ಮಂಗಳವಾರ, ಸೆಪ್ಟೆಂಬರ್ 28, 2021
21 °C
ಕೋಚಿಮುಲ್ ವಿಭಜನೆ: ರೈತರ ಹಿತ ಗಮನದಲ್ಲಿ ಇಟ್ಟುಕೊಳ್ಳಲು ಆಗ್ರಹ

ಚಿಕ್ಕಬಳ್ಳಾಪುರ: ಕೋಚಿಮುಲ್ ವಿಭಜಿಸಿದರೆ ಮದರ್‌ಡೇರಿಗೆ ಸೇರಿಸಿ- ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಕೋಚಿಮುಲ್ ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಒಂದು ವೇಳೆ ವಿಭಜನೆಯಾದರೆ ಚಿಕ್ಕಬಳ್ಳಾಪುರ ಒಕ್ಕೂಟವನ್ನು ಮಾರುಕಟ್ಟೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕೆಎಂಎಫ್ ಸುಪರ್ದಿನಲ್ಲಿರುವ ಮದರ್‌ ಡೇರಿ ವ್ಯಾಪ್ತಿಗೆ ತರಬೇಕು. ವಿಭಜನೆ ವಿಚಾರದಲ್ಲಿ ದೂರದೃಷ್ಟಿ ಮುಖ್ಯ, ಪ್ರತಿಷ್ಠೆಯಲ್ಲ’ ಎಂದು ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಗುಡಿಬಂಡೆ ತಾಲ್ಲೂಕಿನ ಕೋಚಿಮುಲ್ ನಿರ್ದೇಶಕರು ಇಲ್ಲಿ ಭಾನುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋಚಿಮುಲ್ ನಿರ್ದೇಶಕ ವೈ.ಬಿ. ಅಶ್ವತ್ಥನಾರಾಯಣ ಬಾಬು ಮಾತನಾಡಿ, ಕೋಚಿಮುಲ್ ವಿಭಜನೆಯ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ಆಗಬೇಕು. ಜಿಲ್ಲೆಯಲ್ಲಿ ನಿತ್ಯ 4.5 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಸಾಧಕ, ಬಾಧಕಗಳನ್ನು ಚರ್ಚಿಸದೆ ಮತ್ತು ಮಾರುಕಟ್ಟೆ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳದೆ ವಿಭಜನೆ ಮಾಡಿದರೆ ಅದರ ನೇರ ಪೆಟ್ಟು ರೈತರ ಮೇಲೆ ಆಗುತ್ತದೆ. ಎಲ್ಲ ಆಯಾಮದಲ್ಲಿಯೂ ಈ ಬಗ್ಗೆ ಚರ್ಚೆಗಳು ನಡೆಯಬೇಕು’ ಎಂದರು.

ವೈಯಕ್ತಿಕ ಪ್ರತಿಷ್ಠೆಗಳು ಮತ್ತು ರಾಜಕಾರಣವನ್ನು ಮೊದಲ ಕೈಬಿಡ ಬೇಕು. ರೈತರ ಹಿತದೃಷ್ಟಿಯಿಂದ ಆಲೋ ಚಿಸಬೇಕು. ಒಂದು ವೇಳೆ ವಿಭಜನೆಯಾಗಿ ರೈತರಿಂದ ಖರೀದಿಸುತ್ತಿರುವ ಹಾಲಿಗೆ ಇದೇ ಪ್ರಮಾಣದಲ್ಲಿ ದರವನ್ನು ನೀಡಲು ಸಾಧ್ಯವೇ ಎನ್ನುವ ಬಗ್ಗೆ ಆಲೋಚಿಸಬೇಕು ಎಂದರು.

‘ಚಿಕ್ಕಬಳ್ಳಾಪುರದ ಮೆಗಾ ಡೇರಿಯಲ್ಲಿ ಎಲ್ಲ ಉತ್ಪನ್ನಗಳ ತಯಾರಿಕೆ ಇಂದಿಗೂ ಸಾಧ್ಯವಾಗಿಲ್ಲ. ಹಾಲಿನ ಪ್ಯಾಕೇಟ್ ಸಿದ್ಧಗೊಳಿಸುವ ಘಟಕಕ್ಕೆ ಈಗ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಆಗಿದೆ. ಇದಕ್ಕೆ ₹ 60 ಕೋಟಿ ಅಗತ್ಯ. ಘಟಕ ತಲೆ ಎತ್ತಲು ಕನಿಷ್ಠ ಒಂದೂವರೆ ವರ್ಷವಾದರೂ ಬೇಕು. ಅಲ್ಲಿಯವರೆಗೆ ಬೇರೆ ಕಡೆಗಳಲ್ಲಿ ಪ್ಯಾಕಿಂಗ್ ಮಾಡಿಸಿದರೆ ಅಲ್ಲಿಂದ ಇಲ್ಲಿಗೆ ತರುವ ಸಾಗಾಣಿಕೆ ವೆಚ್ಚ, ಪ್ಯಾಕಿಂಗ್ ವೆಚ್ಚ ಹೊರೆ ಆಗುತ್ತದೆ’ ಎಂದು ಹೇಳಿದರು.

ಕೋಚಿಮುಲ್ ವಿಭಜನೆಯಾದರೆ ಮಾರುಕಟ್ಟೆ ದೃಷ್ಟಿಯಿಂದ ಮದರ್ ಡೇರಿ ಜತೆ ಚಿಕ್ಕಬಳ್ಳಾಪುರ ಒಕ್ಕೂಟ ಸಾಗಬೇಕು. ಮದರ್‌ ಡೇರಿಯು ವಾರ್ಷಿಕ ₹ 10 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ. ಎಲ್ಲ ಉತ್ಪನ್ನಗಳ ತಯಾರಿಕೆಯ ಘಟಕಗಳೂ ಅಲ್ಲಿ ಇವೆ. ಇದರಿಂದ ಚಿಕ್ಕಬಳ್ಳಾಪುರ ಒಕ್ಕೂಟ ಹೊಸದಾಗಿ ಮತ್ತೆ ಘಟಕಗಳಿಗೆ ಹೂಡಿಕೆ ಮಾಡುವುದು ತಪ್ಪುತ್ತದೆ ಎಂದು ಹೇಳಿದರು.

ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ನಿತ್ಯ 8 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ರಾಜಕೀಯವಾಗಿ ಘಟನಾನುಘಟಿಗಳಿರುವ ಆ ಜಿಲ್ಲೆಯು ಮದರ್‌ಡೇರಿ ವ್ಯಾಪ್ತಿಯಲ್ಲಿದೆ. ಕೋಚಿಮುಲ್ ವಿಭಜನೆಯಾದರೆ ನಮ್ಮನ್ನೂ ಅಲ್ಲಿಗೆ ಸೇರಿಸಬೇಕು ಎನ್ನುವುದು ನಮ್ಮ ಆಗ್ರಹ
ಎಂದರು.

ಹಾಲು ನಿತ್ಯದ ಉತ್ಪನ್ನ. ಈ ಮಾರುಕಟ್ಟೆ ಸ್ವಲ್ಪ ಏರುಪೇರಾದರೂ ಅದರ ಪರಿಣಾಮ ನೇರವಾಗಿ ರೈತರಿಗೆ ತಟ್ಟುತ್ತದೆ. ಕೆಲವರ ಪ್ರತಿಷ್ಠೆ ಮತ್ತು ವೈಯಕ್ತಿಕ ಹಿತಕ್ಕಾಗಿ ಮಾತ್ರ ಒಕ್ಕೂಟ ವಿಭಜನೆಯ ಧ್ವನಿ ಕೇಳುತ್ತಿದೆ. ಕೋಚಿಮುಲ್ ವ್ಯಾಪ್ತಿಯ ಎಲ್ಲ ನಿರ್ದೇಶಕರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿ ಅವರು ಮುಂದುವರಿಯಬೇಕು. ವಿಭಜನೆಯಾದರೆ ರೈತರಿಗೆ ಯಾವ ರೀತಿ ಅನುಕೂಲ, ಅನನುಕೂಲ ಎನ್ನುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸಹ ಗಮನ ನೀಡಬೇಕು ಎಂದು
ಹೇಳಿದರು.

ನಿರ್ದೇಶಕ ಆದಿನಾರಾಯಣರೆಡ್ಡಿ ಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು