ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಗುಬ್ಬಿ ದಿನ: ಸಂಚಾರ, ಶಬ್ದದ ನಡುವೆಯೇ ಅಸ್ತಿತ್ವ

ಶಿಡ್ಲಘಟ್ಟದ ರೈಲ್ವೆ ಅಂಡರ್‌ಪಾಸ್‌ನಲ್ಲಿ ಗುಬ್ಬಿಗಳ ಕಲರವ
Last Updated 20 ಮಾರ್ಚ್ 2021, 4:00 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಗುಬ್ಬಿಗಳ ಚಿಂ ಚಿಂ ನಾದ ವಿವಿಧ ಕರ್ಕಶ ಶಬ್ದದ ನಡುವೆ ಪ್ರಾಮುಖ್ಯ ಕಳೆದುಕೊಳ್ಳುತ್ತಿದೆ. ಆದರೂ ಗುಬ್ಬಿಗಳು ಛಲ ಬಿಡದ ತ್ರಿವಿಕ್ರಮನಂತೆ ವಾಹನಗಳು ಓಡಾಡುವ ರಸ್ತೆ ಬದಿಯಲ್ಲೇ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿವೆ.

ನಗರದಲ್ಲಿ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ನೀರು ಬಸಿದು ಹೋಗಲೆಂದು ರೂಪಿಸಿರುವ ಹಲವಾರು ರಂಧ್ರಗಳಲ್ಲಿ ಗೂಡು ಮಾಡಿಕೊಂಡು ಗುಬ್ಬಚ್ಚಿಗಳು ತಮ್ಮ ಸಂತತಿಯ ಮುಂದುವರಿಕೆಗಾಗಿ ಸಾಹಸ ನಡೆಸಿವೆ. ಮುಖ್ಯರಸ್ತೆಯಲ್ಲಿ ಅಂಗಡಿ ಮಾಲೀಕರು ಆಸಕ್ತಿ ವಹಿಸಿ ಬೆಳೆಸಿರುವ ಗಸಗಸೆ ಮರಗಳು ಸಂಜೆಯ ವೇಳೆ ಗುಬ್ಬಿಗಳು ಗುಂಪುಗುಂಪಾಗಿ ನೆಲೆಯೂರುವ ತಾಣ. ನಗರದ ಕೆಲವು ಅಂಗಡಿಗಳವರು ಹಾಗೂ ಮನೆಗಳವರು ಪುಟ್ಟಪುಟ್ಟ ರಟ್ಟಿನ ಡಬ್ಬಿಗಳನ್ನಿಟ್ಟು ಗುಬ್ಬಿಗಳು ಗೂಡು ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.

ಒಮ್ಮೆ ಮನೆ ಪ್ರವೇಶಿಸಿದರೆ ಮತ್ತೆ ಮತ್ತೆ ಓಡಿಸಿದರೂ ಮತ್ತೆ ನುಗ್ಗಿ ಮನೆಯೊಳಗೇ ಸಂಸಾರ ಮಾಡಿಕೊಂಡಿರುತ್ತಿದ್ದವು ಗುಬ್ಬಿಗಳು. ದಿನಬೆಳಗಾದರೆ ಮನೆಯೊಳಗೆ ಬಂದು ಲೂಟಿಮಾಡುತ್ತಾ, ಸಂಜೆಯಾದೊಡನೆ ಬೀದಿ ಬದಿಯ ವಿದ್ಯುತ್ ತಂತಿಯ ಮೇಲೆ ತೋರಣದಂತೆ ಸಾಲಾಗಿ ಕುಳಿತುಕೊಳ್ಳುತ್ತಿದ್ದ ಗುಬ್ಬಿಗಳು ಹೊಸ ಆವಾಸ ಸ್ಥಾನಗಳನ್ನು ಹುಡುಕಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ.

ಗುಬ್ಬಿ ಮನುಷ್ಯರ ಸಹವಾಸ ಅಪೇಕ್ಷಿಸಿ ಬರುವ ಹಕ್ಕಿ. ಉಪಯೋಗಿಸುವ ಧವಸ ಧಾನ್ಯಗಳೇ ಸಾಮಾನ್ಯವಾಗಿ ಗುಬ್ಬಿಗಳ ಆಹಾರ. ತಿಂದು ಬಿಟ್ಟ ಅಹಾರ ಪದಾರ್ಥಗಳೂ ಅವುಗಳಿಗೆ ಪ್ರಿಯವೇ. ಆಗಾಗ ಮನೆಯಂಗಳದಲ್ಲೇ ಸಿಕ್ಕುವ ಹುಳು ಹುಪ್ಪಡಿಗಳೂ, ಜೇಡಗಳೂ ಬಾಯಿ ರುಚಿಗೆ ಆಗಬಹುದು. ಗೂಡು ಕಟ್ಟಿ ಮರಿಮಾಡಲು ಮನೆಯ ಮಾಡು, ಹಂಚಿನ ಸಂದು ಅಥವಾ ಮನೆಯ ಗೋಡೆಗಳಲ್ಲಿರಬಹುದಾದ ಬಿರುಕು ಬೇಕು. ಹಿಂದೆ ಮನೆಗಳಲ್ಲಿ ಗೋಡೆಯ ಮೇಲೆ ಕಟ್ಟು ಹಾಕಿಸಿರುವ ದೇವರಪಟಗಳನ್ನು ನೇತುಹಾಕಿರುತ್ತಿದ್ದರು. ಅವುಗಳ ಹಿಂದೆ ಸ್ಥಳವಂತೂ ಗುಬ್ಬಿಗಳ ಗೂಡಿಗೆ ಮೀಸಲಾಗಿರುತ್ತಿತ್ತು. ನಮ್ಮ ಸುತ್ತ ಸುಳಿದಾಡುತ್ತಿದ್ದ ಕಾಗೆ ಅನುಮಾನದ ಜೀವಿಯಾದರೆ ಗುಬ್ಬಿ ಸ್ನೇಹ ಜೀವಿ!.

‘ಎಲ್ಲಾದರೂ ಸ್ವಲ್ಪ ಹುಡಿಮಣ್ಣು ಅಥವಾ ನುಣುಪಾದ ಧೂಳು ಕಂಡರೆ ಆಗಾಗ ಮಣ್ಣಿನಲ್ಲಿ ಹೊರಳಾಡಿ ರೆಕ್ಕೆ ಪುಕ್ಕದ ತುಂಬೆಲ್ಲಾ ಮಣ್ಣಿನ ಹುಡಿ ತುಂಬಿಕೊಳ್ಳುವ ಮೂಲಕ ಗುಬ್ಬಿಗಳು ತಮ್ಮ ಪುಕ್ಕಗಳೊಳಗೆ ಸೇರಿಕೊಳ್ಳುವ ಕೀಟಗಳನ್ನು ನಿವಾರಿಸಿಕೊಳ್ಳುತ್ತವೆ. ನೀರು ಸಿಕ್ಕಿದಲ್ಲಿ ಪಟಪಟನೆ ರೆಕ್ಕೆ
ಅರಳಿಸಿ ಮುಳುಗುಹಾಕಿ ಸ್ನಾನ ಮಾಡಿ ನಮಗೆ ಶುದ್ಧತೆಯ ಪಾಠ ಹೇಳಿಕೊಡುತ್ತವೆ’ ಎನ್ನುತ್ತಾರೆ ಉಪನ್ಯಾಸಕ ಅಜಿತ್.

‘ಹಿಂದೆಲ್ಲಾ ಗ್ರಾಮೀಣ ಪರಿಸರದ ಮನೆಗಳಲ್ಲಿ ಗುಬ್ಬಿಗಳಿಗೆ ಬೇಕಾದ ಆಹಾರ ಪದಾರ್ಥಗಳು, ಹುಳುಗಳೂ, ಮನೆಯೊಳಗೆ ಬಲೆ ಹೆಣೆಯುವ ಜೇಡಗಳು ಸಾಕಷ್ಟು ಸಿಗುತ್ತಿದ್ದವು. ವಾಸಕ್ಕೆ ಬೇಕಾದ ಪೊದೆಗಳು, ಗೂಡು ಕಟ್ಟಲು ಬೇಕಾದ ಮನೆಯ ಹೆಂಚಿನ ಮಾಡುಗಳೂ ಯಥೇಚ್ಛವಾಗಿದ್ದವು. ಈಗೆಲ್ಲಾ ಕಾಂಕ್ರೀಟ್‌ಮಯವಾಗಿರುವ ಜನ ವಸತಿ ಪ್ರದೇಶಗಳಲ್ಲಿ ಈ ಎಲ್ಲಾ ಪರಿಸರಗಳನ್ನು ತರುವುದೆಲ್ಲಿಂದ? ಕೊನೆಗೆ ಗುಬ್ಬಿಗಳು ಮೈಮೇಲೆ ಪ್ರೀತಿಯಿಂದ ಹುಯ್ದುಕೊಳ್ಳುತ್ತಿದ್ದ ಹುಡಿಮಣ್ಣು ಸಹಾ ಇಂದು ಸಿಕ್ಕುವುದಿಲ್ಲವಲ್ಲ? ಹೀಗೆ ಬದಲಾಗಿರುವ ಪರಿಸ್ಥಿತಿ, ಬದಲಾದ ಪರಿಸರ, ಬದಲಾದ ವಾತಾವರಣ, ಅವುಗಳ ಸಹಜ ವಾಸಸ್ಥಳದ ನಾಶ. ಕೀಟನಾಶಕಗಳ ಅತಿಯಾದ ಬಳಕೆ. ವಾತಾವರಣವನ್ನೆಲ್ಲಾ ತುಂಬಿಕೊಳ್ಳುತ್ತಿರುವ ಹಲವಾರು ರೀತಿಯ ವಿದ್ಯುತ್‌ಕಾಂತೀಯ ಅಲೆಗಳ ಪರಿಣಾಮದಿಂದ ಗುಬ್ಬಿಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಹಾದಿಯಲ್ಲಿವೆ. ಪುಟ್ಟ ಗುಬ್ಬಿ ಕಣ್ಮರೆಯಾಗುತ್ತಿರುವ ಜೊತೆಯಲ್ಲಿ ಅದು ನೀಡುವ ಎಚ್ಚರಿಕೆ ಇಲ್ಲಿ ಮುಖ್ಯವಾಗುತ್ತದೆ’ ಎಂದು ಅವರು ಹೇಳಿದರು.

ಗುಬ್ಬಿ ದಿನ: “2010ರಿಂದ ಮಾರ್ಚ್ 20ರಂದು ‘ವಿಶ್ವ ಗುಬ್ಬಿ ದಿನ’ವನ್ನು ಆಚರಿಸಲಾಗುತ್ತಿದೆ. ಇದು ಗುಬ್ಬಚ್ಚಿಯನ್ನು ಮಾತ್ರ ಉಳಿಸುವ ಸಂಚಲನವಾಗಿರದೆ ಆ ಮೂಲಕ ನಶಿಸುತ್ತಿರುವ ಎಲ್ಲ ಜೀವವೈವಿಧ್ಯಗಳ ಬಗ್ಗೆ ಮತ್ತು ಅವುಗಳ ಸಹಜ ಪರಿಸರವನ್ನು ಕಾಪಾಡುವ ಅಗತ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಸುವುದು ಈ ದಿನಾಚರಣೆ ಉದ್ದೇಶವಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT