ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಅಮೃತ ಮಹೋತ್ಸವ ಕಳೆದ ಕೊರೊನಾ

ದೇಶದ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ಜಿಲ್ಲೆಗೆ ಒಲಿದಿದ್ದ ಗೌರವ
Last Updated 19 ಜೂನ್ 2021, 10:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ಜಿಲ್ಲೆಯಲ್ಲಿ ನಡೆಯಬೇಕಿದ್ದ ಅಮೃತ ಮಹೋತ್ಸವ ಕಾರ್ಯಕ್ರಮಗಳ ಸಡಗರವನ್ನು ಕೊರೊನಾ ಕಳೆದಿದೆ! ಇದು ಜಿಲ್ಲೆಗೆ ರಾಷ್ಟ್ರ ಮಟ್ಟದಲ್ಲಿ ದೊರೆತ ಗೌರವವಾಗಿತ್ತು.

ದೇಶದ ಆಯ್ದ 75 ಕಡೆಗಳಲ್ಲಿ ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಸಬರಮತಿ ಆಶ್ರಮದಿಂದ ಮಾ.12ರಂದು ಚಾಲನೆ ನೀಡಿದ್ದರು. ರಾಜ್ಯದ ಬೆಳಗಾವಿ ಜಿಲ್ಲೆಯ ಕಿತ್ತೂರು, ಮಂಡ್ಯ ಜಿಲ್ಲೆಯ ಶಿವ‍ಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು.

ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಹೆಸರಾಗಿರುವ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದ್ದರು.

ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲೆಯ ವಿವಿಧ ಭಾಗಗಳಲ್ಲಿ 75 ವಾರ ಕಾರ್ಯಕ್ರಮಗಳನ್ನು ನಡೆಸಬೇಕಾಗಿತ್ತು. 2021ರ ಮಾ.19ರಿಂದ 2022ರ ಆಗಸ್ಟ್ 13ರವರೆಗೆ ಜಿಲ್ಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ನಿಗದಿಗೊಳಿಸಲಾಗಿತ್ತು. ಎಲ್ಲಿ, ಯಾವ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಪಟ್ಟಿಯನ್ನು ಜಿಲ್ಲಾಡಳಿತ ಸಹ ಸಿದ್ಧಗೊಳಿಸಿತ್ತು.

ಮಾ.19ರಂದು ಮಂಡಿಕಲ್‌ನಲ್ಲಿ ಗ್ರಾಮದಲ್ಲಿ ಕಾರ್ಯಕ್ರಮ ನಿಗದಿಗೊಳಿಸಲಾಗಿತ್ತು. ಇದು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಬೇಕಿದ್ದ ಮೊದಲ ಅಮೃತ ಮಹೋತ್ಸವ ಕಾರ್ಯಕ್ರಮವಾಗಿತ್ತು. ಆಯಾ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಜವಾಬ್ದಾರಿವಹಿಸಲಾಗಿತ್ತು.

ಪ್ರಬಂಧ ಸ್ಪರ್ಧೆ, ನೃತ್ಯ ಸ್ಪರ್ಧೆ, ದೇಶಭಕ್ತಿ ಗೀತೆಗಳ ಗಾಯನ, ಪಾದಯಾತ್ರೆ, ಬೀದಿ ನಾಟಕ, ಗೋಡೆ ಬರಹ, ಸ್ವಚ್ಛತೆಯ ಬಗ್ಗೆ ಅರಿವು, ಸಮಾಜ ಸೇವಾ ಕಾರ್ಯಗಳ ಬಗ್ಗೆ ಅರಿವು, ಯೋಗ, ಶ್ರಮದಾನ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಉಪನ್ಯಾಸ, ಸ್ಥಳೀಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟಗಾರರ ಹೋರಾಟಗಳ ಚಿತ್ರಗಳ ಪ್ರದರ್ಶನ, ಸಾವಯವ ಕೃಷಿಯ ಮಹತ್ವದ ಬಗ್ಗೆ ಉಪನ್ಯಾಸ, ಬೀದಿ ನಾಟಕಗಳ ಪ್ರದರ್ಶನ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಚರ್ಚಾ ಸ್ಪರ್ಧೆ, ಸ್ವಚ್ಛ ಭಾರತದ ಮಹತ್ವದ ಬಗ್ಗೆ ತಿಳಿವಳಿಗೆ,ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನವನ್ನು ಈ ಪಂಚಾಯಿತಿ ಮಟ್ಟದ ಅಮೃತ ಮಹೋತ್ಸವ ಕಾರ್ಯಕ್ರಮಗಳಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಒಂದೊಂದು ಪಂಚಾಯಿತಿಯಲ್ಲಿಯೂ ಒಂದೊಂದು ಕಾರ್ಯಕ್ರಮಗಳು ನಡೆಯಬೇಕಿತ್ತು.

2022ರ ಆಗಸ್ಟ್ 12ರಂದು ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ಕಾರ್ಯಕ್ರಮದೊಂದಿಗೆ ಅಮೃತ ಮಹೋತ್ಸವದ 75ನೇ ವಾರದ ಕಾರ್ಯಕ್ರಮ ಸಮಾರೋಪಗೊಳ್ಳುತ್ತಿತ್ತು.

ಕೊರೊನಾ ಸೋಂಕು ಮರೆಯಾದರೂ ಅಮೃತ ಮಹೋತ್ಸವದ ಕಾರ್ಯಕ್ರಮಗಳನ್ನು ಮತ್ತೆ ನಡೆಸಲು ಸರ್ಕಾರ ಹಸಿರು ನಿಶಾನೆ ತೋರುತ್ತದೆಯೇ ಎನ್ನುವ ಅನುಮಾನ ಸಹ ನಾಗರಿಕರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT