ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಮಿಡತೆ ದಾಳಿಗೆ ರೈತರು ಕಂಗಾಲು

ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರು ಆತಂಕ
Last Updated 5 ಸೆಪ್ಟೆಂಬರ್ 2020, 7:46 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿಮುಸುಕಿನ ಜೋಳ, ರಾಗಿ ಬೆಳೆಗಳಿಗೆ ಮಿಡತೆಗಳ ಹಿಂಡು ದಾಳಿ ಮಾಡಿ ನಾಶ ಪಡಿಸುತ್ತಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.

ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ ಮಿಡತೆಗಳು ಹೆಚ್ಚು ಕಾಣಿಸಿಕೊಂಡಿವೆ. ಗ್ರಾಮದ ರೈತ ಚಿಕ್ಕಪಂತುಲಪ್ಪ ಬೆಳೆದ ಮುಸುಕಿನ ಜೋಳ ಬೆಳೆ ಈ ವರ್ಷ ಉತ್ತಮ ಮಳೆಯಿಂದಾಗಿ ಉತ್ತಮ ಫಸಲು ನೀಡುವ ನಿರೀಕ್ಷೆ ಹೊಂದಿದ್ದಾರೆ.ಮತ್ತೊಬ್ಬ ರೈತ ಅಪ್ಪಣ್ಣ ರಾಗಿ ಬೆಳೆ, ಚಿಕ್ಕ ಆಂಜಿನಪ್ಪಮುಸುಕಿನ ಜೋಳ ಬೆಳೆ ಬೆಳೆದಿದ್ದಾರೆ. ಇವರೆಲ್ಲರ ಹೊಲಗಳಿಗೆ ಮಿಡತೆಗಳು ಲಗ್ಗೆ ಇಟ್ಟಿದ್ದು, ರೈತರು ಕಂಗಾಲಾಗಿದ್ದಾರೆ.

ಕಳೆದ 4 ದಿನಗಳ ಹಿಂದೆ ಮಿಡತೆಗಳ ಹಿಂಡು ಬೆಳೆಗಳಿಗೆ ಲಗ್ಗೆ ಇಟ್ಟಿದೆ. ಮುಸುಕಿನ ಜೋಳ, ರಾಗಿ, ನೆಲಗಡಲೆಯಂತಹ ಬೆಳೆಗಳ ಎಲೆಗಳನ್ನು ತಿನ್ನುತ್ತಿದೆ. ಇದರಿಂದ ಎಲೆಗಳು ಕಾಣದೇ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದೆ.

ಮಿಡತೆ ದಾಳಿಗೆ ಸಂಬಂಧಿಸಿದಂತೆ ಕೆಲ ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದರಿಂದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ, ‘ಬೆಳೆಗಳನ್ನು ಪರೀಕ್ಷಿಸಿ, ಮಿಡತೆಗಳು ನಾಶ ಆಗಲು ಕೀಟನಾಶಕಗಳನ್ನು ನೀಡಿದ್ದಾರೆ. ಕೀಟನಾಶಕಗಳು ಸಿಂಪಡಿಸಿದರೆ, ಅಕ್ಕಪಕ್ಕದ ಬೆಳೆಗಳಿಗೆ ಮಿಡತೆಗಳು ಹಾರಿ ಹೋಗಿದೆ. ಕೀಟನಾಶಕಗಳಿಗೆ ಮಿಡತೆಗಳು ಸಾಯುತ್ತಿಲ್ಲ’ ಎಂದು ರೈತರು ಆರೋಪಿಸಿದ್ದಾರೆ.

ಬೆಳೆ ಸಂಪೂರ್ಣ ನಾಶ!: ‘ಉತ್ತಮ ಫಸಲಿನ ನಿರೀಕ್ಷೆಯೊಂದಿಗೆಮುಸುಕಿನ ಜೋಳ, ರಾಗಿ, ನೆಲಗಡಲೆ ಬೆಳೆದಿದ್ದೇವೆ. ಆದರೆ,ಮುಸುಕಿನ ಜೋಳ ಬೆಳೆಗೆ 4 ದಿನ
ಗಳ ಹಿಂದ ಮಿಡತೆಗಳ ದಂಡು ಬೆಳೆ ತಿನ್ನುತ್ತಿದೆ. ಬೆಳೆ ಸಂಪೂರ್ಣವಾಗಿ ನಾಶ ಆಗುವ ಸಾಧ್ಯತೆ ಇದೆ. ಅಧಿಕಾರಿಗಳು ಮಿಡತೆಗಳ ಹಿಂಡನ್ನು ನಾಶ ಪಡಿಸಲು ಕಾರ್ಯ ನಿರ್ವಹಿಸಬೇಕು’ ಎಂದು ಹೊಸಕೋಟೆ ಗ್ರಾಮದ ರೈತ ಚಿಕ್ಕಪಂತುಲಪ್ಪ ಒತ್ತಾಯಿಸಿದರು.

ರೈತ ಸಂಘ ಮನವಿ

ರೈತರು ಬೆಳೆ ಬೆಳೆಯಲು ಬಿತ್ತನೆ ಬೀಜ, ರಸಗೊಬ್ಬರದಿಂದ ಹಿಡಿದು, ಕಟಾವು ಮಾಡಿ ಬೆಳೆ ಮಾರಾಟ ಮಾಡುವ ತನಕ ಅನೇಕ ಸಂಕಷ್ಟಗಳು ಅನುಭವಿಸಿ, ಬೆಳೆಗಳನ್ನು ಬೆಳೆಯಬೇಕಾದ ಪರಿಸ್ಥಿತಿ ಇದೆ. ಈ ವರ್ಷವಾದರೂ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ, ಮಿಡತೆಗಳ ಹಿಂಡು ನಿರೀಕ್ಷೆಯನ್ನು ಹುಸಿ ಮಾಡಿವೆ. ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಮಿಡತೆಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಸಿ.ರಾಮಾಂಜಿನಪ್ಪ, ಎಚ್.ವಿ.ಸುರೇಶ, ಬೈಯಪ್ಪ ಮನವಿ ಮಾಡಿದ್ದಾರೆ.

ಔಷಧಿಗೆ ಕೆಲಸ ಮಾಡುತ್ತಿಲ್ಲ

‘ಮಿಡತೆಗಳು ದಾಳಿ ಮಾಡಿರುವ ಸ್ಥಳಕ್ಕೆ ತಂಡಗಳನ್ನು ನೇಮಕ ಮಾಡಲಾಗಿದೆ. ಮಿಡತೆಗಳು ನಾಶ ಆಗಲು ಔಷಧಿ ಸಿಂಪಡಿಸಲಾಗಿದೆ. ಆದರೆ ಮಳೆಗೆ ಔಷಧಿಗಳು ಕೆಲಸ
ಮಾಡುತ್ತಿಲ್ಲ. ಮಿಡತೆಗಳು ಹೋಗದೆ ಉಳಿದಿವೆ.ಮತ್ತೊಮ್ಮೆ ಕೀಟನಾಶಕಗಳು ಸಿಂಪಡಿಸಿ, ಹತೋಟಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT