ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ ಗೆಲುವಿಗೆ ತಂತ್ರ: ಉಚ್ಛಾಟಿತರಿಗೆ ಮತ್ತೆ ಕಾಂಗ್ರೆಸ್ ‘ಹಸ್ತ’

ವಿಧಾನಸಭೆ ಚುನಾವಣೆಯಲ್ಲಿ ಪಕ್ಷವಿರೋಧಿ ಆರೋಪ ಹೊತ್ತವರು ಮರಳಿ ಪಕ್ಷಕ್ಕೆ
Published 28 ಫೆಬ್ರುವರಿ 2024, 5:50 IST
Last Updated 28 ಫೆಬ್ರುವರಿ 2024, 5:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್‌ನಿಂದ ಉಚ್ಛಾಟಿಸಿದ್ದ ಮುಖಂಡರನ್ನು ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಮತ್ತೆ ಪಕ್ಷಕ್ಕೆ ಕರೆತರಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಕಾಂಗ್ರೆಸ್ ಈ ಹೆಜ್ಜೆ ಇಟ್ಟಿದೆ. ವಿಶೇಷವಾಗಿ ಗೌರಿಬಿದನೂರು ಮತ್ತು ಶಿಡ್ಲಘಟ್ಟ ಕ್ಷೇತ್ರದಲ್ಲಿ ಉಚ್ಛಾಟಿತರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗಳು ನಡೆದಿವೆ.

ತಮ್ಮ ಸೋಲಿಗೆ ಕಾರಣರಾದ ಮುಖಂಡರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪಟ್ಟು ಹಿಡಿದ್ದ ಮುಖಂಡರೇ ಈಗ ಅವರನ್ನು ವಾಪಸ್ ಕರೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಉಚ್ಛಾಟನೆಯ ಆದೇಶ ವಾಪಸ್ ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಭಿನ್ನ ಅಭಿಪ್ರಾಯಕ್ಕೂ ಕಾರಣವಾಗಿದೆ. 

2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಚ್.‍‍ಪುಟ್ಟಸ್ವಾಮಿ ಗೌಡ ಅವರ ಪರವಾಗಿ ಕೆಲಸ ಮಾಡಿದ ಕಾರಣಕ್ಕೆ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಮುಖಂಡರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್, ಕೋಲಾರ– ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಜೆ.ಕಾಂತರಾಜು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್, ನಗರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ಲಾ ಮತ್ತು ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಚಿಕ್ಕಣ್ಣ ಅವರನ್ನು ಜೂ.23ರಂದು ಕೆಪಿಸಿಸಿ ಶಿಸ್ತು ಸಮಿತಿಯು ಕಾಂಗ್ರೆಸ್ ಪಕ್ಷದಿಂದ ಅಮಾತುಗೊಳಿಸಿತ್ತು.

ವಿಧಾನಸಭೆ  ಚುನಾವಣೆ ಪೂರ್ಣವಾದ ತರುವಾಯ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ  ತಮ್ಮ ವಿರುದ್ಧ ಕೆಲಸ ಮಾಡಿದ ಮುಖಂಡರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪಟ್ಟು ಹಿಡಿದಿದ್ದರು. ಆ ಪರಿಣಾಮ ಪಕ್ಷದ ಶಿಸ್ತು ಸಮಿತಿ ಕ್ರಮಕೈಗೊಂಡಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಮುಖಂಡರ ಉಚ್ಛಾಟನೆಯ ಆದೇಶವನ್ನು ವಾಪಸ್ ಪಡೆಯಲಾಗಿದೆ.  

ಕಾಂಗ್ರೆಸ್‌ನಿಂದ ಉಚ್ಛಾಟನೆ ವಾಪಸ್ ಪಡೆದಿದ್ದರೂ ಈ ಮುಖಂಡರು ಸ್ಥಳೀಯ ನಾಯಕ ಶಿವಶಂಕರ ರೆಡ್ಡಿ ಅವರನ್ನು ಭೇಟಿಯಾಗಿಲ್ಲ ಎನ್ನುತ್ತವೆ ಮೂಲಗಳು. 

ಮತ್ತೊಂದು ಕಡೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಪುಟ್ಟು ಆಂಜನಪ್ಪ ಅವರನ್ನು ಸಹ ಕಾಂಗ್ರೆಸ್‌ಗೆ ಮರು ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನಗಳು ನಡೆದಿವೆ ಎನ್ನಲಾಗುತ್ತಿದೆ. ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಆಂಜನಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಪುಟ್ಟ ಆಂಜನಪ್ಪ ಆಪ್ತರಾಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೀವ್ ಗೌಡ, ಪುಟ್ಟ ಆಂಜನಪ್ಪ ಸೇರ್ಪಡೆಯನ್ನು ಯಾವ ರೀತಿ ಸ್ವೀಕರಿಸುವರೊ ಎನ್ನುವ ಕುತೂಹಲ ಪಕ್ಷದ ಕಾರ್ಯಕರ್ತರದ್ದು. ಜೆಡಿಎಸ್‌ನ ರವಿಕುಮಾರ್ ಅವರಿಗೆ ತೀವ್ರ ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದಿರುವ ಪುಟ್ಟು ಆಂಜನಪ್ಪ ಕಾಂಗ್ರೆಸ್‌ಗೆ ಮರು ಸೇರ್ಪಡೆಯಾದರೆ ಭವಿಷ್ಯದಲ್ಲಿ ಶಿಡ್ಲಘಟ್ಟ ಕ್ಷೇತ್ರ ಕಾಂಗ್ರೆಸ್ ರಾಜಕಾರಣದ ಲೆಕ್ಕಾಚಾರಗಳು ಬದಲಾಗಲಿವೆ.

ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಉಚ್ಛಾಟಿತರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದವರ ಜೊತೆ ಮುಖಂಡರು ‘ಕೈ’ ಜೋಡಿಸಿ ಕೆಲಸ ಮಾಡುವರೇ ಎನ್ನುವ ಕುತೂಹಲವಿದೆ. ಲೋಕಸಭೆ ಚುನಾವಣೆ ಮುಗಿದ ಮೇಲೆ ಜೊತೆಯಾಗಿ ಮುನ್ನಡೆಯುವರೇ ಅಥವಾ ಉಚ್ಛಾಟಿತರನ್ನು ವಾಪಸ್ ಪಕ್ಷಕ್ಕೆ ಕರೆ ತಂದಿದ್ದು ಯಾವ ಪರಿಣಾಮ ಬೀರಲಿದೆ ಎನ್ನುವುದನ್ನು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT