ಗುಡಿಬಂಡೆ: ಗಡಿ ಭಾಗದ ಶಾಲೆಗಳ ಅಭಿವೃದ್ಧಿಗಾಗಿ ದಶಗಳ ಹಿಂದೆಯೇ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಆದರೆ, ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಲಿಗುಂಬ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದರೂ, ಈವರೆಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ.
ಇದರಿಂದಾಗಿ ಶಾಲಾ ಕಟ್ಟಡ, ಪೀಠೋಪಕರಣಗಳು ಸೇರಿದಂತೆ ಶಾಲೆಯು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿಯುವಂತಾಗಿದೆ ಎಂದು ಜನರು ಆರೋಪಿಸುತ್ತಾರೆ.
ಎಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ನುಲಿಗುಂಬ ಗ್ರಾಮದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1955ರಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಲಾಯಿತು. ಇದೀಗ 68 ವಸಂತಗಳನ್ನು ಪೂರೈಸಿರುವ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಬಡ್ತಿ ಹೊಂದುವ ಮೂಲಕ ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಪಾಠ ಪ್ರವಚನಗಳನ್ನು ಕಲಿಯುತ್ತಿದ್ದಾರೆ.
ನುಲಿಗುಂಬ ಗ್ರಾಮದಲ್ಲಿ ಸುಮಾರು 500 ಮಂದಿ ವಾಸವಾಗಿದ್ದು, ಎಲ್ಲ ಜಾತಿಯ ಜನರು ಇದ್ದಾರೆ. ಆರ್ಥಿಕವಾಗಿ ಸಬಲರಾಗಿರುವವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಆದರೆ, ಬಡವರು ತಮ್ಮ ಮಕ್ಕಳನ್ನು ನುಲಿಗುಂಬ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಆದರೆ, ಈ ಶಾಲೆಯ ಎರಡು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಕಟ್ಟಡದ ಮೇಲ್ಚಾವಣಿಯ ಗಾರೆ ಕೆಲವೆಡೆ ಕುಸಿದುಬೀಳುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಶಾಲೆಯಲ್ಲಿರುವ ಏಳು ಕೊಠಡಿಗಳ ಪೈಕಿ ಎರಡು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಈ ಕೊಠಡಿಗಳನ್ನು ತೆರವುಗೊಳಿಸಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.
ಗುಡಿಬಂಡೆ ತಾಲ್ಲೂಕಿನಲ್ಲಿ ಇಂದಿರಾ ಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ, ವಸತಿ ಶಾಲೆಯ ಜತೆಗೆ ಅಂಗ್ಲ ಮಾಧ್ಯಮ ಶಾಲೆಗಳಿಂದಾಗಿ ಗಡಿ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಹೀಗಾಗಿ ವಸತಿ ಶಾಲೆಗಳಿಗಿಂತಲೂ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲೂ ನೀಡಬೇಕಿದೆ. ಇಲ್ಲದಿದ್ದರೆ, ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳು ಮುಚ್ಚುವ ದುಃಸ್ಥಿತಿ ಎದುರಾಗಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕುಸಿದ ವಿದ್ಯಾರ್ಥಿಗಳ ಸಂಖ್ಯೆ
2021–22ನೇ ಸಾಲಿನಲ್ಲಿ ಈ ಶಾಲೆಗೆ ಪಕ್ಕದ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಆದರೆ ಇದೀಗ ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ ಹಿನ್ನೆಲೆಯಲ್ಲಿ ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುವಂತಾಗಿದೆ. 2021-22ನೇ ಸಾಲಿನಲ್ಲಿ 60ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದರು. ಆದರೆ ಇದೀಗ ವಿದ್ಯಾರ್ಥಿಗಳ ಸಂಖ್ಯೆ 34ಕ್ಕೆ ಕುಸಿದಿದೆ. ಈ ಪೈಕಿ ಒಂದನೇ ತರಗತಿಯಲ್ಲಿ ಇಬ್ಬರು ಎರಡನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಓದುತ್ತಿದ್ದರು. ಆದರೆ ಆ ಕುಟುಂಬದವರು ಬಾಗೇಪಲ್ಲಿಗೆ ಹೋಗಿದ್ದರಿಂದಾಗಿ ಇದೀಗ ಎರಡನೇ ತರಗತಿಯಲ್ಲಿ ವಿದ್ಯಾರ್ಥಿಗಳೇ ಇಲ್ಲದಂತಾಗಿದೆ. ಮೂರನೇ ತರಗತಿಯಲ್ಲಿ ಏಳು ನಾಲ್ಕನೇ ತರಗತಿಯಲ್ಲಿ ಇಬ್ಬರು ಐದನೇ ತರಗತಿಯಲ್ಲಿ 10 6 ಮತ್ತು ಏಳನೇ ತರಗತಿಯಲ್ಲಿ ಕ್ರಮವಾಗಿ ಆರು ಮತ್ತು ಏಳು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ.
ಗಡಿ ಪ್ರಾಧಿಕಾರದ ನೆರವು ಬೇಕು
ಸರ್ಕಾರ ಮತ್ತು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಶೈಕ್ಷಣಿಕ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಸವಲತ್ತುಗಳು ಬೇಕಿದೆ. ಇದಕ್ಕೆ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಬಂದರೆ ಅನುಕೂಲವಾಗುತ್ತದೆ. ಇದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹಕಾರ ನೀಡಬೇಕಿದೆ. ಅಶ್ವತ್ಥರೆಡ್ಡಿ ಅಧ್ಯಕ್ಷ ಶಾಲಾಭಿವೃದ್ಧಿ ಸಮಿತಿ ಶಿಕ್ಷಕನಾಗಿ ನೇಮಕವಾದಗಿನಿಂದಲೂ ಇದೇ ಶಾಲೆಯಲ್ಲಿದ್ದೇನೆ. ಗ್ರಾಮಸ್ಥರು ಶಾಲೆಗೆ ಉತ್ತಮ ಸಹಕಾರ ನೀಡುವ ಜತೆಗೆ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ನಮಗೆ ಗಡಿ ಪ್ರಾಧಿಕಾರದಿಂದ ಅನುದಾನ ಸಿಗುತ್ತಿಲ್ಲ. ಈಗಲೂ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ. ನಾಗರಾಜ ಪ್ರಭಾರಿ ಮುಖ್ಯ ಶಿಕ್ಷಕ ನುಲಿಗುಂಬ ಸರ್ಕಾರಿ ಶಾಲೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.