ಬುಧವಾರ, ಮಾರ್ಚ್ 29, 2023
30 °C

ವಿಚಾರಣಾ ಕೈದಿಗಳಿಗೆ ಕಾನೂನು ಅರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೈದಿಗಳು ಶಿಕ್ಷೆಯ ಅವಧಿ ಪೂರ್ಣಗೊಳಿಸಿ ಹೊರಗೆ ಬಂದಾಗ ಮನಸ್ಸು ಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು ತಿಳಿಸಿದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಜಿಲ್ಲಾ ಕಾರಾಗೃಹ, ಸುಧಾರಣೆ ಸೇವಾ ಇಲಾಖೆ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸೋಮವಾರ  ತಾಲ್ಲೂಕಿನ ಅಣಕನೂರು ಬಳಿಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಕೈದಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

ಸ್ವಾತಂತ್ರ್ಯ ಪಡೆಯುವುದು ಪ್ರತಿಯೊಬ್ಬರ ಹಕ್ಕು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿ ಬರಬಾರದು. ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷೆ ಅವಧಿಯಲ್ಲಿರುವ ತಾವು ಸೆರೆವಾಸದ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಾರಾಗೃಹದಲ್ಲಿರುವ ಗ್ರಂಥಾಲಯದ ಪುಸ್ತಕಗಳನ್ನು ಓದಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮಿಕಾಂತ್ ಜಾನಕಿರಾಮ್ ಮಿಸ್ಕಿನ್ ಅವರು ಮಾತನಾಡಿ, ಬಿ.ಆರ್‌.ಅಂಬೇಡ್ಕರ್ ಅವರ ಪ್ರಕಾರ ಶಿಕ್ಷಣವೇ ದೇಶದ ಅಭಿವೃದ್ಧಿಗೆ ಮೂಲವಾಗಿದೆ. ಪ್ರತಿಯೊಬ್ಬರನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದೇ ಈ ಸಾಕ್ಷರತಾ ಕಾರ್ಯಕ್ರಮದ ಉದ್ದೇಶ. ಮನೆ ಬೆಳಗಲು ಹಣತೆ ಬೇಕು, ಮನ ಬೆಳೆಗಲು ಅಕ್ಷರ ಬೇಕು ಎಂದರು.

ನ್ಯಾಯಾಧೀಶರಾದ ಭಾನುಮತಿ ಮಾತನಾಡಿ, ಬಂಧಿತ ವ್ಯಕ್ತಿಗಳ ಬದಲಾವಣೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ಶಿಕ್ಷಣವನ್ನು ಕಲಿಸುವುದೇ ಇದರ ಉದ್ದೇಶವಾಗಿದೆ. ಪ್ರತಿಯೊಬ್ಬರಿಗೂ ಸಾಮಾನ್ಯ ಶಿಕ್ಷಣವಿದ್ದರೆ ಅಪರಾಧಗಳನ್ನು ತಡೆಯಬಹುದು ಎಂದು ತಿಳಿಸಿದರು.

ಡಿವೈಎಸ್ಪಿ ವಾಸುದೇವ್, ಜಿಲ್ಲಾ ಕಾರಾಗೃಹ ಅಧೀಕ್ಷಕ ಎಂ.ಜಯರಾಮಯ್ಯ, ಬ್ರಹ್ಮಾನಂದರೆಡ್ಡಿ, ಕಲಾವಿದರಾದ ವಿ.ನಂಜುಂಡಪ್ಪ, ಲೋಕ ಶಿಕ್ಷಣ ಸಮಿತಿಯ ಶಿವಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.