ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ನೆರವಿನ ನಿರೀಕ್ಷೆಯಲ್ಲಿ ಹಣ್ಣು, ತರಕಾರಿ ಬೆಳೆಗಾರರು

ಘೋಷಣೆಯಾಗಿ ಮೂರು ತಿಂಗಳು ಕಳೆದರೂ ಜಮೆಯಾಗದ ರಾಜ್ಯ ಸರ್ಕಾರದ ಪರಿಹಾರ
Last Updated 17 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋವಿಡ್‌ ನಿಯಂತ್ರಣಕ್ಕೆ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಹಣ್ಣು, ತರಕಾರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ನೆರವು ಈವರೆಗೆ ಜಮೆಯಾಗದೆ ರೈತರು ಮತ್ತಷ್ಟು ಕಷ್ಟದಲ್ಲಿ ನಲುಗುವಂತಾಗಿದೆ.

ಜಿಲ್ಲೆಯಲ್ಲಿ ಸುಮಾರು 39,565 ಎಕರೆಗಳಲ್ಲಿ (15,826 ಹೆಕ್ಟೇರ್) ಹೂವು, ತರಕಾರಿ, ಹಣ್ಣುಗಳನ್ನು ಬೆಳೆಯಲಾಗುತ್ತದೆ. ಮಾರ್ಚ್‌ನಲ್ಲಿ ಜಾರಿಗೊಳಿಸಿದ ಲಾಕ್‌ಡೌನ್‌ ತರುವಾಯ ಬದಲಾದ ಮಾರುಕಟ್ಟೆ ವ್ಯವಸ್ಥೆ ಮತ್ತು ಕುಸಿದ ಆರ್ಥಿಕತೆಯ ಪರಿಣಾಮ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಖರೀದಿಸುವವರಿಲ್ಲದೆ ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದರು.

ಜಿಲ್ಲೆಯಲ್ಲಿ ಕೂಡ ಕೋವಿಡ್‌ ಕರಿನೆರಳಿನಿಂದಾಗಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಸುಮಾರು ₹500 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿ ಬೆಳೆಗಾರರು ಹೆಚ್ಚಿನ ನಷ್ಟ ಅನುಭವಿಸಿದ್ದಾರೆ.

ಹದಗೆಟ್ಟ ಮಾರುಕಟ್ಟೆಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರ ಗೋಳು ಗಮನಕ್ಕೆ ಬರುತ್ತಿದ್ದಂತೆ ಕಳೆದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಹಣ್ಣು–ತರಕಾರಿ ಬೆಳೆದವರಿಗೆ ಒಂದು ಹೆಕ್ಟೇರ್‌ಗೆ ₹15 ಸಾವಿರ, ಹೂವು ಬೆಳೆದವರಿಗೆ ಒಂದು ಹೆಕ್ಟೇರ್‌ಗೆ ₹25 ಸಾವಿರದಂತೆ ಆರ್ಥಿಕ ನೆರವು ಘೋಷಣೆ ಮಾಡಿತ್ತು.

ಈ ಪೈಕಿ ಜಿಲ್ಲೆಯಲ್ಲಿ ಬಹುಪಾಲು ಹೂವಿನ ಬೆಳೆಗಾರರಿಗೆ ಸರ್ಕಾರದ ಆರ್ಥಿಕ ನೆರವು ದೊರೆತಿದೆ. ಆದರೆ, ಈವರೆಗೆ ಹಣ್ಣು, ತರಕಾರಿ ಬೆಳೆಗಾರರಿಗೆ ನೆರವು ಎಂಬುದು ಕನ್ನಡಿಯೊಳಗಿನ ಗಂಟಿನಂತಾಗಿದ್ದು, ಸಿಗುವ ಅಲ್ಪಸ್ವಲ್ಪ ನೆರವಿಗಾಗಿ ರೈತರು ಕಳೆದ ಮೂರು ತಿಂಗಳಿಂದ ಚಾತಕ ಪಕ್ಷಿಯಂತೆ ಪರಿಹಾರ ಎದುರು ನೋಡುತ್ತಿದ್ದಾರೆ.

ಮಳೆಯ ಜೂಜಾಟ, ಅಂತರ್ಜಲ ಕುಸಿತ, ಬತ್ತಿ ಬರಡಾಗುತ್ತಿರುವ ಕೊಳವೆಬಾವಿಗಳು, ಅತಿಯಾದ ರೋಗ ಬಾಧೆ... ಹೀಗೆ ಹತ್ತು ಹಲವು ಸಮಸ್ಯೆಗಳ ನಡುವೆ ಸಾಲಸೋಲ ಮಾಡಿ ಬೆಳೆದ ಬೆಳೆ ಕಣ್ಣೆದುರೇ ಮಣ್ಣು ಪಾಲಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವುದು ಕಂಡು ಹತಾಶೆಗೆ ಒಳಗಾಗಿದ್ದ ರೈತರು ಇದೀಗ ನೆರವಿನ ನಿರೀಕ್ಷೆಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಜಿಲ್ಲೆಯಲ್ಲಿ ತರಕಾರಿ ಬೆಳೆದು ನಷ್ಟ ಅನುಭವಿಸಿದವರ ಪೈಕಿ 3,121 ಮತ್ತು ಹಣ್ಣು ಬೆಳೆದವರ ಪೈಕಿ 2,304 ರೈತರ ಅರ್ಜಿಗಳನ್ನು ಸಮರ್ಪಕ ದಾಖಲೆಗಳೊಂದಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳುಆಗಸ್ಟ್ 14ರ ವರೆಗೆ ಆರ್ಥಿಕ ನೆರವಿಗಾಗಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

‘ಜಿಲ್ಲೆಯಲ್ಲಿ 3,121 ಹಣ್ಣು ಬೆಳೆಗಾರರು ಮತ್ತು 2,304 ತರಕಾರಿ ಬೆಳೆಗಾರರ ಅರ್ಜಿಗಳನ್ನು ಪರಿಶೀಲಿಸಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವೆ. ಈ ರೈತರಿಗೆ ಶೀಘ್ರದಲ್ಲೇ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆ ಮೂಲಕ ₹5.36 ಕೋಟಿ ಆರ್ಥಿಕ ನೆರವು ಜಮೆಯಾಗಲಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ.

‘ಜಿಲ್ಲೆಯಲ್ಲಿ ಇನ್ನೂ ತರಕಾರಿ ಬೆಳೆದ ಪ್ರದೇಶದ ಪೈಕಿ 3,800 ಮತ್ತು ಹಣ್ಣಿನ ಬೆಳೆ ಪ್ರದೇಶದ ಪೈಕಿ 3,500 ಸರ್ವೇ ನಂಬರ್‌ಗಳ ದಾಖಲಾತಿಗಳು ಸಲ್ಲಿಕೆಯಾಗಬೇಕಿದೆ. ರೈತರು ಆರ್ಥಿಕ ನೆರವಿಗಾಗಿ ತಮ್ಮ ವ್ಯಾಪ್ತಿಯ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಸಮರ್ಪಕ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ತಿಳಿಸಿದರು.

ಪಟ್ಟಿ..

ಆ.14ರ ವರೆಗೆ ಸರ್ಕಾರಕ್ಕೆ ಸಲ್ಲಿಕೆಯಾದ ಅರ್ಜಿಗಳು

ಹ ನಕ ನತಾಲ್ಲೂಕು;ಹಣ್ಣು;ತರಕಾರಿ

ಚಿಂತಾಮಣಿ;51;753

ಚಿಕ್ಕಬಳ್ಳಾಪುರ;1503;259

ಗೌರಿಬಿದನೂರು;305;656

ಶಿಡ್ಲಘಟ್ಟ;307;391

ಗುಡಿಬಂಡೆ;80;237

ಬಾಗೇಪಲ್ಲಿ;58;825

ಒಟ್ಟು;2,304;3,121

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT