಲವು ಪ್ರಕರಣಗಳಲ್ಲಿ ಸಹಾಯಕರು, ಬಡವರು ಸಹ ಈ ಆನ್‌ಲೈನ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡಿದ್ದಾರೆ. ಪೋಲಿಯೊಕ್ಕೆ ತುತ್ತಾಗಿರುವ ತಾಲ್ಲೂಕಿನ ಹಳ್ಳಿಯೊಂದರ ಬಡ ಹೆಣ್ಣ ಮಗಳಿಗೆ ಮನೆಯಿಂದಲೇ ಕೆಲಸ ಮಾಡಬಹುದು ಎಂದು
ನಂಬಿಸಿ ಆನ್‌ಲೈನ್ ವಂಚಕರು ₹ 54 ಸಾವಿರ ದೋಚಿದ್ದರು. ಹೀಗೆ ಅಸಹಾಯಕರು, ಬಡವರು ಸಹ ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕುತ್ತಿದ್ದಾರೆ.

‘ಒಟಿಪಿ ನೀಡದಿರಿ, ಅನಗತ್ಯ ಲಿಂಕ್ ಒತ್ತದಿರಿ’

ವಾಟ್ಸ್‌ಆ್ಯಪ್, ಎಸ್‌ಎಂಎಸ್‌ಗಳ ಮೂಲಕ ಬಂದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಮಾಡಿದರೂ ಬ್ಯಾಂಕ್, ಒಟಿಪಿ ಇತ್ಯಾದಿ ಮಾಹಿತಿ ನೀಡಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು. ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಜನರೇ ಹೆಚ್ಚು ಜಾಗೃತರಾಗಬೇಕು ಎಂದು ಸೈಬರ್ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್ ಬಿ.ಪಿ.ಮಂಜು ತಿಳಿಸುವರು.

ಮನೆಯಿಂದಲೇ ಕೆಲಸ ಮಾಡಬಹುದು, ಆದಾಯ ಗಳಿಸಬಹುದು ಎಂದು ಆಮಿಷವೊಡ್ಡಿಇತ್ತೀಚೆಗೆ ಅಮೆಜಾನ್ ಡಾಟ್ ಕಾಂ ಹೆಸರಿನಲ್ಲಿ ವಂಚನೆ ಹೆಚ್ಚಿದೆ ಮೊದಲಿಗೆ ₹ 200, 300 ಹೂಡಿಕೆ ಮಾಡಿಸಿಕೊಂಡು ಹಣ ನೀಡುವರು. ನಂತರ ಹೆಚ್ಚು ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸುವರು. ನಿಮ್ಮ ಆದಾಯ ನಿಮ್ಮ ಅಕೌಂಟ್‌ನಲ್ಲಿಯೇ ಇದೆ. ಡ್ರಾ ಮಾಡಲು ಸಾಧ್ಯವಿಲ್ಲ. ಆರು ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ ನಂತರ ಹಣ ಪಡೆಯಬಹುದು ಎಂದು ಹೇಳಿ ವಂಚಿಸುತ್ತಿದ್ದಾರೆ. ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಕಚೇರಿ ಸಿಬ್ಬಂದಿ ಎಂದುಹೆಸರು ಹೇಳಿ ವಂಚಿಸಿದ ಆರೋಪಿಗಳನ್ನು ಬಂಧಿಸಿದೆವು. ಈ ಆರೋಪಿಗಳು ಹೆದ್ದಾರಿ ಬದಿಯಲ್ಲಿ ಜಮೀನು ಮಾರಾಟಕ್ಕಿದೆ, ಬಾಡಿಗೆ, ಲೀಸ್‌ಗೆ ಜಮೀನು ದೊರೆಯುತ್ತದೆ ಎಂದು ಫಲಕಗಳನ್ನು ಅಳವಡಿಸಿ ಅಲ್ಲಿ ಮೊಬೈಲ್ ನಂಬರ್ ಹಾಕಿರುವವರನ್ನೇ ಗುರಿ ಮಾಡಿಕೊಂಡು ವಂಚಿಸುತ್ತಿದ್ದು ಬೆಳಕಿಗೆ ಬಂದಿತು ಎಂದು ಮಾಹಿತಿ ನೀಡಿದರು.

ಪ್ರಕರಣಗಳ ಬೆನ್ನತ್ತಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಪೊಲೀಸರು

ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳಲ್ಲಿ ಜಿಲ್ಲೆಯ ಪೊಲೀಸರು ಪಶ್ಚಿಮ ಬಂಗಾಳಕ್ಕೂ ಹೋಗಿದ್ದರು. ಉತ್ತರ ಭಾರತದ ರಾಜ್ಯಗಳಿಂದ ಕರೆ ಮಾಡಿ ಜಿಲ್ಲೆಯ ಜನರಿಗೆ ವಂಚಿಸಿರುವ ವಂಚಕರನ್ನು ಪತ್ತೆ ಮಾಡಲು ಪೊಲೀಸರು ಉತ್ತರ ಭಾರತದ ರಾಜ್ಯಗಳಿಗೆ ತೆರಳಿದಾಗ ವಂಚಕರ ಮಹಾ ಮೋಸಗಳು ಸಹ ಕಂಡಿವೆ. ವಂಚಕರ ಬ್ಯಾಂಕ್‌ ಖಾತೆಗಳು ಒಂದು ರಾಜ್ಯದಲ್ಲಿ ಇದ್ದರೆ, ಕರೆ ಮಾಡಿದ ಮೊಬೈಲ್ ಸಂಖ್ಯೆಯ ಆಧಾರ್ ಕಾರ್ಡ್ ಜಾಡು ಹಿಡಿದು ಹೊರಟರೆ ಅದು ಮತ್ತೊಂದು ರಾಜ್ಯವನ್ನು ತಲುಪುತ್ತದೆ!‌

ಆಟೊ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಹೀಗೆ ತೀರಾ ಬಡತನದ ಕುಟುಂಬಗಳ ಆಧಾರ್ ಕಾರ್ಡ್‌ಗಳನ್ನು ವಂಚಕರು ಸಿಮ್ ಕಾರ್ಡ್‌ಗಳನ್ನು ಪಡೆಯಲು ಬಳಸಿಕೊಂಡಿದ್ದಾರೆ.

ಹಣ ಕಳೆದುಕೊಂಡರೆ ತಕ್ಷಣ 1930ಕ್ಕೆ ಕರೆ ಮಾಡಿ

ಆನ್‌ಲೈನ್ ವಂಚಕರ ಖೆಡ್ಡಾಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದರೆ ಹಣ ಕಳೆದುಕೊಂಡವರು ಗರಿಷ್ಠ 30 ನಿಮಿಷಗಳ ಒಳಗೆ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು. ಈ ಅವಧಿಯು ಅತ್ಯಂತ ಪ್ರಮುಖವಾಗಿದೆ.

ಆರ್‌ಬಿಐನಲ್ಲಿ ನೋಂದಣಿಯಾದ ಎಲ್ಲ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳಮಾಹಿತಿ ಇಲ್ಲಿ ಇರುತ್ತದೆ. ಹಣ ವರ್ಗಾವಣೆಯ ಯುಪಿಐ ಐಡಿ, ಮೊಬೈಲ್ ಮಾಹಿತಿಯನ್ನು ಸಹಾಯವಾಣಿಗೆ ನೀಡಬೇಕಾಗುತ್ತದೆ. ನಿಜವಾಗಿ ಮೋಸವಾಗಿದ್ದರೆ ಹಣ ವಾಪಸ್ ಬರುತ್ತದೆ. ಫೋನ್ ಪೇ, ಗೂಗಲ್ ಪೇ ಮೂಲಕ ನೀವು ವಂಚಕರಿಗೆ ಹಣವನ್ನು ಕಳುಹಿಸಿದ್ದರೆ ಆ ಹಣ ವಂಚಕರ ಖಾತೆ ಸೇರದಂತೆ ತಡೆ ಹಿಡಿಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT