ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಹೋಬಳಿಗೊಂದು ಮೇವು ಬ್ಯಾಂಕ್‌ಗೆ ಚಿಂತನೆ

ಮೇವು ಖರೀದಿಗೆ ಟೆಂಡರ್ ಕರೆದ ಪಶುಸಂಗೋಪನಾ ಇಲಾಖೆ
Published 10 ಮೇ 2024, 5:28 IST
Last Updated 10 ಮೇ 2024, 5:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬಿಸಿಲ ಧಗೆ ಹೆಚ್ಚುತ್ತಿದೆ. ಮಳೆಯ ಲಕ್ಷಣಗಳೂ ಕಡಿಮೆ ಆಗಿವೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಂಡಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಹೋಬಳಿಗೆ ಒಂದು ಮೇವು ಬ್ಯಾಂಕ್ ಸ್ಥಾಪನೆಗೆ ಜಿಲ್ಲಾಡಳಿತ ಮತ್ತು ಪಶು ಸಂಗೋಪನಾ ಇಲಾಖೆ ಮುಂದಾಗಿದೆ. 

ಗ್ರಾಮೀಣ ಭಾಗಗಳಲ್ಲಿ ನೀರಾವರಿಯನ್ನು ಹೊಂದಿರುವ ರೈತರು ಮಾತ್ರ ಹಸಿರು ಮೇವು ಬೆಳೆಯುತ್ತಿದ್ದಾರೆ. ಯಾವುದೇ ಜಮೀನು ಇಲ್ಲದೆ ರಸ್ತೆ ಬದಿ, ಕೆರೆ ಅಂಗಳ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಜಾನುವಾರುಗಳನ್ನು ಮೇಯಿಸಿಕೊಂಡು ಬರುವ ರೈತರು ಕಂಗಾಲಾಗಿದ್ದಾರೆ. ಹೀಗೆ ಯಾವುದೇ ಜಮೀನುಗಳು ಇಲ್ಲದಿರುವ ಆದರೆ ರಾಸುಗಳನ್ನು ಜೀನನೋಪಾಯಕ್ಕೆ ಅವಲಂಬಿಸಿರುವ ಕುಟುಂಬಗಳು ಸಹ ಜಿಲ್ಲೆಯಲ್ಲಿ ಇವೆ.

ಮೇವಿನ ಸಮಸ್ಯೆ ತಲೆ ದೋರಬಾರದು ಎಂದು ಮೇವು ಖರೀದಿಗೆ ಪಶುಸಂಗೋಪನಾ ಇಲಾಖೆ ಟೆಂಡರ್ ಸಹ ಕರೆದಿದೆ. ಈ ಹಿಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ತಲೆದೋರಿದ್ದಾಗ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿತ್ತು. ಆ ಮೂಲಕ ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸವಾಗಿತ್ತು. ಈ ಬಾರಿಯೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾದರೆ ಎನ್ನುವ ಚಿಂತನೆಯಲ್ಲಿ ಮೇವು ಬ್ಯಾಂಕ್‌ ಆರಂಭಕ್ಕೆ ಕ್ರಮವಹಿಸಲಾಗಿದೆ. 

ಪಶು ಸಂಗೋಪನಾ ಇಲಾಖೆಯ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಸದ್ಯ 17 ವಾರಗಳಿಗೆ ಸಾಕಾಗುವಷ್ಟು ಮೇವು ರೈತರ ಬಳಿ ದಾಸ್ತಾನಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳ ಅನ್ವಯ ನಾಲ್ಕು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಮೇವು ದಾಸ್ತಾನು ಇದ್ದರೆ ಮಾತ್ರ ಮೇವು ಬ್ಯಾಂಕ್ ಸ್ಥಾಪಿಸಬೇಕು. 

ಚಿಕ್ಕಬಳ್ಳಾಪುರವು ಕೃಷಿ ಮತ್ತು ಹೈನುಗಾರಿಕೆ ಪ್ರಧಾನ ಜಿಲ್ಲೆ 2019ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,40,212 ಹಸು ಮತ್ತು ಎಮ್ಮೆ ಹಾಗೂ 8,01,589 ಕುರಿ ಮತ್ತು ಮೇಕೆಗಳು ಇವೆ. ಒಟ್ಟು 10,41,804  ಮೇವು ಆಧಾರಿತ ಜಾನುವಾರುಗಳು ಇವೆ. ಜಿಲ್ಲೆಯಲ್ಲಿ ಈ ವರ್ಷ ಬರದ ಪರಿಣಾಮ ಮೇವು ಉತ್ಪಾದನೆ ಪ್ರಮಾಣ ಕುಸಿದಿದೆ. ಹಸಿರು ಮೇವಿಗೆ ಬರ ಎದುರಾಗಿದೆ. ಪಶು ಸಂಗೋಪನಾ ಇಲಾಖೆ ಮಾಹಿತಿ ಪ್ರಕಾರ ಪ್ರಸ್ತುತ ಜಿಲ್ಲೆಯಲ್ಲಿ ಕಳೆದ ಫೆಬ್ರುವರಿಯ ಅವಧಿಯವರೆಗೆ 3,08,226 ಮೆಟ್ರಿಕ್ ಟನ್ ಮೇವು ಲಭ್ಯವಿತ್ತು. ಆದರೆ ಈ ಮೇವಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಗುಡಿಬಂಡೆ, ಚೇಳೂರು, ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮಳೆಯ ಅಭಾವದಿಂದ ಕಳೆದ ವರ್ಷ ಬೆಳೆಯಾಗದೆ ಜಾನುವಾರುಗಳಿಗೆ ಮೇವು ಕೊರತೆಯಾಗಿದೆ. ನೆರೆಯ ಅಂಧ್ರ ಪ್ರದೇಶದಿಂದ ಟ್ರಾಕ್ಟರ್ ನಲ್ಲಿ ಜೋಳದ ಮೇವು ಖರೀದಿಸುತ್ತಿದ್ದಾರೆ. 

‘ಮೇವು ಖರೀದಿಗೆ ಟೆಂಡರ್’

ರೈತರು ಹಸಿರು ಮೇವು ಬೆಳೆಯುತ್ತಿದ್ದಾರೆ. ಜೋಳವನ್ನೂ ಬೆಳೆಯುತ್ತಿದ್ದಾರೆ. ನಾವು ಮೇವಿನ ಮಿನಿ ಕಿಟ್ ನೀಡಿದ್ದೇವೆ. ಸದ್ಯ ಜಿಲ್ಲೆಯಲ್ಲಿ ಮೇವಿಗೆ ಯಾವುದೇ ಕೊರತೆ ಇಲ್ಲ. ಮೇವಿನ ದರವೂ ಉತ್ತಮವಾಗಿಯೇ ಇದೆ ಎಂದು ಪಶುಸಂಗೋಪನಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ.ರವಿ ತಿಳಿಸಿದ್ದಾರೆ.  ಜಿಲ್ಲೆಯ ರೈತರ ಬಳಿ 17 ವಾರಕ್ಕೆ ಸಾಕಾಗುವಷ್ಟು ಮೇವು ಇದೆ. ನಾಲ್ಕು ವಾರಕ್ಕಿಂತ ಕಡಿಮೆ ಬಂದಾಗ ಮಾತ್ರ ಮೇವು ಬ್ಯಾಂಕ್ ಆರಂಭಿಸಬೇಕು ಎಂದು ಮಾರ್ಗಸೂಚಿಗಳು ತಿಳಿಸುತ್ತವೆ. ಹೀಗಿದ್ದರೂ ಮೇವು ಖರೀದಿಗೆ ‌ಟೆಂಡರ್ ಕರೆದಿದ್ದೇವೆ ಎಂದು ಹೇಳಿದರು. ಒಂದು ಕೆ.ಜಿ ಮೇವಿಗೆ ₹ 2 ದರ ನಿಗದಿ ಮಾಡಲಾಗಿದೆ. ಒಂದು ದಿನಕ್ಕೆ ಆರು ಕೆ.ಜಿಯ ಪ್ರಕಾರ ರೈತರಿಗೆ ನೀಡಲಾಗುತ್ತದೆ.  ಎಲ್ಲಿ ಬೇಡಿಕೆ ಬರುತ್ತದೆ ಎಂದು ನೋಡಿಕೊಂಡು ಅಲ್ಲಿ ಮೇವು ಬ್ಯಾಂಕ್ ಆರಂಭಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT