ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಗ್ರಾಮೀಣ ಜನರ ಕೈ ಹಿಡಿದ ನರೇಗಾ

ತಾಲ್ಲೂಕಿನ ಹಳ್ಳಿಗಳಲ್ಲಿ ವಿವಿಧ ಇಲಾಖೆಗಳಿಂದ ಭರದಿಂದ ನಡೆಯುತ್ತಿದೆ ಕಾಮಗಾರಿ
Last Updated 31 ಮೇ 2020, 2:13 IST
ಅಕ್ಷರ ಗಾತ್ರ

ಗೌರಿಬಿದನೂರು: ಲಾಕ್‌ಡೌನ್ ಸಂಕಷ್ಟದ ಈ ಸಮಯದಲ್ಲಿ ತಾಲ್ಲೂಕಿನ ಗ್ರಾಮೀಣ ಭಾಗದ ಬಡವರನ್ನು ಹಾಗೂ ರೈತರನ್ನು ನರೇಗಾ ಯೋಜನೆ ಕೈ ಹಿಡಿದಿದೆ.

ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಸಾಮಾಜಿಕ‌ ಅರಣ್ಯ ಇಲಾಖೆಗಳ ಅಡಿಯಲ್ಲಿ ನರೇಗಾ ಕಾಮಗಾರಿಗಳು ಹೆಚ್ಚು ನಡೆಯುತ್ತಿವೆ. ಯೋಜನೆಯಡಿ ವೈಯಕ್ತಿಕ‌ ಮತ್ತು ಸಮುದಾಯದ ಕಾಮಗಾರಿಗಳನ್ನು ‌ಕೈಗೊಳ್ಳಬಹುದು. ಪ್ರತಿ ಕೂಲಿ ಕಾರ್ಮಿಕರಿಗೆ ದಿನಕ್ಕೆ ₹ 275 ಕೂಲಿ ಹಣ ನಿಗದಿಯಾಗಿದ್ದು ಇದು ಅವರ ಖಾತೆಗೆ ವಾರಕ್ಕೆ ಒಮ್ಮೆ ಜಮೆ ಆಗುತ್ತದೆ.

ತಾಲ್ಲೂಕಿನಲ್ಲಿ ನದಿ ಪುನಶ್ಚೇತನ ಕಾಮಗಾರಿಗಳು, ಶಾಲಾ ಕಾಂಪೌಂಡ್, ಆಟದ ಮೈದಾನ ನಿರ್ಮಾಣ, ಅಂಗನವಾಡಿ, ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣ, ಕಾಲುವೆಗಳ‌ ಅಭಿವೃದ್ಧಿ, ಸ್ಮಶಾನಗಳ ಅಭಿವೃದ್ಧಿ, ಕಲ್ಯಾಣಿಗಳ ಜೀರ್ಣೋದ್ಧಾರ, ಅರಣ್ಯೀಕರಣ, ನೀರಿನ ತೊಟ್ಟಿಗಳ‌ ನಿರ್ಮಾಣ, ರೈತರ ಜಮೀನಿನಲ್ಲಿ ಬದುಗಳು, ಕೃಷಿ ಹೊಂಡಗಳು, ನೀರಿನ ಮೂಲಗಳ‌ ರಕ್ಷಣಾ ಕಾಮಗಾರಿಗಳು ಹೀಗೆ ವಿವಿಧ ಕೆಲಸಗಳು ಭರದಿಂದ ನಡೆಯುತ್ತಿವೆ.

2019-20ನೇ ಸಾಲಿನಲ್ಲಿ 6 ಲಕ್ಷ ಮಾನವ ದಿನಗಳಲ್ಲಿ ₹ 1,494 ಕೋಟಿ ವೆಚ್ಚದ ಕಾಮಗಾರಿ‌ಗಳು ತಾಲ್ಲೂಕಿನಲ್ಲಿ ನಡೆದಿವೆ. 2020-21 ನೇ ಸಾಲಿನಲ್ಲಿ ಇಲ್ಲಿಯವರೆಗೆ 84 ಸಾವಿರ ಮಾನವ ದಿನಗಳಲ್ಲಿ ವಿವಿಧ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳಲಾಗಿದೆ.

ಕೃಷಿ ಇಲಾಖೆಯಿಂದ ರೈತರ ಜಮೀನಿನಲ್ಲಿ ಬದುಗಳು, ಹೊಂಡ ನಿರ್ಮಾಣ, ಅಜೋಲ‌ ತೊಟ್ಟಿ, ದಿನ್ನೆ ಜಮೀನಿನಲ್ಲಿ ನುಗ್ಗೆ, ಹುಣಸೆ, ನೇರಳೆ ಗಿಡಗಳ ನಾಟಿ ಕಾಮಗಾರಿ ವ್ಯಾಪಕವಾಗಿ ನಡೆಯುತ್ತಿವೆ.

ತೋಟಗಾರಿಕೆ ‌ಇಲಾಖೆಯಿಂದ ಈರುಳ್ಳಿ ಶೇಖರಣಾ ಘಟಕ ನಿರ್ಮಾಣ, ಮಾವು ಮತ್ತು ತೆಂಗು ಪುನಶ್ಚೇತನ (ಪಾತಿ ಮಾಡುವುದು, ಇಂಗು ಗುಂಡಿಗಳ‌ ನಿರ್ಮಾಣ), ಬಾಳೆ, ತೆಂಗು, ಹುಣಸೆ, ಮಾವು, ಸೀಬೆ, ನೇರಳೆ, ನುಗ್ಗೆ, ನಿಂಬೆ, ಸೀತಾಫಲ, ಕರಿಬೇವು, ಗುಲಾಬಿ, ದ್ರಾಕ್ಷಿ, ಗೋಡಂಬಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ರೇಷ್ಮೆ ಇಲಾಖೆಯು ಮರ ಹಾಗೂ ಸಾಲು‌ ಪದ್ಧತಿಯಲ್ಲಿ ಹಿಪ್ಪು‌ನೇರಳೆ ನಾಟಿ ಕಾಮಗಾರಿ ಕೈಗೊಂಡಿದೆ. ಅರಣ್ಯ ಇಲಾಖೆಯು ರೈತರಿಗೆ ಉಚಿತವಾಗಿ ಗಿಡಗಳನ್ನು ನೀಡುತ್ತಿದೆ.

ನರೇಗಾ ಕಾಮಗಾರಿ ಸಮುದಾಯದ ಅಭಿವೃದ್ಧಿಯ ಜತೆಗೆ ಸಾಕಷ್ಟು ಬಡ ಮತ್ತು ಕೂಲಿ‌ಕಾರ್ಮಿಕರ ಕುಟುಂಬಗಳಿಗೆ ಆಸರೆ ಆಗಿದೆ ಎಂದು ಅಧಿಕಾರಿಗಳು ಪ್ರಶಂಸಿಸುವರು.

ಸಮುದಾಯದ ಅಭಿವೃದ್ಧಿಗೆ ಪೂರಕ

ತಾಲ್ಲೂಕಿನ 38 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲಿ ನರೇಗಾ ಕಾಮಗಾರಿಗಳನ್ನು ‌ಕೈಗೊಳ್ಳಲಾಗಿದೆ. ರೈತರೇ ಉತ್ಸಾಹದಿಂದ ತಮ್ಮ ಜಮೀನಿನಲ್ಲಿ ಮತ್ತು ಸಮುದಾಯದ ಕಾಮಗಾರಿಗಳಲ್ಲಿ ತೊಡಗುತ್ತಿದ್ದಾರೆ. ಆ ಮೂಲಕ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್.ಮುನಿರಾಜು ತಿಳಿಸಿದರು.

ಅಕ್ರಮಗಳಿಗೆ ಎಡೆಮಾಡಿಕೊಡದಿರಲಿ: ನರೇಗಾ ಯೋಜನೆಯು‌ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಕೆಲಸ ನೀಡುತ್ತಿದೆ. ಇದರಲ್ಲಿ ‌ಯಾವುದೇ ರೀತಿಯ ಅಕ್ರಮಗಳು‌ ನಡೆಯದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ರೈತ ಅಂಜಿನಪ್ಪ ಮನವಿ‌ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT