ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಖೇಲೊ ಇಂಡಿಯಾ; ಈಜಿನಿಂದ ಫುಟ್‌ಬಾಲ್‌ಗೆ ಬದಲಾವಣೆ

ಐದು ವರ್ಷಗಳಿಂದಲೂ ಈಜು ಕ್ರೀಡೆ ತರಬೇತಿಗೆ ಬಾರದ ಪ್ರಸ್ತಾವಗಳು
Published : 19 ಆಗಸ್ಟ್ 2024, 7:06 IST
Last Updated : 19 ಆಗಸ್ಟ್ 2024, 7:06 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಖೇಲೊ ಇಂಡಿಯಾ ಯೋಜನೆಯಡಿ ತರಬೇತಿಗೆ ಆಯ್ಕೆ ಮಾಡಿಕೊಂಡಿದ್ದ ಕ್ರೀಡೆಯನ್ನು ಐದು ವರ್ಷಗಳ ನಂತರ ಬದಲಾವಣೆ ಮಾಡಲಾಗಿದೆ. ಈಜು ಕ್ರೀಡೆ ಬದಲು ಫುಟ್‌ಬಾಲ್‌ ಅನ್ನು ‘ಖೇಲೊ ಇಂಡಿಯಾ’ ಯೋಜನೆಯಡಿ ಅಳವಡಿಸಿಕೊಳ್ಳಲಾಗಿದೆ.  

2019–20ನೇ ಸಾಲಿನಲ್ಲಿ ಜಿಲ್ಲೆಗೆ ಖೇಲೊ ಇಂಡಿಯಾ ಯೋಜನೆಯಡಿ ಈಜು ಕ್ರೀಡೆ ಅಳವಡಿಸಿಕೊಳ್ಳಲಾಗಿತ್ತು. ಕೇಂದ್ರ ಪುರಸ್ಕೃತ ಯೋಜನೆಗೆ ಅಂದು ₹ 2 ಲಕ್ಷ  ಬಿಡುಗಡೆ ಆಗಿತ್ತು. ಆದರೆ ಈಜು ಕ್ರೀಡೆಯಲ್ಲಿ ತರಬೇತಿ ನೀಡಲು ಯಾವುದೇ ಪ್ರಸ್ತಾವ ಬಾರದ ಕಾರಣ ಅನುದಾನವು ಜಿಲ್ಲಾ ಕ್ರೀಡಾಂಗಣ ಸಮಿತಿ ಖಾತೆಯಲ್ಲಿಯೇ ಉಳಿದಿತ್ತು.

ಜಿಲ್ಲಾ ಕ್ರೀಡಾ ಇಲಾಖೆ ಆಗಾಗ್ಗೆ ಈಜು ತರಬೇತುದಾರರು ಬೇಕಾಗಿದ್ದಾರೆ ಎಂದು ಪ್ರಕಟಣೆಗಳನ್ನು ನೀಡಿದರೂ ಯಾರೊಬ್ಬ ಈಜು ತರಬೇತುದಾರರು ಸಹ ತರಬೇತುದಾರರಾಗಿ ಬರಲು ಮುಂದೆ ಬಂದಿರಲಿಲ್ಲ. ಹೀಗೆ ಜಿಲ್ಲೆಯ ಕ್ರೀಡಾಪಟುಗಳಿಗೆ ವರದಾನವಾಗ ಬೇಕಾಗಿದ್ದ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ನನೆಗುದಿಗೆ ಬಿದ್ದಿತ್ತು. ತರಬೇತುದಾರರು ಬಾರದಿರುವುದು ಮತ್ತು ಕಾರ್ಯಕ್ರಮ ಅನುಷ್ಠಾನ ಆಗದಿರುವ ಕಾರಣ ಇಲಾಖೆಗೂ ಕಸಿವಿಸಿ ಆಗಿತ್ತು.

ಐದು ವರ್ಷಗಳಿಂದ ಈಜು ತರಬೇತಿ ನೀಡಲು ತರಬೇತುದಾರರು ಮುಂದೆ ಬಾರದ ಕಾರಣ ಕ್ರೀಡಾ ಇಲಾಖೆಯು ಅಂತಿಮವಾಗಿ ಈಜು ಕ್ರೀಡೆಯನ್ನು ಬದಲಾವಣೆ ಮಾಡಿದೆ. ಆ ಸ್ಥಾನಕ್ಕೆ ಫುಟ್‌ಬಾಲ್‌ಗೆ ಅವಕಾಶ ನೀಡಿದೆ ಎನ್ನುತ್ತವೆ ಇಲಾಖೆ ಮೂಲಗಳು.

ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು ₹ 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಂತರರಾಷ್ಟ್ರೀಯ ಗುಣಮಟ್ಟ ಈಜುಕೊಳವಿದೆ. 50 ಮೀಟರ್‌ ಉದ್ದ, 20 ಮೀಟರ್‌ ಅಗಲವಿದೆ. 8 ಲೈನ್‌ಗಳನ್ನು ಹೊಂದಿದೆ. ಒಂದು ಬಾರಿಗೆ ಗರಿಷ್ಠ 100 ಜನರು ಈಜಾಡಬಹುದು. ಈ ಎಲ್ಲ ಕಾರಣದಿಂದ 2019–20ನೇ ಸಾಲಿನಲ್ಲಿ ಜಿಲ್ಲಾ ಕ್ರೀಡಾ ಇಲಾಖೆ ಖೇಲೊ ಇಂಡಿಯಾ ಅಡಿ ಈಜು ಅಳವಡಿಸಿಕೊಂಡಿತ್ತು ಎನ್ನಲಾಗುತ್ತದೆ. ಆದರೆ ಘೋಷಣೆ ತರುವಾಯ ಅನುಷ್ಠಾನ ಮಾತ್ರ ನನೆಗುದಿಗೆ ಬಿತ್ತು.

ಕೇಂದ್ರ ಸರ್ಕಾರದಿಂದ ತರಬೇತುದಾರರ ಗೌರವ ಧನ, ಸಹಾಯ ಸಿಬ್ಬಂದಿ, ಕ್ರೀಡಾ ಉಪಕರಣಗಳು ಮತ್ತು ಕ್ರೀಡಾ ಕಿಟ್, ಕ್ರೀಡಾ ಮೈದಾನದ ಅಭಿವೃದ್ಧಿ ಮತ್ತು ಇತರೆ ಕೆಲಸಗಳಿಗೆ ತಗಲುವ ವೆಚ್ಚ ನೀಡಲಾಗುತ್ತದೆ.

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಸಚಿವಾಲಯಕ್ಕೆ ನಿಗದಿಪಡಿಸಿದ ಮೊತ್ತದಲ್ಲಿ ಖೇಲೊ ಇಂಡಿಯಾ ಯೋಜನೆಗೆ ಸಿಂಹಪಾಲು ದೊರಕಿದೆ. ತಳಮಟ್ಟದಲ್ಲಿ ಕ್ರೀಡೆ ಪ್ರೋತ್ಸಾಹಿಸಲು ಯೋಜನೆ ಜಾರಿಗೊಳಿಸಲಾಗಿದೆ.

ಖೇಲೊ ಇಂಡಿಯಾ ಯೋಜನೆಗೆ ಕೇಂದ್ರ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಮೊತ್ತ ನೀಡುತ್ತ ಬಂದಿದೆ. ಈ ಎಲ್ಲ ಕಾರಣದಿಂದ ಜಿಲ್ಲೆಯ ಕ್ರೀಡಾಪಟುಗಳ ಉನ್ನತಿಗೆ ಖೇಲೊ ಇಂಡಿಯಾ ಪ್ರಮುಖ ಕಾರ್ಯಕ್ರಮವಾಗಿದೆ.

ಫುಟ್‌ಬಾಲ್‌ಗಿದೆ ಜಿಲ್ಲೆಯಲ್ಲಿ ಗಟ್ಟಿ ನೆಲೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫುಟ್‌ಬಾಲ್ ಕ್ರೀಡೆಗೆ ದೊಡ್ಡ ಮಟ್ಟದ ನೆಲೆ ಇದೆ.  

ಚಿಂತಾಮಣಿ ತಾಲ್ಲೂಕಿನ ಕಾಗತಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಫುಟ್‌ಬಾಲ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಬಾಲಕಿಯರು 12 ವರ್ಷಗಳಿಂದ ಸತತವಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ವಿಶೇಷವಾಗಿ ಫುಟ್‌ಬಾಲ್ ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುಮಾರ್ ಈ ಸಾಧನೆಯ ಹಿಂದಿನ ರೂವಾರಿ.

ನಗರದ ಸರ್.ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಸರ್.ಎಂ.ವಿ.ಫುಟ್‌ಬಾಲ್ ಅಸೋಸಿಯೇಷನ್‌ನಿಂದ ರಾಜ್ಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಗಳನ್ನು  ಆಯೋಜಿಸಲಾಗಿದೆ. 2019ರ ಡಿಸೆಂಬರ್‌ನಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಫುಟ್‌ಬಾಲ್ ತಂಡದ ಆಯ್ಕೆ ಪ್ರಕ್ರಿಯೆ ನಗರದ ಬಿಜಿಎಸ್ಐಎಂಸ್ ಆವರಣದಲ್ಲಿ  ನಡೆದಿತ್ತು. ಅಂದು 110 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹೀಗೆ ಜಿಲ್ಲೆಯಲ್ಲಿ ಫುಟ್‌ಬಾಲ್‌ಗೆ ಸಂಬಂಧಿಸಿದ ಚಟುವಟಿಕೆಗಳು ಅಲ್ಲಲ್ಲಿ ಕಾಣುತ್ತವೆ. ಖೇಲೊ ಇಂಡಿಯಾವು ಫುಟ್‌ಬಾಲ್ ಬೆಳವಣಿಗೆಗೆ ಮತ್ತೊಂದು ಅವಕಾಶವನ್ನು ಒದಗಿಸಿದೆ.

ತರಬೇತುದಾರರಿಗೆ ಆಹ್ವಾನ

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಖೇಲೊ ಇಂಡಿಯಾ ಅಡಿಯಲ್ಲಿ ಫುಟ್‌ಬಾಲ್ ತರಬೇತಿ ನೀಡಲು ತರಬೇತುದಾರರಿಂದ ಅರ್ಜಿ ಆಹ್ವಾನಿಸಿದೆ.  40 ವರ್ಷ ವಯೋಮಿತಿ ಒಳಗಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಗಳಲ್ಲಿ ಭಾಗಿಯಾದವರು ತರಬೇತುದಾರರಾಗಿ ಅರ್ಜಿ ಸಲ್ಲಿಸಬಹುದು. ತರಬೇತುದಾರರಿಗೆ ಗೌರವಧನ ನೀಡಲಾಗುತ್ತದೆ. ತಕ್ಷಣವೇ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮತ್ತು ಸಂಜೆ ತರಬೇತಿ ನೀಡಬೇಕು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ರಾಷ್ಟ್ರಮಟ್ಟ ಪ್ರತಿನಿಧಿಸಿದ್ದ ಪಟುಗಳು’

ಕೃಷ್ಣಮೂರ್ತಿ ಮಿತ್ರಣ್ಣ ಕರೀಂ ಸಾಬ್ ಮುಶೀರ್ ಕೆ.ಆರ್ ಶ್ರೀನಿವಾಸನ್ ಬಾಲಿಗೂರು ಅವರು ಫುಟ್‌ಬಾಲ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಅಧ್ಯಕ್ಷ ಜೆ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಹಿಂದಿನಿಂದಲೂ ಫುಟ್‌ಬಾಲ್‌ಗೆ ತಳಮಟ್ಟದಲ್ಲಿ ನೆಲೆ ಇದೆ. ಯುವ ಸಮುದಾಯ ಜಿಲ್ಲೆಯಲ್ಲಿ ಫುಟ್‌ಬಾಲ್ ಬಗ್ಗೆ ಆಸಕ್ತಿ ಇದೆ. ಆದರೆ ಅಗತ್ಯ ಸೌಲಭ್ಯಗಳು ಇಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT