ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಂಧನ ಖಂಡಿಸಿ ನೌಕರರ ಪ್ರತಿಭಟನೆ

ಅನಿರ್ಧಿಷ್ಟಾವಧಿ ಧರಣಿಗಾಗಿ ಬೆಂಗಳೂರಿಗೆ ಹೊರಟ ಅಕ್ಷರ ದಾಸೋಹ ನೌಕರರ ಸಂಘದ ಪದಾಧಿಕಾರಿಗಳನ್ನು ವಶಕ್ಕೆ ಪಡೆದ ಪೊಲೀಸರು
Last Updated 3 ಫೆಬ್ರುವರಿ 2020, 11:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕನಿಷ್ಠ ಕೂಲಿ, ನಿವೃತ್ತಿ ವೇತನಕ್ಕಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಸೋಮವಾರ (ಫೆ.3) ಅನಿರ್ಧಿಷ್ಟಾವಧಿ ಧರಣಿ ನಡೆಸಲು ತಾಲ್ಲೂಕಿನಿಂದ ಹೊರಟಿದ್ದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಇದನ್ನು ಖಂಡಿಸಿ ಅಕ್ಷರ ದಾಸೋಹ ನೌಕರರು ನಗರದಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ರಾಜ್ಯದಲ್ಲಿ 1.18 ಲಕ್ಷ ಮಹಿಳೆಯರು ಬಿಸಿಯೂಟ ನೌಕರರಾಗಿ ದುಡಿಯುತ್ತಿದ್ದಾರೆ. ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ದುಡಿಯುವ ಈ ಮಹಿಳೆಯರಿಗೆ ತಿಂಗಳಿಗೆ ಸುಮಾರು ₹2,700 ವೇತನ ಬಿಟ್ಟರೆ ಯಾವುದೇ ಸೌಲಭ್ಯಗಳಿಲ್ಲ. ಸುಮಾರು 19 ವರ್ಷಗಳಿಂದ ದುಡಿಯುತ್ತಿರುವ ನೌಕರರಿಗೆ ಸೂಕ್ತ ವೇತನ, ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ನೀಡದೇ ವಂಚಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಿಸಿಯೂಟ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಲು ಸಿದ್ದವಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟಿನ ತೀರ್ಪನ್ನು ಗಾಳಿಗೆ ತೂರಿದೆ. ಇನ್ನೂ ರಾಜ್ಯ ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಬಾರಿ ಪ್ರತಿಭಟನೆ ಕೈಗೊಂಡರೂ ಪ್ರಯೋಜನವಾಗಿಲ್ಲ‘ ಎಂದು ಹೇಳಿದರು.

‘ಹೀಗಾಗಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಸೋಮವಾರ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ಆದರೆ, ಆ ಧರಣಿಯನ್ನು ರಾಜ್ಯ ಸರ್ಕಾರ ಪೊಲೀಸರ ಮೂಲಕ ಹತ್ತಿಕ್ಕಲು ಹೊರಟಿದೆ’ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುಳಾ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮಗೆ ಯಾವುದೇ ಸೌಲಭ್ಯ, ಆರ್ಥಿಕ ಭದ್ರತೆ ನೀಡದೆ ಕಡೆಗಣಿಸಿವೆ. ಆಶಾ ಕಾರ್ಯಕರ್ತೆಯರಿಗೆ ಮತ್ತು ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡಿದೆ. ಆದರೆ ಮಕ್ಕಳಿಗೆ ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸುವ ಬಿಸಿಯೂಟ ನೌಕರರ ಬಗ್ಗೆ ಕಾಳಜಿ ವಹಿಸಿಲ್ಲ. ನಮಗೆ ಕನಿಷ್ಠ ತಿಂಗಳಿಗೆ ₹21 ಸಾವಿರ ವೇತನ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಸಿಯೂಟ ನೌಕರರಿಗೆ ಕಳೆದ 17 ವರ್ಷಗಳಿಂದ ಸರಿಯಾದ ವೇತನ, ಪಿಂಚಣಿ ಇತರೆ ಸೌಲಭ್ಯಗಳನ್ನು ನೀಡದೆ ಮೋಸ ಮಾಡುತ್ತಿವೆ. ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು ಎಂಬ ಬೇಡಿಕೆ ಈಡೇರಿಸಿಲ್ಲ‘ ಎಂದು ತಿಳಿಸಿದರು.

‘ಎಲ್ಲ ನೌಕರರಿಗೂ ಎಲ್‌ಐಸಿ ಆಧಾರಿತ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು. ಯಾವುದೇ ಸಂಘಸಂಸ್ಥೆಗಳಿಗೆ ಈ ಯೋಜನೆ ಹಸ್ತಾಂತರಿಸಬಾರದು. ಕಾಯಂ ಸ್ವರೂಪದ ಉದ್ಯೋಗ ಸೃಷ್ಟಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಕೋಡೆನಹಳ್ಳಿ ಭಾಗ್ಯಮ್ಮ, ಉಮಾ, ನಾರಾಯಣಮ್ಮ, ವೆಂಕಟಮ್ಮ, ಸುಮಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT