ಭಾನುವಾರ, ಮಾರ್ಚ್ 26, 2023
24 °C
ಪೆರೇಸಂದ್ರ ಬಳಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ಸೌಲಭ್ಯಗಳ ಕೊರತೆ

ಪೆರೇಸಂದ್ರ: ಎಂಬಿಬಿಎಸ್‌ ಪ್ರವೇಶಾತಿಗೆ ನಿರಾಕರಣೆ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪೆರೇಸಂದ್ರ ಬಳಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಶಿಕ್ಷಣ ಕಾಲೇಜಿನ ಬಗ್ಗೆ ಜಿಲ್ಲೆಯ ಜನರು ಹೆಚ್ಚಿನ ನಿರೀಕ್ಷೆ ಹೊಂದಿದ್ದರು. ಆದರೆ, ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2021–22) ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶಗಳು ಇಲ್ಲದಾಗಿದೆ!

ಆಯೋಗದ ಮಾನದಂಡಗಳನ್ನು ಪೂರೈಸಿದರೆ ಮಾತ್ರ ಕಾಲೇಜುಗಳಲ್ಲಿ ಪ್ರವೇಶಾತಿಗೆ ಅನುಮತಿ ದೊರೆಯುತ್ತದೆ. ಆಯೋಗದ ಪರಿಶೀಲನಾ ತಂಡ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು. ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಶಿಕ್ಷಣ ಕಾಲೇಜು ಈ ಮಾನದಂಡಗಳನ್ನು ಇನ್ನೂ ಪೂರೈಸದ ಕಾರಣ ಪ್ರವೇಶ ದೊರೆಯದಾಗಿದೆ.

ಜಿಲ್ಲೆಯಲ್ಲಿ ₹ 600 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ನಿರ್ಮಾಣವಾಗುತ್ತಿದೆ. ಈಗಾಗಲೇ ಶೇ 60ಕ್ಕೂ ಹೆಚ್ಚು ಕಾಮಗಾರಿ ಪೂರ್ಣವಾಗಿದೆ. ಈ ವರ್ಷದಿಂದಲೇ ಕಾಲೇಜಿನಲ್ಲಿ ದಾಖಲಾತಿ ಆರಂಭವಾಗುತ್ತದೆ ಎನ್ನುವ ನಿರೀಕ್ಷೆಗಳು ಇದ್ದವು. ಆದರೆ ಸೌಲಭ್ಯಗಳು 
ಮತ್ತು ಸಿಬ್ಬಂದಿ ಕೊರತೆಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ
ವೈದ್ಯಕೀಯ ಕೋರ್ಸ್ (ಎಂಬಿಬಿಎಸ್‌) ಪ್ರವೇಶಾತಿಗೆ ರಾಷ್ಟ್ರೀಯ
ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮತಿ ನೀಡಿಲ್ಲ. ಪೆರೇಸಂದ್ರದ ಬಳಿಯ ಕಾಲೇಜಿನಲ್ಲಿ 150 ಸೀಟುಗಳಿಗೆ ಪ್ರವೇಶದ ಅವಕಾಶಗಳು ಇವೆ. 

ರಾಷ್ಟ್ರೀಯ ವೈದ್ಯಕೀಯ ಆಯೋಗದ ಪರಿಶೀಲನಾ ತಂಡ ಎರಡು ತಿಂಗಳ ಹಿಂದೆಯೇ ಜಿಲ್ಲೆಯ ವೈದ್ಯಕೀಯ ಶಿಕ್ಷಣ ಕಾಲೇಜಿಗೆ ಭೇಟಿ ನೀಡಿತ್ತು. ಮೂಲಸೌಲಭ್ಯಗಳು, ಸಿಬ್ಬಂದಿ ಹೀಗೆ ನಾನಾ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿತ್ತು. ನಂತರ ವರದಿಯನ್ನು ಆಯೋಗಕ್ಕೆ ಸಲ್ಲಿಸಿದೆ. 

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಜಿಲ್ಲೆಗೆ ವೈದ್ಯಕೀಯ ಶಿಕ್ಷಣ ಕಾಲೇಜು ಮಂಜೂರಾಗುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2022ರ ಜುಲೈ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ಕಾಲೇಜು ಉದ್ಘಾಟಿಸಬೇಕು ಎನ್ನುವ ನಿರೀಕ್ಷೆ ಸಚಿವರದ್ದಾಗಿದೆ.

ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಪರಿಶೀಲನಾ ತಂಡ ಕಾಲೇಜು ಪರಿಶೀಲನೆ ನಡೆಸಿದ ನಂತರ ಸೌಲಭ್ಯಗಳ ಕೊರತೆ ಇದೆ ಎಂದು ವರದಿಯಲ್ಲಿ ತಿಳಿಸಿತ್ತು. ಆ ನಂತರ ಕಾಮಗಾರಿ ಕುಂಠಿತವಾಗಿದೆ ಎನ್ನಲಾಗುತ್ತಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಈ ಕಾಲೇಜನ್ನು ರಾಜ್ಯ ಸರ್ಕಾರ ನಿರ್ಮಿಸಿದೆ. 

ವೈದ್ಯಕೀಯ ಶಿಕ್ಷಣ ಕಾಲೇಜು ಜಿಲ್ಲೆಯ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮುಕುಟಮಣಿ ಎನ್ನುವ ರೀತಿಯಲ್ಲಿ ನಿರ್ಮಾಣವಾಗುತ್ತಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಕಟ್ಟಡ ಕಾಮಗಾರಿ, ಬೋಧಕರು,
ಸಿಬ್ಬಂದಿ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು
ಕಲ್ಪಿಸಬೇಕಿತ್ತು. ಆದರೆ ಈ ಕೆಲಸವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮುತುವರ್ಜಿವಹಿಸಿ ಸೌಲಭ್ಯಗಳನ್ನು ಕಲ್ಪಿಸಬೇಕು. ಕಾಲೇಜು ಆರಂಭವಾದರೆ ವೈದ್ಯಕೀಯ ಶಿಕ್ಷಣ ಪಡೆಯುವ ಆಸೆ ಹೊಂದಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಬಹಳಷ್ಟು ಪೋಷಕರು ನುಡಿಯುವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು