ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ | ಸರ್ಕಾರಿ ಶಾಲೆಯಲ್ಲಿ ಯೂಟ್ಯೂಬ್‌ ಕಲಿಕೆ

ಪೆಂಡ್ಲಿವಾರಹಳ್ಳಿ: ‘ಉಷಾ ಗಂಗೆ’ ಚಾಲನ್‌ ಮೂಲಕ ಮಕ್ಕಳಿಗೆ ಚಟುವಟಿಕೆ
Last Updated 31 ಮೇ 2020, 2:12 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕಾಲೇಜು ಮತ್ತು ಪ್ರೌಢಶಾಲೆಯ ಶಿಕ್ಷಕರು ಈಗಾಗಲೇ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪಾಠ ಮಾಡುತ್ತಿದ್ದಾರೆ. ಇವರ ನಡುವೆ ಅಲ್ಲಲ್ಲಿ ಕೆಲವು ಕ್ರಿಯಾಶೀಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಶಾಲೆಯ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಕೆಲಸ ಮಾಡುತ್ತಿದ್ದಾರೆ.

ಜೂನ್ ಒಂದು ಬಂತೆಂದರೆ ಶಾಲೆ ಪ್ರಾರಂಭವೆಂದೇ ಭಾವಿಸಲಾಗುತ್ತಿತ್ತು. ಆದರೆ ಈ ಬಾರಿ ಶಾಲೆಯ ಪ್ರಾರಂಭ ವಿಳಂಬವಾಗುತ್ತಿದೆ. ಆದರೆ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರಿ ಶಾಲೆಯಲ್ಲಿ ಏನೆಲ್ಲಾ ಇರಬೇಕು, ಹೇಗೆಲ್ಲಾ ಕಾರ್ಯಚಟುವಟಿಕೆಗಳನ್ನು ನಡೆಸಬಹುದು ಎಂಬುದನ್ನು ಶಿಡ್ಲಘಟ್ಟ ತಾಲ್ಲೂಕಿನ ಪೆಂಡ್ಲಿವಾರಹಳ್ಳಿಯ ಶಿಕ್ಷಕಿ ಉಷಾ, ಯೂಟ್ಯೂಬ್ ಚಾನಲ್ ಮಾಡುವ ಮೂಲಕ ದಾಖಲಿಸುತ್ತಿದ್ದಾರೆ. ತಮ್ಮ ಪುಟ್ಟ ಶಾಲೆ, ಮಕ್ಕಳ ಮನಸ್ಸುಗಳನ್ನು ಇಡಿ ಜಗತ್ತಿನ ಮುಂದೆ ತೆರೆದಿರಿಸಿದ್ದಾರೆ.

ಇದುವರೆಗೂ ಫೇಸ್‌ಬುಕ್ ಮತ್ತು ವ್ಯಾಟ್ಸ್‌ಆ್ಯಪ್‌ಗಳಲ್ಲಿ ಸೀಮಿತವಾಗಿ ತಲುಪುತ್ತಿದ್ದ ಚಿತ್ರಗಳು ಇದೀಗ ವಿಡಿಯೊ ಮೂಲಕ ಮೊದಲ ಬಾರಿಗೆ ಯೂಟೂಬ್ ಮೂಲಕ ಪ್ರಚುರಗೊಳ್ಳುತ್ತಿದೆ. ನಲಿಯುತ್ತಾ ಕಲಿಯುವ ಮಕ್ಕಳಿಗೆ ಇದೂ ಕೂಡ ಕಲಿಕೆಯ ಮಾರ್ಗವಾಗುತ್ತಿದೆ. ಹಿರಿಯ ವಿದ್ಯಾರ್ಥಿಗಳಿಗೆ ಅಭಿಮಾನದ ಸಂಗತಿಯಾದರೆ, ಮಕ್ಕಳ ಪೋಷಕರಿಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಶಾಲೆ, ನಮ್ಮ ಮಕ್ಕಳ ಆಟ, ನೃತ್ಯ, ಮಾತು ಮೊಬೈಲ್ ಮೂಲಕ ಎಲ್ಲೆಡೆ ನೋಡಬಹುದಾಗಿದೆ ಎಂಬ ಸಂಭ್ರಮ ಗ್ರಾಮಸ್ಥರದ್ದಾಗಿದೆ.

'ನಮ್ಮ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಯಾದ ಚಂದ್ರಶೇಖರ್ ಅವರು ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡು, ಶಾಲೆಯ ಚಟುವಟಿಕೆಗಳನ್ನು ಸಿ.ಡಿ.ಯಲ್ಲಿ ಹಾಕಿ ಕೊಡಲು ತಿಳಿಸಿದರು. ನಾನು ಒಂದು ಆಪ್ ಬಳಸಿ ವಿಡಿಯೊ ಮಾಡಿ ಕೊಟ್ಟೆ. 'ಉಷಾ ಗಂಗೆ' ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಮಾಡಿ ಅದನ್ನು ಅಪ್‌ಲೋಡ್ ಮಾಡಿದೆ. ನಮ್ಮ ಶಾಲೆಯನ್ನು ಕೇಂದ್ರಿತವಾಗಿರಿಸಿಕೊಂಡು ಮುಂದೆ ಶಿಕ್ಷಕರಿಗೆ, ಶಿಕ್ಷಣಕ್ಕೆ, ವಿದ್ಯಾರ್ಥಿಗಳಿಗೆ ಸಹಾಯವಾಗುವ ನಾಟಕ, ಸಂಭಾಷಣೆ, ವಿಜ್ಞಾನ ಪ್ರಯೋಗಗಳು, ಪುಸ್ತಕ ವಿಮರ್ಶೆ ಮುಂತಾದ ಸಂಗತಿಗಳನ್ನು ಈ ಚಾನಲ್‌ನಲ್ಲಿ ಅಪ್‌ಲೋಡ್ ಮಾಡುವ ಆಲೋಚನೆಯಿದೆ ”ಎಂದು ಶಿಕ್ಷಕಿ ಉಷಾ ತಿಳಿಸಿದರು.

ಯೂಟ್ಯೂಬ್ ಚಾನಲ್ ವಿಳಾಸ: https://bit.ly/2XdYpeN

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT