ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಕಾಯಕಲ್ಪಕ್ಕೆ ಕಾದಿವೆ ಕನ್ನಡ ಶಾಲೆಗಳು

ಜಿಲ್ಲೆಯ ಗಡಿಭಾಗಗಳ ಗ್ರಾಮಗಳಲ್ಲಿ ಶಾಲೆಗೆ ಹೋದರೆ ಮಾತ್ರ ಕನ್ನಡ ಕಲಿಕೆ‌
Last Updated 1 ನವೆಂಬರ್ 2021, 7:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದೆ. ಬಾಗೇಪಲ್ಲಿ, ಗೌರಿಬಿದನೂರು, ಗುಡಿಬಂಡೆ ಮತ್ತು ಚಿಂತಾಮಣಿ ತಾಲ್ಲೂಕು ಆಂಧ್ರಪ್ರದೇಶದ ಜತೆಗೆ ಗಡಿಹಂಚಿಕೊಂಡಿವೆ. ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಶಾಲೆಗಳಿಗೆ ಹೋದರೆ ಮಾತ್ರ ಕನ್ನಡ ಕಲಿಕೆ ಎನ್ನುವಂತಹ ವಾತಾವರಣವಿದೆ.

ಜಿಲ್ಲೆಯ ಗಡಿಗ್ರಾಮಗಳು ಸಂಪೂರ್ಣವಾಗಿ ತೆಲುಗುಮಯವಾಗಿವೆ. ವಿದ್ಯಾರ್ಥಿಗಳ ಮಾತೃಭಾಷೆ ತೆಲುಗು ಎನ್ನುವಂತಿದೆ. ಶಿಕ್ಷಕರು ಶಾಲೆಯಲ್ಲಿ ತೆಲುಗಿನ ಮೂಲಕ ಕನ್ನಡ ಕಲಿಸಬೇಕಾಗಿದೆ. ಮನೆಗಳಲ್ಲಿ ಪೋಷಕರು ತೆಲುಗು ಬಳಕೆ ಮಾಡುತ್ತಾರೆ.

ಈ ಎಲ್ಲ ಕಾರಣದಿಂದ ಗಡಿಭಾಗಗಳಲ್ಲಿ ಸರ್ಕಾರಿ ಶಾಲೆಗಳು ನಶಿಸಿದರೆ ಅದರ ಪರಿಣಾಮ ಭಾಷೆಯ ಮೇಲೂ ಆಗುತ್ತದೆ. ಆದರೆ ಗಡಿ ಗ್ರಾಮಗಳಲ್ಲಿ ಇಂದಿಗೂ ಬಹಳಷ್ಟು ಸರ್ಕಾರಿ ಶಾಲೆಗಳು ಸಂಪೂರ್ಣವಾಗಿ ಮೂಲಸೌಲಭ್ಯಗಳನ್ನು ಹೊಂದಲು ಸಾಧ್ಯವಾಗಿಲ್ಲ.

ಗಡಿಗ್ರಾಮಗಳ ಶಾಲೆಗಳು ಶೇ 100ರಷ್ಟು ಸೌಲಭ್ಯವನ್ನು ಹೊಂದಿವೆಯೇ? ಎಲ್ಲ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿದೆಯೇ? ಮುಚ್ಚಿದ್ದ ಶಾಲೆಗಳು ತೆರೆದಿವೆಯೇ?

ಹೀಗೆ ನಾನಾ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ಹೆಚ್ಚಿನ ಆಶಾವಾದ ಕಂಡು ಬರುವುದಿಲ್ಲ.

ಈ ಬೆಳವಣಿಗೆಗಳ ನಡುವೆಯೂ ಆಶಾವಾದ ಎನ್ನುವಂತೆ ಗೌರಿಬಿದನೂರು, ಚಿಂತಾಮಣಿ ತಾಲ್ಲೂಕಿನ ಗಡಿಭಾಗದಲ್ಲಿ ಮುಚ್ಚಿದ್ದ ಸರ್ಕಾರಿ ಶಾಲೆಗಳು ಮತ್ತೆ ಆರಂಭವಾಗಿವೆ.

ಪೋಷಕರ ಆಂಗ್ಲ ಭಾಷೆಯ ಮೇಲಿನ ವ್ಯಾಮೋಹದ ಕಾರಣದಿಂದಲೂ ಗಡಿಭಾಗಗಳಲ್ಲಿ ಸರ್ಕಾರಿ ಶಾಲೆಗಳಿಗೆ ಪೆಟ್ಟು ಬಿದ್ದಿದೆ. ಗ್ರಾಮ ಗ್ರಾಮಗಳಿಗೂ ಖಾಸಗಿ ಶಾಲೆಗಳ ವಾಹನಗಳು ಎಡತಾಕುತ್ತಿವೆ. ಪ್ರಮುಖವಾಗಿ ಆಂಧ್ರದ ಪ್ರಭಾವಳಿಯನ್ನೇ ಹೊಂದಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳು ಹೇರಳವಾಗಿವೇ ಮುಚ್ಚಿವೆ. ಮುಚ್ಚಿದ ಶಾಲೆಗಳನ್ನು ತೆರೆಯುವ ಪ್ರಯತ್ನಗಳು ಸಹ ನಡೆದಿಲ್ಲ.

ಗಡಿ ಭಾಗದ ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಉತ್ತಮ ಕಟ್ಟಡ, ಶೌಚಾಲಯ, ಶುದ್ಧ ಕುಡಿಯುವ ನೀರು, ತಡೆಗೋಡೆ ಸೇರಿದಂತೆ ಕನಿಷ್ಠ ಸೌಲಭ್ಯಗಳಿಂದ ದೂರ ಉಳಿದಿವೆ.

ಪ್ರಗತಿಯತ್ತ ಗಡಿ‌ಭಾಗದ ಶಾಲೆಗಳು:

ಗೌರಿಬಿದನೂರು: ತಾಲ್ಲೂಕಿನ ನಗರಗೆರೆ ಹಾಗೂ ಕಸಬಾ ಹೋಬಳಿಯ‌ ವ್ಯಾಪ್ತಿಯ ಗ್ರಾಮಗಳ‌ ಸರ್ಕಾರಿ ಪ್ರಾಥಮಿಕ ಶಾಲೆಗಳು ದಶಕಗಳ ಹಿಂದೆ ದಾಖಲಾತಿ ಕೊರತೆಯಿಂದ ಒಂದೊಂದಾಗಿ ಮುಚ್ಚುತ್ತಿದ್ದವು. ಆದರೆ ಇತ್ತೀಚೆಗೆ ಗಡಿ ಭಾಗದಲ್ಲಿ ಮುಚ್ಚಿದ್ದ ಸರ್ಕಾರಿ‌ ಶಾಲೆಗಳು ಆರಂಭವಾಗಿವೆ. ಮೂಲ ಸೌಕರ್ಯಗಳು ಹಾಗೂ ಶೈಕ್ಷಣಿಕ ಪ್ರಗತಿಯ ಕಾರಣದಿಂದ ಮಕ್ಕಳು ಹಾಗೂ ಪೋಷಕರನ್ನು ಆಕರ್ಷಿಸುತ್ತಿವೆ.

ನಗರಗೆರೆ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕನ್ನಡದ ಜತೆಗೆ ನೆರೆಯ ಆಂಧ್ರ ಪ್ರದೇಶದ ತೆಲುಗು ಪ್ರಭಾವ ವ್ಯಾಪಕವಾಗಿದೆ‌. ಶಿಕ್ಷಕರು ಕನ್ನಡದ ಜತೆಗೆ ಮಕ್ಕಳ ಜತೆ ತೆಲುಗಿನಲ್ಲಿಯೂ ಸಂವಹನ ನಡೆಸಬೇಕಾಗಿದೆ.

ದಶಕಗಳ ಹಿಂದೆ ಸೌಕರ್ಯಗಳ ‌ಕೊರತೆಯಿಂದಾಗಿ ಗಡಿ‌ಭಾಗದಲ್ಲಿನ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿದ್ದವು. ಇದನ್ನು‌ ಮನಗಂಡ ಶಿಕ್ಷಣ ಇಲಾಖೆ ವಿವಿಧ ಆಯಾಮಗಳಲ್ಲಿ ಶಾಲೆಯಲ್ಲಿ ಪ್ರಗತಿಗೆ ಕಾರ್ಯನಿರ್ವಹಿಸಿದೆ.

ಸರ್ಕಾರಿ‌ ಶಾಲೆ ಉಳಿಸಿ‌ ಬೆಳೆಸುವ ನಿಟ್ಟಿನಲ್ಲಿ ಗ್ರಾ.ಪಂ ಸಹಕಾರದೊಂದಿಗೆ ನರೇಗಾ ಯೋಜನೆಯಡಿ ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ, ಕಾಂಪೌಂಡ್, ಕೈತೋಟ, ಮಳೆನೀರು ಸಂಗ್ರಹ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆ ಮೂಲಕ ಶಾಲೆಗಳ ಮೆರುಗು ಹೆಚ್ಚಿದೆ. ನಗರ ಪ್ರದೇಶದಲ್ಲಿನ ಕೆಲವು ದಾನಿಗಳ ಸಹಕಾರದಿಂದ ಮತ್ತಷ್ಟು ಸೌಲಭ್ಯಗಳು ದೊರೆತಿವೆ. ಇದರಿಂದಾಗಿ ಅವನತಿಯ ‌ಅಂಚಿನಲ್ಲಿದ್ದ ಗಡಿ ಗ್ರಾಮದಲ್ಲಿನ ಶಾಲೆಗಳು ಮಕ್ಕಳ ದಾಖಲಾತಿ ಹೆಚ್ವಿಸಿಕೊಂಡಿವೆ.

ಕೊರೊನಾ ಸಂಕಷ್ಟದ ಪರಿಣಾಮ ಗ್ರಾಮಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಕೂಲಿ ಕಾರ್ಮಿಕರು ಮತ್ತೆ ಗ್ರಾಮಗತ್ತ ಮುಖ ಮಾಡಿದ್ದಾರೆ. ತಮ್ಮ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ‌ದಾಖಲಿಸುತ್ತಿದ್ದಾರೆ. ಮೂರು ವರ್ಷಗಳಿಂದ ಮುಚ್ಚಿದ ಬಂಡಮೀದತಾಂಡಾ ಶಾಲೆ ಮತ್ತೆ ಆರಂಭವಾಗಿದೆ.

ಪೋಷಕರಾದ ರಾಮಾಂಜಿನಪ್ಪ ಮಾತನಾಡಿ, ಈ ಹಿಂದೆ ಗ್ರಾಮದ ಸರ್ಕಾರಿ ಶಾಲೆ ಬಿಟ್ಟು ನಾವು ಮಕ್ಕಳನ್ನು ‌ನಗರದ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ‌ಗ್ರಾಮದಲ್ಲಿನ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ನಾಚಿಸುವಂತಿವೆ. ಇದರಿಂದಾಗಿ ಮಕ್ಕಳನ್ನು ಮತ್ತೆ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದೇವೆ ಎನ್ನುತ್ತಾರೆ.

ಸೌಲಭ್ಯಗಳಿಂದ ದೂರ

ಶಿಡ್ಲಘಟ್ಟ: ತಾಲ್ಲೂಕಿನ ಗಡಿ ಭಾಗದ ಕನ್ನಡ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿವೆ. ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಮಳೆ ಬಂದರೆ ಸೋರುವ ಕೊಠಡಿಗಳು, ಹಳೇ ಕಟ್ಟಡಗಳು, ಶಾಲಾ ಕಾಂಪೌಂಡ್ ಇಲ್ಲದಿರುವುದು, ಕೆಲವು ಶಾಲೆಯ ಕೊಠಡಿಯ ನೆಲಹಾಸು ಸಹ ಕಿತ್ತು ಹೋಗಿರುವುದು, ಶಿಕ್ಷಕರ ಕೊರತೆ, ಗಣಕಯಂತ್ರ ವ್ಯವಸ್ಥೆ ಇಲ್ಲದಿರುವುದು, ಆಟದ ಮೈದಾನ ಇಲ್ಲದಿರುವುದು, ಶಾಲೆಯ ಆವರಣದಲ್ಲಿ ಪರಿಸರ ರಕ್ಷಣೆ ಕೊರತೆ, ಶೌಚಾಲಯ ಕೊರತೆಗಳನ್ನು ಎದುರಿಸುತ್ತಿವೆ.

ಕೆಲವು ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಸುಣ್ಣ ಬಣ್ಣವೂ ಆಗಿಲ್ಲ. ಕೆಲವು ಕೊಠಡಿಗಳು ಈಗಲೊ ಆಗಲೊ ಬೀಳುವ ಸ್ಥಿತಿಯಲ್ಲಿವೆ. ಶಿಕ್ಷಕರು ಭೀತಿಯಿಂದಲೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

‘ನಾನು ಕಸಾಪ ತಾಲ್ಲೂಕು ಅಧ್ಯಕ್ಷನಾಗಿದ್ದಾಗ ತಾಲ್ಲೂಕಿನ ಮೂಲೆ ಮೂಲೆ ಸುತ್ತಿದ್ದೇನೆ. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿಯೇ ಕಾರ್ಯಕ್ರಮಗಳನ್ನು ಮಾಡಿ, ಮಕ್ಕಳಿಗೆ ಮತ್ತು ಶಾಲೆಗೆ ಪುಸ್ತಕಗಳನ್ನು ಕೊಟ್ಟಿರುವೆ. ಆ ಸಂದರ್ಭದಲ್ಲಿ ಪ್ರತಿ ಶಾಲೆ ನೋಡುವ ಅವಕಾಶ ಸಿಕ್ಕಿತ್ತು. ಕೆಲವು ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು ಸರ್ಕಾರ ಯಾವುದೇ ಸರಿಯಾದ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್.

ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಸಿಗುವ ಅನುದಾನ ಕಡಿಮೆ ಇದೆ. ಶಾಲೆಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಹೇಳುತ್ತಾರೆ.

ಮುಚ್ಚಿದ 62 ಸರ್ಕಾರಿ ಶಾಲೆಗಳು

ಬಾಗೇಪಲ್ಲಿ: ಆಂಗ್ಲಶಾಲೆಗಳ ಮೇಲಿನ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕುಸಿದಿದೆ. ತಾಲ್ಲೂಕಿನಲ್ಲಿ 2012-13ರಿಂದ ಇಲ್ಲಿಯವರೆಗೆ ಸದ್ದಿಲ್ಲದೆ 62 ಸರ್ಕಾರಿ ಕನ್ನಡ ಶಾಲೆಗಳ ಬಾಗಿಲು ಬಂದ್ ಆಗಿದೆ. ಈ ಕಾರಣದಿಂದ ಗಡಿ ತಾಲ್ಲೂಕಿನಲ್ಲಿ ಕನ್ನಡ ಭಾಷೆಯ ಶಿಕ್ಷಣದ ಕಲಿಕೆಗೆ ದೊಡ್ಡ ಹೊಡೆತ ಬಿದ್ದಿದೆ.

ತಾಲ್ಲೂಕಿನಲ್ಲಿ ಕಿರಿಯ ಪ್ರಾಥಮಿಕ 179, ಹಿರಿಯ ಪ್ರಾಥಮಿಕ 72, ಪ್ರೌಢಶಾಲೆಗಳು 23, ಕರ್ನಾಟಕ ಪಬ್ಲಿಕ್ ಶಾಲೆ 1 ಸೇರಿದಂತೆ ಒಟ್ಟು 275 ಸರ್ಕಾರಿ ಶಾಲೆಗಳು ಇವೆ. ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಪೈಕಿ ಪೂರ್ವಪ್ರಾಥಮಿಕ ಶಾಲೆಯಲ್ಲಿ 69 ವಿದ್ಯಾರ್ಥಿಗಳು, ಕಿರಿಯ ಪ್ರಾಥಮಿಕ ಶಾಲೆಯಲ್ಲಿ 6,429, ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4,015, ಪ್ರೌಢಶಾಲೆಯಲ್ಲಿ 2,586, ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 114 ಸೇರಿದಂತೆ 13,213 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಹಾಗೂ ವಿಲೀನಗೊಳಿಸುವ ಸರ್ಕಾರದ ಆದೇಶದಿಂದ 2012-13ನೇ ಸಾಲಿನಿಂದ 2021ರವರೆಗೆ 62 ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳು ಕಡಿಮೆ ಇದ್ದರೆ ಅವರನ್ನು ಪಕ್ಕದ ಶಾಲೆಗಳಿಗೆ ದಾಖಲು ಮಾಡಲಾಗಿದೆ. ಶಿಕ್ಷಕರನ್ನು ಬೇರೆಡೆಗೆ
ವರ್ಗಾವಣೆ ಮಾಡಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೈಕ್ಷಣಿಕ ವಲಯಕ್ಕೆ ಕೋಟ್ಯಂತರ ಹಣ ವ್ಯಯಿಸುತ್ತಿವೆ. ಆದರೆ ಗಡಿಗ್ರಾಮಗಳ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಧ್ಯಾಹ್ನದ ಬಿಸಿಊಟ, ವಿದ್ಯಾರ್ಥಿ ವಸತಿನಿಲಯಗಳು, ಉಚಿತ ಪುಸ್ತಕ ನೀಡಲಾಗುತ್ತಿದೆ. ಆದರೆ ಶಾಲೆಗಳಲ್ಲಿ ಮಾತ್ರ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು
ಪೋಷಕರು ನುಡಿಯುತ್ತಾರೆ.

‘ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಮಾಡಬೇಕು. ಖಾಸಗಿ ಶಾಲೆಗಳಿಗೆ ಹೆಚ್ಚಾಗಿ ಅನುಮತಿ ನೀಡದೆ, ಸರ್ಕಾರಿ ಕನ್ನಡ ಶಾಲೆಗಳನ್ನು ಹೆಚ್ಚಾಗಿ ತೆರೆಯಬೇಕು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಶಿಕ್ಷಕ ಶಿಕ್ಷಕಿಯರು ಉತ್ತಮವಾಗಿ ಶಿಕ್ಷಣ ಕಲಿಸುತ್ತಿದ್ದಾರೆ. ಪೋಷಕರು ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳಿಸಬೇಕು’ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಕೆ.ನಿಂಗಪ್ಪ.

ಮುಚ್ಚಿದ್ದ ಶಾಲೆಗಳು ಆರಂಭ

ಚಿಂತಾಮಣಿ: ತಾಲ್ಲೂಕಿನ ಉತ್ತರ ಭಾಗವಾದ ಚಿಲಕಲನೇರ್ಪು ಮತ್ತು ಮುಂಗಾನಹಳ್ಳಿ ಹೋಬಳಿಗಳು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿವೆ. ಗಡಿಭಾಗಗಳಲ್ಲೂ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ 2 ವರ್ಷಗಳಿಂದ ಗಡಿಭಾಗಗಳ ಶಾಲೆಗಳ ಪರಿಸ್ಥಿತಿ ಸುಧಾರಿಸುತ್ತಿದೆ. ಮಕ್ಕಳ ದಾಖಲಾತಿ, ಹಾಜರಾತಿ ಉತ್ತಮಗೊಳ್ಳುತ್ತಿದೆ. ಅನೇಕ ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಶಾಲೆಗಳು ಒಂದೊಂದಾಗಿ ಪುನರಾರಂಭಗೊಳ್ಳುತ್ತಿವೆ.

ಚಿಲಕಲನೇರ್ಪು ಕ್ಲಸ್ಟರ್ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಧರ್ಮವಾರಹಳ್ಳಿಯಲ್ಲಿ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ್ದ ಶಾಲೆ ಈ ವರ್ಷ ಪುನರಾರಂಭವಾಗಿದೆ. 15 ವಿದ್ಯಾರ್ಥಿಗಳಿದ್ದಾರೆ. ನಡಂಪಲ್ಲಿ ಶಾಲೆಯೂ ಮತ್ತೆ ಬಾಗಿಲು ತೆರೆದಿದೆ.

ಸರ್ಕಾರಿ ಶಾಲೆಗಳಲ್ಲೂ ಸಾಕಷ್ಟು ಸುಧಾರಣೆಗಳಾಗಿವೆ. ಕೊರೊನಾ ಕಾರಣದಿಂದ ಉಂಟಾದ ಆರ್ಥಿಕ ತೊಂದರೆಯಿಂದ ಅನೇಕ ಖಾಸಗಿ ಶಾಲೆಗಳ ಮಕ್ಕಳು ಸಹ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಪೋಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ಇದೇ ವಾತಾವರಣ ಮುಂದುವರಿದಿದೆ. ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮತ್ತಷ್ಟು ಹೆಚ್ಚಬಹುದು ಎನ್ನುತ್ತಾರೆ ಬುರುಡಗುಂಟೆ ಶಾಲೆ ಮುಖ್ಯ ಶಿಕ್ಷಕ ಕೆ.ವಿ.ಚೌಡಪ್ಪ.

ಕಡದಲಮರಿ ಕ್ಲಸ್ಟರ್‌ನ ‌ಅಂಕಾಲಮಡುಗು, ಪುಟ್ಟಗುಂಡ್ಲಹಳ್ಳಿ, ಕೃಷ್ಣಾಪುರ ಗ್ರಾಮಗಳು ಕರ್ನಾಟಕದ ಗಡಿಭಾಗದಲ್ಲಿ ಹಾಗೂ ಆಂಧ್ರಪ್ರದೇಶದ ಹೊಸ್ತಿಲಲ್ಲಿವೆ. ಶಾಲೆಯ ಕೂಗಳತೆಯಲ್ಲಿ ಆಂಧ್ರಪ್ರದೇಶದ ಗ್ರಾಮಗಳಿವೆ. ಈ ಶಾಲೆಗಳಲ್ಲೂ ಶೇ 10ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಈ ಶಾಲೆಗಳಲ್ಲೂ 8ರಿಂದ 10 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಅನೇಕ ವರ್ಷಗಳಿಂದ ಮುಚ್ಚಿದ್ದ ಕೋಡಿಗಲ್ ಶಾಲೆಯನ್ನು ಪುನರಾರಂಭ ಮಾಡಲಾಗಿದೆ. 14 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಭಾಗದಲ್ಲಿ ವಂಗಿಮಾಳ್ಲು ಗ್ರಾಮದ ಶಾಲೆ ಮಾತ್ರ ಬಂದ್ ಆಗಿದೆ.

ಎಂ.ಗೊಲ್ಲಹಳ್ಳಿ ಕ್ಲಸ್ಟರ್ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ 570 ವಿದ್ಯಾರ್ಥಿಗಳು ದಾಖಲಾಗಿದ್ದರು. 2021-22 ನೇ ಸಾಲಿನಲ್ಲಿ ಈ ದಾಖಲಾತಿ 605ಕ್ಕೆ ಏರಿಕೆಯಾಗಿದೆ. ಕೆಲವು ವರ್ಷಗಳ ಹಿಂದೆ ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಕೊಠಡಿ, ಶಿಕ್ಷಕರ ಕೊರತೆ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಇತ್ತು. ನಂತರ ಶಾಲೆಗಳ ಪರಿಸ್ಥಿತಿ ಸುಧಾರಣೆ ಕಂಡಿದೆ. ಗಡಿಭಾಗದಲ್ಲಿ ಮುಚ್ಚಿದ್ದ ಒಂದೊಂದೇ ಸರ್ಕಾರಿ ಶಾಲೆಗಳು ಈಗ ಬಾಗಿಲು ತೆರೆಯುತ್ತಿವೆ.

ಗಡಿಭಾಗದ ಕಂಬಾಲಪಲ್ಲಿ, ಚೆನ್ನರಾಯನಹಳ್ಳಿ, ಬೋಡಂಪಲ್ಲಿ, ಹೊಸಹುಡ್ಯ, ಟಿ.ದೇವಪ್ಪಲ್ಲಿ, ಕಂಚೇಪಲ್ಲಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಐದಾರು ವರ್ಷಗಳ ಹಿಂದೆ ಮುಚ್ಚಿದ್ದವು. ಗ್ರಾಮಗಳ ಮುಖಂಡರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಚ್ಚಿರುವ ಶಾಲೆಗಳನ್ನು ಪುನರಾರಂಭ ಮಾಡಬೇಕು. ಆ ಭಾಗದ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಗಮನಹರಿಸಬೇಕು ಎಂಬುದು ಶಿಕ್ಷಣಾಸಕ್ತರ ಮನವಿ.

***

ದಾಖಲಾತಿ ಹೆಚ್ಚಳ: ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುತ್ತಿದೆ. ಮುಚ್ಚಿರುವ ಎಲ್ಲ ಶಾಲೆಗಳನ್ನು ಒಂದೊಂದಾಗಿ ಪುನರಾರಂಭ ಮಾಡಲಾಗುತ್ತಿದೆ.

ಎಚ್.ಜಿ.ಸುರೇಶ. ಬಿಇಒ, ಚಿಂತಾಮಣಿ ತಾ.

***

ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ: ಕೋವಿಡ್ 19 ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಪೋಷಕರು ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ಜೀವನ ನಡೆಸುವುದೆ ದುಸ್ತರವಾಗಿದೆ. ಇತ್ತೀಚಿನ ಸರ್ಕಾರಿ ಶಾಲೆಗಳು ಉತ್ತಮ ಸೌಲಭ್ಯಗಳನ್ನು ಹೊಂದಿವೆ. ಅನೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ.

- ಶಂಕರ್, ಸಿಆರ್‌ಪಿ, ಕಡಲಮರಿ, ಚಿಂತಾಮಣಿ ತಾ.

***

ಉದ್ಯೋಗದಲ್ಲಿ ಮೀಸಲಾತಿ ನೀಡಿ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾಗಿದ್ದಾರೆ. ಭಾಷೆಗಳನ್ನು ಉತ್ತಮವಾಗಿ ಬೋಧಿಸುತ್ತಿದ್ದಾರೆ. ಸರ್ಕಾರಗಳು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ, ಗ್ರಾಮಾಂತರ ವಿದ್ಯಾರ್ಥಿಗಳಿಗೆ ಉದ್ಯೋಗ, ಶಿಕ್ಷಣದಲ್ಲಿ ಶೇ 5ರಷ್ಟು ಮೀಸಲಾತಿ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು. ಇದರಿಂದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆೆಚ್ಚುತ್ತದೆ.

- ಮನೋಹರಾಚಾರಿ, ಪೋಷಕ, ಬಾಗೇಪಲ್ಲಿ

***

ಪ್ರಗತಿಯತ್ತ ಸಾಗಿದೆ: ಕಳೆದ ಒಂದೆರಡು ‌ವರ್ಷಗಳಿಂದ ಗಡಿ‌ಭಾಗದ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಚಿತ್ರಣ ಪ್ರಗತಿಯತ್ತ ಸಾಗಿದೆ. ಬಹುತೇಕ ಶಾಲೆಗಳಿಗೆ ಅವಶ್ಯ ಮೂಲ ಸೌಕರ್ಯಗಳು ದೊರೆತಿವೆ. ಪೋಷಕರು ಹಾಗೂ ದಾನಿಗಳ ಆಸಕ್ತಿ‌ ಮತ್ತು‌ ಸಹಕಾರದಿಂದ ಸರ್ಕಾರಿ‌ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ.

- ಕೆ.ವಿ.ಶ್ರೀನಿವಾಸಮೂರ್ತಿ, ಬಿಇಒ, ಗೌರಿಬಿದನೂರು

***

ಡಿ.ಎಂ.ಕುರ್ಕೆ ಪ್ರಶಾಂತ್, ಎಂ.ರಾಮಕೃಷ್ಣಪ್ಪ, ಎ.ಎಸ್.ಜಗನ್ನಾಥ್, ಪಿ.ಎಸ್.ರಾಜೇಶ್, ಡಿ.ಜಿ.ಮಲ್ಲಿಕಾರ್ಜುನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT