ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಇಲಾಖೆಗಳಲ್ಲಿ ಸಿಬ್ಬಂದಿ ಖಾಲಿ ಖಾಲಿ

Last Updated 1 ಡಿಸೆಂಬರ್ 2022, 5:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಮ್ಮ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ. ಇರುವ ಸಿಬ್ಬಂದಿಯಲ್ಲಿಯೇ ಕೆಲಸ ಮಾಡಿಸುತ್ತಿದ್ದೇವೆ. ಇದು ನಿತ್ಯದ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಸಹ ಬೀರುತ್ತಿದೆ’–ಜಿಲ್ಲೆಯ ಎಪಿಎಂಸಿ, ರೇಷ್ಮೆ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪಶುಸಂಗೋಪನೆ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಕೇಳಿ ಬರುವ ಮಾತು.

ಯಾವುದೇ ಇಲಾಖೆಯ ಸುಗಮ ಆಡಳಿತಕ್ಕೆ ಸಿಬ್ಬಂದಿ ಅತಿ ಮುಖ್ಯ. ಆದರೆ ಜಿಲ್ಲೆಯ ಬಹಳಷ್ಟು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆ ಇಲಾಖೆಗಳನ್ನು ತೀವ್ರವಾಗಿಯೇ ಬಾಧಿಸುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿರುವ ಕ್ಷೇತ್ರ. ಇಂತಿಪ್ಪ ಜಿಲ್ಲೆಯಲ್ಲಿ ಈ ಇಲಾಖೆಗಳು ಕಾರ್ಯವೈಖರಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬೆಳೆಗಳನ್ನು ರೋಗಗಳು ಬಾಧಿಸಿದಾಗ ರೈತರ ಹೊಲ, ತೋಟಗಳಿಗೆ ಭೇಟಿ ನೀಡಿ ಸಲಹೆಗಳನ್ನು ನೀಡಬೇಕಾಗಿರುತ್ತದೆ. ರಾಸುಗಳು ಅನಾರೋಗ್ಯಕ್ಕೆ ತುತ್ತಾದರೆ ಅವುಗಳಿಗೆ ಸೂಕ್ತ ಚಿಕಿತ್ಸೆ ಕೊಡಬೇಕು.ಆದರೆ ಇಂತಹ ಪ್ರಮುಖ ಇಲಾಖೆಯಲ್ಲಿಯೇ ಹುದ್ದೆಗಳು ಖಾಲಿ ಇವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಿಲ್ಲಾ ಪಂಚಾಯಿತಿಯಲ್ಲಿಯೂ ಸಾಕಷ್ಟುಹುದ್ದೆಗಳು ಖಾಲಿ ಇವೆ. ಇವೆಲ್ಲವುಗಳ ಪರಿಣಾಮ ನೇರವಾಗಿ ಜನ ಸಾಮಾನ್ಯರ ಮೇಲಾಗುತ್ತಿದೆ. ಕೆಲಸ ಕಾರ್ಯಗಳನ್ನುಮಾಡಿಕೊಡಲು ಅಧಿಕಾರಿಗಳು
ಸಿಬ್ಬಂದಿ ಕೊರತೆಯ ನೆಪವನ್ನೂ ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಗೆ ಒಟ್ಟುಅಧಿಕಾರಿಗಳು, ಸಿಬ್ಬಂದಿ ಸೇರಿ 150 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ 38 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 112 ಹುದ್ದೆಗಳು ಖಾಲಿ ಇವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 24 ಹುದ್ದೆಗಳು ಮಂಜೂರಾಗಿವೆ. 7ರಲ್ಲಿ ಮಾತ್ರ ಕಾಯಂ ಸಿಬ್ಬಂದಿ ಇದ್ದು 17 ಹುದ್ದೆಗಳು ಖಾಲಿ ಇವೆ.ಕುಡಿಯುವ ನೀರು ಪೂರೈಕೆ ಇಲಾಖೆಗೆ 85 ಹುದ್ದೆಗಳು ಮಂಜೂರಾಗಿದ್ದು 35 ಹುದ್ದೆಗಳು ಮಾತ್ರ ಭರ್ತಿಯಾಗಿವೆ.

ಜಿಲ್ಲಾ ಪಂಚಾಯಿತಿ ವಿಭಾಗದಲ್ಲಿ 68 ಹುದ್ದೆಗಳು ಮಂಜೂರಾಗಿದ್ದು 11 ಹುದ್ದೆಗಳಲ್ಲಿ ಮಾತ್ರ ಕಾಯಂ ಸಿಬ್ಬಂದಿ ಇದ್ದಾರೆ. ಪಶುಸಂಗೋಪನಾ ಇಲಾಖೆಯಲ್ಲಿ ಉಪ ನಿರ್ದೇಶಕರಿಂದ ಹಿಡಿದು ‘ಡಿ’ ದರ್ಜೆ ಸಹಾಯಕರವರೆಗೆ ಜಿಲ್ಲೆಗೆ 459 ಹುದ್ದೆಗಳು ಮಂಜೂರಾಗಿದ್ದು ಅರ್ಥದಷ್ಟು ಹುದ್ದೆಗಳು ಖಾಲಿ ಇವೆ. ಜಿಲ್ಲಾ ಕಾನೂನು ಮಾಪನ ಇಲಾಖೆಯಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲ.

ಜಿಲ್ಲೆಯಲ್ಲಿಯೇ ದೊಡ್ಡ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬಾಗೇಪಲ್ಲಿ ಎಪಿಎಂಸಿಯಲ್ಲಿ ಒಬ್ಬರೇ ಒಬ್ಬ ಅಧಿಕಾರಿಗಳು ಇಲ್ಲ. ಎಲ್ಲವೂ ತಾತ್ಕಾಲಿಕ ನಿಯೋಜನೆಯ ಮೇಲೆ ನಡೆಯುತ್ತಿದೆ. ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಮಾರುಕಟ್ಟೆ ಸಹಾಯಕರು, ಎಸ್‌ಡಿಎ, ‘ಡಿ’ ದರ್ಜೆ ನೌಕರರು, ವಾಹನ ಚಾಲಕರು, ಬೆರಳಚ್ಚುಗಾರರು ಸೇರಿದಂತೆ 10 ಹುದ್ದೆಗಳು ಸರ್ಕಾರದಿಂದ ಮಂಜೂರಾಗಿವೆ. ಈ ಯಾವ ಹುದ್ದೆಗಳಲ್ಲಿಯೂ ನೌಕರರು ಇಲ್ಲ.ರೇಷ್ಮೆಗೂಡು ಮಾರುಕಟ್ಟೆಗಳು ಸಹ ಈ ಸಿಬ್ಬಂದಿ ಕೊರತೆಯಿಂದ ಹೊರತಾಗಿಲ್ಲ.

ಸಿಬ್ಬಂದಿ ಕೊರತೆ ಪ್ರಮುಖ ಇಲಾಖೆಗಳಲ್ಲಿ ಅಷ್ಟೇ ಅಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಇದೆ. ಜಿಲ್ಲೆಯ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ತೆಗೆದುಕೊಳ್ಳಲಾಗಿದೆ.

ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಹೆಚ್ಚು:ಬಾಗೇಪಲ್ಲಿ ಮತ್ತು ಗುಡಿಬಂಡೆ ರಾಜ್ಯದ ಗಡಿಭಾಗದಲ್ಲಿರುವ ತಾಲ್ಲೂಕು
ಗಳು. ನೆರೆಯ ಆಂಧ್ರಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಈ ತಾಲ್ಲೂಕುಗಳು ಪೂರ್ಣ ತೆಲುಗು ಸೀಮೆ ಎನ್ನುವಂತಿದೆ. ಇಂತಿಪ್ಪ ಈ ಎರಡೂ ತಾಲ್ಲೂಕುಗಳಲ್ಲಿ ಬಹುತೇಕ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ.

ಪುರಸಭೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ರೇಷ್ಮೆ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ, ಎಪಿಎಂಸಿ ಹೀಗೆ ಎಲ್ಲ ಇಲಾಖೆಗಳಲ್ಲಿಯೂ ಅಧಿಕಾರಿ, ಸಿಬ್ಬಂದಿಯ ಸಾಲು ಸಾಲು ಹುದ್ದೆಗಳು ಖಾಲಿ ಇವೆ. ಒಂದೆರೆಡು ಹುದ್ದೆಗಳು ಖಾಲಿ ಇರುವುದು ಸಾಮಾನ್ಯ. ಆದರೆ ಪ್ರಮುಖ ಇಲಾಖೆಗಳಲ್ಲಿ ಕನಿಷ್ಠ ಮಟ್ಟದಲ್ಲಿಯೂ ಅಧಿಕಾರಿ, ಸಿಬ್ಬಂದಿ ಇಲ್ಲ. ಹುದ್ದೆಗಳ ಮುಂದೆ ಖಾಲಿ ಎನ್ನುವ ಷರಾ ಎದ್ದು ಕಾಣುತ್ತದೆ.

ಮಂಜೂರಾದ 65 ಹುದ್ದೆಗೆ 4 ಭರ್ತಿ

ಸಹಾಯಕ ಕೃಷಿ ಅಧಿಕಾರಿಗಳು ಕೃಷಿ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಜಿಲ್ಲೆಗೆ ಸರ್ಕಾರ ಒಟ್ಟು 65 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಮಂಜೂರು ಮಾಡಿದೆ. ಆದರೆ ಭರ್ತಿಯಾಗಿರುವುದು ಕೇವಲ ನಾಲ್ಕು ಹುದ್ದೆಗಳು ಮಾತ್ರ!

ಗುತ್ತಿಗೆ ಆಧಾರದಲ್ಲಿ ನೇಮಕ

ಸರ್ಕಾರಕ್ಕೆ ಪ್ರಗತಿ ಸಾಧಿಸಬೇಕು ಎನ್ನುವ ಗುರಿ ಇದೆ. ಕೊರತೆ ಇರುವ ಕಡೆ ಇಲಾಖೆಗಳಲ್ಲಿ ಆದ್ಯತೆಯ ಮೇಲೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT