ಮಂಗಳವಾರ, ಸೆಪ್ಟೆಂಬರ್ 28, 2021
22 °C
ಜಾಗೃತಿ ಟ್ರಸ್ಟ್‌ನಿಂದ ಜಿಲ್ಲೆಯ ವಿವಿಧೆಡೆ ಕಾರ್ಯಾಗಾರ: ಒಂದೂವರೆ ಸಾವಿರ ಮೂರ್ತಿಗಳಿಗೆ ಬೇಡಿಕೆ

ಹಸುವಿನ ಸೆಗಣಿಯಲ್ಲಿ ಅರಳಿದ ಗಣೇಶ!

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಕಾರಣದಿಂದ ಮನೆಗಳಲ್ಲಿಯೇ ಗಣೇಶ ಮೂರ್ತಿ ಪೂಜೆಗಳು ಹೆಚ್ಚುವ ಅವಕಾಶಗಳಿವೆ. ಅಲ್ಲದೆ ಪಿಒಪಿ ಗಣೇಶನಿಗೆ ನಿರ್ಬಂಧಗಳಿದ್ದು ‌‌ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ಸರ್ಕಾರ ಪ‍್ರತಿ ವರ್ಷವೂ ಸೂಚಿಸುತ್ತದೆ. ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಮುಂದಾದರೆ ಅವುಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳುವರು.

ಇಂತಹ ಬೆಳವಣಿಗೆಗಳ ನಡುವೆ ಜಾಗೃತಿ ಟ್ರಸ್ಟ್ ಜಿಲ್ಲೆಯಲ್ಲಿ ಸೆಗಣಿಯಿಂದ ಪರಿಸರ ಸ್ನೇಹಿ ಗಣಪನನ್ನು ರೂಪಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ನಾಟಿ ಹಸುವಿನ ಸೆಗಣಿಯಲ್ಲಿ ಗಣಪತಿಯನ್ನು ರೂಪಿಸುವ ಸಂಬಂಧ ಕಾರ್ಯಾಗಾರ ಮಾಡುತ್ತಿದೆ. ಪರಿಸರ ಸ್ನೇಹಿಯಾದ ಈ ಗಣೇಶಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಸೆಗಣಿಯಿಂದ ರೂಪಿಸಿದ 2,200 ಗಣೇಶಮೂರ್ತಿಗಳನ್ನು ಟ್ರಸ್ಟ್ ಮಾರಾಟ ಮಾಡಿತ್ತು. ರಾಜ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ಮೂರ್ತಿಗಳು ಮಾರಾಟವಾಗಿದ್ದವು. ಈ ಬಾರಿ ಈಗಾಗಲೇ ಒಂದೂವರೆ ಸಾವಿರ ಗಣೇಶ ಮೂರ್ತಿಗಳಿಗೆ ಜಿಲ್ಲೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ.

‘ಜಾಗೃತಿ ಟ್ರಸ್ಟ್’ ಸಾವಯವ ಕೃಷಿ ಮತ್ತು ದೇಸಿ ಉತ್ಪನ್ನಗಳ ಮಾರಾಟ ಮತ್ತು ಜಾಗೃತಿಯ ವಿಚಾರದಲ್ಲಿ ಕೆಲಸ ಮಾಡುತ್ತಿದೆ. ಕಳೆದ ವರ್ಷ ಸೆಗಣಿಯ ಗಣಪನನ್ನು ರೂಪಿಸಿತ್ತು. ಇದಕ್ಕೆ ಭಕ್ತರು ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಸೆಗಣಿಯಲ್ಲಿ ಗಣೇಶಮೂರ್ತಿಗಳನ್ನು ರೂಪಿಸುವ ವಿಚಾರವಾಗಿ ಆಸಕ್ತ ಸಂಘ ಸಂಸ್ಥೆಗಳಿಗೂ ಜಾಗೃತಿ ಟ್ರಸ್ಟ್ ತರಬೇತಿ ನೀಡುತ್ತದೆ. ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರದ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ಈ ಬಗ್ಗೆ ಕಾರ್ಯಾಗಾರ ಸಹ ನಡೆದಿದೆ.

‘ನಾಟಿ ಹಸುವಿನ ಸೆಗಣಿಗೆ ಹುಣಸೆ ಬೀಜ, ಮೈದಹಿಟ್ಟಿನ ಗೋಂದು ಸೇರಿಸಿ ಗಣೇಶಮೂರ್ತಿಗಳನ್ನು ಮಾಡಲಾಗುತ್ತದೆ. ಮೂರ್ತಿ ತಯಾರಿಕೆಗೆ ಅಚ್ಚು ಬಳಸುತ್ತೇವೆ. ಒಂದು ಗಣೇಶಮೂರ್ತಿಗೆ ₹ 30 ಬೆಲೆ ನಿಗದಿಗೊಳಿಸಲಾಗಿದೆ. ಶಾಶ್ವತವಾಗಿ ಮನೆಗಳಲ್ಲಿ ಇಟ್ಟುಕೊಳ್ಳಬಹುದಾದ ಮೂರ್ತಿಗಳನ್ನು ಸೆಗಣಿಯಲ್ಲಿಯೇ ಮಾಡಿಕೊಡುತ್ತೇವೆ. ಇದಕ್ಕೆ ಭತ್ತದ ಹೊಟ್ಟು ಸೇರಿಸುತ್ತೇವೆ’ ಎಂದು ಜಾಗೃತಿ ಟ್ರಸ್ಟ್ ಖಜಾಂಚಿ ಚಿಕ್ಕಬಳ್ಳಾಪುರದ ಕೆ.ರವಿಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡುವರು.

‘ಮೂರ್ತಿಗಳ ತಯಾರಿಕೆ ಕುರಿತು ಮಾಹಿತಿ ನೀಡಲು ಈಗಾಗಲೇ ಚಿಕ್ಕಬಳ್ಳಾಪುರ, ರಾಮನಗರ ಮತ್ತಿತರ ಜಿಲ್ಲೆಗಳಲ್ಲಿ ಕಾರ್ಯಾಗಾರ ಮಾಡಿದ್ದೇವೆ. ಸಂಘ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳ ಸದಸ್ಯರಿಗೆ ಮಾಹಿತಿ ನೀಡಿದ್ದೇವೆ. ನಾವು ಟ್ರಸ್ಟ್‌ನಿಂದ ಮಾರಾಟ ಮಾಡುವ ಮೂರ್ತಿಗಳಿಗೆ ₹ 30 ಬೆಲೆ ಇದೆ’ ಎಂದು ಹೇಳಿದರು.

ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಅರಣ್ಯ ಪ್ರದೇಶಗಳಿಗೆ ನಾಟಿ ಹಸುಗಳನ್ನು ಮೇಯಲು ಬಿಡುವರು. ಅಲ್ಲಿ ದೊರೆಯುವ ಸೆಗಣಿಯನ್ನು ಸಂಸ್ಥೆಯವರು ಸಂಗ್ರಹಿಸುವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು