ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು ನಗರಸಭೆ | ಅಧ್ಯಕ್ಷ, ಉ‍ಪಾಧ್ಯಕ್ಷ ಸ್ಥಾನಕ್ಕೆ ಜೋರಾದ ಲಾಬಿ

Published : 10 ಆಗಸ್ಟ್ 2024, 6:33 IST
Last Updated : 10 ಆಗಸ್ಟ್ 2024, 6:33 IST
ಫಾಲೋ ಮಾಡಿ
Comments

ಗೌರಿಬಿದನೂರು: ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉ‍ಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಘೋಷಿಸಿರುವ ಬೆನ್ನಲ್ಲೇ ಗೌರಿಬಿದನೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ತೆರೆಮರೆಯ ಕಸರತ್ತು ಪ್ರಾರಂಭಿಸಿದ್ದಾರೆ.

ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನ ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಆಕಾಂಕ್ಷಿಗಳು ಎಲ್ಲಾ ರೀತಿಯ ಲಾಬಿಗಳನ್ನು ನಡೆಸುತ್ತಿದ್ದಾರೆ. ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಜಿಲ್ಲೆಯಲ್ಲಿಯೇ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾಗಿರುವುದು ಗೌರಿಬಿದನೂರು ನಗರಸಭೆಯಲ್ಲಿ ಮಾತ್ರ.

ಒಟ್ಟು 31 ಸದಸ್ಯ ಬಲದ ಗೌರಿಬಿದನೂರು ನಗರಸಭೆಯಲ್ಲಿ ಕಾಂಗ್ರೆಸ್ 15,
ಜೆಡಿಎಸ್ 6, ಬಿಜೆಪಿ ಮೂರು ಮತ್ತು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬಣದ 7 ಸದಸ್ಯರಿದ್ದಾರೆ.

ಕಳೆದ ಬಾರಿ ಕೆ.ಎಚ್. ಪುಟ್ಟಸ್ವಾಮಿ ಗೌಡರ ಬಣ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಬೆಂಬಲ ಪಡೆದು 25 ವರ್ಷಗಳ ಕಾಂಗ್ರೆಸ್‌ನ ಸುದೀರ್ಘ ಆಡಳಿತವನ್ನು ಅಂತ್ಯಗೊಳಿಸಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲೇಬೇಕು ಎಂದು ಇತರೆ ಪಕ್ಷಗಳು ಸಹ ಪರೋಕ್ಷವಾಗಿ ಕೆ.ಎಚ್ ಪುಟ್ಟಸ್ವಾಮಿಗೌಡ ಅವರನ್ನು ಬೆಂಬಲಿಸಿದ್ದವು. ಇದರಿಂದ ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಅತ್ಯಧಿಕ ಮತಗಳಿಂದ ಗೆದ್ದು ಗೌರಿಬಿದನೂರು ಶಾಸಕರಾದರು. ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ಸೂಚಿಸುವ ಮೂಲಕ ಈಗ ಗೌಡರು ಕಾಂಗ್ರೆಸ್ ಅಂಗಳದಲ್ಲಿ ಗುರುತಿಸಿಕೊಂಡಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಕ್ಷಾ ರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಇದು ಸಹಜವಾಗಿಯೇ ಬಿಜೆಪಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಈಗ ಬದಲಾದ ರಾಜಕೀಯದಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಡೆಯುತ್ತಿದೆ. ಕಾಂಗ್ರೆಸ್‌ನ 15 ಸದಸ್ಯರು ಮತ್ತು ಬಿಜೆಪಿಯ 3 ಸದಸ್ಯರು, ಜೆಡಿಎಸ್ ನ 6 ಸದಸ್ಯರು, ಶಾಸಕರ ಬೆಂಬಲಿತ 7 ಸದಸ್ಯರು ಇದ್ದಾರೆ.

ರಾಜಕೀಯದಲ್ಲಿ ಯಾರು ಶತ್ರುಗಳಲ್ಲ. ಯಾರು ಮಿತ್ರರಲ್ಲ, ಎಂಬಂತೆ ಯಾರು ಯಾವ ಕಡೆ ವಾಲುತ್ತಾರೆ ಎಂಬುದು ಈಗ ಸಾರ್ವಜನಿಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಅವರ ಬೆಂಬಲಿತ 15 ಮಂದಿ ಸದಸ್ಯರು ಇದ್ದಾರೆ. ಶಿವಶಂಕರ ರೆಡ್ಡಿ ಅವರು ಬಿಜೆಪಿ ಬೆಂಬಲ ಪಡೆದು ಅಧ್ಯಕ್ಷ ಗಾದಿ ಹಿಡಿಯಬಹುದು, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಡಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಹಾಲಿ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಒಂದಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಹಂಚಿಕೊಂಡು ಇಬ್ಬರು ಅಧಿಕಾರ ಹಿಡಿಯಲೂಬಹುದು. ಕುದುರೆ ವ್ಯಾಪಾರಕ್ಕೆ ಸಜ್ಜಾಗಲೂಬಹುದು. ಅಥವಾ ಕಾದು ನೋಡುವ ತಂತ್ರ ಅನುಸರಿಸಬಹುದು.

ಕಾಂಗ್ರೆಸ್ ಪಕ್ಷದಲ್ಲಿ ಭಾಗ್ಯಮ್ಮ, ಶ್ರೀಕಾಂತ್, ಸುಬ್ಬರಾಜು, ರಂಗಮ್ಮ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಶಾಸಕ ಪುಟ್ಟಸ್ವಾಮಿಗೌಡ ಅವರ ಬಣದಲ್ಲಿ ಅಶ್ವತಮ್ಮ ನಾಗರಾಜ್, ಲಕ್ಷ್ಮಿ ನಾರಾಯಣಪ್ಪ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಪಕ್ಷದ ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. ಹಾಲಿ ಮತ್ತು ಮಾಜಿ ಶಾಸಕರ ಬಳಿ ಆಕಾಂಕ್ಷಿಗಳು ತಮ್ಮ ಇಂಗಿತ ವ್ಯಕ್ತಪಡಿಸಿ ಲಾಬಿ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT