ಸೋಮವಾರ, ಫೆಬ್ರವರಿ 17, 2020
19 °C
ವಿಧಾನಸಭೆ ಚುನಾವಣೆಗಾಗಿ ಮೂರು ವರ್ಷಕ್ಕೂ ಮುಂಚೆಯೇ ಗರಿಗೆದರಿದ ಸಮಾಜ ಸೇವಾ ಕಾರ್ಯಗಳು

ಗೌರಿಬಿದನೂರು: ಕ್ಷೇತ್ರದಲ್ಲಿ ನಿಲ್ಲದ ಸಮಾಜಸೇವಕರ ದಾಂಗುಡಿ

ಎ.ಎಸ್.ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ಅಸ್ತಿತ್ವ ಪಡೆಯಲು ದಶಕಗಳಿಂದಲೂ ಹೊರಗಡೆಯಿಂದ ಬಂದು ವಿವಿಧ ಬಗೆಯಲ್ಲಿ ಸಮಾಜಸೇವೆ ಮಾಡಿ, ನಿರೀಕ್ಷಿತ ಫಲ ದೊರೆಯದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗುತ್ತಿರುವಾಗಲೂ, ಸಮಾಜಸೇವೆ ನೆಪದಲ್ಲಿ ಕ್ಷೇತ್ರಕ್ಕೆ ದಾಂಗುಡಿ ಇಡುವ ಸಮಾಜಸೇವಕರ ಪ್ರಯತ್ನ ಮಾತ್ರ ಈವರೆಗೆ ನಿಂತಿಲ್ಲ.

ಈವರೆಗೆ ಕ್ಷೇತ್ರದಲ್ಲಿ ಯಾವೊಬ್ಬ ಸಮಾಜ ಸೇವಕನಿಗೂ ಅದೃಷ್ಟ ಕೈ ಹಿಡಿಯದಿದ್ದರೂ, ಇನ್ನೂ ಮೂರು ವರ್ಷ ನಂತರ ಬರುವ ವಿಧಾನಸಭೆ ಚುನಾವಣೆಗಾಗಿ ತಾಲ್ಲೂಕಿನಲ್ಲಿ ಭದ್ರ ಅಡಿಪಾಯ ಹಾಕುವ ಉದ್ದೇಶದಿಂದ ಇದೀಗ ಮತ್ತೆ ಹೊಸ ಸಮಾಜಸೇವಕರಿಂದ ಸೇವಾ ಕಾರ್ಯಗಳು ಗರಿಗೆದರುತ್ತಿವೆ.

ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ವಿಧಾನಸಭೆ ಚುನಾವಣೆಗೆ ಮುನ್ನ ಕ್ಷೇತ್ರದಲ್ಲಿ ಬೆಂಗಳೂರಿನಿಂದ ಬರುವ ಸಮಾಜ ಸೇವಕರ ದಂಡು ಹರಿದಾಡುತ್ತದೆ. ಚುನಾವಣೆಯ ಬಳಿಕ ಅದು ಕ್ಷೇತ್ರದಿಂದ ಮರೆಯಾಗುತ್ತದೆ. ಸುಮಾರು ಒಂದೂವರೆ ದಶಕದಿಂದಲೂ ಹಣ ಬಲ ಮತ್ತು ಜಾತಿ ಬಲವನ್ನು ನಂಬಿ ಬರುವ ಸಮಾಜ ಸೇವಕರ ಈ ಕಾರ್ಯ ನಿರಂತರವಾಗಿ ನಡೆಯುತ್ತಿದ್ದರೂ ಕೂಡ ಯಾರೊಬ್ಬರೂ ಜನತೆಯ ಮನದಲ್ಲಿ ಸ್ಥಿರವಾಗಿ ನಿಲ್ಲದೆ ಅತಂತ್ರರಾಗಿದ್ದಾರೆ.

2008ರ ವಿಧಾನಸಭೆ ಚುನಾವಣೆಗೂ ಮುನ್ನ ನಗರದಿಂದ ನಾಯಕ ಸಮುದಾಯದ ಮುಖಂಡರಾದ ಎಚ್.ವಿ.ಶಿವಶಂಕರ್ ಕ್ಷೇತ್ರಕ್ಕೆ ಲಗ್ಗೆ ಸಮಾಜ ಸೇವೆಯ ಹೆಸರಿನಲ್ಲಿ ಜನತೆಗೆ ಜೀವವಿಮಾ ಪಾಲಿಸಿಗಳನ್ನು ಮಾಡಿಸಿ ಮತಯಾಚನೆಗೆ ಮುಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ 3,277 ಮತಗಳನ್ನು ಪಡೆದಿದ್ದರು.

ಇದೇ ಸಂದರ್ಭದಲ್ಲಿ ತಾನು ಕಾಂಗ್ರೆಸ್ ಮುಖಂಡ ಎಂದು ಹೇಳಿಕೊಂಡು ಬಂದ ನಾಯಕ ಸಮುದಾಯದ ಎಚ್.ಆನಂದಕುಮಾರ್ 2008ರ ಚುನಾವಣೆಯಲ್ಲಿ ಸ್ಪರ್ಧಿಸಿ 875 ಮತಗಳನ್ನು ಪಡೆದಿದ್ದರು. ಬಳಿಕ ಇವರಿಬ್ಬರೂ ಕ್ಷೇತ್ರದಲ್ಲಿ ಸುಳಿಯಲಿಲ್ಲ.

2013ರ ಚುನಾವಣೆಯ ವೇಳೆ ಕುರುಬ ಸಮುದಾಯದ ಕೆ.ಸೋಮಶೇಖರ್ ಮತ್ತು ಬಿಳಿಕಲ್ಲಳ್ಳಿ ಶಿವಪ್ಪ ಹಾಗೂ ಬಲಜಿಗ ಸಮುದಾಯದ ಪಿ.ಎಸ್.ಮುರಳೀಧರ್ ಮತ್ತು ಒಕ್ಕಲಿಗ ಸಮುದಾಯದ ಕೆ.ಜೈಪಾಲರೆಡ್ಡಿ ಕ್ಷೇತ್ರದಲ್ಲಿ ಸಂಚರಿಸಿ ತಮ್ಮ ಸಮಾಜಸೇವೆಯನ್ನು ಮುಂದುವರೆಸಿದ್ದರು.

ಇವರಲ್ಲಿ ಕೆ.ಸೋಮಶೇಖರ್ ಶ್ರೀರಾಮುಲು ಸಾರಥ್ಯ ಬಿಎಸ್‌ಆರ್ ಕಾಂಗ್ರೆಸ್, ಪಿ.ಎಸ್.ಮುರಳೀಧರ್ ಯಡಿಯೂರಪ್ಪ ಸಾರಥ್ಯದ ಕೆಜೆಪಿ ಪಕ್ಷ ಹಾಗೂ ಕೆ.ಜೈಪಾಲರೆಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣಾ ಫಲಿತಾಂಶದಲ್ಲಿ ಕೆ.ಸೋಮಶೇಖರ್ 3,526 ಮತಗಳು, ಪಿ.ಎಸ್.ಮುರಳೀಧರ್ 1,735 ಮತಗಳು ಹಾಗೂ ಕೆ.ಜೈಪಾಲರೆಡ್ಡಿ 4,4056 ಮತಗಳನ್ನು ಪಡೆದಿದ್ದರು. ಆದರೆ ಬಿಳಿಕಲ್ಲಳ್ಳಿ ಶಿವಪ್ಪ ಅವರಿಗೆ ಯಾವುದೇ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು.

2018ರ ಚುನಾವಣೆ ವೇಳೆಗೆ ಸಿ.ಮಂಜುನಾಥರೆಡ್ಡಿ, ಎನ್.ವೇಣುಗೋಪಾಲ ನಾಯಕ್, ಖಾದರ್ ಸುಭಾನ್ ಖಾನ್ ಹಾಗೂ ಕೆ.ಜೈಪಾಲರೆಡ್ಡಿ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡಲು ಸಿದ್ದರಾಗಿದ್ದರು. ಇವರಲ್ಲಿ 2013ರ ಚುನಾವಣೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದ ಕೆ.ಜೈಪಾಲರೆಡ್ಡಿ ಗೆಲುವಿನ ದಡ ಸೇರುವ ನಿರೀಕ್ಷೆಯಲ್ಲಿ ಮತ್ತೆ ಕ್ಷೇತ್ರದಲ್ಲಿ ಬಿರುಸಿನಿಂದ ಸೇವೆ ಆರಂಭಿಸಿದ್ದರು.

ಆದರೆ ಚಿಂತಾಮಣಿ ಶಾಸಕ ಜೆ.ಕೃಷ್ಣಾರೆಡ್ಡಿ ಅವರ ಸೋದರ ಸಂಬಂಧಿಯಾದ ಸಿ.ಮಂಜುನಾಥರೆಡ್ಡಿ ಜೆಡಿಎಸ್‌ನಿಂದ ಗುರ್ತಿಸಿಕೊಂಡು ತಾಲ್ಲೂಕು ಅಧ್ಯಕ್ಷರಾಗಿ ಸುಮಾರು ನಾಲ್ಕೂವರೆ ವರ್ಷ ನಿರಂತರವಾಗಿ ಸೇವೆ ಮಾಡಿದ್ದರೂ, ಅಂತಿಮ ಕ್ಷಣದಲ್ಲಿ ಟಿಕೆಟ್ ಅನ್ನು ಸ್ಥಳೀಯ ಮುಖಂಡರಾದ ಸಿ.ನರಸಿಂಹಮೂರ್ತಿ ಅವರಿಗೆ ಬಿಟ್ಟುಕೊಟ್ಟಿದ್ದರು.

ಕೆ.ಜೈಪಾಲರೆಡ್ಡಿ ರಾಜ್ಯ ಬಿಜೆಪಿ ಪಾಳಯದಲ್ಲಿ ಪ್ರಬಲ ಲಾಬಿ ನಡೆಸಿ ಸ್ಥಳೀಯ ಮುಖಂಡರ ವಿರೋಧದ ನಡುವೆಯೇ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಕಣಕ್ಕಿಳಿದು 34,759 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಯಿತು. ಖಾದರ್ ಸುಭಾನ್ ಖಾನ್ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ 192 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಎನ್.ವೇಣುಗೋಪಾಲ ನಾಯಕ್ ಮತ್ತು ಸಿ.ಮಂಜುನಾಥರೆಡ್ಡಿ ಕಣದಿಂದ ಹಿಂದೆ ಸರಿದಿದ್ದರು.

ಪ್ರಸ್ತುತ ತಾಲ್ಲೂಕಿನಲ್ಲಿ ಕುರುಬ ಸಮುದಾಯದ ಮುಖಂಡರು ಹಾಗೂ ಬೆಂಗಳೂರು ನಗರ ಜಿಲ್ಲೆಯ ಮಂಡೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜು ಹಾಗೂ ಅಲಕಾಪುರದ ಬಳಿ ಇರುವ ಏಷಿಯನ್ ಪ್ಯಾಬ್ ಟೆಕ್ ಸೋಲಾರ್ ಘಟಕದ ವ್ಯವಸ್ಥಾಪಕರು, ಸಂಸದ ಬಿ.ಎನ್.ಬಚ್ಚೇಗೌಡರ ಬೀಗರಾಗಿರುವ ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಕ್ಷೇತ್ರದಲ್ಲಿ ಸಂಚರಿಸಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸೇವಾ ಕಾರ್ಯ ಶುರುವಿಟ್ಟುಕೊಂಡಿದ್ದಾರೆ.

ಇವರೊಂದಿಗೆ ಶೀಘ್ರದಲ್ಲೇ ಮುಖಂಡರಾದ ಕೆ.ಜೈಪಾಲರೆಡ್ಡಿ, ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಹಿರಿಯ ಪುತ್ರ ಹಾಗೂ ಆನೇಕಲ್ ಕ್ಷೇತ್ರದ ದಲಿತ ಸಮುದಾಯದ ಉದ್ಯಮಿಯೊಬ್ಬರು ಸೇರಿದಂತೆ ಐದಕ್ಕೂ ಹೆಚ್ಚು ಮಂದಿ ಕ್ಷೇತ್ರದಲ್ಲಿ ಸಮಾಜಸೇವೆ ಮಾಡಲು ಬರಲಿದ್ದಾರೆ ಎಂಬ ವದಂತಿ ಇದೀಗ ಮತ್ತೆ ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು