ಚಿಕ್ಕಬಳ್ಳಾಪುರ | ಕದ್ದುಮುಚ್ಚಿ ಜಿಲ್ಲೆಯಿಂದ ಆಂಧ್ರಕ್ಕೆ ಡೀಸೆಲ್

ಚಿಕ್ಕಬಳ್ಳಾಪುರ: ಜಿಲ್ಲೆಯ ಗಡಿಭಾಗದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಕ್ರಮ ಮಾರಾಟ ಜಾಲ ವ್ಯಾಪಕವಾಗುತ್ತಿದೆ. ರಾತ್ರಿ ವೇಳೆ ವ್ಯಾಪಕವಾಗಿ ನಡೆಯುವ ಈ ಅಕ್ರಮದ ಸಾಗಾಣಿಕೆ ವಹಿವಾಟು ಹಗಲಿನಲ್ಲಿಯೇ ಸಕ್ರಿಯವಾಗಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ನವೆಂಬರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 18,500 ಲೀಟರ್ ಡೀಸೆಲ್ ಅನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಪೆರೇಸಂದ್ರ ಪೊಲೀಸರು 20 ಸಾವಿರ ಲೀಟರ್ ಡೀಸೆಲ್ ವಶಕ್ಕೆ ಪಡೆದಿದ್ದಾರೆ. ಇವು ಬೆಳಕಿಗೆ ಬಂದ ಪ್ರಕರಣಗಳು ಮಾತ್ರ. ನಿಯಮಗಳ ಪ್ರಕಾರ ಯಾವುದೇ ಟ್ಯಾಂಕರ್‌ಗಳಿಗೆ ಡೀಸೆಲ್, ಪೆಟ್ರೋಲ್ ವಿತರಣೆಗೆ ಅವಕಾಶ ಇಲ್ಲ. ಆದರೆ ಗಡಿಭಾಗದಲ್ಲಿ ನಿಯಮ ಬಾಹಿರವಾಗಿ ವಿತರಣೆ ಎಗ್ಗಿಲ್ಲದೆ ನಡೆಯುತ್ತಿದೆ.
ನೆರೆಯ ಆಂಧ್ರಪ್ರದೇಶದಲ್ಲಿ ಎಕ್ಸ್‌ಟ್ರಾ ಪವರ್ ಪೆಟ್ರೋಲ್‌ನ ಒಂದು ಲೀಟರ್ ಬೆಲೆ ₹ 119.30 ಮತ್ತು ಸಾಮಾನ್ಯ ಪೆಟ್ರೋಲ್ ಬೆಲೆ ₹ 112.23 ಇದೆ. ಡೀಸೆಲ್ ಬೆಲೆ ₹ 100 ಇದೆ. ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹ 102 ಮತ್ತು ಡೀಸೆಲ್ ಬೆಲೆ ₹ 88 ಇದೆ. ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಆಂಧ್ರಕ್ಕಿಂತ ಸರಾಸರಿ ₹ 10 ಕಡಿಮೆ ಇದೆ. ಬೆಲೆ ಕಡಿಮೆ ಇರುವ ಕಾರಣ ಕಳ್ಳದಾರಿಗಳಲ್ಲಿ ಆಂಧ್ರಕ್ಕೆ ಜಿಲ್ಲೆಯಿಂದ ಇಂಥನ ರವಾನೆ ಆಗುತ್ತಿದೆ.
ಗೌರಿಬಿದನೂರು, ಚಿಂತಾಮಣಿ, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳು ಆಂಧ್ರಪ್ರದೇಶದ ಜತೆ ಗಡಿ ಹಂಚಿಕೊಂಡಿವೆ. ಗಡಿಭಾಗದಲ್ಲಿ ಆಂಧ್ರಪ್ರದೇಶಕ್ಕೆ ಸೇರಿದ ಕೈಗಾರಿಕಾ ಪ್ರದೇಶಗಳು ಸಹ ಇವೆ.
ಗಡಿಭಾಗದಲ್ಲಿ ಜೂಜು, ಅಬಕಾರಿ ಅಕ್ರಮಗಳು ಈ ಹಿಂದಿನಿಂದಲೂ ನಡೆಯುತ್ತಿವೆ. ಇದೇ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಅಕ್ರಮ ಮಾರಾಟದ ದಂಧೆಯೂ ಗಡಿಭಾಗದಲ್ಲಿದೆ. ಗಡಿಭಾಗದಲ್ಲಿನ ಪೆಟ್ರೋಲ್ ಬಂಕ್‌ಗಳ ಮುಂದೆ ಆಂಧ್ರಪ್ರದೇಶದ ಜನರು ಕ್ಯಾನ್‌ಗಳನ್ನು ಹಿಡಿದು ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಾಣುತ್ತದೆ. ಇದಕ್ಕೆ ಹೊರತಾಗಿ ಯಾವುದೇ ಪರವಾನಗಿ ಮತ್ತು ಬಿಲ್‌ಗಳು ಇಲ್ಲದೆ ಆಂಧ್ರಪ್ರದೇಶಕ್ಕೆ ಟ್ಯಾಂಕರ್‌ಗಳ ಮೂಲಕ ಕಳ್ಳದಾರಿಗಳಲ್ಲಿ ಸಾವಿರಾರು ಲೀಟರ್ ಇಂಧನ ಪೂರೈಕೆ ಆಗುತ್ತಿದೆ.
ಆಂಧ್ರಪ್ರದೇಶದಲ್ಲಿನ ಪೆಟ್ರೋಲ್ ಬಂಕ್‌ಗಳು, ಕ್ವಾರಿಗಳು, ಗಣಿಗಾರಿಕೆ ನಡೆಸುವವರು, ಟ್ರಾನ್ಸ್‌ಪೋರ್ಟ್‌ನವರು ಗಡಿಭಾಗದ ಪೆಟ್ರೋಲ್ ಬಂಕ್‌ಗಳಿಂದ ಅಕ್ರಮವಾಗಿ ಇಂಥನ ತುಂಬಿಸಿಕೊಳ್ಳುತ್ತಿದ್ದಾರೆ.
ಆಂಧ್ರದ ವಾಹನಗಳ ವಶ: ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿ ಡೀಸೆಲ್ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎರಡೂ ಪ್ರಕರಣಗಳಲ್ಲಿ ಆಂಧ್ರಪ್ರದೇಶ ನೋಂದಣಿಯ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ಚಾಲಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ನವೆಂಬರ್‌ನಲ್ಲಿ ಬಾಗೇಪಲ್ಲಿಯಿಂದ ಗೂಳೂರಿಗೆ ಹೋಗುವ ರಸ್ತೆಯಲ್ಲಿರುವ ಪೋತೆಪಲ್ಲಿ ಕ್ರಾಸ್ ಬಳಿ ವಶಕ್ಕೆ ಪಡೆದ ಟ್ಯಾಂಕರ್‌ನಲ್ಲಿ 18,500 ಲೀಟರ್ ಡೀಸೆಲ್ ಸಾಗಿಸಲಾಗುತ್ತಿತ್ತು. ಈ ಸಂಬಂಧ ಮಟ್ಟದ್ದಲದಿನ್ನೆ ಗ್ರಾಮದ ಹೆದ್ದಾರಿಯಲ್ಲಿರುವ ಗಂಗೋತ್ರಿ ಪೆಟ್ರೋಲಿಯಂ ಬಂಕ್ ಮತ್ತು ಆಂಧ್ರದ ಪುಟ್ಟಪರ್ತಿಯ ಪ್ರಶಾಂತಿ ಪೆಟ್ರೋಲ್ ಬಂಕ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಪೆರೇಸಂದ್ರ ಪೊಲೀಸರು ಸಹ ರಾಷ್ಟ್ರಿಯ ಹೆದ್ದಾರಿ 44ರ ವರ್ಲಕೊಂಡ ಗ್ರಾಮ ಬಳಿ 20 ಸಾವಿರ ಲೀಟರ್ ಡೀಸೆಲ್ ವಶಕ್ಕೆ ಪಡೆದಿದ್ದಾರೆ. ಈ ಡೀಸೆಲ್ ಚಿಂತಾಮಣಿ ತಾಲ್ಲೂಕಿನ ಯೋಗಿನಾರಾಯಣ ಫಿಲ್ಲಿಂಗ್ ಸ್ಟೇಷನ್ ಬಂಕ್‌ನಿಂದ ತುಂಬಿಸಲಾಗಿತ್ತು.
ಹೀಗೆ ಡೀಸೆಲ್ ಮತ್ತು ಪೆಟ್ರೋಲ್ ಅಕ್ರಮ ಸಾಗಾಣಿಕೆಗೆ ಸಂಬಂಧಿಸಿದಂತೆ ಬೆಳಕಿಗೆ ಬಂದ ಪ್ರಕರಣಗಳು ಬೆರಳೆಣಿಕೆಯಷ್ಟು. ಆಂಧ್ರಪ್ರದೇಶಕ್ಕೆ ರಾಜಾರೋಷವಾಗಿ ಇಂಧನ ಕಳ್ಳದಾರಿಗಳಲ್ಲಿ ಸಾಕಾಣಿಕೆ ಆಗುತ್ತಿದ್ದರೂ ನಿಯಂತ್ರಣಕ್ಕೆ ಸಂಬಂಧಿಸಿದವರು ಮುಂದಾಗುತ್ತಿಲ್ಲವೇ ಎನ್ನುವ ಆರೋಪ ಪ್ರಜ್ಞಾವಂತರದ್ದು.
ದ್ವಿಚಕ್ರ ವಾಹನಗಳಲ್ಲಿ ಬರುವವರು ಕ್ಯಾನ್‌ಗಳಲ್ಲಿ ಇಂಧನ ತುಂಬಿಸಿಕೊಂಡು ಹೋಗುವರು. ಇದರ ಜತೆಗೆ ದೊಡ್ಡ ದೊಡ್ಡ ಬ್ಯಾರೆಲ್‌ಗಳಲ್ಲಿ ಆಂಧ್ರಕ್ಕೆ ಡೀಸೆಲ್ ಮತ್ತು ಪೆಟ್ರೋಲ್ ಸಾಗಿಸಲಾಗುತ್ತಿದೆ ಎನ್ನುತ್ತಾರೆ ಬಾಗೇಪಲ್ಲಿ ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದ ನರಸಿಂಹಮೂರ್ತಿ.
ಆಂಧ್ರದಲ್ಲಿ ಮತ್ತು ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಒಂದೇ ಇದ್ದಾಗ ಇಲ್ಲಿಗೆ ಬರುತ್ತಿರಲಿಲ್ಲ. ಈಗ ಅಲ್ಲಿ ದರ ಹೆಚ್ಚಿದೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಕೊಂಡೊಯ್ಯಲಾಗುತ್ತಿದೆ. ಇಲ್ಲಿಂದ ಖರೀದಿ ಅಲ್ಲಿ ಚಿಲ್ಲರೆ ದರದಲ್ಲಿ ಮಾರಾಟ ಸಹ ಮಾಡಲಾಗುತ್ತಿದೆ ಎಂದರು.
ಗಡಿಯಲ್ಲಿ ನಿಗಾ ಅಗತ್ಯ
ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಭಾಗದಲ್ಲಿ ಕೈಗಾರಿಕೆಗಳು ಇವೆ. ಕುಡುಮಲಕುಂಟೆ ದಾಟಿ ಆಂಧ್ರ ಪ್ರವೇಶಿಸಿದರೆ ಆ ಭಾಗದಲ್ಲಿಯೂ ಕೈಗಾರಿಕೆಗಳು ಇವೆ. ಆಂಧ್ರಪ್ರದೇಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಇದೆ. ಆದ್ದರಿಂದ ಇಲ್ಲಿಂದ ಕೈಗಾರಿಕೆಯವರು ಸೇರಿದಂತೆ ಬಹಳಷ್ಟು ಮಂದಿ ಇಂಥನವನ್ನು ಖರೀದಿಸಿ ಕೊಂಡೊಯ್ಯುವರು. ಈ ಕಳ್ಳ ವಹಿವಾಟಿನ ಮೇಲೆ ಗಡಿಭಾಗದಲ್ಲಿ ನಿಗಾ ಅಗತ್ಯ ಎನ್ನುತ್ತಾರೆ ಗೌರಿಬಿದನೂರಿನ ಅಜಯ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.